‘ಸಪ್ದರ್ ಹಷ್ಮೀ ಸ್ವತಃ ಕಲಾವಿದ ಹಾಗೂ ಪತ್ರಕರ್ತರಾಗಿದ್ದವರು. ಅವರದ್ದು ಕೇವಲ 34 ವರ್ಷಗಳ ಕಿರಿಯ ಕ್ರಾಂತಿಕಾರಿ ಬದುಕು. ಆದರೆ ಆ ಕಿರು ಅವಧಿಯಲ್ಲೇ ಶತಮಾನಗಳಷ್ಟು ಮರೆಯಲಾಗದ ಕೆಲಸ ಮಾಡಿದ ಕೀರ್ತಿ ಅವರದ್ದು. 2024 ಏಪ್ರಿಲ್ 12 ಸಪ್ದರ್ ಹಷ್ಮೀ ಜನ್ಮ ದಿನ. ಜನರಿಂದ ರೂಪಿತವಾಗಿ ಜನತೆಗಾಗಿ ಅರ್ಪಿಸಿಕೊಂಡು ಜನರಿಗಾಗಿಯೇ ತನ್ನ ಯೌವ್ವನವನ್ನೇ ಬಲಿನೀಡಿದ ಹಷ್ಮೀ ಎನ್ನುವ ಮಹಾನ್ ಕಲಾವಿದ ಸಮಕಾಲೀನ ಸಂದರ್ಭದಲ್ಲಿ ನಮ್ಮ ಜತೆ ಇರಲೇಬೇಕಾಗಿದ್ದ ಜೀವವಾಗಿತ್ತು.
ನಾನು ಮಾತನಾಡುವುದಿಲ್ಲ
ಎಲೆಗಳ ಬಗ್ಗೆ
ನಾನು ಮಾತನಾಡುವುದಿಲ್ಲ
ಬಯಕೆಗಳ ಬಗ್ಗೆ
ನಾನು ಮಾತನಾಡುವುದಿಲ್ಲ
ನನ್ನ ಕನಸುಗಳ ಬಗ್ಗೆ
ಯಾಕೆಂದರೆ….
ನೋಡಿ ಬೀದಿಯಲ್ಲಿ ರಕ್ತವಿದೆ
ರಕ್ತವಿದೆ ಬೀದಿಯ ಮೇಲೆ…
ಚಿಲಿಯ ಕವಿ, ನೋಬೆಲ್ ಪುರಸ್ಕೃತ ಸಾಹಿತಿ ಪ್ಯಾಬ್ಲೋ ನೆರೂಡ ಸರ್ವಾಧಿಕಾರತ್ವ ವಿರುದ್ದ ಬರೆದ ಈ ಕನವದ ಸಾಲುಗಳು ಅದೇ ದಾರಿಯಲ್ಲಿ ಸಾಗುತ್ತಿರುವ ಇಂಡಿಯಾದ ಇವತ್ತಿನ ಪರಿಸ್ಥಿತಿಗೆ ಕಾಕತಾಳೀಯವೆಂಬಂತೆ ಅನ್ವಹಿಸುತ್ತಿವೆ ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಅಘೋಷಿತ ತುರ್ತು ಪರಿಸ್ಥಿತಿಯ ವಾತವರಣವಿದೆ. ಪ್ಯಾಸಿಸಂನ ಬೇರುಗಳು ದೇಶದ ಉದ್ದಗಲಕ್ಕೂ ವಿವಿಧ ಸ್ವರೂಪಗಳಲ್ಲಿ ಕವಲೊಡೆದಿವೆ. ದೂರದ ಯುರೋಪ್‌ನ ಜರ್ಮನಿ,ಇಟಲಿಗಳಲ್ಲಿ ಹಲವು ದಶಕಗಳ ಕಾಲ ಜನಾಂಗೀಯ ಮಾರಣಹೋಮಕ್ಕೆ ಕಾರಣವಾದ ಸ್ಥಿತಿ ಭಾರತದಂತಹ ಬಹುತ್ವದ, ಬಹುಸಂಸ್ಕೃತಿಯ, ಬಹುಜನಾಂಗೀಯ ಸಮಾಜದಲ್ಲಿ ನುಸುಳಲು ಸಾಧ್ಯವೇ ಇಲ್ಲ ಎಂದು ಅರಾಮವಾಗಿ ಕುಳಿತಿದ್ದವರ ಮನೆಯ ಅಂಗಳಕ್ಕೂ ಈಗ ತಲುಪಿಯಾಗಿದೆ. ಈ ಗಂಭೀರ ಸನ್ನಿವೇಶದಲ್ಲಿ ‘ಸಪ್ದರ್’ ಎನ್ನುವ ವ್ಯಕಿತ್ವವೊಂದು ಜೀವಂತವಿದ್ದರೆ ಅವರು ಅಕ್ಷರಶಃ ತನ್ನ ಸಂಗಾತಿ ಕಲಾವಿದರೊಂದಿಗೆ ದೇಶದ ಬೀದಿಯಲ್ಲಿರುತ್ತಿದ್ದರು.
ಹೌದು ಸಪ್ದರ್ ಇಂದು ಬದುಕಿದ್ದರೆ, ದೇಶದ ಪ್ರಜಾತಂತ್ರದ ಅಳಿವು ಉಳಿವಿನ ಹಣೆ ಬರಹವನ್ನು ನಿರ್ಧರಿಸಬೇಕಾದ ಈ ಚುನಾವಣೆ ಎನ್ನುವ ಮಹಾಸಮರದಲ್ಲಿ ಜನತೆಯ ಬದುಕಿನ ಸಂಕಟಗಳಿಗೆ ಒಂದು ಸಾಂಸ್ಕೃತಿಕ ಧ್ವನಿಯಾಗಿರುತ್ತಿದ್ದರು. ಸಧ್ಯ ಪ್ರಜಾಪ್ರಭುತ್ವದ ಮುಖವಾಡ ಹಾಕಿಕೊಂಡು ಸರ್ವಾಧಿಕತ್ವದೆಡೆಗೆ ಸಾಗುವ ಅದರ ಅಪಾಯಗಳ ಬಗೆಗೆ, ಜತೆಗೆ ಅದಕ್ಕೆ ನೀರೇರೆದು ಫೋಷಿಸುವ ಅವಕಾಶವಾದಿ ರಾಜಕಾರಣದ ಬಗ್ಗೆ ತಮ್ಮದೇ ತಂಡ ಜನಂ(ಜನನಾಟ್ಯ ಮಂಚ್) ಮೂಲಕ ಹಾಡು.. ನಾಟಕಾಭಿನಯ, ಕಾವ್ಯ ಹಾಗೂ ಬರಹಗಳ ಮೂಲಕ ಪ್ರಶ್ನಿಸುವ, ವಿಡಂಬನೆ ಮಾಡುವ ಅವಕಾಶವನ್ನು ಅವರು ಖಂಡಿತ ಕಳೆದುಕೊಳ್ಳುತ್ತಿರಲಿಲ್ಲ. ಆಳುವ ವರ್ಗದ ಜೊತೆ ಎಂದೂ ಅಧಿಕಾರಕ್ಕಾಗಿ ರಾಜಿಯಾಗದೆ ಪ್ರಭುತ್ವದ ಹುಳುಕುಗಳನ್ನು ಸದಾ ಹುಡುಕುತ್ತಾ ಅದಕ್ಕೆ ಅಕ್ಷರ, ಹಾಡು, ನಾಟಕದ ರೂಪಗಳನ್ನು ನೀಡಿ ಜನತೆಯ ಸದಾ ಎಚ್ಚರಿಸುತ್ತಿದ್ದ ಶಕ್ತಿಯಾಗಿರುತ್ತಿದ್ದರು.
ಅದು 1989 ಜನವರಿ 1, ಸಪ್ದರ್ ಹಷ್ಮೀ ಮತ್ತು ಆತನ ಜನನಾಟ್ಯ ಮಂಚ್(ಜನಂ) ತಂಡ ‘ಅಲ್ಲಾ ಬೋಲ್’ ಎನ್ನುವ ವಿಡಂಬನಾತ್ಮಕ ಬೀದಿ ನಾಟಕದ ಮೂಲಕ ದೆಹಲಿಯ ‘ಸಾಹಿದಾಬಾದ್’ ಪ್ರದೇಶದಲ್ಲಿದ್ದರು. ಆಗ ಅಲ್ಲಿನ ನಗರ ಸಭೆಗೆ ಚುನಾವಣೆಗಳು ಘೋಷಣೆಯಾಗಿದ್ದವು. ಆ ಪ್ರದೇಶದ ಕಾರ್ಮಿಕ ವರ್ಗ ಎದುರಿಸುತ್ತಿರುವ ಸಂಕಟಗಳನ್ನು ಹಾಗೂ ಸ್ಥಳೀಯ ಪೊಲೀಸರು-ಕೈಗಾರಿಕಾ ಮಾಲೀಕರು ಹಾಗೂ ಆ ಪ್ರದೇಶದ ರಾಜಕಾರಣದ ನಡುವಿದ್ದ ಕಾನೂನು ಬಾಹಿರ ನಂಟನ್ನು ಎಳೆ-ಎಳೆಯಾಗಿ ಬಿಡಿಸಿಟ್ಟು ಜನಜಾಗೃತಿ ಮೂಡಿಸುವ ಕೆಲಸದಲ್ಲಿ ಜನಂ ನಿರತವಾಗಿತ್ತು. ದೆಹಲಿ ಸುತ್ತಮುತ್ತಲಿನ ಆ ಪ್ರದೇಶದಲ್ಲಿ ‘ಜನಂ’ ತಂಡದ ಈ ಚಟುವಟಿಕೆಗಳು ಅದಾಗಲೇ ಬಹಳ ಜನಪ್ರಿಯವಾಗಿದ್ದವು. ಇದರಿಂದಾಗಿ ಕ್ರೋಧಗೊಂಡಿದ್ದ ರಾಜಕೀಯ ಪ್ರೇರಿತ ಶಕ್ತಿಗಳು ಜನವರಿ 1 ರ ಮಧ್ಯಾನ್ಹ ನಾಟಕ ಪ್ರದರ್ಶಿಸುತ್ತಿದ್ದ ತಂಡದ ಮೇಲೆ ಸುಮಾರು 150 ಜನರ ಗೂಂಡಾಪಡೆ ಏಕಾಏಕಿ ದಾಳಿ ನಡೆಸಿತು. ಹಲ್ಲೆಕೋರರಿಂದ ಹೇಗ್ಹೋ ತಪ್ಪಿಸಿಕೊಂಡ ಕಲಾವಿದರು ಸ್ಥಳೀಯ ಕಾರ್ಮಿಕ ಸಂಘದ ಕಛೇರಿಯಲ್ಲಿ ಆಶ್ರಯಪಡೆದರು. ಆದರೆ ಅಲ್ಲಿಗೂ ನುಗಿದ ಗೂಂಡಾಪಡೆ ದೊಣ್ಣೆ, ಲಾಠಿ ಹಾಗೂ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ತನ್ನ ಸಹಕಲಾವಿದರನ್ನೆಲ್ಲಾ ಬೆಂಗಾವಲಾಗಿ ರಕ್ಷಿಸುತ್ತಾ ಬಾಗಿಲಲ್ಲೇ ನಿಂತಿದ್ದ ಸಪ್ದರ್ ಹಷ್ಮೀ ಆ ಗೂಂಡಾಗಳು ನಡೆಸಿದ ಮಾರಣಾಂತಿಕ ಪೆಟ್ಟುಗಳಿಂದಾಗಿ ಜನವರಿ 2 ರಂದು ಆಸ್ಪತ್ರೆಯಲ್ಲಿ ಆಳುವವರು ರೂಪಿಸಿದ ಸಂಚಿಗೆ ಬಲಿಯಾಗಿ ಹುತಾತ್ಮರಾದರು.
ಹಷ್ಮೀ ಮತ್ತವರ ಸಂಗಾತಿಗಳು ನಡೆಸುತ್ತಿದ್ದ ಕೆಲಸವೇ ಅಂತಹುದ್ದು. ಇಡೀ ದೆಹಲಿ ಮಾತ್ರವಲ್ಲ ಅದರ ಸುತ್ತಮುತ್ತಲಿನ ರಾಜ್ಯಗಳಲ್ಲಿ ಎಲ್ಲಿಯೇ ಅನ್ಯಾಯ, ದಬ್ಬಾಳಿಕೆ ಕೂಗು ಕೇಳಿದರೆ ಅಲ್ಲಿಗೆ ಪ್ರತ್ಯಕ್ಷವಾಗುತ್ತಿತ್ತು ‘ಜನನಾಟ್ಯಮಂಚ್’ ತಂಡ.! ಅದು ಹೊಟೇಲ್ ತಿಂಡಿ ಬೆಲೆ ಏರಿಕೆ, ದೆಹಲಿ ನಗರ ಬಸ್ ಪ್ರಯಾಣ ದರ ಏರಿಕೆ, ಕಾರ್ಮಿಕರ ನ್ಯಾಯಯುತ ಮುಷ್ಕರ ಸೇರಿದಂತೆ… ಜನತೆಯ ಮೇಲೆ ನಡೆಯುವ ಎಲ್ಲಾ ದಬ್ಬಾಳಿಕೆಗಳಿಗೆ ಉತ್ತರವಾಗಿ ‘ಜನಂ’ ತಂಡ ದೆಹಲಿಯ ‘ಮಂಡಿಹೌಸ್’ ಮತ್ತು ಕನಾಟ್‌ಪ್ಲೇಸ್‌ಗಳಲ್ಲಿ (ನಮ್ಮ ಬೆಂಗಳೂರಿನ ಕಲಾ ಕ್ಷೇತ್ರದಂತೆ) ಕುಳಿತು ಹಾಡು, ನಾಟಕಗಳನ್ನು ಸಿದ್ದಪಡಿಸಿ ಅಲ್ಲೇ ರಿಹರ್ಸಲ್ ಮಾಡುತ್ತಿತ್ತು. ಅಲ್ಲಿ ಪ್ರತಿ ಶನಿವಾರ ನಡೆಯುತ್ತಿದ್ದ ಹೊಸ ನಾಟಕಗಳನ್ನು ವಿಕ್ಷೀಸಲು ನೂರಾರು ಜನರು ಸೇರುತ್ತಿದ್ದರು ಹೀಗಾಗಿ 80 ದಶಕದಲ್ಲಿ ‘ಕನಾಟ್‌ಪ್ಲೇಸ್’ ಎಂದರೆ ದೆಹಲಿ ಪೊಲೀಸರಿಗೆ ಬೆವರಿಳಿಯುತ್ತಿತ್ತು. ಆಕಾರಣದಿಂದಾಗಿ ಅವರು ಆ ಪ್ರದೇಶದ ಸುತ್ತಮುತ್ತ ಎಷ್ಟೋ ಬಾರಿ ಕಲಂ 144 ಹೇರುತ್ತಿದ್ದರು.! ಸಪ್ಧರ್ ವಿದ್ಯಾರ್ಥಿ ದಿಸೆಯಿಂದಲೂ ಸಪ್ದರ್ ಪ್ರತಿಭಾವಂತರಾಗಿದ್ದರು. ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಮುಗಿಸಿ ಕೆಲ ಕಾಲ ಕಾಶ್ಮೀರದಲ್ಲಿ ಅಧ್ಯಾಪಕನಾಗಿ ನಂತರ ಪ.ಬಂಗಾಳ ಸರ್ಕಾರದ ವಾರ್ತಾಧಿಕಾರಿ ದೆಹಲಿಯಲ್ಲಿದ್ದು ಕಾರ್ಯನಿರ್ವಹಿಸಿದರು. ಸಪ್ದರ್ ಹಷ್ಮೀ ಹತ್ಯೆಯಾಗಿದ್ದು ಕೇವಲ ತನ್ನ 34 ನೇ ವರ್ಷದಲ್ಲಿ.! ನಿಜ, ಅದು ಸಾಯುವ ವಯಸ್ಸಲ್ಲ. ಆದರೆ ಆಳುವ ವರ್ಗದ ಜನರಿಗೆ ಅವರು ಹೆಚ್ಚು ದಿನಗಳು ಬದುಕಿದಷ್ಟು ಕಷ್ಟದ ದಿನಗಳು ಎಂಬುದು ಮನದಟ್ಟಾಗಿತ್ತು.
ಮಹಾನ್ ಕಲಾವಿದ ಹಷ್ಮೀ ಹತ್ಯೆಯನ್ನು ಇಡೀ ದೇಶವೇ ಒಂದಾಗಿ ಖಂಡಿಸಿತ್ತು. ದೇಶದ ಉದ್ದಗಲಕ್ಕೂ ಪ್ರತಿಭಟನೆಗಳು ನಡೆದವು. 1989 ಜನವರಿ 2 ರಂದು 14 ಕೀ.ಮೀ ನಡೆದ ಅವರ ಅಂತಿಯಯಾತ್ರೆಯಲ್ಲಿ ಪಾಲ್ಗೊಂಡರ ಸಂಖ್ಯೆ 10 ಸಾವಿರ ದಾಟಿತ್ತು.! ಸಪ್ದರ್ ತಾಯಿ ಅಲ್ಲದೆ ಖ್ಯಾತ ನಾಮರಾದ ಭೀಷ್ಮ ಸಹಾನಿ, ಹಬೀಬ್ ತನ್ವೀರ್, ಯಶಪಾಲ, ಸಿಪಿಎಂ ನಾಯಕ ಸುರ್ಜಿತ್ ಸೇರಿದಂತೆ ನೂರಾರು ಗಣ್ಯರು ಭಾಗವಹಿಸಿದ್ದರು. ಇನ್ನೂ ಸ್ಪೂರ್ತಿ ನೀಡಿದ ಸಂಗತಿ ಎಂದರೆ ಜನವರಿ 3 ರಂದು ಅಂದರೆ ಹಷ್ಮೀ ಹತ್ಯೆಯಾದ ಎರಡೇ ದಿನದಲ್ಲಿ ಅದೇ ‘ಜನಂ’ ತಂಡ ಸಪ್ದರ್ ಹೆಂಡತಿ ಮಾಲಶ್ರೀ ಹಷ್ಮೀ ನೇತೃತ್ವದಲ್ಲಿ ಹಷ್ಮೀ ಹತ್ಯೆಯಾದ ಅದೇ ಸಾಹಿದಾಬಾದ್ ಪ್ರದೇಶದಲ್ಲೇ “ಬೂಖ್‌ಸೇ ರ‍್ನೇವಾಲೇ ಕ್ಯಾ ಮೌತ್‌ಸೇ ರ‍್ನೇ ವಾಲೇ ?(ಹಸಿವಿನಿಂದ ಸಾಯುತ್ತಿರುವ ನಾವು ಸಾವಿಗೆ ಹೆದರುವೆವೆನು?) ಎನ್ನುವ ಘೋಷಣೆಯೊಂದಿಗೆ ಅರ್ಧಕ್ಕೆ ನಿಂತಿದ್ದ ಅದೇ ‘ಅಲ್ಲಾಬೋಲ್” ನಾಟಕವನ್ನು ಪ್ರದರ್ಶಿಸಿ ಆಳುವವರಿಗೆ ನೇರ ಸವಾಲೆಸೆಯಿತು.
1989 ಏಪ್ರಿಲ್ 12 ರಿಂದ 16 ರವರಗೆ ಬೆಂಗಳೂರಿನಲ್ಲಿ ಸಮುದಾಯ ಸಪ್ದರ್ ಹಷ್ಮೀ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ‘ಸಮಗ್ರತಾ ಉತ್ಸವ‘ ವನ್ನು ನಟ ಅನಂತನಾಗ್ ಉದ್ಗಾಟಿಸಿದ್ದರು. ಆ ಉತ್ಸವದಲ್ಲಿ ದಾವಣಗೆರೆ ಸಮುದಾಯ ಹಿರಿಯ ಚಿತ್ರಕಲಾವಿದ ಶ್ರೀ.ಟಿ.ಬಿ ಸೊಲಬಕ್ಕನವರ್ ಮಾರ್ಗದರ್ಶನ, ಸಮುದಾಯ ಕಾರ್ಯದರ್ಶಿ ಡಿ.ಯಾಕೂಬ್ ನಾಯಕತ್ವ ಹಾಗೂ ಇಸ್ಮಾಯಿಲ್ ಎಲಿಗಾರ್ ನಿರ್ದೇಶನದ ಮಾನವ ವಿಕಾಸ ಹಾದಿಯ ‘ಜನತೆ’ ನಾಟಕದಲ್ಲಿ ನಾನು ಒಬ್ಬ ಕಲಾವಿದನಾಗಿ ಮೊದಲ ಬಾರಿಗೆ ಬೆಂಗಳೂರಿನ ‘ಸಂಸ ಬಯಲು ರಂಗಮಂದಿರ” ದಲ್ಲಿ ಅಭಿನಯಿಸಿದ್ದ ದೃಶ್ಯವಿನ್ನೂ ಕಣ್ಣಿಂದ ಮಾಸಿಲ್ಲ.
ಸಪ್ದರ್ ನಮ್ಮಿಂದ ದೂರವಾಗಿ ಮೂರುವರೆ ದಶಕಗಳೇ ಕಳೆದವು ನಿಜ. ಆದರೆ ದೆಹಲಿ ರಸ್ತೆಯಲ್ಲಿ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ, ಮಣಿಪುರದಲ್ಲಿ ಹೆತ್ತಮ್ಮಗಳ ಬೆತ್ತಲೆ ಮೆರವಣಿಗೆ, ಉತ್ತರಪ್ರದೇಶ,ಹರಿಯಾಣ, ಕರ್ನಾಟಕ ಮೊದಲಾದ ಕಡೆಗಳಲ್ಲಿ ಯುವಕ, ಯುವತಿಯರ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಾಗ, ದೇಶದೆಲ್ಲೆಡೆ ದಲಿತರ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿರುವಾಗ, ಅಲ್ಪಸಂಖ್ಯಾತರ ಮೇಲೆ ಏಕ ಸಂಸ್ಕೃತಿಯ ಗೂಂಡಾಗಿರಿ, ಮತಾಂಧತೆಯ ದಾಳಿಗಳು ಎಗ್ಗಿಲ್ಲದೆ ನಡೆಯುವಾಗ ಪ್ಯಾಸಿಸಂನ ಕರಾಳಛಾಯೆಗಳು ದೇಶದ ಉದ್ದಲಕ್ಕೂ ಆವರಿಸಿರುವ ಈ ಹೊತ್ತಿನಲ್ಲಿ ಒಬ್ಬ ಹೋರಾಟಗಾರ, ಕಲಾವಿದ, ಪತ್ರಕರ್ತ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಸದಾ ಜನರ ನೋವುಗಳಿಗೆ ಮಿಡಿಯುವ ಸಂಗಾತಿಯಾಗಿ ಸಪ್ದರ್ ಇರುವಿಕೆ ಹಿಂದೆಂದಿಗಿಂತೂ ಇಂದು ತೀರ ಅವಶ್ಯವಾಗಿತ್ತು ಅಂತಹ ಪ್ರೀತಿಯ ಸಂಗಾತಿ ಸಪ್ದರ್ ಹಷ್ಮೀಗೆ ಜನುಮ ದಿನದ ಶುಭಾಶಯಗಳು.
ಇದನ್ನು ನೋಡಿ : ಶೋಷಿತರ ಧ್ವನಿಗೆ ಪ್ರತಿಧ್ವನಿಯಾಗಿ ಮೊಳಗಿದ ಸಪ್ದರ್ ಹಾಶ್ಮಿ Janashakthi Media