ಬೆಂಗಳೂರು: ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ಕೆಪಿಐಡಿ) ಕಾಯ್ದೆಯ ಸೆಕ್ಷನ್ 3ರ ಅನ್ವಯ ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರ ಚರ ಹಾಗೂ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ರಾಜ್ಯ ಸರಕಾರವು ಕರ್ನಾಟಕ ಹೈಕೋರ್ಟ್ಗೆ ತಿಳಿಸಿದೆ.
ಆಸ್ತಿಗಳ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ 2021ರ ಜುಲೈ 6ರಂದು ಸರಕಾರವು ಅಧಿಸೂಚನೆ ಹೊರಡಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ವಿಭಾಗೀಯ ಪೀಠದ ಮುಂದೆ ಸರ್ಕಾರ ಈ ಮಾಹಿತಿ ನೀಡಿದೆ.
ಇದನ್ನು ಓದಿ: ಐಎಂಎ ಪ್ರಕರಣ; ಸಿಬಿಐ ವಶಕ್ಕೆ ಮಾಜಿ ಸಚಿವ ರೋಷನ್ ಬೇಗ್
ಐಎಂಎ ಸಂಸ್ಥೆಯಿಂದ ಠೇವಣಿದಾರರ ಹಣವನ್ನೇ ಸರ್ಕಾರಿ ಶಾಲೆಯೊಂದಕ್ಕೆ ರೂ. 10 ಕೋಟಿ ದೇಣಿಗೆ ಪಡೆದಿರುವುದಕ್ಕೆ ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಅದು ಹೂಡಿಕೆದಾರರ ಹಣ ಎಂಬುದನ್ನು ಸರ್ಕಾರ ಪರಿಶೀಲಿಸಲಿಲ್ಲವೇ? ಹೂಡಿಕೆದಾರರ ಹಣವನ್ನು ದೇಣಿಗೆ ರೂಪದಲ್ಲಿ ಪಡೆದದ್ದಾದರೂ ಹೇಗೆ ಎಂದು ನ್ಯಾಯಾಲಯ ಪ್ರಶ್ನಿಸಿತು.
ಸಂಸ್ಥೆಯ ಆಸ್ತಿ ರಕ್ಷಣೆಗೆ ಸರ್ಕಾರ ಆಸಕ್ತಿ ತೋರುತ್ತಿದೆ ಎಂದ ನ್ಯಾಯಾಲಯವು, ಸರ್ಕಾರ ರೋಷನ್ ಬೇಗ್ ಅವರ ಆಸ್ತಿ ಜಪ್ತಿ ಮಾಡದೆ ಅನುಸರಿಸುತ್ತಿರುವ ವಿಳಂಬ ಧೋರಣೆ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಆಸ್ತಿ ಜಪ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಐದಾರು ಆದೇಶಗಳನ್ನು ನೀಡಬೇಕಾಯಿತು. ಇದೆಲ್ಲಾ ನೋಡಿದರೆ ಸರ್ಕಾರ ಐಎಂಎಯನ್ನು ರಕ್ಷಿಸಲು ಆಸಕ್ತಿ ತೋರುವಂತಿದೆ ಎಂದು ನ್ಯಾಯಾಲಯ ಕಿಡಿಕಾರಿತು.
ರೋಷನ್ ಬೇಗ್ ಅವರ ಸ್ಥಿರ ಮತ್ತು ಚರಾಸ್ತಿ ಜಪ್ತಿ ಮಾಡಲು ಸರ್ಕಾರ ಎರಡು ಅಧಿಸೂಚನೆಗಳನ್ನು ಹೊರಡಿಸಿದೆ ಎಂದು ಹೈಕೋರ್ಟ್ಗೆ ಮಾಹಿತಿ ನೀಡಿದ ಸರಕಾರ ಐಎಂಎ ಪ್ರಕರಣಗಳ ಸಕ್ಷಮ ಪ್ರಾಧಿಕಾರ ಮತ್ತು ವಿಶೇಷ ಅಧಿಕಾರಿ ಹರ್ಷ್ ಗುಪ್ತಾ ಅವರು ಸಲ್ಲಿಸಿದ ವರದಿಯನ್ನು ಪರಿಗಣಿಸಿ ಸಿಬಿಐನಿಂದ ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಇದನ್ನು ಓದಿ: ರೋಷನ್ ಬೇಗ್ಗೆ ಷರತ್ತುಬದ್ಧ ಜಾಮೀನು
ಐಎಂಎ ಹಗರಣದ ಬಗ್ಗತೆ ತನಿಖೆ ನಡೆಸುತ್ತಿರುವ ಸಿಬಿಐ ರೋಷನ್ ಬೇಗ್ ಅವರನ್ನು 2020ರ ನವೆಂಬರ್ 22ರಂದು ‘ಐ ಮಾನಿಟರಿ ಅಡ್ವೈಸರಿ (ಐಎಂಎ) ಸಂಸ್ಥಾಪಕ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್ ನಿಂದ ರೋಷನ್ ಬೇಗ್ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಆರೋಪದಡಿ ಬಂಧಿಸಿತ್ತು. ಆ ನಂತರ ಜಾಮೀನು ಪಡೆದು ಹೊರಗೆ ಬಂದಿದ್ದರು.
ಠೇವಣಿದಾರರ ಹಣ ದೇಣಿಗೆ ಪಡೆದಿರುವುದು ಸರಿಯೇ ಮತ್ತು ಸರ್ಕಾರಿ ಶಾಲೆಗೆ ನೀಡಿದ ದೇಣಿಗೆ ಹಿಂತಿರುಗಿಸಲು ಆಗುತ್ತಿರುವ ವಿಳಂಬ ಧೋರಣೆಯ ಬಗ್ಗೆ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. ಐಎಂಎ ಬಗ್ಗೆ ಮೃದು ಧೋರಣೆ ಯಾಕೆ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ ನ್ಯಾಯಪೀಠವು ದೇಣಿಗೆ ಹಿಂತಿರುಗಿಸುವ ಬಗ್ಗೆ ನಿಲುವು ತಿಳಿಸಲು ಸೂಚನೆ ನೀಡಿ ವಿಚಾರಣೆಯನ್ನು ಜುಲೈ 19 ಕ್ಕೆ ಮುಂದೂಡಿದೆ.
ಚರಾಸ್ತಿಗಳ ಮೌಲ್ಯವನ್ನು ಹರಾಜಿನ ಸಮಯದಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಸೈಟ್ಗಳು ಮತ್ತು ವಾಣಿಜ್ಯ ಸಂಕೀರ್ಣಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಉಪ-ರಿಜಿಸ್ಟ್ರಾರ್ ಸಹಾಯದಿಂದ ನಿರ್ಧರಿಸಲಾಗುವುದು. ದಾಖಲೆಗಳಲ್ಲಿ ಉಲ್ಲೇಖಿಸಲಾದ ಮೌಲ್ಯವು 2018 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬೇಗ್ ತನ್ನ ಅಫಿಡವಿಟ್ ಸಲ್ಲಿಸುವಾಗ ಪ್ರಸ್ತಾಪಿಸಿದ ವಿವರಗಳ ಒಳಗೊಂಡಿದೆ.
ರೋಷನ್ ಬೇಗ್ ಅವರ ಕೆಲವು ಚರಾಸ್ತಿ, ಸ್ಥಿರಾಸ್ತಿಗಳ ಮಾಹಿತಿ
- 2.03 ಕೋಟಿ ರೂ.ಗಳ ಮೌಲ್ಯದ ಬೇಗ್, ಅವರ ಪತ್ನಿ ಮತ್ತು ಅವರ ಒಡೆತನದ ಸಂಸ್ಥೆಗಳ 6 ಬ್ಯಾಂಕುಗಳ ನಗದು ಬಾಕಿ
- 6.80 ಲಕ್ಷ ರೂ ಮೌಕದ ಶೇರುಗಳು
- 42.40 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ ಬೆಳ್ಳಿ
- 8.91 ಕೋಟಿ ರೂ ಮೌಕ್ಯದ ಮೂರು ಸೈಟ್ ಗಳು
- 1.73 ಕೋಟಿ ಮೌಲ್ಯದ 2 ವಾಣಿಜ್ಯ ಸಂಕೀರ್ಣಗಳು
- 3.64 ಕೋಟಿ ರೂ ಮೌಲ್ಯದ ಎರಡು ಮನೆಗಳು