ಬೆಂಗಳೂರು: ಏಪ್ರಿಲ್ 14 ಸೋಮವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿರುವ ಲಾರಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಬೆಲೆ ಏರಿಕೆ ಬಿಸಿ ಕೂಡ ಜನರಿಗೆ ತಟ್ಟಲು ಶುರುವಾಗಿದೆ.
ರಾಜ್ಯದ ವಿವಿಧ ಭಾಗಗಳಿಂದ ಪ್ರತಿದಿನ ಸುಮಾರು 300 ಟ್ರಕ್‌ಲೋಡ್ ಈರುಳ್ಳಿಯನ್ನು ಸಾಗಣೆಯಾಗುತ್ತಿತ್ತು. ಆದರೆ, ನಗರದ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆಗೆ ಮಂಗಳವಾರ ಕೇವಲ 190 ಟ್ರಕ್‌ಗಳಷ್ಟೇ ಬಂದಿವೆ.
ಏಪ್ರಿಲ್ 15 ರಂದು 56,738 ಈರುಳ್ಳಿ ಮೂಟೆದಶು ಬಂದಿದ್ದರೆ, ಏಪ್ರಿಲ್ 16 ರಂದು ಈ ಸಂಖ್ಯೆ 38,669 ಕ್ಕೆ ಇಳಿದಿದೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆಗಳು ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಜೈಪುರ| ಕುಂಬಾರನಿಗೆ 13 ಕೋಟಿ ರೂ ಠೇವಣಿ ಇಡುವಂತೆ ನೋಟಿಸ್
ಮಾರುಕಟ್ಟೆಯಲ್ಲಿನ ದಾಸ್ತಾನು ಗರಿಷ್ಠ ಮೂರು ದಿನಗಳವರೆಗೆ ಮಾತ್ರ ಇರುತ್ತದೆ ಎಂದು ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವ್ಯಾಪಾರಿ ಸಂಘದ ಕಾರ್ಯದರ್ಶಿ ಬಿ ರವಿಶಂಕರ್ ಅವರು ಹೇಳಿದ್ದಾರೆ.
ಪೂರೈಕೆಯಲ್ಲಿನ ಕಡಿತದಿಂದಾಗಿ, ಸಗಟು ಮಾರುಕಟ್ಟೆಗಳಲ್ಲಿ ಈರುಳ್ಳಿಯ ದರ ಕೆಜಿಗೆ 1 ರೂ. ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಮುಷ್ಕರದ ನೇತೃತ್ವ ವಹಿಸಿರುವ ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್‌ಗಳ ಸಂಘಗಳ ಒಕ್ಕೂಟ (FKSLOA) ಮುಷ್ಕರ ಮುಂದುವರಿಯಲಿದೆ ಎಂದು ಹೇಳಿದ್ದು, ಮುಷ್ಕರವನ್ನು ತೀವ್ರಗೊಳಿಸಲು ನಿರ್ಧರಿಸಿದೆ.
ಶೇ.90ಕ್ಕೂ ಹೆಚ್ಚು ಟ್ರಕ್ ಮತ್ತು ಸರಕು ವಾಹನ ಕಾರ್ಯಾಚರಣೆಗಳು ಸ್ಥಗಿತಗೊಂಡಿವೆ. ಇದು ಅಗತ್ಯ ವಸ್ತುಗಳು ಮತ್ತು ಇತರ ಸರಕುಗಳ ಸರಬರಾಜಿನ ಮೇಲೆ ಪರಿಣಾಮ ಬೀರುತ್ತದೆ. ಕ್ರಮೇಶ ಜನರ ಮೇಲೆ ಪರಿಣಾಮ ಬೀರಲಿದೆ.
ಜನರಿಗೆ ಅನಾನುಕೂಲತೆ ಉಂಟುಮಾಡುವುದು ನಮ್ಮ ಉದ್ದೇಶವಲ್ಲ, ಬದಲಿಗೆ ಸರ್ಕಾರವು ಲಾರಿ ನಿರ್ವಾಹಕರ ಪರಿಸ್ಥಿತಿಯನ್ನು ಅರಿಯಬೇಕು.
ಡೀಸೆಲ್ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳುವುದು ಸೇರಿದಂತೆ ನಮ್ಮ ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು FKSLOA ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಅವರು ತಿಳಿಸಿದ್ದಾರೆ.
ಬೆಂಗಳೂರು ಮತ್ತು ಕರ್ನಾಟಕದಾದ್ಯಂತದ ಮಾರುಕಟ್ಟೆಗಳಲ್ಲಿ ಇನ್ನೂ ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಕೆಲವು ಲಾರಿ ಮಾಲೀಕರ ಕುರಿತ ಪ್ರಶ್ನೆಗೆ ಉತ್ತರಿಸಿ, ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ, ಮುಷ್ಕರಕ್ಕೆ ಮೊದಲು ಸರಕುಗಳನ್ನು ಲೋಡ್ ಮಾಡಿದ ಟ್ರಕ್ಕರ್‌ಗಳು ಅವುಗಳನ್ನು ಸ್ಥಳಗಳಿಗೆ ತಲುಪಿಸಬೇಕು, ಮತ್ತೊಂದು ಕಾರಣ ಮುಷ್ಕರ ವಿಫಲಗೊಳ್ಳುವಂತೆ ಕೆಲವರು ಹೆಚ್ಚಿನ ಹಣ ನೀಡುತ್ತಿರುವುದಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ನೋಡಿ: ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನುಗಳು – ಅಶ್ವಿನಿ ಒಬುಳೇಶ್ Janashakthi Media