ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣ: ಇಬ್ಬರು ಪ್ರಮುಖರ ಬಂಧನ

ನವದೆಹಲಿ: ಕೆಲ ದಿನಗಳ ಹಿಂದೆ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಪ್ರಿಯವ್ರತ್ ಫೌಜಿ ಮತ್ತು ಕಾಶಿಶ್ ಎಂದು ಗುರುತಿಸಲಾಗಿದೆ.

ಇವರಿಬ್ಬರನ್ನು ಗುಜರಾತಿನ ಮುಂದ್ರಾದಲ್ಲಿ ಪೊಲೀಸರು ಬಂಧಿಸಿದ್ದು, ಇವರಿಂದ ಸ್ಪೋಟಕಗಳು ಮತ್ತು ಶಸ್ತಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಿಯವ್ರತ್ ಫೌಜಿ ಹರಿಯಾಣ ಮೂಲದವ. ರಾಮಕರನ್ ಗುಂಪಿನ ಸದಸ್ಯನಾಗಿದ್ದ ಈತ ಶಾರ್ಪ್ ಶೂಟರ್ ಆಗಿ ಕೆಲಸ ಮಾಡುತ್ತಿದ್ದನು. ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಗುಂಪಿನ ನಾಯಕ ಗೋಲ್ಡಿ ಬ್ರಾರ್‌ ನೊಂದಿಗೆ ನೇರ ಸಂಪರ್ಕದಲ್ಲಿದ್ದ ಪ್ರಿಯವ್ರತ್ ಬಂದೂಕುಧಾರಿಗಳ ತಂಡವನ್ನು ಮುನ್ನಡೆಸಿದ್ದವನು. ಅಲ್ಲದೆ ಪ್ರಿಯವ್ರತ್ ಫೌಜಿ ಈ ಹಿಂದೆ ಎರಡು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದವನು.

ಈ ಹಿಂದೆ ಫತೇಘರ್‌ ನ ಪೆಟ್ರೋಲ್ ಪಂಪ್‌ ನಲ್ಲಿ ಫೌಜಿಯೊಂದಿಗಿದ್ದ ಕಾಶಿಶ್ 2021ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆ. ಮೂಸೆ ವಾಲಾ ಮೇಲೆ ಗುಂಡು ಹಾರಿಸಿದವರಲ್ಲಿ ಈತನೂ ಒಬ್ಬನಾಗಿದ್ದಾನೆ. ಮತ್ತೊಬ್ಬ ಆರೋಪಿಯಾದ ಸಂತೋಷ್ ಜಾಧವ್ ನನ್ನು ಪುಣೆ ಪೊಲೀಸರು ಜೂನ್ 18 ರಂದು ಬಂಧಿಸಿದ್ದರು. ಆತನಿಂದ ಒಟ್ಟು 13 ಅಕ್ರಮ ಪಿಸ್ತೂಲು ಮತ್ತು ಎಂಟು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಗಾಯಕ-ರಾಜಕಾರಣಿ ಸಿಧು ಮೂಸೆವಾಲಾರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಸಿಧು ಮೂಸೆವಾಲಾ ಅವರ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡ ಒಂದು ದಿನದ ನಂತರ ಈ ಕೊಲೆ ನಡೆದಿದೆ.

Donate Janashakthi Media

Leave a Reply

Your email address will not be published. Required fields are marked *