ಪಶ್ಚಿಮ ಬಂಗಾಳ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ: 8 ಮಂದಿ ಸಾವು

ಈ ವರ್ಷದ ಆರಂಭದಲ್ಲಿ ಇದೇ ರೀತಿಯ ಪಟಾಕಿ ಕಾರ್ಖಾನೆ ಸ್ಫೋಟ ಸಂಭವಿಸಿ 12 ಜನರು ಸಾವನ್ನಪ್ಪಿದ್ದರು

ಉತ್ತರ 24 ಪರಗಣ: ಪಶ್ಚಿಮ ಬಂಗಾಳದ  ದತ್ತಪುಕೂರ್‌ನ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಭಾರೀ ಸ್ಫೋಟದಲ್ಲಿ 8 ಜನರು ಸಾವನ್ನಪ್ಪಿದ್ದು, ಹಲವು ಜನರು ಗಾಯಗೊಂಡಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡಾ ಇದ್ದಾರೆ ಎಂದು ವರದಿಯಾಗಿದೆ.

ಕೋಲ್ಕತ್ತಾದಿಂದ ಉತ್ತರಕ್ಕೆ 30 ಕಿಮೀ ದೂರದಲ್ಲಿರುವ ದತ್ತಪುಕೂರ್ ಪೊಲೀಸ್ ಠಾಣೆ ವ್ಯಾಪ್ತಿಯ ನೀಲ್‌ಗುಂಜ್‌ನ ಮೋಶ್‌ಪೋಲ್‌ನಲ್ಲಿರುವ ಕಾರ್ಖಾನೆಯಲ್ಲಿ ಜನರು ಕೆಲಸ ಮಾಡುತ್ತಿದ್ದಾಗ ಬೆಳಿಗ್ಗೆ 10 ಗಂಟೆಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮ ಕಾರ್ಖಾನೆ ಕಾರ್ಯಾಚರಿಸುತ್ತಿದ್ದ ಮನೆಯು ಧ್ವಂಸಗೊಂಡಿದ್ದು, ಅಕ್ಕಪಕ್ಕದ ಕೆಲವು ಕಾಂಕ್ರೀಟ್ ಮನೆಗಳಿಗೂ ಹಾನಿಯಾಗಿದೆ. ಅವಶೇಷಗಳಡಿಯಲ್ಲಿ ಇನ್ನೂ ಹಲವರು ಸಿಲುಕಿರುವ ಶಂಕೆ ಇದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದರು.

ಇದನ್ನೂ ಓದಿ: ದಲಿತ ಸಮುದಾಯಕ್ಕೆ ಅವಮಾನ ; ಉಪೇಂದ್ರ ಹಾಗೂ ಸಚಿವ ಎಸ್‌. ಎಸ್‌ ಮಲ್ಲಿಕಾರ್ಜುನ ವಿರುದ್ದ ಸಿಪಿಐಎಂ ಪ್ರತಿಭಟನೆ

ಸ್ಫೋಟದ ಪರಿಣಾಮದಿಂದಾಗಿ ನೆರೆಹೊರೆಯಲ್ಲಿನ 50 ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಟಾಕಿ ಕಾರ್ಖಾನೆಯ ಮಾಲೀಕನ ಮಗ ಕೂಡಾ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯವು ಪುಡಾರಿಗಳ ಉಗ್ರಾಣವಾಗಿ ಮಾರ್ಪಟ್ಟಿದೆ ಎಂದು ಹೇಳಿರುವ ಬಿಜೆಪಿ ಆಡಳಿತರೂಢ ಟಿಎಂಸಿ ಇಂತಹ ಅಕ್ರಮ ಪಟಾಕಿ ಘಟಕಗಳ ಹಿಂದೆ ಇದೆ ಎಂದು ಆರೋಪಿಸಿದೆ. “ಪೊಲೀಸರಿಂದ ಯಾವುದೇ ಕಾನೂನುಬಾಹಿರ ಚಟುವಟಿಕೆಗಳ ಮೇಲ್ವಿಚಾರಣೆ ನಡೆಯುತ್ತಿಲ್ಲ. ಈ ಪಟಾಕಿ ಘಟಕಗಳು ಸ್ಥಳೀಯ ಟಿಎಂಸಿ ನಾಯಕರ ಪ್ರೋತ್ಸಾಹದಿಂದ ನಡೆಯುತ್ತಿವೆ” ಎಂದು ಬಿಜೆಪಿ ನಾಯಕ ಸುವೆಂಧು ಅಧಿಕಾರಿ ಹೇಳಿದ್ದಾರೆ.

ಸ್ಥಳೀಯ ಶಾಸಕ ಮತ್ತು ರಾಜ್ಯ ಆಹಾರ ಸಚಿವ ರಥಿನ್ ಘೋಷ್ ಅವರ ಬೆಂಬಲದೊಂದಿಗೆ ಇಂತಹ ಕಾರ್ಖಾನೆಯು ಸುಗಮವಾಗಿ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಎನ್‌ಐಎ ತನಿಖೆಗೆ ಆಗ್ರಹಿಸಿರುವ ಬಿಜೆಪಿಯ ಹಿರಿಯ ನಾಯಕ ದಿಲೀಪ್ ಘೋಷ್, “ಟಿಎಂಸಿ ಆಡಳಿತದಲ್ಲಿ ಪಶ್ಚಿಮ ಬಂಗಾಳ ಬಾಂಬ್ ತಯಾರಿಕೆ ಕಾರ್ಖಾನೆ ಮತ್ತು ಭಯೋತ್ಪಾದನಾ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದ್ದು, ಎನ್‌ಐಎ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ:ದಲಿತ ಬಾಲಕನನ್ನು ಥಳಿಸಿ, ಕೈಯಲ್ಲಿ ಮಲ ತೆಗೆಸಿದ ಧುರುಳರು

ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಟಿಎಂಸಿ ನಾಯಕ ಕುನಾಲ್ ಘೋಷ್ ಅವರು, ಬಿಜೆಪಿಯನ್ನು ರಣಹದ್ದಿಗೆ ಹೋಲಿಸಿದ್ದಾರೆ. ಮೃತದೇಹವನ್ನು ಮುಂದಿಟ್ಟು ನಡೆಸುವ ರಾಜಕೀಯ ನಿಷ್ಪ್ರಯೋಜಕ ಎಂದು ಅವರು ಹೇಳಿದ್ದಾರೆ.

“ಬಿಜೆಪಿ ತನ್ನ ರಣಹದ್ದು ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಶವಗಳನ್ನು ಕುಕ್ಕಲು ಯಾರಾದರೂ ಸಾಯುತ್ತಿದ್ದಾರೆಯೆ ಎಂದು ಅವರು ಕಾಯುತ್ತಿದ್ದಾರೆ. ಯಾವುದೆ ತೀರ್ಮಾನಗಳಿಗೆ ತಲುಪುದನ್ನು ನಿಲ್ಲಿಸಬೇಕು, ಮೊದಲು ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಲಿ” ಎಂದು ಘೋಷ್ ಹೇಳಿದ್ದಾರೆ.

ಘಟನೆಯ ತನಿಖೆ ನಡೆಸಲು ರಾಜ್ಯ ಸರ್ಕಾರವು ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಿದೆ ಎಂದು ಟಿಎಂಸಿ ರಾಜ್ಯಸಭಾ ಸಂಸದ ಸಂತಾನು ಸೇನ್ ಪಿಟಿಐಗೆ ತಿಳಿಸಿದ್ದಾರೆ. “ಈ ತಂಡವು ಕಳೆದ ಕೆಲವು ತಿಂಗಳುಗಳಲ್ಲಿ ಇಂತಹ ಹಲವಾರು ಅಕ್ರಮ ಪಟಾಕಿ ಘಟಕಗಳನ್ನು ಭೇದಿಸಿದೆ, ಇನ್ನೂ ಕೆಲವು ಘಟಕಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಶೀಘ್ರದಲ್ಲೇ ಅವುಗಳನ್ನು ಸಹ ಭೇದಿಸಲಾಗುವುದು” ಎಂದು ಅವರು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಪುರ್ಬಾ ಮೇದಿನಿಪುರ ಜಿಲ್ಲೆಯ ಎಗ್ರಾದಲ್ಲಿ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಇದೇ ರೀತಿಯ ಸ್ಫೋಟ ಸಂಭವಿಸಿ 12 ಜನರು ಸಾವನ್ನಪ್ಪಿದ್ದರು.

ವಿಡಿಯೊ ನೋಡಿ: ಸೌಜನ್ಯ ಪ್ರಕರಣ : ಇಷ್ಟೇನಾ ಇಷ್ಟೇನಾ ಸಾವಿನ ತನಿಖೆ ಇಷ್ಟೇನಾ!!!! Janashakthi Media

Donate Janashakthi Media

Leave a Reply

Your email address will not be published. Required fields are marked *