ಬಜೆಟ್‌ನಲ್ಲಿ ಬೈಸಿಕಲ್ ವಿತರಣೆ, ಹೊಸ ಹಾಸ್ಟೆಲ್ ನಿರ್ಲಕ್ಷ ಖಂಡನಾರ್ಹ – ಎಸ್ಎಫ್ಐ

ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರ ತನ್ನ ಮೊದಲ ಬಜೆಟ್‌ನಲ್ಲಿ ಬೈಸಿಕಲ್ ವಿತರಣೆ, ಹೊಸ ಹಾಸ್ಟೆಲ್ ವಿಚಾರವನ್ನು ನಿರ್ಲಕ್ಷ ಮಾಡಿದ್ದು ಖಂಡನಾರ್ಹ ಎಂದು ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ರಾಜ್ಯ ಸಮಿತಿ ಶುಕ್ರವಾರ ಹೇಳಿದೆ. ಅದೇ ವೇಳೆ ನೂತನ NEP-2020 ರದ್ದತಿಯನ್ನು ಸಂಘಟನೆ ಸ್ವಾಗತ ಮಾಡಿದೆ.

ಬಜೆಟ್ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಎಸ್‌ಎಫ್‌ಐ, “ನಾವು ನಿರಂತರವಾಗಿ ವಿರೋಧಿಸುತ್ತಾ ಬಂದಿರುವ ವಿದ್ಯಾರ್ಥಿ ವಿರೋಧಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ರದ್ದು ಮಾಡಿರುವುದನ್ನು, ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದನ್ನು ಹಾಗೂ ವಿದ್ಯಾಸಿರಿ ಯೋಜನೆ ಮರುಜಾರಿ ಸ್ವಾಗತಿಸುತ್ತೇವೆ” ಎಂದು ಹೇಳಿದೆ.

ಇದನ್ನೂ ಓದಿ: ಕೆಲವು ಕೊರತೆಗಳಿದ್ದರೂ, ಒಟ್ಟಾರೆ ಸ್ವಾಗತಾರ್ಹ: ರಾಜ್ಯ ಬಜೆಟ್‌ಗೆ ಸಿಪಿಐ(ಎಂ) ಪ್ರತಿಕ್ರಿಯೆ

ಸರ್ಕಾರಿ ಶಾಲಾ ಕಾಲೇಜುಗಳ ಕೊಠಡಿ ನಿರ್ಮಾಣ, ಪದವಿ ಪೂರ್ವ ಕಾಲೇಜುಗಳ ಕೊಠಡಿಗಳಿ ಅನುದಾನ, ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಿದ್ದು ಎಸ್ಎಫ್ಐ ಸಂಘಟನೆಯ ಹೋರಾಟದ ಫಲ ಎಂದು ವಿದ್ಯಾರ್ಥಿ ಸಂಘಟನೆ ಪ್ರತಿಪಾದಿಸಿದೆ. 1 ರಿಂದ 10 ತರಗತಿಯವರೆಗೆ ಎಲ್ಲಾ ಜಿಲ್ಲೆಗಳಿಗೂ ಮೊಟ್ಟೆ ನೀಡುತ್ತಿರುವುದು ಸಂಘಟನೆಯ ಹೋರಾಟಕ್ಕೆ ಸಿಕ್ಕ ಜಯ ಎಂದು ಎಸ್‌ಎಫ್‌ಐ ಹೇಳಿದೆ.

ವಿನೂತನವಾಗಿ ಬುದ್ಧಿಮಾಂದ್ಯ ಮಕ್ಕಳಿಗೆ 7 ಜಿಲ್ಲೆಗಳಲ್ಲಿ 10 ವಸತಿ ನಿಲಯಗಳ ಘೋಷಣೆ ಮತ್ತು 10 ಮುರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಮಂಜೂರು ಮಾಡಿರುವುದನ್ನು ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ ಸ್ವಾಗತಿಸಿದೆ.

“ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೇವಲ 37,587 ಕೋಟಿ ರೂಪಾಯಿ(11%) ಹಣ ಮೀಸಲಿಟ್ಟಿದ್ದು ಬಜೆಟ್‌ ಶಿಕ್ಷಣ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿಕೋನ ಮತ್ತು ಅಭಿವೃದ್ಧಿ ಕಣ್ಣೋಟ ಇಟ್ಟಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಎಸ್‌ಎಫ್‌ಐ ಹೇಳಿದೆ.

ಇದನ್ನೂ ಓದಿ: Karnataka Budget 2023-24 | ರಾಜ್ಯವನ್ನು ಹಿಂದಕ್ಕೆ ತಳ್ಳುವ ರಿವರ್ಸ್‌ ಗೇರ್‌ ಬಜೆಟ್: ಮಾಜಿ ಸಿಎಂ ಬೊಮ್ಮಾಯಿ

ಕಳೆದ ಮೂರನಾಲ್ಕು ವರ್ಷಗಳಿಂದ ನಿಂತಿರುವ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡುವ ಬೈಸಿಕಲ್ (ಸೈಕಲ್) ಮರುಜಾರಿ ಸೇರಿದಂತೆ ಉಚಿತ ಲ್ಯಾಪ್ಟಾಪ್, ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್, ಒಂದೇ ಒಂದು ಹೊಸ ಹಾಸ್ಟೆಲ್ ಘೋಷಣೆ ಮಾಡದೆ ಇರುವುದರ ಬಗ್ಗೆ ಎಸ್‌ಎಫ್‌ಐ ಅಸಮಾಧಾನ ವ್ಯಕ್ತಪಡಿಸಿದೆ.

ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆ ಕನಿಷ್ಠ 3500/-ರೂ ಹೆಚ್ಚಿಸಬೇಕೆಂಬ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಹಾಗೂ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನಲ್ಲಿ 30% ಮೀಸಲಿಡಬೇಕಿತ್ತು ಎಂದು ಎಸ್‌ಎಫ್‌ಐ ಹೇಳಿದ್ದು, “ಘೋಷಣೆಗಳು ಭಾಷಣವಾಗದೆ ಜಾರಿಗೊಳಿಸಲು ಮುಂದಾಗಬೇಕು” ಎಂದು ಎಸ್ ಎಫ್ ಐ ಕರ್ನಾಟಕ ರಾಜ್ಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *