ಇದು ದೇವರ ಆಟವೇನೋ ಗೊತ್ತಿಲ್ಲ; ಆದರೆ ದೇಶ ಆಳುತ್ತಿರೋದು ದೆವ್ವ-ಭೂತಗಳು: ದೇವನೂರ ಮಹಾದೇವ

 

ರಾಜ್ಯಗಳ ಸ್ಥಾನವನ್ನು ದೈನೇಸಿ ಸ್ಥಾನಕ್ಕೆ ತಳ್ಳುವ ಜಿಎಸ್‌ಟಿ ತಂದು ದೆವ್ವದ ಆಟ ಆಡಿದವರು ಯಾರು? 

ಮೈಸೂರು: ‘ಈಗ ದೇಶ ಅನುಭವಿಸುತ್ತಿರುವ ಸಮಸ್ಯೆಗಳು ದೇವರ ಆಟ  ಏನೋ ಗೊತ್ತಿಲ್ಲ. ಆದರೆ, ಇಂದು ದೇಶವನ್ನು ಆಳುತ್ತಿರುವುದು ಮಾತ್ರ ದೆವ್ವ ಮತ್ತು ಭೂತಗಳು ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.

ಶನಿವಾರ ಭೂಸುಧಾರಣಾ ಕಾಯ್ದೆ  ತಿದ್ದುಪಡಿ- ಖಾಸಗೀಕರಣ ನೀತಿಗಳು ಪರಿಣಾಮ ಮತ್ತು ಸವಾಲುಗಳು ಕುರಿತ ವಿಚಾರಗೋಷ್ಠಿ ಮತ್ತು ಸಂವಾದವನ್ನು ರೈತರಿಗೆ ಮಣ್ಣು ನೀಡುವ ಮೂಲಕ ಅವರು ಉದ್ಘಾಟಿಸಿದರು.

‘ಕೊರೊನಾ ಎಂಬ ದೇವರ ಆಟದಿಂದ ರಾಜ್ಯಗಳ ಬಾಬ್ತು ನೀಡಲು ಆಗುತ್ತಿಲ್ಲ ಎನ್ನುವ ಅರ್ಥ ಸಚಿವರನ್ನು ಭಾರತ ಪಡೆದಿದೆ. ದೇಶದ ಒಕ್ಕೂಟ ವ್ಯವಸ್ಥೆಯ ಬುಡವನ್ನೇ ಕಡಿದು ಹಾಕಿ, ರಾಜ್ಯಗಳ ಸ್ಥಾನವನ್ನು ದೈನೇಸಿ ಸ್ಥಾನಕ್ಕೆ ತಳ್ಳುವ ಜಿಎಸ್‌ಟಿ ತಂದು ದೆವ್ವದ ಆಟ ಆಡಿದವರು ಯಾರು’ ಎಂದು ಪ್ರಶ್ನಿಸಿದರು.

ದೇವನೂರು ಮಹಾದೇವ, ಚಿಂತಕ

ರೈತರಿಗೆ ಮಣ್ಣಿನ ಬುಟ್ಟಿ ನೀಡುವ ಮೂಲಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧದ ಹೋರಾಟದ ವಿಚಾರ ಸಂಕಿರಣಕ್ಕೆ ಸಾಹಿತಿ ದೇವನೂರ ಮಹಾದೇವ ಚಾಲನೆ ನೀಡಿದರು.

ಜನರಿಗೆ ಕನಸು ಕಾಣಿಸಿ ನೋಟ್ ಬ್ಯಾನ್ ತಂದು ಭಾರತದ ಬದುಕನ್ನು ದುಃಸ್ವಪ್ನ ಮಾಡಿದ ಭೂತದ ಆಟ ಆಡಿದವರು ಯಾರು. ಕೊರೊನಾ ಭೀಕರ ವಾತಾವರಣದಲ್ಲಿ ಜನ ಸಮುದಾಯ ಧ್ವನಿ ತೆಗೆಯಲು ಕಷ್ಟಕರವಾದ ಸನ್ನಿವೇಶವನ್ನೇ ದುರ್ಬಳಕೆ ಮಾಡಿಕೊಂಡು, ಖಾಸಗಿ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಸರ್ವಸ್ವವನ್ನೂ ಧಾರೆ ಎರೆಯುವ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹರಿಹಾಯ್ದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಹಾಗೂ ಸ್ವರಾಜ್ ಇಂಡಿಯಾ, ಜನಾಂದೋಲನ ಮಹಾಮೈತ್ರಿ, ಜನಚೇತನ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಐದುನೂರಕ್ಕೂ ಹೆಚ್ಚು ರೈತ ಸಂಘ ಮತ್ತು ದಸಂಸ ದ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದಾರೆ.

ಕಾರ್ಯಕ್ರಮದಲ್ಲಿ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಚಾಮರಸ ಮಾಲೀ ಪಾಟೀಲ್, ಆಲಗೂಡು ಶಿವಕುಮಾರ್, ಎನ್.ಮುನಿಸ್ವಾಮಿ, ಎನ್.ವೆಂಕಟೇಶ್, ಬೆಟ್ಟಯ್ಯಕೋಟೆ, ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *