ಬೆಂಗಳೂರು: ನಾ ಚಿವುಟಿದಂತೆ ಮಾಡುತ್ತೇನೆ ನೀ ಅತ್ತಂತೆ ಮಾಡು ಎನ್ನುವ ಈ ಆಡು ಮಾತು ತೆನೆಹೊತ್ತ ಮಹಿಳೆಗೆ ಅನ್ವಯವಾಗುತ್ತದೆ. ಆಗಾಗ್ಗೆ ಇದು ಜೆಡಿಎಸ್‌ನ ರಾಷ್ಟ್ರಾಧ್ಯಕ್ಷರೂ ಆಗಿರುವ ಸಂಸದ ಹೆಚ್.ಡಿ.ದೇವೇಗೌಡರಿಗೂ, ತೆನೆಹೊತ್ತ ಮಹಿಳೆಯ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯದ ನಡೆನುಡಿಗೆ ಅನ್ವರ್ಥಕವಾಗುತ್ತದೆ. ನಾ
ಇವರ ಮನೆ ರಾಜಕಾರಣಕ್ಕೋ ಅಥವಾ ಇನ್ಯಾವುದೇ ವಿಷಯದ ರಾಜಕಾರಣಕ್ಕೋ ತೊಂದರೆ ಆದಾಗಲೆಲ್ಲವೂ, ಆಗುವಂತೆ ಕಂಡುಬಂದಾಗಲೂ, ಇನ್ನು ಅವರ ನಿರೀಕ್ಷೆಗಳಿಗೆ ತಕ್ಕಂತೆ ಏನೂ ನಡೆಯದೇ ಇದ್ದಾಗಲೂ ದೊಡ್ಡಗೌಡರದ್ದು ಒಂದು ಮೇಲ್ನೋಟದ ಪೊಲಿಟಿಕಲ್ ಸ್ಟೇಟ್ಮೆಂಟಾದ್ರೆ, ಇನ್ನೊಂದು ರೀತಿಯ ಸ್ಟೇಟ್ಮೆಂಟ್ ಈ ಮಾಜಿ ಸಿಎಂ ಕುಮಾರಸ್ವಾಮಿ ಅವರದ್ದು. ಹಂಗಂತ ಯಾವುದೇ ವಿಚಾರ ಇವರಿಗೆ ಗೊತ್ತಿಲ್ಲಾಂತಲ್ಲ. ಈ ಇಬ್ಬರೂ ಒಂದೇ ಸಲಕ್ಕೆ ಸ್ಟೇಟ್ಮೆಂಟ್ಗಳನ್ನು ಒಟ್ಟಾಗಿ ಕೊಡುವುದು ಅಪರೂಪವೇ, ನಾ ಕೊಟ್ಟಾಗ ಏನಾಗುತ್ತದೆ? ನೀ ಕೊಟ್ಟಾಗ ಏನಾಗುತ್ತದೆ? ಎಂದು ರಾಜಕೀಯದಲ್ಲಿ ಕಾದುನೋಡಿ ಬೆಳವಣಿಗೆಗಳು ತಮ್ಮ ನಿರೀಕ್ಷೆಗೆ ಆಗುವಂತೆ ಮಾಡಿಕೊಳ್ಳುವುದು ಇವರ ರಾಜಕೀಯದ ಒಳಗುಟ್ಟು ಎನ್ನುವುದು ಬಹುತೇಕರಿಗೆ ತಿಳಿಯದೇ ಇರುವ ವಿಷಯವೇನಲ್ಲ.
ಇತ್ತೀಚೆಗೆ ಇಂತಹದ್ದೇ ಹೈಡ್ರಾಮಾ ಜೆಡಿಎಸ್‌ನಲ್ಲಿ ನಡೆಯಿತು. ಅದೂ ಕೂಡ ಎನ್ ಡಿಎ ಒಕ್ಕೂಟ ಸೇರಿದ ಮೇಲೆ ಅಯ್ಯಯ್ಯೋ ನಮ್ಮ ಕಾರ್ಯಕರ್ತರನ್ನು ಬಿಜೆಪಿ ಪರಿಗಣಿಸುತ್ತಲೇ ಇಲ್ಲ, ಲೋಕಸಭಾ ಕ್ಷೇತ್ರಗಳ ಪಟ್ಟಿ ಬಿಡುವಾಗ ನಮ್ಮತ್ತ ಬಿಜೆಪಿಯ ಕೇಂದ್ರದ ವರಿಷ್ಠರುಯ ಮೂಸು ನೋಡಿಲ್ಲಾಂತ ಗೊಳೋ ಎಂದು ಸುದ್ದಿಗೋಷ್ಠಿ ಆಗಿ,ಮೈತ್ರಿಯಲ್ಲಿ ಬಿರುಕು ಎಂಬ ಸುದ್ದಿಯೂ ಆಗಿಹೋಯಿತು.
ಅದು ಸರಿ,ಇಷ್ಟೆಲ್ಲಾ ನಾಟಕ ಆಗಿದ್ದು ಬೇರೆ ಯಾವುದಕ್ಕೂ ಅಲ್ಲ, ಕೋಲಾರದ ಲೋಕಸಭಾ ಕ್ಷೇತ್ರದ ಟಿಕೆಟ್ ತಮ್ಮ ಬುಟ್ಟಿಯಲ್ಲಿ ಬೀಳಬೇಕು ಎಂದಷ್ಟೇ. ಮೊದಲೇ ನಡೆದ ಮಾತುಕತೆಯಂತೆ ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಜೆಡಿಎಸ್‌ನ ಪಾಲಿನವು ಎಂದಾಗಿತ್ತು. ಬಳಿಕ ಕೋಲಾರಕ್ಕೆ ತನೆಹೊತ್ತ ಮಹಿಳೆ ಆಸೆಪಟ್ಟಿದ್ದು. ಕಳೆದ ಬಾರಿ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದರೂ ರಾಜಕೀಯಕ್ಕೆ ಇದು ಗೆಲ್ಲುವ ಮುಖವಲ್ಲ ಎಂಬುದು ಸಾಬೀತಾಯಿತು. ಅಂಬೀ ಅನುಕಂಪದ ಅಲೆಯಲ್ಲಿ ಬಿಜೆಪಿ ಬೆಂಬಲದಿಂದ ಪರೋಕ್ಷವಾಗಿ ಅಲ್ಲಲ್ಲಿ ಸ್ವಲ್ಪ ಕಾಂಗ್ರೆಸ್ ಬೆಂಬಲದಿಂದಲೂ ಪಕ್ಷೇತರ ಗೆದ್ದು ಸಂಸದೆಯಾಗಿದ್ದು ಕಳೆದ ಇತಿಹಾಸ. ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು ದೊಡ್ಡಗೌಡರು ದೆಹಲಿ ಸೇರಿ ಆಯಿತು. ಕೇಳಿದ್ದು ಮೂರು ಅಲ್ಲವಾ ಈಗ ನಾಲ್ಕಾಗಬಾರದು ಎಂದು ಕಮಲ ಚಿಹ್ನೆಯನ್ನು ಡಾಕ್ಟರ್‌ಗೆ ಕೊಡಿಸಿಯೂ ಆಯಿತು.
ಯಾವಾಗ ಕೋಲಾರದಲ್ಲಿ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ,ನಾ ಕೊಡಲು ಒಲ್ಲೆ ಎಂದು ಬಿಗಿಪಟ್ಟು ಹಿಡಿದರೋ ನೋಡಿ,ಅದಕ್ಕೆ ತಕ್ಕಮಟ್ಟಿಗೆ ಕೇಂದ್ರದ ಬಿಜೆಪಿ ವರಿಷ್ಠರು ಹುಂ ಅಂದಿದ್ದರು. ಆಗ ಎನ್‌ಡಿಎ ಒಕ್ಕೂಟದಲ್ಲಿ ಮೈತ್ರಿಯಲ್ಲಿ ಬಿರುಕು , ನಮ್ಮ ಕಾರ್ಯಕರ್ತರಿಗೆ ಬೆಲೆಯಿಲ್ಲಾಂತ ತೆನೆ ಹೊತ್ತ ಮಹಿಳೆಯ ನಾಯಕರು ವರಸೆ ಶುರುವಿಟ್ಟುಕೊಂಡು ಸುದ್ದಿಗೋಷ್ಠಿ ನಡೆಸಿ, ಜೆಡಿಎಸ್ ಕಾರ್ಯಕರ್ತರಿಗೆ ಬಿಜೆಪಿ ಬೆಲೆ ಕೊಡುತ್ತಿಲ್ಲಾ ಎಂದುಬಿಟ್ಟರು.ಎಲ್ಲಿ ಇದು ಉಲ್ಟಾ ಹೊಡೆದು ಕಾರ್ಯಕರ್ತರಲ್ಲಿ ಎಡವಟ್ಡಾಗಿ ಕಮಲಕ್ಕೆ ಹೊಡೆತ ಬೀಳುತ್ತದೆಯೋ ಎನ್ನುವ ಲೆಕ್ಕಾಚಾರವನ್ನು ಅರಿತ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಮುನಿಸ್ವಾಮಿಯನ್ನು ದೆಹಲಿಯಲ್ಲಿ ಭೇಟಿ ಮಾಡಿ, ಈಗ ಸುಮ್ಮನಿರಪ್ಪಾ, ಜೆಡಿಎಸ್‌ಗೆ ಬಿಟ್ಟುಕೊಡು. ನಿನಗೆ ಪಕ್ಷ ಅನ್ಯಾಯ ಮಾಡುವುದಿಲ್ಲ ಎಂದು ಭರವಸೆ ನೀಡಿದ ಮೇರೆಗೆ, ತೆನೆಹೊತ್ತ ಮಹಿಳೆಯ ಪಾಲಿಗೆ ಚಿನ್ನದ ಗಣಿಯ ನಾಡು ಕೋಲಾರ ಹೋಗೇಬಿಡ್ತು. ತೆನೆಹೊತ್ತ ಮಹಿಳೆ ನಕ್ಕು ಬಿಟ್ಟಳು.
ಇನ್ನು ಕೋಲಾರದಿಂದ ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಅವರು ಎನ್ಡಿರ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎಂದು ಮೂಲಗಳು ತಿಳಿಸಿವೆ.
ಮಂಡ್ಯದಿಂದ ಮೊದಲೇ ಹೇಳಿದಂತೆ ನೀವು ನಿರೀಕ್ಷಿಸಿದ ಅಭ್ಯರ್ಥಿಯೇ ಹಾಕುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದಂತೆ, ಅವರೇ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಬದಲಾದ ರಾಜಕೀಯ ಲೆಕ್ಕಾಚಾರ ಎಲ್ಲವನ್ನೂ ಬದಲಾಯಿಸಿಬಿಡುತ್ತದೆ ಅಲ್ಲವೇ..!?