ಕೃಷಿ ಬಿಕ್ಕಟ್ಟನ್ನು ಇಷ್ಟಪಡುವ ಸಾಮ್ರಾಜ್ಯಶಾಹಿ – ಸಾಮ್ರಾಜ್ಯಶಾಹಿಯೆದುರು ತಲೆಬಾಗುವ ಸರಕಾರ

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

ಭಾರತದಲ್ಲಿ ಬ್ರಿಟಿಶ್ ಸಾಮ್ರಾಜ್ಯದ ಆಳ್ವಿಕೆಯ ಆರಂಭವೂ ಬರಗಾಲದೊಂದಿಗೇ, ಅಂತ್ಯವೂ ಬರಗಾಲದೊಂದಿಗೇ ಸಂಭವಿಸಿರುವುದು ಕಾಕತಾಳೀಯವಲ್ಲ. ಸಾಲ, ಬಡತನ ಮತ್ತು ರೈತಾಪಿಯನ್ನು ಹಿಂಡುವುದು ಇವುಗಳು ವಸಾಹತುಶಾಹಿ ಆಡಳಿತದ ಸಾಮಾನ್ಯ ಲಕ್ಷಣಗಳಾಗಿದ್ದರಿಂದ ಬ್ರಿಟಿಷ್ ಆಳ್ವಿಕೆಯ ಆರಂಭ ಮತ್ತು ಅಂತ್ಯವು ಬರಗಾಲಗಳ ಮೂಲಕ ಪ್ರಕಟಗೊಂಡ ಕೃಷಿ ಬಿಕ್ಕಟ್ಟುಗಳೊಂದಿಗೆ ಕೂಡಿತ್ತು. ಆದುದರಿಂದ, ಕೃಷಿ ಬಿಕ್ಕಟ್ಟನ್ನು ಮೀರಿ ನಿಲ್ಲಬೇಕಾದರೆ ಮತ್ತು ಆಹಾರ ಸ್ವಾವಲಂಬನೆಯನ್ನು ಸಂರಕ್ಷಿಸಿಕೊಳ್ಳಬೇಕಾದರೆ, ಸರ್ಕಾರವು ಸಾಮ್ರಾಜ್ಯಶಾಹಿಯ ಬೇಡಿಕೆಗಳಿಗೆ ವಿರುದ್ಧವಾಗಿ ರೈತಾಪಿಯನ್ನು ರಕ್ಷಿಸಲೇ ಬೇಕಾಗಿದೆ. ಆದರೆ “ರಾಷ್ಟ್ರೀಯತೆ”ಯ ಆಡಂಬರದ ಮಾತುಗಳ ಹಿಂದೆ ಸಾಮ್ರಾಜ್ಯಶಾಹಿ ಬೇಡಿಕೆಗಳಿಗೆ ಶರಣಾಗುವ ದಾಸ್ಯ ಮನೋಭಾವದ ಪುಕ್ಕಲು ಸರ್ಕಾರವು ಸಾಮ್ರಾಜ್ಯಶಾಹಿಯ ಹುಕುಂಗಳನ್ನು ಗುಲಾಮನಂತೆ ತಲೆತಗ್ಗಿಸಿ ಪಾಲಿಸುತ್ತದೆ.

ದಕ್ಷಿಣ ಜಗತ್ತಿನ ದೇಶಗಳು ಕೃಷಿ ಬಿಕ್ಕಟ್ಟುಗಳಿಗೆ ಒಳಗಾಗುವ ಪ್ರಕ್ರಿಯೆಗೂ ಮತ್ತು ಸಾಮ್ರಾಜ್ಯಶಾಹಿಯು ಬಲಗೊಳ್ಳುವ ಪ್ರಕ್ರಿಯೆಗೂ ಒಂದು ನೇರ ಸಂಬಂಧವಿದೆ. ಕೃಷಿ ಬಿಕ್ಕಟ್ಟುಗಳು ಸಾಮ್ರಾಜ್ಯಶಾಹಿಯ ಬಲವರ್ಧನೆಯ ಇನ್ನೊಂದು ಮಗ್ಗುಲು ಎಂಬುದನ್ನು ಸ್ಪಷ್ಟಪಡಿಸುವ ಹಲವು ನಿದರ್ಶನಗಳು ಭಾರತದಲ್ಲಿ ಸಿಗುತ್ತವೆ. ಹೆಚ್ಚುಕಡಿಮೆ ವಸಾಹತುಶಾಹಿಯ ಅವಧಿಯುದ್ದಕ್ಕೂ ಬರಗಾಲಗಳ ರೂಪದಲ್ಲಿ ಪದೇ ಪದೇ ಪ್ರಕಟಗೊಂಡ ಕೃಷಿ ಬಿಕ್ಕಟ್ಟನ್ನು ಭಾರತವು ಅನೇಕ ಸಲ ಕಂಡಿದೆ. ಬಂಗಾಳದ ಕಂದಾಯ ಸಂಗ್ರಹಣೆಯ ಹಕ್ಕನ್ನು ಮೊಘಲ್ ಚಕ್ರವರ್ತಿ ಷಾ ಆಲಂನಿಂದ 1765ರಲ್ಲಿ ಪಡೆದುಕೊಳ್ಳುವ ಮೂಲಕ ಈಸ್ಟ್ ಇಂಡಿಯಾ ಕಂಪೆನಿಯು ಭಾರತದಲ್ಲಿ ತನ್ನ ವಸಾಹತುಶಾಹಿ ಆಳ್ವಿಕೆಯನ್ನು ಆರಂಭಿಸಿತು. ನಂತರದ ಐದೇ ಐದು ವರ್ಷಗಳಲ್ಲಿ, ಅಂದರೆ 1770ರಲ್ಲಿ, ಒಂದು ಭಾರೀ ಬರಗಾಲಕ್ಕೆ ಒಳಗಾದ ಬಂಗಾಳವು ಅಪಾರ ಕಷ್ಟ ನಷ್ಟಗಳನ್ನು ಅನುಭವಿಸಿತು. ವಿಶ್ವದ ಇತಿಹಾಸದಲ್ಲೇ ಅತ್ಯಂತ ಭೀಕರವಾದದ್ದು ಎಂದು ಹೇಳಲಾದ ಈ ಬರಗಾಲದಲ್ಲಿ ಕಂಪೆನಿ ಅಧಿಕಾರಿಗಳ ಪ್ರಕಾರವೇ, ಬಂಗಾಳದ ಒಟ್ಟು 3ಕೋಟಿ ಜನರ ಪೈಕಿ 1 ಕೋಟಿ ಜನರು ಸಾವಿಗೀಡಾದರು. ಬಂಗಾಳದಲ್ಲಿ 1943-44ರಲ್ಲಿ ಕಾಣಿಸಿಕೊಂಡ ಮತ್ತೊಂದು ಭೀಕರ ಬರಗಾಲದಲ್ಲಿ ಕನಿಷ್ಠ 3 ಮಿಲಿಯ ಜನರು ಜೀವ ಕಳೆದುಕೊಂಡರು. ಹೀಗೆ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಆರಂಭ ಮತ್ತು ಅಂತ್ಯವು ಬರಗಾಲಗಳ ಮೂಲಕ ಪ್ರಕಟಗೊಂಡ ಕೃಷಿ ಬಿಕ್ಕಟ್ಟುಗಳೊಂದಿಗೆ ಕೂಡಿತ್ತು.

ಇದನ್ನು ಓದಿ: ಉಲ್ಬಣಿಸಿದ ಬಿಕ್ಕಟ್ಟು ಪಲಾಯನದ ಮಹಾಪೂರ

ಬ್ರಿಟಿಷರ ಆಳ್ವಿಕೆಯ ಆರಂಭದ ಕಾಲದಲ್ಲಿ, ಅತಿ ಹೆಚ್ಚಿನ ಮಟ್ಟದ ಭೂ-ಕಂದಾಯವನ್ನು ವಸೂಲಿ ಮಾಡುತ್ತಿದ್ದ ಕ್ರಮವೇ ಬರ ಉಂಟಾಗಲು ಕಾರಣವಾಗಿತ್ತು. ಬ್ರಿಟಿಷ್ ಆಳ್ವಿಕೆಯ ಅಂತ್ಯವೂ, ತೆರಿಗೆಗಳ ಜೊತೆಗೆ, ದಕ್ಷಿಣ ಏಷ್ಯಾದಲ್ಲಿ ತನ್ನ ಮಿತ್ರ ರಾಷ್ಟ್ರಗಳ ಯುದ್ಧ ವೆಚ್ಚಗಳಿಗೆ ಹಣ ಒದಗಿಸಿದ ಕಾರಣದಿಂದಾಗಿ ಉದ್ಭವಿಸಿದ ಅತಿ ಹೆಚ್ಚಿನ ಮಟ್ಟದ ಕೊರತೆ ಹಣಕಾಸಿನ ಕ್ರಮಗಳಿಂದಾಗಿ ಹಣದುಬ್ಬರ ಉಂಟಾದ ಸನ್ನಿವೇಶದಲ್ಲಿ ಜನರಿಂದ ಬಲವಂತವಾಗಿ ವಸೂಲಿ ಮಾಡುತ್ತಿದ್ದ ತೆರಿಗೆಗಳು ಸೃಷ್ಟಿಸಿದ ಬರದ ಸನ್ನಿವೇಶದಲ್ಲೇ ಸಂಭವಿಸಿತು. ಬರಗಾಲಕ್ಕೆ ಬಲಿಯಾಗುತ್ತಿದ್ದವರು ಪ್ರಧಾನವಾಗಿ ರೈತರು ಮತ್ತು ಕೃಷಿ ಕಾರ್ಮಿಕರನ್ನೊಳಗೊಂಡ ಗ್ರಾಮೀಣ ಜನರೇ. ಬರದ ಜೊತೆಗೆ ಸಾಲ, ಬಡತನ ಮತ್ತು ರೈತಾಪಿಯನ್ನು ಹಿಂಡುವುದು ಇವುಗಳು ವಸಾಹತುಶಾಹಿ ಆಡಳಿತದ ಸಾಮಾನ್ಯ ಲಕ್ಷಣಗಳಾಗಿದ್ದವು.

ಬಂಗಾಳದ ಬರಗಾಲ

ವಸಾಹತುಶಾಹಿ ಆಡಳಿತಗಾರರ ಈ ರೀತಿಯ ಸುಲಿಗೆಯು ಕೇವಲ ಒಂದು ನಿರಂಕುಶ ವಿದ್ಯಮಾನ ಮಾತ್ರವೇ ಅಲ್ಲ. ಭಾರತದಲ್ಲಿ ನಡೆಯುತ್ತಿದ್ದ ಈ ಸುಲಿಗೆಯು ನಿರ್ದಿಷ್ಟವಾಗಿ ಬ್ರಿಟನ್‌ನಲ್ಲಿ ಮತ್ತು ಸಾಮಾನ್ಯವಾಗಿ ಮಹಾನಗರೀಯ ದೇಶಗಳಲ್ಲಿ ಬಂಡವಾಳಶಾಹಿಯ ಅಭಿವೃದ್ಧಿಯೊಂದಿಗೆ ಸಂಬಂಧ ಹೊಂದಿತ್ತು. ಬಂಡವಾಳಶಾಹಿಯು ಅಭಿವೃದ್ಧಿ ಹೊಂದಲು ಕಚ್ಚಾವಸ್ತುಗಳು ಮತ್ತು ಆಹಾರ ಧಾನ್ಯಗಳನ್ನು ಒಳಗೊಂಡಂತೆ ಹಲವು ಹತ್ತು ಪ್ರಾಥಮಿಕ ಸರಕುಗಳ ಅಗತ್ಯವಿದೆ. ಈ ಅಗತ್ಯ ವಸ್ತುಗಳಿಲ್ಲದೆ ಬಂಡವಾಳಶಾಹಿಯು ಅಭಿವೃದ್ಧಿ ಹೊಂದುವುದು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ, ಬಂಡವಾಳಶಾಹಿಯು ಅಭಿವೃದ್ಧಿ ಹೊಂದುತ್ತಿರುವ ಈ ದೇಶಗಳಲ್ಲಿ ಕೆಲವು ಆಹಾರ ಧಾನ್ಯಗಳನ್ನು ಮತ್ತು ಹಲವು ಪ್ರಾಥಮಿಕ ಸರಕುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಅಥವಾ ವರ್ಷವಿಡೀ ಬೆಳೆಯುವುದು ಸಾಧ್ಯವಿಲ್ಲ. ಸಾಂದರ್ಭಿಕವಾಗಿ ಹೇಳುವುದಾದರೆ, ವಿಶ್ವದ ಒಟ್ಟು ತೈಲ ನಿಕ್ಷೇಪದಲ್ಲಿ ಕೇವಲ ಶೇ.11ರಷ್ಟು ಭಾಗವನ್ನು ಮಾತ್ರ ಹೊಂದಿರುವ ಬಂಡವಾಳದ ನೆಲೆ ಎನಿಸಿರುವ ಈ ಸಮಶೀತೋಷ್ಣ ವಲಯದಲ್ಲಿ ದೊರಕುವ ತೈಲದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಆದರೆ, ಅದೇ ರೀತಿಯಲ್ಲಿ, ಪ್ರಪಂಚದ ಉಳಿದ ಭಾಗಗಳಲ್ಲಿ, ಅದರಲ್ಲೂ ವಿಶೇಷವಾಗಿ ಉಷ್ಣ ವಲಯದ ಮತ್ತು ಅದರ ಹತ್ತಿರದ ಭೂಮಿಯಲ್ಲಿ ಬೆಳೆಯುವ ವಿವಿಧ ರೀತಿಯ ಕೃಷಿ ಸರಕುಗಳ ಮೇಲಿನ ಅವಲಂಬನೆಯ ಅಂಶದ ಬಗ್ಗೆ ಗಮನ ಹರಿದೇ ಇಲ್ಲ.

ಇದನ್ನು ಓದಿ: ಕೃಷಿ ಕಾಯ್ದೆಗಳನ್ನು ರದ್ದು ಮಾಡಿ, ಇಲ್ಲವೇ ನಾವು ತಡೆ ನೀಡುತ್ತೇವೆ – ಸುಪ್ರೀಂ ಎಚ್ಚರಿಕೆ

ವಸಾಹತುಶಾಹಿ ತೆರಿಗೆ ವ್ಯವಸ್ಥೆ

ಹದಿನೆಂಟನೆಯ ಶತಮಾನದ ಉತ್ತರಾರ್ಧ ಮತ್ತು ಹತ್ತೊಂಬತ್ತನೆಯ ಶತಮಾನದ ಆದಿಭಾಗದಲ್ಲಿ ಸಂಭವಿಸಿದ ಕೈಗಾರಿಕಾ ಕ್ರಾಂತಿಯ ಮೂಲಕ ಬಂಡವಾಳಶಾಹಿಯು ತನ್ನದೇ ಆದ ಅಸ್ತಿತ್ವ ಪಡೆದುಕೊಂಡಿತು. ಹತ್ತಿ ಕೈಗಾರಿಕೆಯು ಅದರ ಕೇಂದ್ರ ಸ್ಥಾನದಲ್ಲಿತ್ತು. ಆದರೆ, ಈ ಕ್ರಾಂತಿ ಸಂಭವಿಸಿದ ಬ್ರಿಟನ್ನಿನಲ್ಲಿ ಹತ್ತಿಯನ್ನು ಬೆಳೆವುದು ಸಾಧ್ಯವೇ ಇಲ್ಲ. ಕಚ್ಚಾ ಹತ್ತಿಯನ್ನು ಉಷ್ಣವಲಯದ ಮತ್ತು ಉಪೋಷ್ಣವಲಯದ ಭೂಪ್ರದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಬ್ರಿಟನ್ನಿನ ಮತ್ತು ಇತರ ಯೂರೋಪಿಯನ್ ದೇಶಗಳ ಕೈಗಾರಿಕೆಗಳಿಗೆ ಬೇಕಾಗುವ ಇಂತಹ ಎಲ್ಲ ಕಚ್ಚಾವಸ್ತುಗಳ ಬೇಡಿಕೆಯನ್ನು ಪೂರೈಸಿಕೊಳ್ಳಲು, ಮೊಟ್ಟ ಮೊದಲನೆಯದಾಗಿ, ಸರಕು ಉತ್ಪಾದನಾ ಪದ್ಧತಿಯನ್ನು ಈ ದೇಶಗಳಲ್ಲಿ ಪರಿಚಯಿಸಬೇಕಾಗಿತ್ತು. ನಿಜ ಅರ್ಥದಲ್ಲಿ ಸರಕು ಉತ್ಪಾದನೆಯನ್ನು ಮಾರುಕಟ್ಟೆಯು ಕೊಡುವ ಸಂಕೇತಗಳ ಆಧಾರದ ಮೇಲೆ ಮಾತ್ರ ಕೈಗೊಳ್ಳಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಕುಟುಂಬದ ಅಥವಾ ರಾಜ್ಯದ ಅಥವಾ ರಾಷ್ಟ್ರ ಮಟ್ಟದ ಆಹಾರ ಸ್ವಾವಲಂಬನೆಯ ಬಗೆಗಿನ ಕಾಳಜಿಗೆ ಅವಕಾಶವೇ ಇಲ್ಲ. ಎರಡನೆಯದಾಗಿ, ಈ ಕೈಗಾರಿಕಾ ದೇಶಗಳಿಗೆ ಬೇಕಾಗುವ ಅಂತಹ ವಸ್ತುಗಳ ಪೂರೈಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯಬೇಕು ಎಂದಾದರೆ, ಅಂತಹ ವಸ್ತುಗಳನ್ನು ಉತ್ಪಾದಿಸುವ ಪ್ರದೇಶಗಳಲ್ಲಿ ಲಭ್ಯವಿರುವ ಸೀಮಿತ ಭೂಮಿಯ ವಿಸ್ತೀರ್ಣವನ್ನು ಗಮನದಲ್ಲಿಟ್ಟುಕೊಂಡು, ಇದೇ ಉತ್ಪನ್ನಗಳಿಗೆ (ಅಥವಾ ಅದೇ ಭೂಮಿಯಲ್ಲಿ ಬೆಳೆದ ಉತ್ಪನ್ನಗಳಿಗೆ) ಇರುವ ಸ್ಥಳೀಯ ಬೇಡಿಕೆಯನ್ನು ಸಂಕೋಚನಗೊಳಿಸಬೇಕಾಗುತ್ತದೆ.

ವಸಾಹತುಶಾಹಿ ತೆರಿಗೆ ವ್ಯವಸ್ಥೆಯು ಈ ದೇಶಗಳಿಗೆ ಅಗತ್ಯವಿದ್ದ ಈ ಎರಡೂ ಉದ್ದೇಶಗಳನ್ನು ಸಾಧಿಸಿತು. ತೆರಿಗೆಯನ್ನು ದವಸ ಧಾನ್ಯಗಳ ರೂಪದಲ್ಲಿ ಪಡೆಯುತ್ತಿದ್ದ ಮೊಘಲ್ ಭಾರತದಲ್ಲಿದ್ದ ಪದ್ಧತಿಯನ್ನು ವಸಾಹತುಶಾಹಿ ಆಳ್ವಿಕೆಯಡಿಯಲ್ಲಿ ನಗದು ರೂಪದ ಭೂಕಂದಾಯ ಪದ್ಧತಿಗೆ ಬದಲಾಯಿಸಿದ ಮತ್ತು ನಂತರದ ದಿನಗಳಲ್ಲಿ ಭೂ ಕಂದಾಯವನ್ನು ನಿಗದಿತ ಅವಧಿಯೊಳಗೆ ಕಟ್ಟುನಿಟ್ಟಾಗಿ ವಸೂಲಿ ಮಾಡುತ್ತಿದ್ದ ಕ್ರಮದಿಂದಾಗಿ, ರೈತಾಪಿಯು ಸಕಾಲದಲ್ಲಿ ತೆರಿಗೆ ಕಟ್ಟಲು ವ್ಯಾಪಾರಿಗಳಿಂದ ಸಾಲ ಪಡೆಯುವುದು ಅನಿವಾರ್ಯವಾಯಿತು. ಪ್ರತಿಯಾಗಿ, ಈ ವ್ಯಾಪಾರಿಗಳು ಮುಂಗಡ ಸಾಲ ಕೊಡುವಾಗ, ರೈತರು ಇಂತದ್ದೇ ಪೈರನ್ನು ಬೆಳೆಯುವಂತೆ ಮತ್ತು ಅದನ್ನು ಮೊದಲೇ ನಿರ್ಧರಿಸಿದ ಬೆಲೆಗೆ ಮಾರುವುದಾಗಿ ಕರಾರು ಮಾಡಿಕೊಳ್ಳುವಂತೆ ಪಟ್ಟುಹಿಡಿಯುತ್ತಿದ್ದರು. ಅಂದರೆ, ಸ್ವತಃ ವ್ಯಾಪಾರಿಗಳು ಮಾರುಕಟ್ಟೆಯ ಸಂಕೇತಗಳಿಗೆ ರೈತರು ಸ್ಪಂದಿಸುವಂತೆ ನೋಡಿಕೊಳ್ಳುತ್ತಿದ್ದರು. ಈ ರೀತಿಯಲ್ಲಿ ಸರಕು ಉತ್ಪಾದನೆಯನ್ನು ರೈತ ಕೃಷಿಯಲ್ಲಿ ನೇರವಾಗಿ ಅಲ್ಲದಿದ್ದರೂ, ಪರೋಕ್ಷ ರೀತಿಯಲ್ಲಿ ಪರಿಚಯಿಸಲಾಯಿತು. ಅದೇ ಸಮಯದಲ್ಲಿ, ರೈತಾಪಿಯ ಮೇಲೆ ಭಾರಿ ಪ್ರಮಾಣದ ತೆರಿಗೆಗಳನ್ನು ಹೇರಿದ ಕ್ರಮ ಮತ್ತು ಅದರೊಂದಿಗೆ ಬ್ರಿಟನ್ ಮತ್ತು ಇತರ ದೇಶಗಳಿಂದ ಯಂತ್ರ ತಯಾರಿಕೆಯ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಕ್ರಮದ ಪರಿಣಾಮವಾಗಿ ಉಂಟಾದ ಅಪ-ಕೈಗಾರೀಕರಣವು(ಇದ್ದ ಕೈಗಾರಿಕೆಗಳ ನಾಶ) ದುಡಿಯುವ ಜನರ ಆದಾಯವನ್ನು ಕುಗ್ಗಿಸಿತು. ಈ ರೀತಿಯಲ್ಲಿ ಬ್ರಿಟನ್ ಮತ್ತು ಇತರ ದೇಶಗಳಿಗೆ ಬೇಕಾಗಿದ್ದ ಸರಕುಗಳನ್ನು ದೊರಕಿಸಿಕೊಳ್ಳಲು ಅನುವಾಗುವಂತೆ ರೈತಾಪಿಯ ಬೇಡಿಕೆಯನ್ನು ಸಂಕೋಚನಗೊಳಿಸಲಾಯಿತು. ಹೀಗೆ ಸಾಮ್ರಾಜ್ಯಶಾಹಿಯ ಎರಡೂ ಉದ್ದೇಶಗಳೂ ವಸಾಹತುಶಾಹಿ ತೆರಿಗೆ ವ್ಯವಸ್ಥೆಯ ಮೂಲಕ ನೆರವೇರಿದವು. ಈ ತೆರಿಗೆ ವ್ಯವಸ್ಥೆಯು ಬ್ರಿಟನ್ ಮತ್ತು ಇತರ ದೇಶಗಳು ಬಯಸಿದ ಸರಕುಗಳನ್ನು ದೊರಕಿಸಿತು ಎಂಬುದಷ್ಟೇ ಅಲ್ಲ, ಅವುಗಳನ್ನು ಸುಮಾರಾಗಿ ಪುಕ್ಕಟೆಯಾಗೇ ಒದಗಿಸಿತು.

ಇದನ್ನು ಓದಿ: ದಾರಿಗಾಣದಾಗಿರುವ ನವ-ಉದಾರವಾದದ ಆಳ್ವಿಕೆಯಲ್ಲಿ ಜಾಗತಿಕವಾಗಿ ಹೆಚ್ಚುತ್ತಿದೆ ದುಡಿಯುವ ವರ್ಗದ ಪ್ರತಿರೋಧ

ವಸಾಹತುಶಾಹಿಯ ಅಂತ್ಯದೊಂದಿಗೆ ಈ ವ್ಯವಸ್ಥೆ ಕೊನೆಗೊಂಡಿತು. ಮೇಲಾಗಿ ಸ್ವತಂತ್ರ ಭಾರತವು ರೂಪಿಸಿದ ನಿಯಂತ್ರಣ ನೀತಿಗಳ ಅರ್ಥವ್ಯವಸ್ಥೆಯು ವಸಾಹತುಶಾಹಿಯ ಒಂದು ಲಕ್ಷಣವೇ ಆಗಿದ್ದ ನಿರಂತರ ಕೃಷಿ ಬಿಕ್ಕಟ್ಟನ್ನು ನಿವಾರಿಸಿತು. ಕೆಲವೇ ಮಂದಿಯ ಬಳಿ ಇದ್ದ ಭೂ ಹಿಡುವಳಿಯ ಪರಿಸ್ಥಿತಿ ಕೊನೆಗೊಳ್ಳಲಿಲ್ಲ. ಜಮೀನ್ದಾರಿಕೆ ಮುಂದುವರಿಯಿತು. ಪ್ರಷ್ಯಾದ ಜಂಕರ್‌ಗಳ ರೀತಿಯಲ್ಲಿ ಭೂಮಾಲೀಕರು ಬಂಡವಾಳಶಾಹಿ ಭೂಮಾಲೀಕರಾಗಿ ಬದಲಾದರು. ರೈತಾಪಿಯ ಶೋಷಣೆ ಹಾಗೆಯೇ ಉಳಿಯಿತು. ಆದರೆ, ಕೃಷಿ ಬಿಕ್ಕಟ್ಟು ವಿನಾಶಕಾರಿ ಬರಗಾಲಗಳ ರೂಪದಲ್ಲಾಗಲಿ ಅಥವಾ ನಿತ್ರಾಣಗೊಳಿಸುವ ಸಾಲಗಳ ರೂಪದಲ್ಲಾಗಲಿ, ಪಟ್ಟಣಗಳಿಗೆ ಸಾಮೂಹಿಕ ವಲಸೆಯ ರೂಪದಲ್ಲಾಗಲಿ, ಅಥವಾ ಸಾಮೂಹಿಕ ಆತ್ಮಹತ್ಯೆಗಳ ರೂಪದಲ್ಲಾಗಲಿ, ರೈತರ ಕೃಷಿಯ ಗುಣಲಕ್ಷಣವಾಗಿ ಪ್ರಕಟಗೊಳ್ಳುವುದು ನಿಂತು ಹೋಯಿತು.

ನವ-ಉದಾರಿಗಳ ಉದ್ದೇಶ ಸಾಧನೆ

ಆದಾಗ್ಯೂ, ಭಾರತದ ಹಿರಿ-ಬೂರ್ಜ್ವಾಗಳು ಜಾಗತೀಕರಣಗೊಂಡ ಹಣಕಾಸು ಬಂಡವಾಳದೊಂದಿಗೆ ಕೈಜೋಡಿಸಿ, ಅರ್ಥವ್ಯವಸ್ಥೆಯನ್ನು ಹಣಕಾಸು ಬಂಡವಾಳದ ಆಧಿಪತ್ಯಕ್ಕೆ ಒಳಪಡಿಸುವ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡ ನಂತರ, ಪರಿಸ್ಥಿತಿ ಬದಲಾಗತೊಡಗಿತು. ಈಗ ದೇಶದ ಹಿರಿ-ಬೂರ್ಜ್ವಾಗಳ ಸಹಯೋಗದೊಂದಿಗೆ ಅರ್ಥವ್ಯವಸ್ಥೆಯಲ್ಲಿ ಮಹಾನಗರೀಯ ಪ್ರಾಬಲ್ಯವು ಮರಳಿದೆ. ಕೃಷಿ ಬಿಕ್ಕಟ್ಟುಗಳೂ ಸಹ ಮರಳಿವೆ. ಕೃಷಿ ಬಿಕ್ಕಟ್ಟುಗಳು ಈಗ ಬರಗಾಲದ ರೂಪದಲ್ಲಿ ಪ್ರಕಟಗೊಳ್ಳುತ್ತಿಲ್ಲ. ರೈತಾಪಿಯ ಹೆಚ್ಚುತ್ತಿರುವ ಬಡತನ, ಸಾಮೂಹಿಕ ಆತ್ಮಹತ್ಯೆಗಳಿಗೆ ಕಾರಣವಾಗುತ್ತಿರುವ ಸಾಲದ ಹೊರೆ ಮತ್ತು ಅತ್ಯಲ್ಪ ಪ್ರಮಾಣದ ಉದ್ಯೋಗಗಳನ್ನು ಹುಡುಕಿಕೊಂಡು ಪಟ್ಟಣಗಳಿಗೆ ಹೋಗುವ ವಲಸೆ ಇವುಗಳು ಈಗ ಕೃಷಿ ಬಿಕ್ಕಟ್ಟುಗಳಾಗಿ ಪ್ರಕಟಗೊಳ್ಳುತ್ತಿವೆ. ಈ ಎಲ್ಲ ಸಮಸ್ಯೆಗಳೂ ಭಾರತದ ಕೃಷಿಯ ಲಾಭದಾಯಕತೆಯ ಕುಸಿತದಿಂದ ಉದ್ಭವಿಸಿವೆ. ಲಾಭದಾಯಕತೆಯ ಈ ಕುಸಿತವು ಅದೆಷ್ಟು ತೀಕ್ಷ್ಣವಾಗಿದೆ ಎಂದರೆ, ರೈತ-ಕೃಷಿಯನ್ನು ಹೆಚ್ಚು ಕಡಿಮೆ ಕಾರ್ಯಸಾಧ್ಯವಾಗದಂತೆ ಮಾಡುವ ಮಟ್ಟಿಗೆ. ಜೊತೆಗೆ, ಶಿಕ್ಷಣ ಮತ್ತು ಆರೋಗ್ಯದಂತಹ ಅಗತ್ಯ ಸೇವೆಗಳ ಖಾಸಗೀಕರಣದಿಂದಾಗಿ ಈ ಸೇವೆಗಳು ಹೆಚ್ಚು ದುಬಾರಿಯಾಗಿವೆ. ಹಾಗಾಗಿ, ರೈತಾಪಿಯ ಹಿಂಡುವಿಕೆಯು ಅಧಿಕಗೊಂಡಿದೆ.

ಇದನ್ನು ಓದಿ: 75 ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆ – ಮತ್ತೆ ವಿದೇಶಿ ಹಣಕಾಸು ಆಧಿಪತ್ಯದೊಳಕ್ಕೆ

ಕಿರು ಉತ್ಪಾದನೆ ಮತ್ತು ರೈತಕೃಷಿಯನ್ನು ಅತಿಕ್ರಮಿಸುವ ದೊಡ್ಡ ಬಂಡವಾಳದ ಆಕಾಂಕ್ಷೆಯ ಹೊರತಾಗಿಯೂ, ರೈತಕೃಷಿಯ ಬಗ್ಗೆ ತಮ್ಮ ನೀತಿಯನ್ನು ಬದಲಾಯಿಸಿಕೊಳ್ಳುವ ಕಾರಣವೆಂದರೆ, ಈ ಹಿಂದೆ ಉಲ್ಲೇಖಿಸಿದ ಅವಳಿ ಉದ್ದೇಶಗಳನ್ನು ಸಾಕಾರಗೊಳಿಸಿಕೊಳ್ಳುವುದೇ ಆಗಿದೆ. ಈ ಉದ್ದೇಶಗಳೆಂದರೆ: ರೈತರನ್ನು ಸರಕು ಉತ್ಪಾದನೆಯ ವ್ಯಾಪ್ತಿಗೆ ಅಧಿಕೃತವಾಗಿ ಸೆಳೆಯುವುದು ಮತ್ತು ಬಂಡವಾಳಶಾಹಿ ದೇಶಗಳಿಗೆ ಬೇಕಾಗುವ ಸರಕುಗಳನ್ನು ಲಭ್ಯವಾಗುವಂತೆ ಮಾಡಲು ನಮ್ಮ ಅರ್ಥವ್ಯವಸ್ಥೆಯ ಮೇಲೆ ಬೇಡಿಕೆಯ ಸಂಕೋಚನವನ್ನು (demand compression) ಹೇರುವುದು. ಬೇಡಿಕೆಯನ್ನು ಸಂಕುಚಿತಗೊಳಿಸುವುದನ್ನು ಈಗ ಐಎಂಎಫ್ ವಿಧಿಸಿದ ವಿತ್ತೀಯ ಮಿತವ್ಯಯ ಮತ್ತು ಬಿಗಿ ಹಣಕಾಸು ನೀತಿಯ ಕ್ರಮಗಳ ಮೂಲಕ ಜಾರಿಗೊಳಿಸಲಾಗಿದೆ. ಆದರೂ ಈ ಬಂಡವಾಳಶಾಹಿ ದೇಶಗಳಿಗೆ ಅಗತ್ಯವಿರುವ ಉಷ್ಣವಲಯದ ಮತ್ತು ಉಪೋಷ್ಣವಲಯದ ಸರಕುಗಳು ಅವು ವಸಾಹತುಶಾಹಿ ಕಾಲದಲ್ಲಿ ಲಭಿಸುತ್ತಿದ್ದ ರೀತಿಯಲ್ಲಿ ಬಿಟ್ಟಿಯಾಗಿ ಲಭಿಸುವುದಿಲ್ಲ (ವಸಾಹತುಶಾಹಿಯ ನಿರ್ಗಮನದ ನಂತರವೂ, ಅಸಮಾನ ವಿನಿಮಯ, ಪೇಟೆಂಟ್‌ಗಳಿಗೆ ಪಾವತಿ ಮತ್ತು ಇತರ ಕೆಲವು ವಿಧಾನಗಳ ಮೂಲಕ “ಸೋರಿಕೆ”ಯ ಅಂಶವು ಸೀಮಿತ ಪ್ರಮಾಣದಲ್ಲಿ ಮುಂದುವರಿಯುತ್ತದೆ). ಆದರೂ, ಈ ದೇಶಗಳು ತಮಗಾಗಲಿ ಅಥವಾ ಅಂಚಿನಲ್ಲಿರುವ ದೇಶಗಳಿಗಾಗಲಿ ಹಣದುಬ್ಬರ ತಟ್ಟದ ರೀತಿಯಲ್ಲಿ ತಮಗೆ ಪೂರೈಕೆಗಳು ಸಾಕಷ್ಟು ಲಭ್ಯವಾಗುವಂತೆ ನೋಡಿಕೊಳ್ಳುತ್ತವೆ.

ಭಾರತದಂತಹ ದೇಶಗಳು ಮಾರುಕಟ್ಟೆಯ ಅಪ್ಪಣೆಗೆ ಅನುಗುಣವಾಗಿ ಉತ್ಪಾದಿಸುವ ಸರಕು ಉತ್ಪಾದನಾ ವಿಧಾನವನ್ನು (commodity production) ಜಾರಿಗೊಳಿಸುವಂತೆ ಈ ದೇಶಗಳು ನೋಡಿಕೊಳ್ಳುತ್ತವೆ. ಆದರೆ, ಈ ಸರಕು ಉತ್ಪಾದನಾ ವಿಧಾನವನ್ನು ಅನುಸರಿಸಬೇಕು ಎಂದಾದರೆ, ದೇಶದ ಆಹಾರ ಸ್ವಾವಲಂಬನೆಯಂತಹ ಎಲ್ಲಾ ಪರಿಗಣನೆಗಳನ್ನು (ಆದಾಯ ಮತ್ತು ಕೊಳ್ಳುವ ಶಕ್ತಿಯು ಕೆಳ ಮಟ್ಟದಲ್ಲಿದ್ದರೂ ಸಹ) ತ್ಯಜಿಸಬೇಕಾಗುತ್ತದೆ. ವಸಾಹತುಶಾಹಿ ಕಾಲಾನಂತರದಲ್ಲಿ ಉಂಟಾದ ಒಂದು ಪ್ರಮುಖ ಬದಲಾವಣೆ ಎಂದರೆ, ಮೆಟ್ರೋಪಾಲಿಟನ್ ದೇಶಗಳು ಆಹಾರ ಧಾನ್ಯಗಳ ಹೆಚ್ಚುವರಿ ಉತ್ಪಾದಕರಾಗಿ ಮಾರ್ಪಟ್ಟಿವೆ. ಆದ್ದರಿಂದ, ಅವರ ದೃಷ್ಟಿಯಲ್ಲಿ, ಭಾರತದಂತಹ ಅಂಚಿನ ದೇಶಗಳು ತಮ್ಮ ಆಹಾರ ಧಾನ್ಯಗಳ ಮೇಲಿನ ಸ್ವಾವಲಂಬನೆಯನ್ನು ತುರ್ತಾಗಿ ತ್ಯಜಿಸಬೇಕಾಗಿದೆ. ವಾಣಿಜ್ಯ ಬೆಳೆಗಳಿಗೆ ಕೊಡುತ್ತಿದ್ದ ಸರ್ಕಾರದ ಬೆಂಬಲ ಬೆಲೆ ನೀತಿಯನ್ನು ಭಾರತ ಈಗಾಗಲೇ ಕೈಬಿಟ್ಟಿದೆ. ಆದರೆ. ಆಹಾರ ಧಾನ್ಯಗಳ ವಿಷಯದಲ್ಲಿ ಬೆಂಬಲ ಮತ್ತು ಖರೀದಿ ಬೆಲೆಗಳ ಕಾರ್ಯವಿಧಾನ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪೋಷಿಸುವ ಉದ್ದೇಶದ ಖರೀದಿ ಕಾರ್ಯಾಚರಣೆಗಳು ವಿಶ್ವ ವ್ಯಾಪಾರ ಸಂಘಟನೆಯ ಒತ್ತಡಗಳ ಹೊರತಾಗಿಯೂ ಇನ್ನೂ ಉಳಿದಿವೆ, ಏಕೆಂದರೆ, ಇಂತಹ ಒತ್ತಡಗಳಿಗೆ ಮಣಿಯುವ ಸಾಹಸವನ್ನು ಇದುವರೆಗೆ ಯಾವ ಸರ್ಕಾರವೂ ಮಾಡಿಲ್ಲ.

ರಾಷ್ಟ್ರವಾದ’ದ ಮರೆಯಲ್ಲಿ

ಗಮನವನ್ನು ಬೆರೆಡೆಗೆ ತಿರುಗಿಸುವ ಹಿಂದುತ್ವದ ಚರ್ಚೆಯ ಮುಸುಕಿನಲ್ಲಿ ಮತ್ತು ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯ ಲಾಭ ಪಡೆದು, ಈ ಮೆಟ್ರೋಪಾಲಿಟನ್ ಕಾರ್ಯಸೂಚಿಯನ್ನು ಪೂರ್ಣವಾಗಿ ಕಾರ್ಯಗತಗೊಳಿಸಬಹುದು ಎಂದು ಮೋದಿ ಸರ್ಕಾರ ಭಾವಿಸಿತ್ತು. ಮೋದಿ ಸರ್ಕಾರದ ಮೂರು ಕುಖ್ಯಾತ ಕೃಷಿ ಕಾನೂನುಗಳು ಈ ಉದ್ದೇಶವನ್ನು ನಿಖರವಾಗಿ ಹೊಂದಿದ್ದವು. ಆಹಾರ ಧಾನ್ಯಗಳಿಗೆ ಕೊಡುವ ಬೆಂಬಲ ಬೆಲೆ ವ್ಯವಸ್ಥೆಯನ್ನು ವಿಸರ್ಜಿಸುವುದು ಮತ್ತು ರೈತರ ಸ್ಥಿತಿ-ಗತಿಗಳನ್ನು ಸುಧಾರಿಸುವ ಹೆಸರಿನಲ್ಲಿ ಕೃಷಿಯ ಕಾರ್ಪೊರೇಟೀಕರಣಕ್ಕೆ ದಾರಿ ಮಾಡಿಕೊಡುವುದು ಈ ಕಾನೂನುಗಳ ಉದ್ದೇಶವಾಗಿತ್ತು! ಆದರೆ, ರೈತರ ದೃಢ ಹೋರಾಟವು ಈ ಯೋಜನೆಯನ್ನು ವಿಫಲಗೊಳಿಸಿತು.

ಇದನ್ನು ಓದಿ: ವರಮಾನಗಳ ಅಸಮತೆ ಹೆಚ್ಚುವುದರಿಂದಾಗಿಯೇ ಸಂಪತ್ತಿನ ಅಸಮತೆಯೂ ಹೆಚ್ಚುತ್ತದೆ

ಸರ್ಕಾರದ ಈ ಹಿಮ್ಮೆಟ್ಟುವಿಕೆಯು ತಾತ್ಕಾಲಿಕವಾದುದು. ನವ-ಉದಾರವಾದಿ ನೀತಿಗಳಿಗೆ ಬದ್ಧವಾಗಿರುವ ಮೋದಿ ಸರ್ಕಾರವು, ಆಹಾರ-ಧಾನ್ಯ ಮಾರುಕಟ್ಟೆಯೂ ಸೇರಿದಂತೆ ಮಾರುಕಟ್ಟೆಗಳಲ್ಲಿ ಸರ್ಕಾರದ ಎಲ್ಲಾ ರೀತಿಯ ಮಧ್ಯಪ್ರವೇಶವನ್ನು ತೆಗೆದುಹಾಕುವ ನವ-ಉದಾರವಾದಿ ಕಾರ್ಯಸೂಚಿಗೆ ಬದ್ಧವಾಗಿದೆ. ಆದ್ದರಿಂದ, ಸೂಕ್ತ ಅವಕಾಶ ಸಿಕ್ಕಾಗ ಅದು ಮತ್ತೊಮ್ಮೆ ಅದೇ ಕ್ರಮಗಳಿಗೆ ಹಿಂತಿರುಗುತ್ತದೆ. “ರಾಷ್ಟ್ರವಾದ” ಎಂದು ಅದು ಆಡುವ ಆಡಂಬರದ ಮಾತುಗಳ ಹಿಂದೆ ಸಾಮ್ರಾಜ್ಯಶಾಹಿ ಬೇಡಿಕೆಗಳಿಗೆ ಶರಣಾಗುವ ದಾಸ್ಯ ಮನೋಭಾವವಿದೆ. ಧೈರ್ಯಗೇಡಿ ಸರ್ಕಾರವು ಸಾಮ್ರಾಜ್ಯಶಾಹಿಯ ಹುಕುಂಗಳನ್ನು ಗುಲಾಮನಂತೆ ತಲೆತಗ್ಗಿಸಿ ಪಾಲಿಸುತ್ತದೆ. ನವ ಉದಾರಿ ನೀತಿಗಳ ಅನುಷ್ಠಾನವು ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯನ್ನು ಕಡಿಮೆ ಮಾಡುವುದಲ್ಲದೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಕೊನೆಗೊಳಿಸುತ್ತದೆ. ಅಲ್ಲದೆ, ಧಾನ್ಯಗಳನ್ನು ಆಮದು ಮಾಡಿಕೊಳ್ಳುವ ದೇಶವು ಒಂದು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ನಡೆಸಲಾಗದು. ಭಾರತದಂತಹ ದೇಶಗಳು ತಮ್ಮ ಆಹಾರ ಧಾನ್ಯಗಳ ಸ್ವಾವಲಂಬನೆಯನ್ನು ತ್ಯಜಿಸಿ ಅವುಗಳನ್ನು ಆಮದು ಮಾಡಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಆಫ್ರಿಕಾದ ಕೆಲವು ದೇಶಗಳು ಉದಾಹರಣೆಯಾಗುತ್ತವೆ. ಆಹಾರ ಧಾನ್ಯಗಳ ಸ್ವಾವಲಂಬನೆಯನ್ನು ತ್ಯಜಿಸಿ ಆಮದುಗಳನ್ನೇ ಅವಲಂಬಿಸಿದ ಆಫ್ರಿಕಾದ ಹಲವು ದೇಶಗಳು ಈಗ ಬರ ಪರಿಸ್ಥಿತಿಗೆ ಸಿಲುಕಿವೆ. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಆಹಾರ ಧಾನ್ಯ ಪೂರೈಕೆಯು ಅಸ್ತವ್ಯಸ್ತಗೊಂಡಿದೆ.

ಆದುದರಿಂದ, ಕೃಷಿ ಬಿಕ್ಕಟ್ಟನ್ನು ಮೀರಿ ನಿಲ್ಲಬೇಕಾದರೆ ಮತ್ತು ಆಹಾರ ಸ್ವಾವಲಂಬನೆಯನ್ನು ಸಂರಕ್ಷಿಸಿಕೊಳ್ಳಬೇಕಾದರೆ, ಸರ್ಕಾರವು ಸಾಮ್ರಾಜ್ಯಶಾಹಿಯ ಬೇಡಿಕೆಗಳಿಗೆ ವಿರುದ್ಧವಾಗಿ ರೈತಾಪಿಯನ್ನು ರಕ್ಷಿಸಲೇ ಬೇಕಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *