ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ತು ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿರುವ ತಮ್ಮ ಪಕ್ಷದ ಎಲ್ಲ ಸದಸ್ಯರಿಗೂ ರಾಜೀನಾಮೆ ನೀಡುವಂತೆ ಸೂಚಿಸಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಮ್ಮ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ರ‍್ಯಾಲಿಯನ್ನು ಕೈಬಿಡುವ ಮಹತ್ವದ ಘೋಷಣೆ ಮಾಡಿದ್ದಾರೆ.
ತಮ್ಮ ಮೇಲೆ ಗುಂಡಿನ ದಾಳಿ ನಡೆದ ನಂತರದ ಮೊದಲ ಪ್ರತಿಭಟನಾ ಜಾಥಾದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾಗಿಯಾಗಿದ್ದು, ರಾವಲ್ಪಿಂಡಿಯಲ್ಲಿ ಪಿಟಿಐ (ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್) ಆಯೋಜಿಸಿದ್ದ ಬೃಹತ್ ಜಾಥಾದಲ್ಲಿ ದೊಡ್ಡಪ್ರಮಾಣದಲ್ಲಿ ಜನರು ಸೇರಿದ್ದರು. ಇಸ್ಲಾಮಾಬಾದ್ವರೆಗೆ ನಡೆಸಲು ಉದ್ದೇಶಿಸಿದ್ದ ಜಾಥಾವನ್ನು ಅರ್ಧಕ್ಕೆ ಕೈಬಿಡಲು ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ. ಇದು ಜಾಗತಿಕ ಮಾಧ್ಯಮಗಳ ಗಮನ ಸೆಳೆದ ದೊಡ್ಡ ಸುದ್ದಿಯಾಯಿತು.
ಪಕ್ಷದ ಟ್ವಿಟರ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿರುವ ಇಮ್ರಾನ್ ಈ ಸರ್ಕಾರದ ಭಾಗವಾಗಲು ನಮಗೆ ಇಷ್ಟವಿಲ್ಲ. ನಾನು ಎಲ್ಲ ಮುಖ್ಯಮಂತ್ರಿಗಳು ಮತ್ತು ಶಾಸಕಾಂಗ ಪಕ್ಷದ ನಾಯಕರನ್ನು ಸಂಪರ್ಕಿಸುತ್ತೇನೆ. ಎಲ್ಲ ವಿಧಾನಸಭೆಗಳಿಂದ ನಾವು ಹೊರಬರುತ್ತಿದ್ದೇವೆ. ನಮ್ಮದೇ ದೇಶವನ್ನು ನಾವು ಹಿಂಸಾಚಾರ, ಅಸ್ಥಿರತೆಗೆ ದೂಡುವ ಬದಲು ಈ ಭ್ರಷ್ಟ ಸರ್ಕಾರದಿಂದ ಹೊರಬರುವುದು ಒಳ್ಳೆಯದು ಎಂದು ತಿಳಿಸಿದ್ದಾರೆ.
ನಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ನಾವು ವಿಫಲರಾದೆವು ಎಂದು ಇಮ್ರಾನ್ ಖಾನ್ ಹೇಳಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರ ಭಾಷಣ ಮುಂದುವರಿಯಿತು. ತಮ್ಮ ಭಾಷಣದಲ್ಲಿ ಸೂಫಿ ತತ್ವಜ್ಞಾನಿ ರೂಮಿ, ಶಿಯಾ ನಾಯಕ ಇಮ್ರಾನ್ ಹುಸೇನ್ ಮತ್ತು ಸೋವಿಯತ್ ಒಕ್ಕೂಟ ಛಿದ್ರಗೊಂಡ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
ಇಮ್ರಾನ್ ಖಾನ್ ತಾವು ಅಧಿಕಾರ ಕಳೆದುಕೊಂಡ ನಂತರ ಹೊಸದಾಗಿ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಹಾಲಿ ಪ್ರಧಾನಿ ಶೆಹ್ಬಾಜ್ ಷರೀಫ್ ಮತ್ತು ಅವರ ಮಿತ್ರಪಕ್ಷಗಳ ನಾಯಕರನ್ನು ಭ್ರಷ್ಟರು ಎಂದು ಆರೋಪಗಳನ್ನು ಮಾಡುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ ಇಮ್ರಾನ್ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಸ್ವತಃ ಇಮ್ರಾನ್ ಖಾನ್‌ಗೂ ಗಾಯಗಳಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಇಮ್ರಾನ್ ಖಾನ್ ಚೇತರಿಸಿಕೊಂಡಿದ್ದರು.