ಪರ್ತ್: ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಟೀಂ ಇಂಡಿಯಾ, 295 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಇದು ಆಸ್ಟ್ರೇಲಿಯಾದಲ್ಲಿ ಅತಿದೊಡ್ಡ ಟೆಸ್ಟ್ ಗೆಲುವು ಎಂಬುದು ವಿಶೇಷ. ಇದಕ್ಕೂ ಮುನ್ನ 1977 ರಲ್ಲಿ ಮೆಲ್ಬೋರ್ನ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 222 ರನ್ಗಳ ಗೆಲುವು ದಾಖಲಿಸಿದ್ದು ಇದುವರೆಗಿನ ಶ್ರೇಷ್ಠ ಜಯವಾಗಿತ್ತು. ಇದೀಗ ಬರೋಬ್ಬರಿ 47 ವರ್ಷಗಳ ಬಳಿಕ ಹೊಸ ಇತಿಹಾಸ ರಚಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.
ಒಪ್ಟಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 150 ರನ್ಗಳಿಸಿ ಆಲೌಟ್ ಆಯಿತು.
ಇದನ್ನೂ ಓದಿ: ಮಂಗಳೂರು : ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ತಂಡವು ಭಾರತೀಯ ವೇಗಿಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 104 ರನ್ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಬುಮ್ರಾ 30 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.
ಮತ್ತೊಂದೆಡೆ 297 ಎಸೆತಗಳನ್ನು ಎದುರಿಸಿದ ಯಶಸ್ವಿ ಜೈಸ್ವಾಲ್ 3 ಸಿಕ್ಸ್ ಹಾಗೂ 15 ಫೋರ್ಗಳೊಂದಿಗೆ 161 ರನ್ ಬಾರಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದರು. ಈ ಶತಕಗಳ ನೆರವಿನಿಂದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 6 ವಿಕೆಟ್ ನಷ್ಟಕ್ಕೆ 487 ಪೇರಿಸಿ ಡಿಕ್ಲೇರ್ ಘೋಷಿಸಿತು.
ಮೊದಲ ಇನಿಂಗ್ಸ್ನಲ್ಲಿ 46 ರನ್ಗಳ ಹಿನ್ನಡೆ ಹೊಂದಿದ್ದ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 534 ರನ್ಗಳ ಗುರಿ ಪಡೆಯಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದ್ದರು. ಪರಿಣಾಮ 3ನೇ ದಿನದಾಟದ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ ತಂಡವು 12 ರನ್ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು.
ಇನ್ನು ನಾಲ್ಕನೇ ದಿನದಾಟದ ಆರಂಭದಲ್ಲೇ ಮೊಹಮ್ಮದ್ ಸಿರಾಜ್ ಉಸ್ಮಾನ್ ಖ್ವಾಜಾ (4) ಹಾಗೂ ಸ್ಟೀವ್ ಸ್ಮಿತ್ (17) ವಿಕೆಟ್ ಪಡೆದರು. ಈ ಹಂತದಲ್ಲಿ ಜೊತೆಗೂಡಿದ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಚ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಈ ಹಂತದಲ್ಲಿ ಬುಮ್ರಾ ಟ್ರಾವಿಸ್ ಹೆಡ್ (89) ವಿಕೆಟ್ ಪಡೆದರೆ, ನಿತೀಶ್ ರೆಡ್ಡಿ ಮಿಚೆಲ್ ಮಾರ್ಷ್ (47) ಬೌಲ್ಡ್ ಮಾಡಿದರು. ಈ ಎರಡು ವಿಕೆಟ್ ಸಿಗುತ್ತಿದ್ದಂತೆ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರ್ಗಳು ಆಸ್ಟ್ರೇಲಿಯಾ ತಂಡವನ್ನು 238 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ 295 ರನ್ಗಳ ಭರ್ಜರಿ ಜಯ ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದೆ.
ಇದನ್ನೂ ನೋಡಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ, ಆರ್ ಡಿಪಿಆರ್ ಇಲಾಖೆಗಳ ಕಾರ್ಯ ನಿರ್ವಹಣೆಯ ಆಳ ಅಗಲ.. Janashakthi Media