ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬರು ತಪ್ಪಿತಸ್ಥ ಎಂದು ಸಾಬೀತಾಗಿದ್ದು, ದೆಹಲಿ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಪ್ರಕರಣದಲ್ಲಿ ದೋಷಿಯಾಗಿರುವ ದಿನೇಶ್ ಯಾದವ್‌ಗೆ 5 ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ. ಅವರನ್ನು ಕಳೆದ ತಿಂಗಳು ದೋಷಿ ಎಂದು ಘೋಷಿಸಲಾಯಿತು.
ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ ಕಠಿಣ ನಿಬಂಧನೆಗಳ ಅಡಿಯಲ್ಲಿ ಬಂಧನದಲ್ಲಿದ್ದ ಪಿಂಜ್ರಾ ತೋಡ್ ಕಾರ್ಯಕರ್ತೆಯರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಜಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾಗೆ ದೆಹಲಿ ಹೈಕೋರ್ಟ್ ಈಗಾಗಲೇ ಜಾಮೀನು ನೀಡಿದೆ.
ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಕಠಿಣ ನಿಬಂಧನೆಗಳ ಅಡಿಯಲ್ಲಿ ವಿದ್ಯಾರ್ಥಿ ಸಂಘಟನೆ ಮುಖ್ಯಸ್ಥರು, ಸಾಮಾಜಿಕ ಕಾರ್ಯಕರರು ಸೇರಿದಂತೆ ಅನೇಕರನ್ನು ಬಂಧಿಸಲಾಗಿತ್ತು.
2020ರ ಫೆಬ್ರವರಿಯಲ್ಲಿ ನಡೆದಿದ್ದ ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯ ವೇಳೆ ಪೂರ್ವ ದೆಹಲಿಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಈ ಸಂಬಂಧ ಪೊಲೀಸರು 17,500 ಪುಟಗಳ ವರದಿ ಸಲ್ಲಿಸಿದ್ದು, ಅದರಲ್ಲಿ 15 ಆರೋಪಿಗಳನ್ನು ಮತ್ತು ಏಳು ವಾಟ್ಸಾಪ್ ಚಾಟ್ ಗುಂಪುಗಳನ್ನು ಹೆಸರಿಸಲಾಗಿದೆ. ಅಲ್ಲದೆ, ಈಶಾನ್ಯ ದೆಹಲಿಯ ಗೋಕುಲಪುರಿಯಲ್ಲಿರುವ ಭಾಗೀರಥಿ ವಿಹಾರ್‌ನಲ್ಲಿರುವ ಮಹಿಳೆಯ ಮನೆಯನ್ನು ಧ್ವಂಸಗೊಳಿಸಿ ಸುಟ್ಟುಹಾಕುವಲ್ಲಿ ಪಾತ್ರ ವಹಿಸಿದ್ದಾರೆ ಎಂದು ಸಹ ಉಲ್ಲೇಖಿಸಲಾಗಿದೆ.
ಈ ಆರೋಪಪಟ್ಟಿಯಲ್ಲಿ ಎಎಪಿಯ ಮಾಜಿ ಕೌನ್ಸಿಲರ್ ತಾಹೀರ್ ಹುಸೇನ್, ಪಿಂಜ್ರಾ ಟೋಡ್‌ನ ದೇವಾಂಗನಾ ಕಲಿತಾ ಮತ್ತು ನತಾಶಾ ನರ್ವಾಲ್, ದೆಹಲಿ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಗುಲ್ಫಿಶಾ, ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಪಿಎಚ್‌ಡಿ ವಿದ್ಯಾರ್ಥಿ ಮೀರನ್ ಹೈದರ್ ಮತ್ತು ಜಾಮಿಯಾ ಸಮನ್ವಯ ಸಮಿತಿ ಮಾಧ್ಯಮ ಸಂಯೋಜಕ ಸಫೂರಾ ಹಾಗೂ ಇತರರು ಇದ್ದಾರೆ.
ಗಲಭೆಯ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಜನರ ಸಾವು ಹಾಗೂ 500ಕ್ಕೂ ಅಧಿಕ ಸಾರ್ವಜನಿಕರಿಗೆ ಗಾಯವಾಗಲು ಕಾರಣವಾಗಿರುವುದರ ಜತೆಗೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳು ಅಪಾರ ಪ್ರಮಾಣದಲ್ಲಿ ನಷ್ಟವಾಗಿತ್ತು.
ಫೆಬ್ರವರಿ 25 ರಂದು ತನ್ನ ಕುಟುಂಬವು ಇಲ್ಲದಿದ್ದಾಗ ತನ್ನ ಮನೆಯ ಮೇಲೆ ದಾಳಿ ಮಾಡಿದ ಸುಮಾರು 150 ರಿಂದ 200 ಗಲಭೆಕೋರರ ಗುಂಪು ಬೆಲೆಬಾಳುವ ವಸ್ತುಗಳನ್ನು ದೋಚಿದೆ ಎಂದು ಮನೋರಿ ಎಂದು ಗುರುತಿಸಲಾದ ವೃದ್ಧೆ ಹೇಳಿದ್ದಾರೆ.
ಭಯೋತ್ಪಾದನಾ ಕೃತ್ಯ ಹೇಗಾಗುತ್ತದೆ?
ಭಾರತದ ಸನ್ನಿವೇಶದಲ್ಲಿ ಯುಎಪಿಎ ಸೆಕ್ಷನ್ 15ರ ಅಡಿ ಇದು ಹೇಗೆ ‘ಭಯೋತ್ಪಾದನಾ ಕೃತ್ಯ’ ಆಗುತ್ತದೆ ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ. ‘ಈ ಪ್ರಕರಣದಲ್ಲಿ ಅವರು ಬಂದೂಕುಗಳು, ಪೆಟ್ರೋಲ್ ಬಾಂಬ್‌ಗಳನ್ನು ಬಳಸಿದ್ದಾರೆ. ಇವು ಪೊಲೀಸರ ಸಾವು ಹಾಗೂ ತೀವ್ರತರದ ಗಾಯಗಳಿಗೆ ಕಾರಣವಾಗಿವೆ. ಸಿಎಎ ಮತ್ತು ಎನ್‌ಆರ್‌ಸಿಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಮತ್ತು ಜನರನ್ನು ಬೆದರಿಸುವ ಉದ್ದೇಶವು ಭಯೋತ್ಪಾದನಾ ಚಟುವಟಿಕೆಗಳ ವ್ಯಾಖ್ಯಾನದಡಿ ಬರುತ್ತದೆ’ ಎಂದು ವಿಶೇಷ ಘಟಕದ ಡಿಸಿಪಿ ಪಿ.ಎಸ್. ಕುಶ್ವಾಹ ಮತ್ತು ಎಸಿಪಿ ಅಲೋಕ್ ಕುಮಾರ್ ಸಹಿ ಇರುವ ವರದಿಯಲ್ಲಿ ತಿಳಿಸಲಾಗಿದೆ.
‘ಈ ಸಂಚು ಅತ್ಯಂತ ವ್ಯವಸ್ಥಿತವಾಗಿ ರೂಪುಗೊಂಡಿದ್ದು, ಎಂಎಸ್‌ಜೆ (ಮುಸ್ಲಿಮ್ ಸ್ಟುಡೆಂಟ್ಸ್ ಆಫ್ ಜೆಎನ್‌ಯು) ಎಂಬ ಗುಂಪನ್ನು ಸೃಷ್ಟಿಸಲಾಗಿತ್ತು. ಇದು ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ಮಂಡನೆಯಾದ ಬಳಿಕ ಬಿತ್ತನೆಯಾದ ಕೋಮು ಬೀಜ. ಇದರಿಂದ ನಂತರ ಜೆಸಿಸಿ ಹಾಗೂ ಅಂತಿಮವಾಗಿ ಡಿಪಿಎಸ್‌ಜಿ ಸೃಷ್ಟಿಯಾದವು. ಇದು ಜಾತ್ಯತೀತ ಮುಖವಾಡ ಮತ್ತು ಹಿಂಸಾತ್ಮಕ ಪ್ರತಿರೋದದ ನಕ್ಸಲ್ ಜೀನ್‌ಗಳನ್ನು ಒದಗಿಸುವ ಮೂಲಕ ತೀವ್ರಗಾಮಿ ಕೋಮು ಸಂಚನ್ನು ರೂಪಿಸಿತ್ತು’ ಎಂದು ಪೊಲೀಸರು ಹೇಳಿದ್ದಾರೆ.