ಒಂದು ದೇಶ, ಒಂದು ಸಮಾನ ವೇತನ ನೀತಿ ಜಾರಿಗೆ ತನ್ನಿ – ಕೆ ಮಹಾಂತೇಶ ಆಗ್ರಹ

ಹುಬ್ಬಳ್ಳಿ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ತರಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ಇಡೀ ದೇಶವ್ಯಾಪಿ ಪರಿಶ್ರಮವಹಿಸಿ ದುಡಿಯುತ್ತಿರುವ ಕಾರ್ಮಿಕರಿಗೆ ವೇತನದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಿ ಘನತೆಯ ಬದುಕು ಸಾಗಿಸಲು ಕೇಂದ್ರ ಸರ್ಕಾರ ಒಂದೇ ರೀತಿಯ ಸಮಾನ ಕನಿಷ್ಠವೇತನ ಜಾರಿಗೊಳಿಸಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ. ಮಹಾಂತೇಶ ಆಗ್ರಹಿಸಿದರು.

ನಗರದ ಅಕ್ಕನ ಬಳಗದಲ್ಲಿ ರವಿವಾರ ಸಮಗ್ರ-ಸಮೃದ್ದ-ಸೌಹಾರ್ದ ಕರ್ನಾಟಕಕ್ಕಾಗಿ ಧಾರವಾಡ ಹಾವೇರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಭಾರತ ಕಮ್ಯೂನಿಷ್ಟ್ ಪಕ್ಷ (ಮಾರ್ಕ್ಸ್ ವಾದಿ) ಸಿಪಿಐ(ಎಂ)ನ 13 ನೇ ಜಿಲ್ಲಾ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆಗಳು ಒಂದೇ ರೀತಿ ಏರುತ್ತಿದ್ದು, ಅದಕ್ಕನುಗುಣವಾಗಿ ದುಡಿಯುವ ಜನರಿಗೆ ಕೊಳ್ಳುವ ಶಕ್ತಿ ಹೆಚ್ಚಾಗುತ್ತಿಲ್ಲ. ದೇಶದಲ್ಲಿ ಕನಿಷ್ಠ ವೇತನ ಮೂವತ್ತು ಸಾವಿರ ಜಾರಿಮಾಡಲು ಸರಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಇದನ್ನೂ ಓದಿ: ಮಂಡ್ಯ| ದೇಗುಲದೊಳಗೆ ದಲಿತರು ಪ್ರವೇಶಿಸಿದರೆಂದು ಉತ್ಸವ ಮೂರ್ತಿಯನ್ನೇ ಹೊರತಂದ್ರು

ಶಿಕ್ಷಣ, ನಿರುದ್ಯೋಗ, ಆರೋಗ್ಯ, ವಸತಿ ಹಾಗೂ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಬದಲಾಗಿ ಕೋಮು ಸಾಮರಸ್ಯ ಕದಡುವಂತಹ ಧಾಳಿ, ಜಗಳಗಳನ್ನು ಹಚ್ಚುವ ಮೂಲಕ ಸಮಾಜದಲ್ಲಿ ದ್ವೇಷ, ವೈಷಮ್ಯವನ್ನು ಧರ್ಮ, ಜಾತಿ ಹೆಸರಿನಲ್ಲಿ ನಡೆಸುತ್ತಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಎಂಬುದು ಮರೀಚಿಕೆಯಾಗಿದೆ. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆಯಂತಹ ಮನುಷ್ಯಕುಲ ತಲೆತಗ್ಗಿಸುವ ಹೀನ ಘಟನೆ ನಡೆದರೂ ಆ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ ನೀಡದಿರುವುದು ಮಹಿಳೆಯರ ವಿಚಾರದಲ್ಲಿ ಬಿಜೆಪಿ ಪಕ್ಷದ ನೀತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಸಿಪಿಐ ಪಕ್ಷದ ಜಿಲ್ಲಾ ಮುಖಂಡರಾದ ಎ.ಎಸ್ ಫೀರಜಾದೆ ಶುಭ ಕೋರಿ ಮಾತನಾಡಿ, ಬಿಜೆಪಿ, ಕಾಂಗ್ರಸ್ ಸೇರಿದಂತೆ ಇನ್ನಿತರ ಪಕ್ಷಗಳಿಂದ ಬದಲಾವಣೆ ಸಾಧ್ಯವಿಲ್ಲ. ರೈತ ಕಾರ್ಮಿಕರ ಹಾಗೂ ದುಡಿಯುವ ಜನರ ಏಳಿಗೆಯಾಗುವುದಿದ್ದರೆ ಅದು ಭ್ರಷ್ಟಾಚಾರದಲ್ಲಿ ಎಂದೂ ಪಾಲ್ಗೊಳ್ಳದ ಕಮ್ಯೂನಿಷ್ಟ್ ಪಕ್ಷಗಳಿಂದ ಮಾತ್ರ ಸಾಧ್ಯವಿದೆ. ಹಾಗಾಗಿ ಸಿಪಿಐ, ಸಿಪಿಐ(ಎಂ) ಪಕ್ಷಗಳು ಒಂದಾಗುವುದು ತುರ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ಕಾರ್ಪೊರೇಟ್ ಬಂಡವಾಳಶಾಹಿ ಹಾಗೂ ಕೋಮುವಾದದ ಅನೈತಿಕ ಸ್ವರೂಪವಾಗಿರುವ ಮೋದಿ ಸರಕಾರ ಕಳೆದ ಹತ್ತು ವರ್ಷದಿಂದ ಜನವಿರೋಧಿಯಾಗಿ ಅಧಿಕಾರ ನಡೆಸುತ್ತಿದೆ. ನಮ್ಮ ಪಕ್ಷ ಈ ಭಾಗದಲ್ಲಿ ಸಣ್ಣದೇ ಆದರೂ, ಈ ಪ್ರದೇಶದ ಜನರ ಸಂಕಷ್ಠಗಳನ್ನು ಪರಿಹರಿಸಲು ಇಲ್ಲಿರುವ ಎಲ್ಲ ಅವಕಾಶವನ್ನು ಬಳಸಿಕೊಂಡು ಜನಚಳುವಳಿಯನ್ನು ಬಲಿಷ್ಠವಾಗಿ ಕಟ್ಟಬೇಕಿದೆ. ಈ ನಿಟ್ಟಿನಲ್ಲಿ ಈ ಸಮ್ಮೇಳನ ಚರ್ಚೆ ನಡೆಸಿ ತೀರ್ಮಾನಗಳನ್ನು ಕೈಗೊಳ್ಳಲಿದೆ. ಸರಕಾರಗಳ ಜನ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಶೋಷಿತ ಜನವಿಭಾಗವನ್ನು ಸಂಘಟಿಸಿ ಹೋರಾಟ ಕಟ್ಟಲು ನಾವೆಲ್ಲರೂ ಪಣತೊಡಬೇಕಿದೆ ಎಂದರು.

ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಿ. ನಾಗರಾಜ್ ಅವರು ತಮಟೆ ಬಾರಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಮೊದಲು ಪಕ್ಷದ ಹಿರಿಯ ನಾಯಕರಾದ ರುದ್ರಪ್ಪ ಜಾಬೀನ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಹುತಾತ್ಮ ಸ್ಥಂಭಕ್ಕೆ ಮುಖಂಡರು ಹಾಗೂ ಪ್ರತಿನಿಧಿ ಸಂಗಾತಿಗಳು ಪುಷ್ಪಾರ್ಪಣೆ ಮಾಡಿ ಗೌರವ ಕೆಂಪು ನಮನಗಳನ್ನು ಸಲ್ಲಿಸಿದರು.

ಬಿ.ಎನ್ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಬಿ.ಎಸ್ ಸೊಪ್ಪಿನ, ಬಿ.ಐ ಈಳಿಗೇರ ಉಪಸ್ಥಿತರಿದ್ದರು. ಬಸವರಾಜ ಪೂಜಾರ ನಿರೂಪಿಸಿದರು, ಆನಂದ ಅರ್ಚಕ ಸ್ವಾಗತಿಸಿದರು. ಗುರುಸಿದ್ದಪ್ಪ ಅಂಬಿಗೇರ ವಂದಿಸಿದರು.

ಇದನ್ನೂ ನೋಡಿ: ವಚನಾನುಭವ 19| ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು | ಮೀನಾಕ್ಷಿ ಬಾಳಿ Janashakthi Media

Donate Janashakthi Media

Leave a Reply

Your email address will not be published. Required fields are marked *