ಬಿಜೆಪಿ ಜಾತ್ಯತೀತವಾಗಿದ್ದರೆ ಮುಸ್ಲಿಮರು ಅವರೊಂದಿಗೆ ಇರುತ್ತಾರೆ: ರೆಹಮಾನ್‌ ಖಾನ್‌

ಬೆಂಗಳೂರು: ‘ಮುಸ್ಲಿಮರ ಕೈಹಿಡಿಯಲು ಯಾವುದೇ ರಾಜಕೀಯ ಪಕ್ಷ ಬೇಕಿಲ್ಲ. ಸಂವಿಧಾನ ಒಂದೇ ಸಾಕು. ನಮ್ಮದು ಜಾತ್ಯತೀತ ದೇಶ. ಕಾಂಗ್ರೆಸ್ ಕೂಡ ಜಾತ್ಯತೀತ ಪಕ್ಷ. ಹೀಗಾಗಿ ಮುಸ್ಲಿಮರು ಕಾಂಗ್ರೆಸ್ ಜೊತೆಯಿದ್ದಾರೆ. ನಾಳೆ ಬಿಜೆಪಿ ಜಾತ್ಯತೀತ ಪಕ್ಷವಾದರೆ ಮುಸ್ಲಿಮರು ಬಿಜೆಪಿ ಜೊತೆ ಕೂಡ ಇರುತ್ತಾರೆ ಎಂದು ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿದರು.

ಇದನ್ನು ಓದಿ: ಬಿಜೆಪಿ-ಕಾಂಗ್ರೆಸ್‌ ಪಕ್ಷಗಳೆರಡೂ ಅವ್ಯವಹಾರದಲ್ಲಿ ಪರಿಣಿತಿ ಹೊಂದಿರುವವರು: ಹೆಚ್‌.ಡಿ.ಕುಮಾರಸ್ವಾಮಿ ಆರೋಪ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ. ದೇಶದಲ್ಲಿ 22 ಕೋಟಿ ಮುಸ್ಲಿಂ ಜನಸಂಖ್ಯೆಯಿದೆ. ಹೀಗಾಗಿ ಮಸ್ಲಿಮರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ. ಮುಸ್ಲಿಮರ ಕೈಹಿಡಿಯಲು ಯಾವುದೇ ರಾಜಕೀಯ ಪಕ್ಷ ಬೇಕಿಲ್ಲ. ಸಂವಿಧಾನ ಒಂದೇ ಸಾಕು ಎಂದರು.

ನೀರಾವರಿ ಇಲಾಖೆಯಲ್ಲಿನ ‘ಪರ್ಸಂಟೇಜ್‌’ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕುರಿತು ಎಂ.ಎ. ಸಲೀಂ ಮತ್ತು ಪಕ್ಷದ ನಾಯಕ ವಿ.ಎಸ್‌. ಉಗ್ರಪ್ಪನಡೆಸಿದ ಸಂಭಾಷಣೆ ಕುರಿತು ಮಾತನಾಡದ ಅವರು, ‘ಶಿಸ್ತು ಪಾಲನಾ ಸಮಿತಿ ನೀಡಿದ್ದ ನೋಟಿಸ್‌ಗೆ ಇಬ್ಬರೂ ಉತ್ತರ ನೀಡಿದ್ದಾರೆ. ನಾನಿನ್ನೂ ಅವರ ಉತ್ತರವನ್ನು ನೋಡಿಲ್ಲ. ಶಿಸ್ತು ಸಮಿತಿಯ ಸಭೆಯಲ್ಲಿ ಪರಿಶೀಲಿಸಲಾಗುವುದು’ ಎಂದರು.

ಅಲ್ಲದೆ, ಸಲೀಂ ಮಾತಾಡಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು, ಲೂಸ್ ಟಾಕ್ ಎನ್ನುವುದು ಗೊತ್ತಾಗಿತ್ತು. ಹೀಗಾಗಿ ಅವರ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ. ಆದರೆ ಉಗ್ರಪ್ಪ ಮಾತು ಸ್ಪಷ್ಟವಾಗಿಲ್ಲ. ಅವರು ನಗೆಯಾಡಿದ್ದು ಕಾಣುತ್ತಿತ್ತು. ಕೆಪಿಸಿಸಿ ಅಧ್ಯಕ್ಷರನ್ನು ನಾವೇ ನೇಮಕ ಮಾಡಿದ್ದು ಎಂದಿದ್ದಾರೆ ಅದೇನು ಮಹಾ ತಪ್ಪಲ್ಲʼ ಎಂದು ರೆಹಮಾನ್‌ ಖಾನ್‌ ಹೇಳಿದರು.

ಕಾಂಗ್ರೆಸ್‌ ನಾಯಕ ಸಿ.ಎಂ ಇಬ್ರಾಹಿಂ ಪಕ್ಷ ತೊರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರಿದಾಗ ಸಚಿವರನ್ನಾಗಿ ಮಾಡಲಾಗಿತ್ತು. ನನಗೆ ಅಧಿಕಾರ ನೀಡಿದ್ದು ಕಾಂಗ್ರೆಸ್ ಪಕ್ಷ. ಅವರಿಗೂ ಕಾಂಗ್ರೆಸ್ ಪಕ್ಷ ಅಧಿಕಾರ ನೀಡಿಲ್ಲವೇ. ಅವರು ಪಕ್ಷದ ಹಿರಿಯ ನಾಯಕ. ಅವರನ್ನು ವಿಧಾನ ಪರಿಷತ್‌ ನಾಯಕರನ್ನಾಗಿ ಮಾಡಬೇಕೋ ಬೇಡವೋ ಎಂಬುದಕ್ಕೆ ಸಮಾಜದ ಬಣ್ಣ ಕೊಡುವುದು ಬೇಡ’ ಎಂದು ಹೇಳಿದರು.

ಜಾಫರ್ ಷರೀಫ್ ಮೊಮ್ಮಗನ ಸೋಲಿಸಿದ್ದು ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಬಗ್ಗೆ ಪ್ರತಿಕ್ರಿಯಿಸಿ ʻಹಾಗಾದರೆ ಜಾಫರ್ ಮೊಮ್ಮಗನಿಗೆ ಕುಮಾರಸ್ವಾಮಿ ಜೆಡಿಎಸ್‌ ಟಿಕೆಟ್ ಕೊಟ್ಟು ಗೆಲ್ಲಿಸಬೇಕಿತ್ತು. ಹಾಗೆ ಮಾತನಾಡುತ್ತಾ ಹೋದರೆ ನಾವು ಸಾಕಷ್ಟು ಮಾತಾಡಬಹುದುʼ ಎಂದರು.

Donate Janashakthi Media

Leave a Reply

Your email address will not be published. Required fields are marked *