ಬೆಂಗಳೂರು: ಡೋಲೋ-650 ಮಾತ್ರೆ ತಯಾರಿಕಾ ಸಂಸ್ಥೆಯಾದ ಮೈಕ್ರೋ ಲ್ಯಾಬ್ಸ್ ಫಾರ್ಮಾ ಸಂಸ್ಥೆ ಮೇಲೆ ಐಟಿ ದಾಳಿ ನಡೆಸಿದ್ದು, ಆದಾಯ ತೆರಿಗೆ ವಂಚನೆ ಆರೋಪದಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ. ಬೆಳ್ಳಂಬೆಳಗ್ಗೆ ಏಕಕಾಲಕ್ಕೆ 40 ಕಡೆಗಳಲ್ಲಿ 200 ಐಟಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಮೈಕ್ರೋ ಫಾರ್ಮಾ ಸಂಸ್ಥೆ ನೂರಾರು ಕೋಟಿ ಮೌಲ್ಯದ ಡೋಲೋ-650 ಮಾತ್ರೆ ಮಾರಾಟ ಮಾಡುವ ಮೂಲಕ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿತ್ತು. ಆ ವೇಳೆ ತೆರಿಗೆ ವಂಚಿಸಿದ್ದ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಇಂದು(ಜುಲೈ 06) ಬೆಳಗ್ಗೆ 7.45ರ ಸುಮಾರಿಗೆ 20ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೈಕ್ರೋ ಫಾರ್ಮಾ ಕೇಂದ್ರ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಕೇಂದ್ರ ಕಚೇರಿ ಅಲ್ಲದೆ, ತಮಿಳುನಾಡು, ಗೋವಾ, ಪಂಜಾಬ್, ಮುಂಬೈ, ದೆಹಲಿ, ಸಿಕ್ಕಿಂ ಸೇರಿದಂತೆ ದೇಶದ 40 ಕಡೆಗಳಲ್ಲಿ ದಾಳಿ ನಡೆದಿದೆ. ಮೈಕ್ರೋ ಫಾರ್ಮಾ ಸಂಸ್ಥೆಯ ಸಿಎಂಡಿ ದಿಲೀಪ್ ಸುರಾನಾ, ಡೈರೆಕ್ಟರ್ ಆನಂದ್ ಸುರಾನ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಅಲ್ಲದೆ, ಕಾರ್ಖಾನೆ, ಕಚೇರಿ ಸೇರಿದಂತೆ, ಕಚೇರಿಯ ಸಿಬ್ಬಂದಿಗಳ ಮನೆಯ ಮೇಲೆಯೂ ಐಟಿ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಕೊರೊನಾ ಸಾಂಕ್ರಮಿಕತೆ ಉತ್ತುಂಗದಲ್ಲಿದ್ದ ಮೊದಲ ಮತ್ತು ಎರಡನೇ ಅಲೆಯ ವೇಳೆ ಅತಿಹೆಚ್ಚು ಮಾರಾಟವಾದ ಡೋಲೊ-650 ಮಾತ್ರೆಯನ್ನು ಇದೇ ಫಾರ್ಮಾ ಸಂಸ್ಥೆ ತಯಾರಿಸುತ್ತದೆ. ಆದಾಯಕ್ಕೆ ತಕ್ಕಷ್ಟು ತೆರಿಗೆ ಪಾವತಿ ಮಾಡಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ.
ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ಮಾತ್ರೆಗಳಲ್ಲಿ ಡೋಲೋ-650 ಮಾತ್ರೆಯೂ ಒಂದು. ಕೊರೊನಾ ಸಂದರ್ಭದಲ್ಲಿ 350 ಕೋಟಿ ರೂಪಾಯಿ ಮೌಲ್ಯದ ಡೋಲೋ ಮಾತ್ರೆ ಮಾರಾಟವಾಗಿತ್ತು ಎನ್ನಲಾಗಿದೆ. ಮೈಕ್ರೋ ಲ್ಯಾಬ್ಸ್ ಕಂಪನಿ ಇದರಿಂದ 570 ಕೋಟಿ ರೂ. ಆದಾಯಗಳಿಸಿತ್ತು. ಆದರೆ ಈ ದೊಡ್ಡಮಟ್ಟದ ಆದಾಯಕ್ಕೆ ತೆರಿಗೆ ಪಾವತಿ ಮಾಡಿರಲಿಲ್ಲ ಎನ್ನಲಾಗಿದೆ.