1986ರ ಡಿಸೆಂಬರ್ 22ರಂದು ದೇವಾನಂದರ ಮಗಳು ಕಾಲೇಜು ವಿದ್ಯಾರ್ಥಿನಿ ಪದ್ಮಲತಾ ಕಾಣೆಯಾಗುತ್ತಾಳೆ. ಮಗಳು ಕಾಣೆಯಾದ ಬಗ್ಗೆ ಪೋಷಕರು ಪೊಲೀಸರಿಗೆ ದೂರು ಕೊಡಲು ಹೋಗುತ್ತಾರೆ. ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸುತ್ತಾರೆ. ತಾನಿದ್ದ ರೈತ ಸಂಘಟನೆಯ ಬೆಂಬಲಿಗರೊಂದಿಗೆ ದೇವಾನಂದರು ಪ್ರತಿಭಟನೆ ನಡೆಸಿದಾಗ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಾರೆ. ಆ ನಂತರವೂ ಮಗಳು ಎಲ್ಲಿದ್ದಾಳೆ, ಹೇಗಿದ್ದಾಳೆ ಎಂದು ಪೋಷಕರು ದಿನವೂ ಹುಡುಕುತ್ತಿರುತ್ತಾರೆ. ಐವತ್ತಾರು ದಿನಗಳ ನಂತರ ಮಗಳು ಪದ್ಮಲತಾ ನದಿ ತೀರದಲ್ಲಿ ಶವವಾಗಿ ಸಿಗುತ್ತಾಳೆ. ಮಗಳ ಸಾವಿಗೆ ಕಾರಣರಾದ ಅಪರಾಧಿಗಳಿಗೆ ಶಿಕ್ಷೆ ಕೊಡಿ ಎಂದು ಆಳುವವರನ್ನು ಪೋಷಕರು ಬೇಡಿಕೊಳ್ಳುತ್ತಾರೆ. ನ್ಯಾಯ ಸಿಗದಿದ್ದಾಗ ಹೋರಾಟಕ್ಕೆ ಇಳಿಯುತ್ತಾರೆ. ಕೆಲವು ಜನಪರ ಸಂಘಟನೆಗಳು, ತಾವು ಸದಸ್ಯರಾಗಿದ್ದ ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷ ಬೆಂಬಲವಾಗಿ ಇವರ ಜೊತೆ ನಿಲ್ಲುತ್ತವೆ.
-ಸಿ. ಸಿದ್ದಯ್ಯ
ಒಂದಷ್ಟು ವರ್ಷಗಳ ನಂತರ ತನಿಖಾ ಸಂಸ್ಥೆ “ಪತ್ತೆಯಾಗದ ಪ್ರಕರಣ” ಎಂದು ಹೇಳಿ ಪ್ರಕರಣ ಮುಗಿಸುತ್ತಾರೆ. ಘಟನೆ ನಡೆದು ಮೂರು ದಶಕಗಳು ಕಳೆದಿವೆ. ಆ ಯುವತಿಯನ್ನು ಅಪಹರಣ ಮಾಡಿ, ಕೊಂದು ಹಾಕಿದವರು ಯಾರು ಎಂದು ಪತ್ತೆ ಹಚ್ಚಲು ನಮ್ಮ ಪೊಲೀಸರಿಗೆ ನಮ್ಮ ಈ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ಅಪರಾಧಿಗಳನ್ನು ಶಿಕ್ಷೆಗೆ ಒಳಪಡಿಸಲು ಸಾಧ್ಯವಾಗಲಿಲ್ಲ. ಹೀಗೆಂದ ಮಾತ್ರಕ್ಕೆ ಆ ಕುಟುಂಬ ಮೌನವಾಗಿರಬೇಕೆ? ತಮ್ಮ ಮಗಳನ್ನು ಕೊಂದ ಪಾಪಿಗಳನ್ನು ಪತ್ತೆಹಚ್ಚಿ, ಅವರನ್ನು ಶಿಕ್ಷೆಗೆ ಒಳಪಡಿಸಿ ಎಂದು ಕೇಳಬಾರದೆ? ಇದರಲ್ಲಿ, ಒಂದು ದೇವಸ್ಥಾನದ ವಿರುದ್ಧ ಅಥವಾ ಒಂದು ಧರ್ಮದ ವಿರುದ್ಧ ಷಡ್ಯಂತ್ರ ಏನಿದೆ?
ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ, ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಿ ಎಂದು ಕೇಳಿದರೆ, “ಆರೋಪಿಗಳ ವಿರುದ್ಧ ಸಾಕ್ಷಿ ಒದಗಿಸಿ” ಎಂದು ಕೆಲವರು ವಿತಂಡ ವಾದ ಮಾಡುತ್ತಾರೆ. ಯಾರಾದರೂ, ಇಂತವರ ಮೇಲೆ ತಮಗೆ ಅನುಮಾನ ಇದೆ ಎಂದು ಹೇಳಬಹುದಷ್ಟೆ. ಅದು ಸತ್ಯವೋ ಅಲ್ಲವೋ ಎಂದು ಹುಡುಕುವುದು, ಅದಕ್ಕೆ ಸಾಕ್ಷ್ಯ ಸಂಗ್ರಹಿಸುವುದು ಪೊಲೀಸರ ಅಥವಾ ತನಿಖಾ ಸಂಸ್ಥೆಯ ಕೆಲಸ. ಅದು ಸತ್ಯ ಅಲ್ಲದಿದ್ದರೆ, ನಿಜವಾದ ಅಪರಾಧಿಗಳನ್ನು ಹುಡುಕುವುದೂ ಪೊಲೀಸರ ಕೆಲಸವೇ ವಿನಃ ಮಗಳನ್ನು ಕಳೆದುಕೊಂಡ ಪೋಷಕರದೋ ಆಥವಾ ನ್ಯಾಯಕ್ಕಾಗಿ ದ್ವನಿ ಎತ್ತುವ ಹೋರಾಟಗಾರರದೋ ಅಲ್ಲ.
ಇದನ್ನೂ ಓದಿ: ಧರ್ಮಸ್ಥಳ| ಪತ್ರಕರ್ತರ ಮೇಲೆ ಹಲ್ಲೆ: ಡಿ.ವೈ.ಎಫ್.ಐ ಖಂಡನೆ
ಸೌಜನ್ಯ ಪ್ರಕರಣದಲ್ಲಿಯೂ ಪೊಲೀಸರು ಅಪರಾಧಿ ಎಂದು ಹೇಳಲಾಗಿದ್ದ ಸಂತೋಷ್ ರಾವ್ ನನ್ನು ನ್ಯಾಯಾಲಯ ನಿರಪರಾಧಿ ಎಂದು ಬಿಡುಗಡೆ ಮಾಡುತ್ತದೆ. ಇದಕ್ಕೆ ಸಾಕ್ಷ್ಯಗಳ ಕೊರತೆಯ ಕಾರಣ ನೀಡಿದೆ. ಆಗಾದರೆ, ನಿಜವಾದ ಅಪರಾಧಿ ಯಾರು? ನಿಜವಾಗಿಯೂ ಸಂತೋಷ್ ರಾವ್ ಅಪರಾಧಿಯೇ ಆಗಿದ್ದರೆ, ಸಾಕ್ಷ್ಯ ಒದಗಿಸಬೇಕಾದವರು ಯಾರು? ಪೊಲೀಸರೋ? ನ್ಯಾಯ ಕೇಳಿ ದ್ವನಿ ಎತ್ತುವವರೋ? ಅಥವಾ ಸೌಜನ್ಯಳ ಪೋಷಕರೋ? ಸಂತೋಷ್ ರಾವ್ ನಿರಪರಾಧಿ ಎಂದಾದರೆ, ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚುವ ಜವಾಬ್ದಾರಿ ಯಾರದು? ಪೊಲೀಸರದೋ? ನ್ಯಾಯ ಕೇಳಿ ದ್ವನಿ ಎತ್ತುವವರದೊ? ಅಥವಾ ಸೌಜನ್ಯಳ ಪೋಷಕರದೊ?
ಪದ್ಮಲತಾ, ವೇದವಲ್ಲಿ, ಆನೆ ಮಾವುತ, ಸೌಜನ್ಯ… ಇಂತಹ ಹಲವು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದ್ದರೆ, ಈ ಪ್ರಕರಣಗಳಿಗೆ ಸಕಾಲದಲ್ಲಿ ನ್ಯಾಯ ದೊರಕಿದ್ದರೆ, ಇದನ್ನೇ ಮುಂದಿಟ್ಟು ಹೋರಾಟ ನಡೆಸುವ ಅಗತ್ಯವಾದರೂ ಯಾರಿಗಿತ್ತು? ಅವರು ಹೋರಾಟಗಾರರ ಮೇಲೆ ಆರೋಪ ಹೊರಿಸುವಂತೆ ‘ಷಡ್ಯಂತ್ರ’ ಮಾಡಲು ಯಾರಿಗೂ ಅವಕಾಶವೇ ಇರುತ್ತಿರಲಿಲ್ಲವಲ್ಲ? ಸಂತ್ರಸ್ತರಿಗೆ ನ್ಯಾಯ ಸಿಗದಂತೆ ತಡೆದವರು ಯಾರು?
ಆತ್ಮಹತ್ಯೆಯೋ, ಹತ್ಯೆಯೋ, ಅದು ಮನುಷ್ಯನ ಅಸ್ತಿಪಂಜರವಷ್ಟೆ
ಈಗ ಎಸ್.ಐ.ಟಿ. ಅನಾಮಿಕನ ದೂರಿನ ಮೇರೆಗೆ ಅಸ್ತಿಪಂಜರಗಳನ್ನು ಹುಡುಕುವ ಕಾರ್ಯ ಮಾಡುತ್ತಿದೆ. ಗುಡ್ಡದ ಮೇಲೆ ಮನುಷ್ಯರ ಅಸ್ತಿಪಂಜರಗಳು ಸಿಕ್ಕಿವೆ. ಧರ್ಮರಕ್ಷಕರು ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಕೆಲವರಿಗೆ ಇದನ್ನೂ ಸಹಿಸಿಕೊಳ್ಳಲು ಆಗುತ್ತಿಲ್ಲ. “ಅನಾಮಿಕ ಈ ಮೊದಲು ಹೇಳಿದ, ಗುರುತು ಮಾಡಿದ 13 ಸ್ಥಳಗಳಲ್ಲಿ ಮಾತ್ರ ಹುಡುಕುವ ಕೆಲಸ ಮಾಡಬೇಕಿತ್ತು, ಅದು ಬೇರೆ ಸ್ಥಳದಲ್ಲಿ ಅಸ್ತಿಪಂಜರವನ್ನು ಹುಡುಕಿದೆ. ಇದರ ಹಿಂದೆ ಯಾರಿದ್ದಾರೆ?” ಎನ್ನುತ್ತ, ಇದರಲ್ಲಿ ಏನೋ ಷಡ್ಯಂತ್ರ ಇದೆ ಎಂಬಂತೆ ಮಾತನಾಡುತ್ತಿದ್ದಾರೆ. ಗುಡ್ಡದ ಮೇಲೆ ಮನುಷ್ಯನ ಅಸ್ತಿಪಂಜರ ಸಿಕ್ಕಿದ್ದರೂ, ಅದು ಆತ್ಮಹತ್ಯೆ ಇರಬಹುದು, ಅನಾಮಿಕ ಹೇಳಿದಂತೆ ಅದು ಹತ್ಯೆಯಿಂದ ಆಗಿರುವ ಸಾವಲ್ಲ, ಆ ಅಸ್ತಿ ಪಂಜರ ಒಂದು ವರ್ಷದ ಇತ್ತೀಚಿನದು, ಅನಾಮಿಕ 11 ವರ್ಷಗಳ ಹಿಂದೆ ಹೂತುಹಾಕಿರುವ ಶವಗಳ ಬಗ್ಗೆ ಹೇಳಿದ್ದ, ಈ ಅಸ್ತಿಪಂಜರ ಅಲ್ಲಿರುವುದು ಆತನಿಗೆ ಹೇಗೆ ತಿಳಿಯಿತು? ಆತನಿಗೆ ಯಾರು ಮಾಹಿತಿ ಕೊಟ್ಟರು? ಇದರಲ್ಲೇನೋ ಷಡ್ಯಂತ್ರ ಇದೆ…. ಎಂದೆಲ್ಲಾ ಮಾತನಾಡುತ್ತಿದ್ದಾರೆ.

ಆತ್ಮಹತ್ಯೆಯೋ, ಹತ್ಯೆಯೋ, ಈಗ ಸಿಕ್ಕಿರುವ ಅಸ್ತಿಪಂಜರ ಮನುಷ್ಯನದೇ ತಾನೇ? ಇದನ್ನು ಇಷ್ಟು ಲಘುವಾಗಿ ಕಾಣುವ ಮಾಧ್ಯಮಗಳ ವಾದ ನೋಡಿ ಏನೆನ್ನಬೇಕೋ ತಿಳಿಯುತ್ತಿಲ್ಲ. ವಿಷಾಧಕರವೆಂದರೆ, ಒಬ್ಬ ಮನುಷ್ಯನ ಆತ್ಮಹತ್ಯೆ ಸಹಜ ಎಂಬಂತೆ ಅವರು ಮಾತನಾಡುತ್ತಿರುವುದು. ಅದು ಆತ್ಮಹತ್ಯೆಯೇ ಆಗಿರಬಹುದು ಅಂದುಕೊಳ್ಳೋಣ. ಆ ಮನುಷ್ಯ ಅಥವಾ ನೂರಾರು ಜನರು ಧರ್ಮಸ್ಥಳಕ್ಕೆ ಬಂದು ಯಾಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ಅವರ ಬದುಕಿನಲ್ಲಿ ಅಂತಹ ಕೌಟಿಂಬಿಕ ಸಮಸ್ಯೆಗಳೇನಿದ್ದವು? ಆರ್ಥಿಕ ಅಥವಾ ಮಾನಸಿಕ ಸಮಸ್ಯೆ ಏನಿದ್ದವು? ಆ ಮಹಿಳೆ ಅಥವಾ ಆ ಪುರುಷನನ್ನು ಕಳೆದುಕೊಂಡ ಅವರ ಕುಟುಂಬದ ನೋವು, ಬದುಕು ಹೇಗಿರಬಹುದು? ಎಂದು ಯಾರಾದರೂ ಚಿಂತೆಗೆ ಒಳಗಾಗ ಬೇಕಲ್ಲವೆ? ಈ ವ್ಯವಸ್ಥೆ ತನ್ನ ಪ್ರಜೆಗಳನ್ನು ಆತ್ಮಹತ್ಯೆಯ ಕಡೆ ದೂಡುತ್ತಿರುವುದೇಕೆ? ಇದಕ್ಕೆ ಪರಿಹಾರ ಏನು? ಈ ಕುರಿತೂ ಚಿಂತಿಸಬೇಕಲ್ಲವೆ?
ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ!!
ಅಂತವರು, ತಮಗೆ ಸ್ವರ್ಗ ಸಿಗುತ್ತೆ ಎಂಬ ನಂಬಿಕೆಯಿಂದ ಧರ್ಮಸ್ಥಳಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕೆಲವರು ಇಂತಹ ಸಾವುಗಳನ್ನೂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಇದು ನಿಜವೇ ಆಗಿದ್ದರೆ, ಇಂತಹ ಆತ್ಮಹತ್ಯೆಗಳನ್ನು ತಡೆಯಲು ಅಲ್ಲಿನ ವ್ಯವಸ್ಥೆ, ಅಲ್ಲಿನ ಪೊಲೀಸರು ಯಾಕಾಗಿ ಕ್ರಮ ತೆಗೆದುಕೊಳ್ಳಲಿಲ್ಲ? ಕಿನ್ನತೆಯಿಂದ ಬಳಲುವ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳಲು ಧರ್ಮಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಮುಕ್ತ ಅವಕಾಶ ಮಾಡಿಕೊಟ್ಟಿರುವರೇನು? ಇದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಲ್ಲವೇ?
ಧರ್ಮಸ್ಥಳ ಗ್ರಾಮದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲದೆ, ಅಸಹಜ ಸಾವುಗಳು, ಅತ್ಯಾಚಾರ, ಹತ್ಯೆ, ನಡೆದಿರುವುದನ್ನು ಎಲ್ಲರೂ ಒಪ್ಪುತ್ತಾರೆ. ಅಲ್ಲಿನ ಪೊಲೀಸ್ ದಾಖಲೆಗಳೇ ಈ ಸಾವುಗಳ ಕುರಿತು ಬಹಳಷ್ಟು ಹೇಳುತ್ತವೆ. ಮೂರು ದಶಕಗಳ ಹಿಂದೆಯೇ ವಿಧಾನಸಭೆಯಲ್ಲಿಯೂ ಈ ಕುರಿತು ಪ್ರಶ್ನೆ ಬಂದಿದೆ. ಪತ್ರಿಕೆಗಳೂ ಬಹಳಷ್ಟು ಸುದ್ದಿ ಮಾಡಿವೆ. ಆತ್ಮಹತ್ಯೆ, ಅಸಹಜ ಸಾವು, ಅತ್ಯಾಚಾರ, ಹತ್ಯೆ ಇವುಗಳನ್ನು ತಪ್ಪಿಸಲು ಪೊಲೀಸರು ಮತ್ತು ಸ್ಥಳೀಯ ಆಡಳಿತವು ಮುಂಜಾಗ್ರತೆಯಾಗಿ ಕ್ರಮ ತೆಗೆದುಕೊಂಡಿದ್ದರೆ, ಅಲ್ಲಿನ ಸ್ಥಳೀಯ ಆಡಳಿತವು ಪೊಲೀಸರ ಮೇಲೆ ಒತ್ತಡ ತಂದು ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಂಡಿದ್ದರೆ, ಒಂದು ವೇಳೆ ಯಾವುದಾದರೂ ಇಂತಹ ಅಪರಾಧಗಳು ನಡೆದ ತಕ್ಷಣವೇ ಅಪರಾಧಿಗಳನ್ನು ಹಿಡಿದು ಕಾನೂನಿನ ಕುಣಿಕೆಗೆ ಒಪ್ಪಿಸಿದ್ದರೆ, ದೇಶ, ಜಗತ್ತು ಧರ್ಮಸ್ಥಳದ ಕುರಿತು ಇಂದಿನ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ.
ಇದನ್ನೆಲ್ಲಾ ಪ್ರಶ್ನೆ ಮಾಡಿದರೆ, ಇದು ದೇವಸ್ಥಾನದ ವಿರುದ್ಧ, ಒಂದು ಧರ್ಮದ ವಿರುದ್ಧ ಕಮ್ಯೂನಿಸ್ಟರ ಷಡ್ಯಂತ್ರ ಹೇಗಾಗುತ್ತದೆ? ನನಗಂತೂ ಅರ್ಥವಾಗುತ್ತಿಲ್ಲ. ಸೌಜನ್ಯಳ ಪರ ದ್ವನಿ ಎತ್ತಿರುವವರಲ್ಲಿ, ಕಮ್ಯುನಿಸ್ಟ್ ವಿರೋಧಿಗಳೂ, ತಾನು ಸನಾತನ ಧರ್ಮದ ಪರ ಎನ್ನುವವರೂ ಇದ್ದಾರೆ. ಹಿಂದೂ ಧರ್ಮ ಆಚರಣೆ ಮಾಡುವವರೂ ಇದ್ದಾರೆ. ನನ್ನ ಕುಟುಂಬವೂ ಸೇರಿದಂತೆ, ಬಹಳಷ್ಟು ಕಮ್ಯೂನಿಸ್ಟರ ಮನೆಗಳಲ್ಲಿಯೂ ದೇವರ ಭಕ್ತರು, ಮಾತ್ರವಲ್ಲ ಧರ್ಮಸ್ಥಳದ ಮಂಜುನಾಥನ ಭಕ್ತರೂ ಇದ್ದಾರೆ. ನ್ಯಾಯದ ಪರವಾಗಿ ದ್ವನಿ ಎತ್ತುವವರನ್ನು ಧರ್ಮದ ವಿರುದ್ಧ, ಧರ್ಮಕ್ಷೇತ್ರದ ವಿರುದ್ಧ ಇರುವವರು ಎಂದು ಜನರನ್ನು ಎತ್ತಿಕಟ್ಟುವ ಮೂಲಕ, ಅಪರಾಧಿಗಳನ್ನು ರಕ್ಷಣೆ ಮಾಡಬಹುದು ಎಂಬುದು ಇವರ ಭ್ರಮೆ. ಸತ್ಯಕ್ಕೆ ಇಂದಲ್ಲ ನಾಳೆ ಜಯ ಸಿಕ್ಕೇ ಸಿಗುತ್ತದೆ ಎಂಬ ಧೃಡ ನಂಬಿಕೆ ನಮ್ಮದು. ಅದಕ್ಕಾಗಿ ದ್ವನಿ ಎತ್ತುತ್ತಲೇ ಇರುತ್ತೇವೆ.
ಇದನ್ನೂ ನೋಡಿ: ಧರ್ಮಸ್ಥಳ | ಮಗಳನ್ನು ನೆನೆದು ಕಣ್ಣೀರು ಹಾಕಿದ ತಾಯಿ, ಆ ದಿನ ಏನಾಯ್ತು? ವಿವರವಾಗಿ ಬಿಚ್ಚಿಟ್ಟ ಪದ್ಮಲತಾಳ ಅಕ್ಕ
