ಅಕ್ರಮ ಗಣಿಗಾರಿಕೆ : ವಿಧಿಸಿದ ದಂಡ 320 ಕೋಟಿ ರೂ, ವಸೂಲಾದದ್ದು ಕೇವಲ 1.60 ಕೋಟಿ ರೂ

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ಯಂತ್ರ, ಸ್ಪೋಟಕಗಳನ್ನ ಬಳಸಿ ನಿಗದಿಪಡಿಸಿದಕ್ಕಿಂತ 100 ಪಟ್ಟು ಹೆಚ್ಚು ಕಲ್ಲು ತೆಗೆದಿರುವುದು ಹಾಗೂ ಅದಕ್ಕೆ ನೂರಾರು ಕೋಟಿ ರೂಪಾಯಿ ದಂಡ ವಿಧಿಸಿರುವ ವಿಚಾರ ವರದಿಯಾಗಿದೆ. ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಗಣಿಗಾರಿಕೆಗಳಿಗೆ ಒಟ್ಟು 320 ಕೋಟಿ ರೂಪಾಯಿ ದಂಡ ವಿಧಿಸಲಾಗಿದ್ದು, ಈ ಪೈಕಿ ಬೇಬಿ ಬೆಟ್ಟ ವ್ಯಾಪ್ತಿಯಲ್ಲೇ ಸುಮಾರು 280 ಕೋಟಿ ರೂಪಾಯಿ ದಂಡ ಹಾಕಿರುವುದು ತಿಳಿದುಬಂದಿದೆ.

ಮಂಡ್ಯ ಜಿಲ್ಲೆಯಲ್ಲಿ ನಿಯಮಾನುಸಾರ ಗಣಿಗಾರಿಕೆ ಮತ್ತು ಕ್ರಷರ್​ಗಳನ್ನು ನಡೆಸಲು ಯಾವುದೇ ತೊಂದರೆಗಳಿಲ್ಲ ಆದರೆ, ನಿಯಮ ಉಲ್ಲಂಘಿಸಿ ಸಾಗಾಣಿಕೆ ಮಾಡಿದವರಿಗೆ ದಂಡ ವಿಧಿಸಲಾಗಿದೆ ಎಂದು ಈ ಹಿಂದೆ ವಿಧಾನ ಪರಿಷತ್ತಿನಲ್ಲಿ ಸದಸ್ಯರಾಗಿದ್ದ ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಆರ್.ಚೌಡರೆಡ್ಡಿ ತೂಪಲ್ಲಿ ಹಾಗೂ ಕೆ.ಎ.ತಿಪ್ಪೇಸ್ವಾಮಿ ನಿಯಮ 59ರ ಅಡಿ ಪ್ರಸ್ತಾಪಿಸಿದ್ದ ನಿಲುವಳಿಗೆ ಅಂದಿನ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದ ಸಿ.ಸಿ.ಪಾಟೀಲ್ ಸಹಿ ಹಾಕಿದ್ದ ಉತ್ತರ ಪ್ರತಿ ಮಾಧ್ಯಮಗಳಿಗೆ ಲಭ್ಯವಾಗಿದೆ.

ಇದನ್ನೂ ಓದಿ : ಅಕ್ರಮ ಗಣಿ ಪ್ರದೇಶಕ್ಕೆ ಸಂಸದೆ ಸುಮಲತಾ ಭೇಟಿ, ಸಿಬಿಐ ತನಿಖೆಗೆ ಆಗ್ರಹ

ಬೇಬಿ ಬೆಟ್ಟದಲ್ಲೇ ಸುಮಾರು 30 ಕಂಪನಿಗಳಿಂದ 2017 ರಿಂದ ಇಲ್ಲಿಯವರೆಗೆ ಪರಿಸರ ಇಲಾಖೆಯ ಅನುಮತಿ ಪಡೆಯದೇ ಲಕ್ಷಾಂತರ ಮೆಟ್ರಿಕ್ ಟನ್ ಕಲ್ಲು ಹೊರ ತೆಗೆಯಲಾಗಿದೆ. ಪರಿಸರ ಅನುಮೋದನಾ ಸಮಿತಿ ನಿಗದಿಗೊಳಿಸಿರುವ ಮಿತಿಯಂತೆ ವರ್ಷಕ್ಕೆ ಗರಿಷ್ಠ 25 ಸಾವಿರ ಮೆಟ್ರಿಕ್ ಟನ್ ಬಳಸಬಹುದು. ಆದರೆ, ಅಲ್ಲಿ ನಿಯಮ ಮೀರಿ ಲಕ್ಷಾಂತರ ಮೆಟ್ರಿಕ್ ಟನ್​ ಬಳಕೆಯಾಗಿರುವುದರಿಂದ ಒಂದು ಮೆಟ್ರಿಕ್​ ಟನ್​ಗೆ 300 ರೂಪಾಯಿ ದಂಡದಂತೆ ಬೇಬಿ ಬೆಟ್ಟದಲ್ಲಿನ 30 ಕಂಪನಿಗಳಿಗೆ ಒಟ್ಟು 280 ಕೋಟಿ ರೂಪಾಯಿ ದಂಡ ವಿಧಿಸಿರುವುದನ್ನು ಉತ್ತರ ಪ್ರತಿಯಲ್ಲಿ ತಿಳಿಸಲಾಗಿದೆ.

ಗಣಿ ಇಲಾಖೆಯ ಮೂಲ ರಾಜಧನ ಮೆಟ್ರಿಕ್​ ಟನ್​ಗೆ 60 ರೂಪಾಯಿಯಂತೆ ಇದ್ದು, ಅಕ್ರಮವಾಗಿ ತೆಗೆಯಲಾದ ಮೆಟ್ರಿಕ್​ ಟನ್​ ಕಲ್ಲಿಗೆ 300 ರೂಪಾಯಿ ದಂಡ ವಿಧಿಸಲಾಗಿದೆ. ಅಲ್ಲಿಗೆ ರಾಜಧನ ಹಾಗೂ ದಂಡ ಇವೆರಡನ್ನೂ ಸೇರಿಸಿದ ಮೆಟ್ರಿಕ್​ ಟನ್​ ಕಲ್ಲಿಗೆ 360 ರೂಪಾಯಿಯಂತೆ ದಂಡ ವಿಧಿಸಲಾಗಿದ್ದು, ಲಕ್ಷಾಂತರ ಟನ್​ಗೆ 320 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಅದರಲ್ಲಿ ಬೇಬಿ ಬೆಟ್ಟವೊಂದರಲ್ಲೇ 280 ಕೋಟಿ ರೂಪಾಯಿ ದಂಡ ಹಾಕಲಾಗಿದೆ. ಆದರೆ, ಆ ಪೈಕಿ ಕೇವಲ 1.60 ಕೋಟಿ ರೂಪಾಯಿ ದಂಡ ವಸೂಲಿ ಮಾಡುವಲ್ಲಿ ಗಣಿ ಇಲಾಖೆ ಯಶಸ್ವಿಯಾಗಿದೆ ಎಂದು ಉತ್ತರ ಪ್ರತಿಯಲ್ಲಿ ತಿಳಿಸಲಾಗಿದೆ.

ಸದ್ಯ ಗಣಿ ಮತ್ತು ಖನಿಜ ಅಭಿವೃದ್ದಿ ನಿಯಂತ್ರಣ ಕಾಯ್ದೆ (ಎಂಎಂಡಿಆರ್​ಎ) ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ದಂಡದ ಹಣವನ್ನ ಪ್ರತಿ ಮೆಟ್ರಿಕ್ ಟನ್​ಗೆ 300 ರೂಪಾಯಿಯಿಂದ 1570 ರೂಪಾಯಿಗೆ ಹೆಚ್ಚಿಸಲಾಗಿದೆ. ಇದರ ಅನ್ವಯ ಸಮೀಕ್ಷೆ ನಡೆಸಿದ್ದೇ ಆದಲ್ಲಿ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯಿಂದ ವಸೂಲಾಗಬೇಕಿರುವ ದಂಡದ ಮೊತ್ತ ಸುಮಾರು 8 ಸಾವಿರ ಕೋಟಿ ರೂಪಾಯಿ ಆಗುತ್ತದೆ. ಈ ಪೈಕಿ ಬೇಬಿ ಬೆಟ್ಟವ್ಯಾಪ್ತಿಯಲ್ಲೇ ಸುಮಾರು 300 ಕೋಟಿ ರೂಪಾಯಿ ರಾಜಧನ ವಸೂಲಾಗಲಿದೆ ಎನ್ನಲಾಗಿದೆ.

Donate Janashakthi Media

Leave a Reply

Your email address will not be published. Required fields are marked *