ನವದೆಹಲಿ/ಗೊಂಡಾ:ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರು ಉತ್ತರ ಪ್ರದೇಶದ ಗುಂಡಾ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಬುಧುವಾರ ಜಂಟಿ ಸಮಿತಿಯೊಂದನ್ನು ರಚಿಸಿದೆ.
ಇದನ್ನೂ ಓದಿ:ಡಬ್ಲ್ಯುಎಫ್‌ಐ ಚುನಾವಣೆಗೆ ನಮ್ಮ ಕುಟುಂಬದವರು ಸ್ಪರ್ಧಿಸುವುದಿಲ್ಲ:ಬ್ರಿಜ್ ಭೂಷಣ್
ಅರ್ಜಿಯಲ್ಲಿನ ಆರೋಪಗಳ ಕುರಿತು ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ,ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಮಿತಿ ರಚಿಸುವ ತೀರ್ಮಾನವನ್ನು ನ್ಯಾಯಾಂಗ ಸದಸ್ಯ ಅರುಣ್ ಕುಮಾರ್ ತ್ಯಾಗಿ ಮತ್ತು ತಜ್ಞ ಸದಸ್ಯ ಎ.ಸೆಂಥಿಲ್ ವೇಲ್ ಅವರಿದ್ದ ಪೀಠವು ತೆಗೆದುಕೊಂಡಿದೆ. ಅರ್ಜಿಯಲ್ಲಿ ಪ್ರಸ್ತಾಪಿಸಿರುವ ಆರೋಪಗಳು ಮೋಲ್ನೋಟಕ್ಕೆ ಪರಿಸರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಅಭಿಪ್ರಾಯಪಟ್ಟ ಪೀಠವು,ನ್ಯಾಯಮಂಡಳಿಯು ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಧಿಕಾರಿಯನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸಿತು. ಎರಡು ತಿಂಗಳೊಳಗೆ ವಾಸ್ತವಿಕ ಮತ್ತು ಕ್ರಮಕೈಗೊಂಡ ವರದಿಯನ್ನು ಜಂಟಿ ಸಮಿತಿಯು ಸಲ್ಲಿಸಬೇಕು ಎಂದು ಪೀಠವು ಗಡುವು ನೀಡಿ, ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ನಿಗದಿಪಡಿಸಿತು.
ಕೈಸರ್‌ಗಂಜ್ ಕ್ಷೇತ್ರದ ಸಂಸದರಾದ ಸಿಂಗ್ ಅವರು ಗೊಂಡಾ ಜಿಲ್ಲೆಯ ತರಬ್‌ಗಂಜ್ ತಾಲ್ಲೂಕಿನ ಮಹರತ್, ಜೇತ್‌ಪುರ ಮತ್ತು ನವಾಬ್‌ಗಂಜ್ ಗ್ರಾಮಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಪ್ರತಿ ದಿನ ಹೊರ ತೆಗೆಯಲಾದ ಸಣ್ಣ ಖನಿಜಗಳನ್ನು 700ಕ್ಕೂ ಹೆಚ್ಚು ಟ್ರಕ್‌ಗಳ ಮೂಲಕ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಸುಮಾರು 20ಲಕ್ಷ ಕ್ಯೂಬಿಕ್ ಮೀಟರ್ ಅಳತೆಯ ಸಣ್ಣ ಖನಿಜಗಳ ಸಂಗ್ರಹಣೆ ಮತ್ತು ಅಕ್ರಮ ಮಾರಾಟ ನಡೆಯುತ್ತಿದೆ. ಓವರ್‌ಲೋಡ್ ಟ್ರಕ್‌ಗಳ ಸಂಚಾರದಿಂದ ಪಟ್ಟರ್ ಗಂಜ್ ಸೇತುವೆ ಮತ್ತು ರಸ್ತೆಗೆ ಹಾನಿಯಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅಕ್ರಮ ಗಣಿಗಾರಿಕೆಯೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ, ಖನಿಜ ತುಂಬಿದ ಓವರ್‌ಲೋಡ್ ಟ್ರಕ್‌ಗಳು ಸಂಚರಿಸುತ್ತಿವೆ ಎಂಬ ವರದಿಗಳು ಸುಳ್ಳ ಎಂದು ಸಂಸದ ಬ್ರಿಜ್ ಭೂಷಣ್ ಸಿಂಗ್ ಟ್ವೀಟ್ ಮಾಡಿದ್ದಾರೆ.