ಬೆಂಗಳೂರು: ನೋಂದಾಣಿ ಮತ್ತು ಮುದ್ರಾಂಕ ಇಲಾಖೆ ಸರಳಿಕೃತ ಮಾಡುವ ನಿಟ್ಟಿನಲ್ಲಿ ಕಾವೇರಿ 2.0 ತಂತ್ರಾಂಶ ಯಶಸ್ವಿಯಾಗಿ ಅನುಷ್ಠಾನವಾಗಿದೆ. ಶನಿವಾರದೊಳಗಾಗಿ 256 ಉಪ ನೋಂದಾಣಿ ಕಚೇರಿಯಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ (ಜೂನ್ 19) ರಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಸಚಿವರು, ಕಾವೇರಿ 2 ಮೂಲಕ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಬ್ಮಿಟ್ ಮಾಡಬಹುದು. ಉಪನೋಂದಣಾಧಿಕಾರಿ ಆನ್ ಲೈನ್ ನಲ್ಲೇ ದಾಖಲಾತಿ ಪರಿಶೀಲನೆ ಮಾಡುತ್ತಾರೆ. ನೋಂದಾಣಿ ಮಾಡುವವರು ತಮಗೆ ಬೇಕಾದ ಸಮಯದಲ್ಲಿ ಅಪಾಯ್ಟ್‌ಮೆಂಟ್ ಪಡೆದುಕೊಳ್ಳಲು ಅವಕಾಶ ಇದೆ. ಹತ್ತರಿಂದ ಹದಿನೈದು ನಿಮಿಷದಲ್ಲಿ ನೋಂದಣಿ ಕಾರ್ಯ ಮುಗಿಸಲು ಅವಕಾಶ ಇದೆ ಎಂದು ವಿವರಿಸಿದರು.
ಇದನ್ನೂ ಓದಿ:ಇನ್ಮುಂದೆ 10 ನಿಮಿಷದೊಳಗೆ ಆಸ್ತಿ ನೋಂದಣಿ : ಸಚಿವ ಆರ್.ಅಶೋಕ್
256 ಉಪನೋಂದಣಿ ಕಚೇರಿಯಲ್ಲಿ ಅನುಷ್ಠಾನ ಮಾಡಲಾಗುವುದು. ಆನ್ ಲೈನ್ ನೋಂದಣಿಯಿಂದ ರಾಜ್ಯದಲ್ಲಿ ಎಷ್ಟು ನೋಂದಣಿ ನಡೆಯಿತು ಎಂಬ ಮಾಹಿತಿ ಸರ್ಕಾರಕ್ಕೆ ಪ್ರತಿದಿನ ತಿಳಿಯಲಿದೆ. ಇದರಿಂದ ನೋಂದಣಿ ಪ್ರಕ್ರಿಯೆ ಸುಲಭವಾಗಲಿದೆ, ತಪ್ಪುಗಳು ಕಡಿಮೆಯಾಗುವುದರ ಜೊತೆಗೆ ಭ್ರಷ್ಷಾಚಾರಕ್ಕೂ ಕಡಿವಾಣ ಹಾಕಬಹುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಇನ್ನು ಆಸ್ತಿ ಮಾರ್ಗಸೂಚಿ ದರ 4 ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ. ಮಾರುಕಟ್ಟೆ ದರಕ್ಕೆ ತಕ್ಕಂತೆ ಏರಿಕೆ ಮಾಡಲು ಈ ವಾರ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಜಮೀನು ಯಾವ ಹೆಸರಿನಲ್ಲಿ ಇದೆ ಎಂಬ ಮಾಹಿತಿ ಸ್ಪಷ್ಟವಾಗಿ ತಿಳಿಯುತ್ತದೆ. ಯಾವುದೇ ವಂಚನೆಗೆ ಅವಕಾಶವಿಲ್ಲ. ಕಾವೇರಿ 2 ಜಾರಿಗೊಂಡ ಬಳಿಕ ದೊಡ್ಡಬಳ್ಳಾಪುರದಲ್ಲಿ ದಿನಕ್ಕೆ 65 ನೋಂದಣಿ ಆಗುತ್ತಿದೆ. ಕಾವೇರಿ 1 ಇದ್ದಾಗ 63 ದಾಖಲೆ ನೋಂದಣಿ ಆಗುತ್ತಿತ್ತು. ಕಾವೇರಿ 2 ಜಾರಿಗೊಂಡಾಗ 131 ದಾಖಲಾತಿ ನೋಂದಾಣಿ ಆಗಿದೆ ಎಂದು ಹೇಳಿದರು.