ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದ ಮಾಲೀಕತ್ವದ ವಿಚಾರವಾಗಿ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಇಂದು (ಆಗಸ್ಟ್ 25) ಆದೇಶಿಸಿದೆ.
ಸಾಕಷ್ಟು ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಚಾಮರಾಜಪೇಟೆ ಈದ್ಗಾ ಮೈದಾನ ಮಾಲೀಕತ್ವ ವಿವಾದದ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯಪೀಠ ಆದೇಶ ನೀಡಿತು. ಅಲ್ಲದೆ, ಆಟದ ಮೈದಾನವಾಗಿ ಮಾತ್ರ ಬಳಸಬಹುದಾಗಿದೆ, ರಂಜಾನ್, ಬಕ್ರೀದ್ ವೇಳೆ ಮಾತ್ರ ಪ್ರಾರ್ಥನೆಗೆ ಬಳಸಬಹುದು ಎಂದಿರುವ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟಂಬರ್ 23ಕ್ಕೆ ಮುಂದೂಡಿತು.
ರಾಜ್ಯ ವಕ್ಫ್ ಮಂಡಳಿ ಚಾಮರಾಜಪೇಟೆಯ ಆಟದ ಮೈದಾನದ ಮಾಲೀಕತ್ವವು ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಆಗಸ್ಟ್ 6ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಬಿಬಿಎಂಪಿ ಆದೇಶ ಪ್ರಶ್ನಿಸಿ ವಕ್ಫ್ ಮಂಡಳಿ ಸಲ್ಲಿಸಿರುವ ಅರ್ಜಿಯ ಕುರಿತು ವಾದ-ಪ್ರತಿವಾದ ಆಲಿಸಿದ ಬಳಿಕ ಈ ಆದೇಶ ನೀಡಲಾಗಿದೆ. ವಕ್ಫ್ ಬೋರ್ಡ್ ಪರ ಹಿರಿಯ ವಕೀಲರು ವಾದ ಮಂಡಿಸಿ ವಕ್ಫ್ ಬೋರ್ಡ್ ಈಗಾಗಲೇ ಚಾಮರಾಜಪೇಟೆಯ ಈದ್ಗಾ ಮೈದಾನ ತನಗೆ ಸೇರಿದ್ದು ಎಂದು ಅಧಿಸೂಚನೆ ಹೊರಡಿಸಿದೆ. ಕಂದಾಯ ಇಲಾಖೆಗೆ ಸೇರಿದ್ದೆಂಬ ಬಿಬಿಎಂಪಿ ಆದೇಶ ಸರಿಯಲ್ಲವೆಂದರು.
ಸರ್ಕಾರದ ಪರ ವಾದ ಮಂಡಿಸಿದ ಎ ಜಿ ಪ್ರಭುಲಿಂಗ್ ನಾವದಗಿ ವಕ್ಫ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. 1965 ರಲ್ಲೂ ಸರ್ಕಾರ ಸರ್ವೆ ನಡೆಸಿತ್ತು ಯಾರೂ ಆಕ್ಷೇಪಿಸಿರಲಿಲ್ಲ, 57 ವರ್ಷಗಳಿಂದಲೂ ಆಸ್ತಿ ಸರ್ಕಾರದ ಹೆಸರಿನಲ್ಲಿದೆ ಎಂದು ಸಮರ್ಥಿಸಿಕೊಂಡರು.
ಏನಿದು ವಿವಾದ
ಚಾಮರಾಜಪೇಟೆ ಮೈದಾನ ದಿನದಿಂದ ದಿನಕ್ಕೆ ಗೊಂದಲ ಹೆಚ್ಚಾಗುತ್ತಿದೆ. ಅತ್ತ ವಕ್ಫ್ ಬೋರ್ಡ್ ನಮಗೆ ಸೇರುತ್ತದೆ ಅಂತಿದ್ದರೇ ಇತ್ತ ಪಾಲಿಕೆ ಆಟದ ಮೈದಾನ ಎನ್ನುತ್ತಿದೆ. ಇದೆಲ್ಲದರ ನಡುವೆ ಹಿಂದೂಪರ ಸಂಘಟನೆಗಳು ಬಿಬಿಎಂಪಿಗೆ ಸರಣಿ ಗಣೇಶ ಹಬ್ಬ ಆಚರಣೆ ವಿಚಾರವಾಗಿ ಅನುಮತಿ ಸಿಗದಿದ್ದರೆ ಕೋರ್ಟ್ ಮೊರೆ ಹೋಗುವ ಲೆಕ್ಕಾಚಾರಗಳು ನಡೆಯುತ್ತಿದೆ.
ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡಬೇಕು ಅಂತ ಹಿಂದೂ ಸನಾತನ ಪರಿಷತ್ ಬಿಬಿಎಂಪಿಗೆ ಮನವಿ ನೀಡಿತ್ತು. ಅದೇ ರೀತಿ ಶ್ರೀರಾಮ ಸೇನೆ ಕೂಡಾ ಹಿಂದೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳ ಜೊತೆ ಗಣೇಶೋತ್ಸವಕ್ಕೂ ಅವಕಾಶ ನೀಡಿ ಅದರ ಜೊತೆ ಯೋಗ ದಿನಾಚರಣೆಗೂ ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತಿದೆ.
ಚಾಮರಾಜಪೇಟೆಯ ಆಟದ ಮೈದಾನ (2.5 ಎಕರೆ) ಆಸ್ತಿಯನ್ನು ಖಾತೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ವಕ್ಫ್ ಮಂಡಳಿ ಕಳೆದ ಜೂನ್ 21ರಂದು ಪಾಲಿಕೆಗೆ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ಬಿಬಿಎಂಪಿ ಪಶ್ಚಿಮ ವಲಯದ ಕಂದಾಯ ಅಧಿಕಾರಿಗಳು ವಕ್ಫ್ ಮಂಡಳಿಗೆ ನೋಟಿಸ್ ಜಾರಿಗೊಳಿಸಿ ಮಾಲೀಕತ್ವದ ದೃಢಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತ್ತು. ಅಂತಿಮವಾಗಿ ಆಗಸ್ಟ್ 3 ರಂದು ಪಶ್ವಿಮ ವಲಯ ಜಂಟಿ ಆಯುಕ್ತರ ಅರೆ ನ್ಯಾಯಿಕ ಮಂಡಳಿಯಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ವಕ್ಫ್ ಮಂಡಳಿಯು ಚಾಮರಾಜಪೇಟೆ ಆಟದ ಮೈದಾನದ ಮಾಲೀಕತ್ವ ಸಾಬೀತು ಪಡಿಸುವ ದಾಖಲೆ ಸಲ್ಲಿಸುವಲ್ಲಿ ವಿಫಲವಾಗಿದೆ ಎಂದ ತಿಳಿಸಿದ್ದ ಜಂಟಿ ಆಯುಕ್ತರು ಅರ್ಜಿ ವಜಾಗೊಳಿಸಿ ಆಗಸ್ಟ್ 6ರಂದು ಆದೇಶಿಸಿದ್ದರು.
ಇದೇ ವೇಳೆ ವಕ್ಫ್ ಮಂಡಳಿಯು ಚಾಮರಾಜಪೇಟೆ ಆಟದ ಮೈದಾನದ ಮೇಲೆ ಹಕ್ಕು ಸ್ಥಾಪಿಸಬೇಕಾದ್ದಲ್ಲಿ ಮುಕ್ತವಾಗಿ ಕಂದಾಯ ಇಲಾಖೆಯೊಂದಿಗೆ ವ್ಯವಹರಿಸಬಹುದಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು.