ಬೆಂಗಳೂರು: ತಮಿಳುನಾಡಿನ ಕೂನ್ನೂರು ಬಳಿ ಡಿಸೆಂಬರ್ 8ರಂದು ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಇಂದು ನಿಧನರಾಗಿದ್ದಾರೆ. ಭಾರತೀಯ ವಾಯುಪಡೆ ದೃಢಪಡಿಸಿದೆ
ಅಂದು ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಶೇಕಡಾ 45ರಷ್ಟು ಗಾಯವಾಗಿ ಪೈಲಟ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದರು. ಅವರಿಗೆ ಪ್ರಾಥಮಿಕವಾಗಿ ತಮಿಳುನಾಡಿನ ವೆಲ್ಲಿಂಗ್ಟನ್ ನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ.
ಇದನ್ನು ಓದಿ: ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ
ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 14 ಮಂದಿ ತಮಿಳುನಾಡಿನ ಕೂನೂರು ಬಳಿಯ ಕಟ್ಟೇರಿ ಎಂಬ ಗುಡ್ಡಗಾಡು ಗ್ರಾಮದ ಬಳಿ ದುರಂತಕ್ಕೀಡಾಗಿ 13 ಮಂದಿ ಸಜೀವ ದಹನವಾಗಿದ್ದರು. ಇದೀಗ ಗ್ರೂಪ್ ಕ್ಯಾಪ್ಟನ್ ಅವರು ಸಹ ನಿಧನ ಹೊಂದಿದ್ದಾರೆ.
ಕಳೆದ ಆಗಸ್ಟ್ 15ರಂದು ವಿಂಗ್ ಕಮಾಂಡರ್ ವರುಣ್ ಸಿಂಗ್ ಅವರು ಹಗುರ ಯುದ್ಧ ವಿಮಾನ ಸ್ಕ್ವಾರ್ಡನ್ನಲ್ಲಿ ಪೈಲಟ್ ಆಗಿದ್ದರು. ಅವರಿಗೆ ಭಾರತದ ಸಶಸ್ತ್ರ ಪಡೆಗಳಿಗೆ ಶಾಂತಿಕಾಲದಲ್ಲಿ ನೀಡುವ ಮೂರನೇ ಅತ್ಯುನ್ನತ ಗೌರವವಾದ ಶೌರ್ಯಚಕ್ರ ನೀಡಿ ಪುರಸ್ಕರಿಸಲಾಗಿತ್ತು.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನದ ಬಗ್ಗೆ ಭಾರತೀಯ ವಾಯುಸೇನೆ, ಪ್ರಧಾನ ನರೇಂದ್ರ ಮೋದಿ ಟ್ವೀಟ್ ಮಾಡಿ, ಸಂತಾಪ ಸೂಚಿಸಿದ್ದಾರೆ.