ಆಧುನಿಕ ವೈದ್ಯಕೀಯ ಔಷಧಿಗಳ ಬಗ್ಗೆ ಅವಹೇಳನ: ರಾಮದೇವ್‌ ವಿರುದ್ಧ ಕ್ರಮಕ್ಕೆ ಆಗ್ರಹ

ಹೊಸದಿಲ್ಲಿ: ದೇಶದಲ್ಲಿ ಕೋವಿಡ್‌ ಸೋಂಕಿಗೆ ಒಳಗಾಗಿರುವವರಲ್ಲಿ ಮರಣ ಹೊಂದುತ್ತಿರುವುದು ಆಕ್ಸಿಜನ್ ಕೊರತೆಯಿಂದಲ್ಲ ಬದಲಾಗಿ ಅದಕ್ಕಿಂತ ಹೆಚ್ಚಾಗಿ  ಅಲೋಪಥಿ  ಔಷಧಿಗಳಿಂದ ಲಕ್ಷಗಟ್ಟಲೆ ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ಯೋಗ ಗುರು ಬಾಬಾ ರಾಮದೇವ್‌ ಹೇಳಿಕೆಯು ಸಾಕಷ್ಟು ವಿವಾದವನ್ನು ಸೃಷ್ಠಿಸಿದೆ.

ಕೋವಿಡ್-19 ಸೋಂಕಿಗೆ ನೀಡಲಾಗುತ್ತಿರುವ ಆಧುನಿಕ ವೈದ್ಯ ಚಿಕಿತ್ಸೆಯನ್ನು ಟೀಕಿಸಿರುವ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ  ಇತರ ವೈದ್ಯ ಸಂಘಟನೆಗಳಿಂದ ಒತ್ತಾಯಿಸಿದ್ದಾರೆ.

ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಸೂಕ್ತವಾದ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ಜಯೇಶ್ ಲೆಲೆ ಅವರು ಸಹಿ ಮಾಡಿದ ಹೇಳಿಕೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರಿಗೆ ತಿಳಿಸಿದ್ದಾರೆ.

“ಅಲೋಪಥಿ ಒಂದು ಅವಿವೇಕಿ ಹಾಗೂ ಅಸಮರ್ಪಕ ವಿಜ್ಞಾನ. ಮೊದಲು ಹೈಡ್ರೋಕ್ಸಿಕ್ಲೊರೊಖ್ವಿನ್ ವಿಫಲವಾಯಿತು. ನಂತರ, ರೆಮ್ಡೆಸಿವಿರ್, ಐವರ್‍ಮೆಕ್ಟಿನ್ ಹಾಗೂ ಪ್ಲಾಸ್ಮಾ ಥೆರಪಿ ವಿಫಲವಾಯಿತು. ಇತರ ಆ್ಯಂಟಿಬಯೋಟಿಕ್ಸ್ ಗಳಾದ ಫ್ಯಾಬಿಫ್ಲೂ ಮತ್ತು ಸ್ಟೆರಾಯ್ಡ್ ಕೂಡ ವಿಫಲವಾಯಿತು” ಎಂದು ರಾಮದೇವ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

“ವೈದ್ಯರ ವಿರುದ್ಧ ರಾಮದೇವ್‌ ಅವರು ಅವಮಾನಕರ ಮತ್ತು ಅಸಂಸದೀಯ ಮಾತುಗಳನ್ನು ಆಡಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಇಡೀ ವೈದ್ಯ ಸಮುದಾಯದ ಆತ್ಮಸ್ಥೈರ್ಯ ಕುಂದುವಂತೆ ಮಾಡಿದ್ದಾರೆ. ವೈದ್ಯರು ಫ್ರಂಟ್ ಲೈನ್ ಸೇನಾನಿಗಳಾಗಿದ್ದು ಈ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮನುಕುಲಕ್ಕೆ ನೆರವಾಗುವ ಸರ್ವ ಪ್ರಯತ್ನ ನಡೆಸುತ್ತಿದ್ದಾರೆ” ಎಂದು ಐಎಂಎ ಹೇಳಿದೆ.

ಅವರ ಈ ಹೇಳಿಕೆ ಖಂಡಿಸಿರುವ ಐಎಂಎ ದ್ವಾರಕಾ (ದಿಲ್ಲಿ), ಅವರು ತಮ್ಮ ಮಾತುಗಳಿಂದ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಾ ತಮ್ಮ ಜೀವವನ್ನೇ ಬಲಿದಾನಗೈದ 1200ಕ್ಕೂ ಅಧಿಕ ವೈದ್ಯರ ತ್ಯಾಗವನ್ನು ಗೌಣವಾಗಿಸಿದ್ದಾರೆ ಎಂದು ಹೇಳಿದೆ.

“ಸ್ವಘೋಷಿತ ಉದ್ಯಮಿ ಬಾಬಾ ದ್ವೇಷ ಹಾಗೂ ವಿಜ್ಞಾನದ ಕುರಿತು ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಹಾಗೂ ವೈದ್ಯರು-ರೋಗಿಗಳ ಸಂಬಂಧಗಳನ್ನು ಹದಗೆಡಿಸುತ್ತಿದ್ದಾರೆ” ಎಂದು ಐಎಂಎ ದ್ವಾರಕಾ ಘಟಕ ಹೇಳಿದೆಯಲ್ಲಿದೆ ಬಾಬಾ ರಾಮದೇವ್‍ಗೆ ಸದ್ಯದಲ್ಲಿಯೇ ಕಾನೂನು ನೋಟಿಸ್ ಜಾರಿಗೊಳಿಸಲಾಗುವುದಲ್ಲದೆ ಮಾನನಷ್ಟ ಮೊಕದ್ದಮೆಯನ್ನೂ ಅವರ ವಿರುದ್ಧ ದಾಖಲಿಸಲಾಗುವುದು ಎಂದು ತಿಳಿಸಿದೆ.

ಹೊಸದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆ ಮತ್ತು ವರ್ಧಮಾನ್ ಮಹಾವೀರ್ ಮೆಡಿಕಲ್ ಕಾಲೇಜಿನ ರೆಸಿಡೆಂಟ್ ವೈದ್ಯರ ಸಂಘ ಕೂಡ ರಾಮದೇವ್ ಹೇಳಿಕೆಗಳನ್ನು ಖಂಡಿಸಿದೆಯಲ್ಲದೆ ಈ ಹೇಳಿಕೆಗಳನ್ನು ದ್ವೇಷದ ಭಾಷಣವೆಂದು ಪರಿಗಣಿಸಿ ಅವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯಿದೆ, 1987 ಅನ್ವಯ ಪ್ರಕರಣ ದಾಖಲಿಸಬೇಕು ಎಂದು  ಆಗ್ರಹಿಸಿದೆ.

ಅಲ್ಲದೆ, ಯೋಗ ಗುರು ಮತ್ತು ಅವರ ಸಹವರ್ತಿ ಬಾಲಕೃಷ್ಣ ಅವರು ಅನಾರೋಗ್ಯಕ್ಕೆ ತುತ್ತಾದಾಗ ಅವರು ಆಧುನಿಕ ವೈದ್ಯ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ ಎಂದು ಐಎಂಎ ಹೇಳಿದೆ.

ಆಧುನಿಕ ಔಷಧಿ ಅಲೋಪಥಿ‌ ಸ್ನಾತಕೋತ್ತರ ಪದವಿದರರು ಹಾಗೂ ಕೇಂದ್ರ ಸಚಿವರು ಆಗಿರುವ ಡಾ. ಹರ್ಷವರ್ಧನ್‌ ಅವರ ಮೌನ ವಹಿಸಿರುವುದು ಹಲವರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕೊರೊನಾ ತಡೆಗಟ್ಟಲು ಪತಂಜಲಿಯ ʻಕೊರೊನಿಲ್ʼ ಮೊದಲ ಔಷಧವೆಂದು ಫೆಬ್ರವರಿಯಲ್ಲಿ ತಿಳಿಸಿತ್ತು. ಆಗಲೂ ಐಎಂಎ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿತ್ತು. ತಪ್ಪಾಗಿ ಹಾಗೂ ಅವೈಜ್ಞಾನಿಕವಾದ ಉತ್ಪನ್ನದ ಬಿಡುಗಡೆ ಸಮರ್ಥನೀಯವೇ ಸಚಿವರನ್ನು ಕೇಳಲಾಗಿತ್ತಿದೆ.

Donate Janashakthi Media

Leave a Reply

Your email address will not be published. Required fields are marked *