ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ ಕೆ ಸಕ್ಸೇನಾ ವಿರುದ್ಧ ರೂ.1400 ಕೋಟಿ ನೋಟು ಬದಲಾವಣೆ ಆರೋಪ

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ 2016ರಲ್ಲಿ ಕೆವಿಐಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರೂ.1400 ಕೋಟಿ ಮೌಲ್ಯದ ನೋಟುಗಳನ್ನು ಬದಲಾಯಿಸುವಂತೆ ತಮ್ಮ ಉದ್ಯೋಗಿಗಳಿಗೆ ಒತ್ತಡ ಹೇರಿದ್ದರು ಎಂದು ದೆಹಲಿ ಆಡಳಿತರೂಢ ಆಮ್‌ ಆದ್ಮಿ ಪಕ್ಷ(ಎಎಪಿ) ಆರೋಪಿಸಿದೆ.

ಎಎಪಿ ಶಾಸಕ ದುರ್ಗೇಶ್ ಪಾಠಕ್ ದೆಹಲಿ ವಿಧಾನಸಭೆ ಸದನದಲ್ಲಿ ಈ ಬಗ್ಗೆ ವಿವರಣೆ ನೀಡಿದ್ದು, ” ಈಗ ಲೆಫ್ಟಿನೆಂಟ್ ಗವರ್ನರ್ ಆಗಿರುವ  ವಿ ಕೆ ಸಕ್ಸೇನಾ ಅವರು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ(ಕೆವಿಐಸಿ) ಅಧ್ಯಕ್ಷರಾಗಿದ್ದಾಗ, ನೋಟು ಅಮಾನ್ಯೀಕರಣಗೊಂಡ ನಂತರದ ಸಂದರ್ಭದಲ್ಲಿ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಲೆಕ್ಕಾಧಿಕಾರಿ ಮತ್ತು ಸಿಬ್ಬಂದಿಗೆ ನೋಟುಗಳ ವಿನಿಮಯ ಮಾಡುವಂತೆ ಒತ್ತಡ ಹೇರಿದ್ದರು. ಈ ಕುರಿತು ಲಿಖಿತ ದೂರು ನೀಡಿದ ಸಿಬ್ಬಂದಿಯನ್ನೇ ಅಮಾನತು ಮಾಡಿರುವುದು ದುರಾದೃಷ್ಟಕರ ಸಂಗತಿ. ಈ ಕುರಿತು ತನಿಖೆ ನಡೆಸಬೇಕು. ಆರೋಪಕ್ಕೆ ಸಂಬಂಧಿಸಿದ ವರದಿ ಮತ್ತು ಉದ್ಯೋಗಿಗಳ ಹೇಳಿಕೆಗಳೂ ಇವೆ” ಎಂದು ಉಲ್ಲೇಖಿಸಿದ್ದಾರೆ.

ದುರ್ಗೇಶ್‌ ಪಾಠಕ್‌ ಸದನದಲ್ಲಿ ವಿಷಯ ಮಂಡಿಸುತ್ತಿದ್ದಂತೆಯೇ, ಭಿತ್ತಿಪತ್ರಗಳನ್ನು ಹಿಡಿದ ಎಎಪಿ ಶಾಸಕರು ಸದನದ ಬಾವಿಗಿಳಿದು ದೆಹಲಿ ಲೆಫ್ಟಿನೆಂಟ್ ಗವರ್ನರ್‌ ಹುದ್ದೆಯಿಂದ ವಿ ಕೆ ಸಕ್ಸೇನಾ ಕೆಳಗಿಳಿಸಬೇಕೆಂದು ಘೋಷಣೆಗಳನ್ನು ಕೂಗಿದರು. ಗಲಾಟೆ ತೀವ್ರಗೊಂಡಿದ್ದರಿಂದ ಉಪ ಸ್ಪೀಕರ್ ರಾಖಿ ಬಿರ್ಲಾ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದರು.

ನೋಟು ಅಮಾನ್ಯೀಕರಣಗೊಂಡ ಸಂದರ್ಭದಲ್ಲಿ ನೋಟುಗಳನ್ನು ಬದಲಾಯಿಸಿಕೊಂಡರು. ದೆಹಲಿ ಶಾಖೆಯೊಂದರಲ್ಲೇ 22 ಲಕ್ಷ ರೂಪಾಯಿ ವಿನಿಮಯವಾಗಿದೆ. ದೇಶಾದ್ಯಂತ ಇಂತಹ 7000 ಶಾಖೆಗಳಿವೆ ಎಂದರೆ 1400 ಕೋಟಿ ಹಗರಣ ನಡೆದಿದೆ ಎಂದು ಆಡಳಿತ ಪಕ್ಷ ಎಎಪಿ ಆರೋಪಿಸಿದೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆಮ್ ಆದ್ಮಿ ಪಕ್ಷದ ಯಾವುದೇ ಶಾಸಕರನ್ನು ಬೇಟೆಯಾಡಲು ಸಾಧ್ಯವಾಗದ ಕಾರಣ ತಮ್ಮ ಸರ್ಕಾರವನ್ನು ಉರುಳಿಸಲು ವಿರೋಧ ಪಕ್ಷದ  “ಆಪರೇಷನ್ ಕಮಲ” ವಿಫಲವಾಗಿದೆ ಎಂದು ಆರೋಪಿಸಿದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್ ನಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ಈ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಕೇಜ್ರಿವಾಲ್ ಸರ್ಕಾರದ ಹೊಸ ಮದ್ಯ ನೀತಿಯಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದ ಲೆಫ್ಟಿನೆಂಟ್ ಗೌರ್ನರ್ ಹಾಗೂ ಆಡಳಿತ ಪಕ್ಷದ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಎಎಪಿ ಶಾಸಕರಿಂದ ಅಹೋರಾತ್ರಿ ಪ್ರತಿಭಟನೆ

ವಿಕೆ ಸಕ್ಸೇನಾ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿ ವಿಧಾನಸಭೆಯೊಳಗೆ ಎಎಪಿ ಶಾಸಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷ(ಬಿಜೆಪಿ) ನಡುವಿನ ಸಮರ ಮತ್ತಷ್ಟು ಉಲ್ಬಣಗೊಂಡಿದೆ. ಎಎಪಿ ಶಾಸಕರು ಸೋಮವಾರ(ಆಗಸ್ಟ್‌ 29) ಅಹೋರಾತ್ರಿ ವಿಧಾನ ಸಭೆಯೊಳಗೆ ಪ್ರತಿಭಟನೆ ನಡೆಸಿ ವಿಕೆ ಸಕ್ಸೇನಾ  ರಾಜಿನಾಮೆಗೆ ಪಟ್ಟು ಹಿಡಿದರು.

Donate Janashakthi Media

Leave a Reply

Your email address will not be published. Required fields are marked *