ಅಕ್ರಮ ಕಲ್ಲು ಗಣಿಗಾರಿಕೆ; ಭಗವಂತ ಖೂಬಾಗೆ 25 ಕೋಟಿ ರೂ. ದಂಡ

ಬೀದರ್‌ : ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಅಕ್ರಮ ಕಲ್ಲು ಗಣಿಗಾರಿಕೆ ದಂಧೆ ನಡೆಸಿರುವುದಕ್ಕೆ 25 ಕೋಟಿ ರೂ. ದಂಡ ಪಾವತಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಟಿಸ್ ನೀಡಿದೆ. ಒಬ್ಬ ಕೇಂದ್ರ ಸಚಿವರಾಗಿ ಸರ್ಕಾರಕ್ಕೆ ಸುಮಾರು 25 ಕೋಟಿ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ವಂಚನೆ ಮಾಡಿದ್ದಾರೆ. ಹೀಗಿದ್ದರೂ ತಮ್ಮ ಅಫಿಡವಿಟ್‌ನಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಆರೋಪಿಸಿದರು. ಗಣಿಗಾರಿಕೆ

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಭಗವಂತ ಖೂಬಾ ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಚ್ಚಾ ಗ್ರಾಮದ ಸರ್ವೇ ನಂ.24 ರಲ್ಲಿ 2 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಮಾಡಲು 5 ವರ್ಷದ ಅವಧಿಗೆ ಅನುಮತಿ ಪಡೆದು 8 ಎಕರೆಗಿಂತ ಹೆಚ್ಚಿನ ಜಮೀನಿನಲ್ಲಿ ಅನಧಿಕೃತವಾಗಿ, ಅಕ್ರಮವಾಗಿ ಗಣಿಗಾರಿಕೆ ನಡೆಸಿ ಕಲ್ಲುಗಳನ್ನು ಲೂಟಿ ಮಾಡಿರುತ್ತಾರೆ, ಅಕ್ರಮ ಸಾಗಣೆ ಮಾಡಿರುತ್ತಾರೆ ಎಂದು 25.28 ಕೋಟಿ ರೂಪಾಯಿ ದಂಡ ಪಾವತಿಸುವಂತೆ ಗಣಿ ಇಲಾಖೆ ನೋಟಿಸ್ ನೀಡಿದೆ” ಎಂದರು.

“ಕಲ್ಲು ಗಣಿ ಗುತ್ತಿಗೆಯಲ್ಲಿ ಅಕ್ರಮ ಎಸಗಿದಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ 77.49 ಲಕ್ಷ ರೂ. ಬಾಕಿ ಪಾವತಿಸುವಂತೆ ಖೂಬಾ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಟಿಸ್ ನೀಡಿತ್ತು. ಆದರೆ ಈಗಿನ ಲೋಕಸಭಾ ಚುನಾವಣೆ ಉಮೇದುವಾರಿಕೆ ಅಫಿಡವಿಟ್‌ನಲ್ಲಿ ಈ ವಿಷಯ ಮುಚ್ಚಿಟ್ಟು ಕೇವಲ 54 ಲಕ್ಷ ರೂ. ಸಾಲ ಇದೆ ಎಂದು ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ತೋರಿಸಿದ್ದಾರೆ. ಹೀಗಾಗಿ ಭಗವಂತ ಖೂಬಾ ವಿರುದ್ಧ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

“ಕೇಂದ್ರ ಸಚಿವರಾಗಿ ರಸ್ತೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಗುತ್ತಿಗೆಯಲ್ಲಿ ಹಾಗೂ ವಿವಿಧ ಕಾಮಗಾರಿಗಳನ್ನು ತಮ್ಮ ಸೋದರರು, ನೆಂಟರಾದ ಜಗದೀಶ್ ಖೂಬಾ, ಅರುಣ್ ಖೂಬಾ ಮತ್ತು ಅಶೋಕ್ ಖೂಬಾ ಅವರಿಗೆ ವಿವಿಧ ಇಲಾಖೆಗಳ ಗುತ್ತಿಗೆ ಕೊಡಿಸಿ, ಸ್ವಜನ ಪಕ್ಷಪಾತ ಮಾಡಿ, ಅದರಲ್ಲೂ ಕೋಟ್ಯಾಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ಇವರು ನಿಜವಾದ ಕಲೆಕ್ಷನ್ ಏಜೆಂಟ್, ಖೂಬಾ ಬೇನಾಮಿ ಆಸ್ತಿ ಸುಮಾರು 200 ಕೋಟಿ ರೂ. ಅಂತ ಜನ ಮಾತನಾಡುತ್ತಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಇದನ್ನು ಓದಿ : ಅಧಿಕ ಬಿಸಿಲಿಗೆ ಕಿಡ್ನಿಸ್ಟೋನ್ ಪ್ರಕರಣ ಹೆಚ್ಚಳ

ಬಿಜೆಪಿ ಅಂದರೆ ʻಭಾರತೀಯ ಝೂಟಾ ಪಾರ್ಟಿʼ :

“ನನ್ನ ಪುತ್ರ, ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ವಕೀಲನೇ ಅಲ್ಲ, ಬಾರ್ ಅಸೋಸಿಯೇಷನ್ ನಲ್ಲಿ ನೋಂದಣಿ ಮಾಡಿಸಿಲ್ಲ. ತಪ್ಪು ಅಫಿಡವಿಟ್ ಕೊಟ್ಟಿದ್ದಾರೆ ಎಂದೆಲ್ಲ ನಮ್ಮ ಪ್ರತಿಸ್ಪರ್ಧಿ ಭಗವಂತ ಖೂಬಾ ಹೇಳಿಕೆ ನೀಡುತ್ತಿದ್ದಾರೆ. ಸುಳ್ಳು ಹೇಳುವುದು ಬಿಜೆಪಿ ಜಾಯಮಾನ. ಬಿಜೆಪಿ ಅಂದರೆ ʼಭಾರತೀಯ ಝೂಟಾ ಪಾರ್ಟಿʼ. ಅದು ಸುಳ್ಳಿನ ವಿಶ್ವವಿದ್ಯಾಲಯ. ಅಲ್ಲಿ ಪದವಿ ಪಡೆದಿರುವ ಭಗವಂತ ಖೂಬಾ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ” ಎಂದು ಕುಟುಕಿದರು.

ಬಿಜೆಪಿಯ ಸುಳ್ಳುಗಳಿಂದ, ಜನವಿರೋಧಿ, ರೈತ ವಿರೋಧಿ ನೀತಿಗಳಿಂದ ಬೇಸತ್ತು ಹೋಗಿದ್ದಾರೆ. ಅದೇ ವೇಳೆ ನಮ್ಮ ಸರ್ಕಾರದ ಗ್ಯಾರಂಟಿಗಳು ಕಟ್ಟ ಕಡೆಯ ವ್ಯಕ್ತಿಗೂ ತಲುಪಿದ್ದು, ಜನರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ವಿಶ್ವಾಸ ಇಮ್ಮಡಿಯಾಗಿದೆ. ಹೀಗಾಗಿ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದು ಅಪೇಕ್ಷೆ ಪಡುತ್ತಿದ್ದಾರೆ. ನಮ್ಮ ಪಂಚನ್ಯಾಯ ಮತ್ತು 25 ಗ್ಯಾರಂಟಿಗಳ ನಿರೀಕ್ಷೆಯಲ್ಲಿದ್ದಾರೆ ಎಂದರು.

ಸರ್ಕಾರಿ ನೌಕರರು, ವಿವಿಧ ಇಲಾಖೆಯ ಅಧಿಕಾರಿಗಳು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಚುನಾವಣೆ ದಿನಾಂಕ ಆರಂಭವಾದಾಗಿನಿಂದ ಈವರೆಗೆ ನೂರಾರು ದೂರುಗಳನ್ನು ಸಲ್ಲಿಸಿದ್ದಾರೆ. ಆದರೆ ಆ ದೂರಿಗೆ ಯಾವುದೇ ಆಧಾರ ಇಲ್ಲ. ಪುರಾವೆ, ಸಾಕ್ಷಿ, ದಾಖಲೆ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಅವರು ಸಲ್ಲಿಸಿದ್ದ ಬಹುತೇಕ ದೂರುಗಳನ್ನು ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಇತ್ಯರ್ಥ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನು ನೋಡಿ : ಮಹಿಳಾ ಪ್ರಾತಿನಿಧ್ಯ : ತಾರತಮ್ಯದ ರಾಜಕಾರಣ -ಸಿ.ಜಿ.ಮಂಜುಳಾ

Donate Janashakthi Media

Leave a Reply

Your email address will not be published. Required fields are marked *