ಇತಿಹಾಸದಲ್ಲೇ ಮೊದಲು: ಕೇರಳ ವಿಧಾನಸಭೆಗೆ ಮೊದಲ ಮಹಿಳಾ ಅಧ್ಯಕ್ಷರ ಸಮಿತಿ

ತಿರುವನಂತಪುರಂ: ಕೇರಳ ವಿಧಾನಸಭೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಭಾಧ್ಯಕ್ಷರು ಮತ್ತು ಉಪಸಭಾಪತಿಗಳ ಅನುಪಸ್ಥಿತಿಯಲ್ಲಿ ಎಲ್ಲಾ ಮಹಿಳಾ ಅಧ್ಯಕ್ಷರ ಸಮಿತಿಯು ಸದನದ ಕಲಾಪಗಳ ಅಧ್ಯಕ್ಷತೆ ವಹಿಸಿ ನಡೆಸಿಕೊಡಲಿದ್ದಾರೆ.

ಎಂ. ಬಿ. ರಾಜೇಶ್ ಅವರನ್ನು ಸ್ಥಾನಕ್ಕೆ ನೇಮಿಸಿದ ಸಭಾಧ್ಯಕ್ಷ ಎ.ಎನ್. ಶಂಸೀರ್ ಅವರು ಸಂಪೂರ್ಣ ಮಹಿಳಾ ಅಧ್ಯಕ್ಷರ ಸಮಿತಿಯನ್ನು ಹೊಂದಲು ಪ್ರಸ್ತಾಪಿಸಿದ ನಂತರ ಈ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಆಡಳಿತಾರೂಢ ಎಡಪಕ್ಷಗಳಿಂದ ಎರಡು ಮತ್ತು ವಿರೋಧ ಪಕ್ಷವಾದ ಯುಡಿಎಫ್ ಒಂದನ್ನು ಸೂಚಿಸಿದೆ.

ಮಹಿಳಾ ಸಬಲೀಕರಣಕ್ಕಾಗಿ ಕೇರಳ ರಾಜ್ಯವು ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಸಾಮಾನ್ಯವಾಗಿ ಮೂವರು ಸದಸ್ಯರ ಸಮಿತಿಯಲ್ಲಿ ಒಬ್ಬ ಮಹಿಳೆ ಇರುತ್ತಾರೆ. ಆದರೆ, ಈ ಬಾರಿಯ ವಿಧಾನಸಭೆ ಅಧಿವೇಶನವನ್ನು ಮೂವರೂ ಮಹಿಳೆಯರೇ ನಡೆಸಿಕೊಡಲಿದ್ದಾರೆ. ತ್ರಿಸದಸ್ಯ ಸಮಿತಿಯಲ್ಲಿ ಆಡಳಿತಾರೂಢ ಎಡಪಕ್ಷದ  ಭಾರತ ಕಮ್ಯೂನಿಸ್ಟ್‌ ಪಕ್ಷ(ಸಿಪಿಐ) ಶಾಸಕಿ ಆಶಾ ಸಿ.ಕೆ, ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನಿಂದ ಯು.ಪ್ರತಿಭಾ ಮತ್ತು ಯುಡಿಎಫ್ ಮಿತ್ರಪಕ್ಷವಾದ ರೆವಲ್ಯೂಷನರಿ ಮಾರ್ಕ್ಸಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕೆ.ಕೆ ರೆಮಾ ಅವರನ್ನು ಒಳಗೊಂಡಿದೆ.

ಕೇರಳದ ಮೊದಲ ವಿಧಾನಸಭೆಯಿಂದ ಪ್ರಸ್ತುತ 15ನೇ ಅಧಿವೇಶನದ ಏಳನೇ ಅಧಿವೇಶನದವರೆಗೆ ಒಟ್ಟು 515 ಸದಸ್ಯರಲ್ಲಿ 32 ಮಹಿಳೆಯರು ಮಾತ್ರ ಸಮಿತಿಯ ಭಾಗವಾಗಿದ್ದಾರೆ. ಇದು ರಾಜ್ಯ ವಿಧಾನಸಭೆಯ ಕಲಾಪಗಳ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಾಗುತ್ತದೆ ಮತ್ತು ನೂತನ ಸಭಾಧ್ಯಕ್ಷರ ಕಿರೀಟಕ್ಕೊಂದು ಗರಿಯಾಗಿದೆ.

ಎಂ.ಬಿ.ರಾಜೇಶ್ ಬದಲಿಗೆ ಶಂಸೀರ್ ಅವರು ಸಭಾಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಅಧಿವೇಶನ ಡಿಸೆಂಬರ್‌ 5 ರಿಂದ 15 ರವರೆಗೆ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *