ಅಬಕಾರಿ ಸುಂಕ ಕಡಿತ ಮಾಡಲು ಬಿಜೆಪಿಯೇತರ ರಾಜ್ಯಗಳ ಮೇಲೆ ಒತ್ತಡ ಹಾಕಿದ ಪ್ರಧಾನಿ ಮೋದಿ

ನವದೆಹಲಿ: 2021ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಆ ಸಂದರ್ಭದಲ್ಲಿ ರಾಜ್ಯಗಳ ಸಹ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಕೋರಿಕೊಂಡಿತು. ಆಗ ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಲು ನಿರಾಕರಿಸಿದವು.

ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಯುದ್ಧದ ಪರಿಸ್ಥಿತಿಯು ಉದ್ಭವಿಸಿದೆ, ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಿದೆ ಮತ್ತು ಅಂತಹ ವಾತಾವರಣದಲ್ಲಿ, ಸವಾಲುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಜಾಗತಿಕ ಬಿಕ್ಕಟ್ಟು ಅನೇಕ ಸವಾಲುಗಳನ್ನು ತರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಕಾರ ಫೆಡರಲಿಸಂ ಮತ್ತು ಸಮನ್ವಯದ ಮನೋಭಾವವನ್ನು ಇನ್ನಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ” ಎಂದು ಹೇಳಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ವಿಚಾರವಾಗಿ ಬಿಜೆಪಿಯೇತರ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ದೇಶಾದ್ಯಂತದ ನಗರಗಳಲ್ಲಿ ಇಂಧನ ಬೆಲೆಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, ವ್ಯಾಟ್ ಅನ್ನು ಕಡಿಮೆ ಮಾಡಿದ ರಾಜ್ಯಗಳು ಕಡಿಮೆ ಇಂಧನ ಬೆಲೆಗಳನ್ನು ಹೊಂದಿವೆ ಎಂದು ಸೂಚಿಸಿದರು.

“ನಾನು ಯಾರನ್ನೂ ಟೀಕಿಸುವುದಿಲ್ಲ, ಕೇವಲ ಚರ್ಚಿಸುತ್ತಿದ್ದೇನೆ” ಎಂದು ಬೆಲೆ ಏರಿಕೆ ಸಮಯದಲ್ಲಿ ಇಂಧನದ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡದ ರಾಜ್ಯಗಳನ್ನು ಪಟ್ಟಿ ಮಾಡುವಾಗ ಪ್ರಧಾನಿ ಹೇಳಿದರು.

ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಜಾರ್ಖಂಡ್ ಮತ್ತು ತಮಿಳುನಾಡು ಮುಂತಾದ ಹಲವು ರಾಜ್ಯಗಳು ಯಾವುದೋ ಕಾರಣಕ್ಕೆ ಕೇಂದ್ರ ಸರ್ಕಾರದ ಮಾತನ್ನು ಕೇಳಲಿಲ್ಲ ಮತ್ತು ಆ ರಾಜ್ಯಗಳ ನಾಗರಿಕರಿಗೆ ಹೊರೆಯಾಗುತ್ತಲೇ ಇದೆ. ನೀವು ವ್ಯಾಟ್ ಅನ್ನು ಕಡಿಮೆ ಮಾಡುವ ಮೂಲಕ ನಾಗರಿಕರಿಗೆ ಪ್ರಯೋಜನವನ್ನು ನೀಡಬೇಕು ಎಂದು ನಾನು ವಿನಂತಿಸುತ್ತೇನೆ” ಎಂದು ಮೋದಿ ಹೇಳಿದರು.

ರಾಜ್ಯ ಇಂಧನ ತೆರಿಗೆಯನ್ನು ಕಡಿಮೆ ಮಾಡಿ ಅದರ ಲಾಭವನ್ನು ನಾಗರಿಕರಿಗೆ ವರ್ಗಾಯಿಸುವಂತೆ ಮೋದಿ, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು ಕೇಂದ್ರದ ಆದಾಯದ 42 ಪ್ರತಿಶತ ರಾಜ್ಯಗಳಿಗೆ ಹೋಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್‌ ಪ್ರತಿಕ್ರಿಯೆ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದ ಕಾಂಗ್ರೆಸ್‌ ಪಕ್ಷವು, ಕೇಂದ್ರ ಅಬಕಾರಿ ಸುಂಕವು ಯುಪಿಎ ಸರ್ಕಾರದ ಅವಧಿಯಲ್ಲಿ ಈಗಿರುವುದಕ್ಕಿಂತಲೂ ಕಡಿಮೆಯಿತ್ತು ಮತ್ತು ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.

ದೇಶದಲ್ಲಿ ಹಣದುಬ್ಬರ ಸಮಸ್ಯೆ ತೀವ್ರ ಗಂಭೀರವಾಗಿದ್ದು, ಜನಸಾಮಾನ್ಯರ ಸಮಸ್ಯೆಗಳ ಪರಿಹಾರವಾಗಿ ಕೇಂದ್ರ ಸರ್ಕಾರದ ಪಾಲೇನು ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಸಾಮಾನ್ಯ ಜನರ ಪರಿಸ್ಥಿ, ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸಲು ಕೇಂದ್ರದ ನಿಲುವೇನು ಎಂದಿದೆ.

ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದು, ‘ಮೋದಿಜೀ, ಯಾವುದೇ ಟೀಕೆಗಳಿಲ್ಲ, ಗೊಂದಲಗಳಿಲ್ಲ, ಸುಳ್ಳುಗಳಿಲ್ಲ! ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಬಕಾರಿ ಸುಂಕವು ಲೀಟರ್‌ ಪೆಟ್ರೋಲ್‌ಗೆ ₹ 9.48 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ₹ 3.56 ಇತ್ತು. ಆದರೆ, ಮೋದಿ ಸರ್ಕಾರದ ಅಡಿಯಲ್ಲಿ ಲೀಟರ್ ಪೆಟ್ರೋಲ್‌ಗೆ ₹ 27.90 ಮತ್ತು ಲೀಟರ್ ಡೀಸೆಲ್‌ಗೆ ₹ 21.80 ಇದೆ. ದಯವಿಟ್ಟು ಪೆಟ್ರೋಲ್‌ ಮೇಲಿನ ₹ 18.42 ಮತ್ತು ಡೀಸೆಲ್‌ ಮೇಲಿನ ₹ 18.24 ಅಬಕಾರಿ ಹೆಚ್ಚಳವನ್ನು ಹಿಂಪಡೆಯಿರಿ’ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *