ಜನ್ಮದಿನದ ಸಂಭ್ರಮ: ವಿಹಾರಕ್ಕೆ ಹೋಗಿದ್ದ ಐವರು ಮಕ್ಕಳು ನೀರು ಪಾಲು

ಕೊಯ್ಲು: ಐವರು ಮಕ್ಕಳು ಜನ್ಮದಿನದ ಆಚರಣೆಗೆ ವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ನೀರು ಕೊಚ್ಚಿ ಹೋಗಿದ್ದು, ಮರಣ ಹೊಂದಿರುವ ಘಟನೆ ಮಧ್ಯಪ್ರದೇಶದ ಕಟ್ನಿ ನದಿ ಬಳಿ ನಡೆದಿದೆ. ಈ ಘಟನೆ ಸೋಮವಾರ ನಡೆದಿದ್ದು, ಸದ್ಯ ಮೂವರ ಶವ ಪತ್ತೆಯಾಗಿದೆ. ಇಬ್ಬರು ಮಕ್ಕಳನ್ನು ಹುಡುಕಾಟ ನಡೆಸಲಾಗುತ್ತಿದೆ.

ನೀರಲ್ಲಿ ಕೊಚ್ಚಿಹೋಗಿ ಪ್ರಾಣ ಕಳೆದುಕೊಂಡ ಮಕ್ಕಳಲ್ಲಿ ಓರ್ವ ಜನ್ಮದಿನದ ಸಂಭ್ರಮದಲ್ಲಿದ್ದ. ಆತ ತನ್ನ ಸ್ನೇಹಿತರೊಂದಿಗೆ ಕಟ್ನಿ ನದಿಗೆ ವಿಹಾರಕ್ಕೆಂದು ಬಂದಿದ್ದು, ಎಲ್ಲರೂ ನೀರಿಗೆ ಇಳಿದಿದ್ದಾರೆ. ಮೃತಪಟ್ಟ ಎಲ್ಲರು 13 ರಿಂದ 15 ವರ್ಷ ವಯೋಮಾನದವರಾಗಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಎಲ್ಲರೂ ನದಿಪಾಲಾಗಿದ್ದಾರೆ.

ವಿಹಾರಕ್ಕೆಂದು ಹೊರ ಹೋಗಿದ್ದ ಮಕ್ಕಳು ಸಂಜೆಯಾದರೂ ವಾಪಸ್ಸು ಬರದಿರುವುದಿರಿಂದ ಆತಂಕಗೊಂಡ  ಪೋಷಕರು ಹುಡುಕಾಟ ನಡೆಸಿ, ಬಳಿಕ ನದಿ ಪಾತ್ರಕ್ಕೆ ಬಂದು ಗಮನಿಸಿದಾಗ ಮಕ್ಕಳ ಬಟ್ಟೆಗಳು ದಡದಲ್ಲಿ ಬಿದ್ದಿರುವುದು ಕಂಡು ಬಂದಿದೆ. ಇದರಿಂದ ಬಾಲಕರು ನೀರಿಗೆ ಕೊಚ್ಚಿ ಹೋಗಿರುವುದು ಗೊತ್ತಾಗಿದೆ.

ಕೂಡಲೇ ಪೋಷಕರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಆಡಳಿತಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಗೃಹರಕ್ಷಕ ದಳ, ಎನ್​ಡಿಆರ್​ಎಫ್​, ಈಜುಗಾರರು ರಕ್ಷಣಾ ಕಾರ್ಯಾಚರಣೆ ನಡೆಸಿ 10 ಗಂಟೆಗಳ ತರುವಾಯ ಮೂವರು ಮಕ್ಕಳ ಶವಗಳನ್ನು ಪತ್ತೆ ಮಾಡಿದ್ದಾರೆ. ಇನ್ನಿಬ್ಬರಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಮುಖ್ಯಮಂತ್ರಿ ಸಂತಾಪ: ನದಿಯಲ್ಲಿ ಮುಳುಗಿ ಮಕ್ಕಳು ಸಾವನ್ನಪ್ಪಿದ ಸುದ್ದಿ ತಿಳಿದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಕ್ಕಳ ಪತ್ತೆಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *