ಮಕ್ಕಳಲ್ಲಿ ಓದುವ ಹವ್ಯಾಸ ಉತ್ತೇಜಿಸಲು ʼನಾನು ಓದುವ ಪುಸ್ತಕ ʼಅಭಿಯಾನ:ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಗ್ರಂಥಾಲಯಕ್ಕೆ ಭೇಟಿ ನೀಡುವ ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಉತ್ತೇಜಿಸಲು 2023ರ ಸೆಪ್ಟೆಂಬರ್ ಮಾಹೆಯಲ್ಲಿ ʼನಾನು ಓದುವ ಪುಸ್ತಕʼ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಮಕ್ಕಳ ಹೆಸರನ್ನು ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಪ್ರದರ್ಶಿಸಲಾಗುವುದು. ಗ್ರಂಥಾಲಯಕ್ಕೆ ಭೇಟಿ ನೀಡುವ ಮಕ್ಕಳು ಪುಸ್ತಕವನ್ನು ಓದಲು ಗ್ರಂಥಾಲಯ ಮೇಲ್ವಿಚಾರಕರು ಪ್ರೋತ್ಸಾಹಿಸುತ್ತಾರೆ. ಮಕ್ಕಳು ಪುಸ್ತಕವನ್ನು ಓದಿ ಮುಗಿಸಿದ ನಂತರ ತಾವು ಓದಿದ ಪುಸ್ತಕಗಳ ಬಗ್ಗೆ ಸೂಚನೆಗಳಂತೆ ಮಾಹಿತಿ ಒದಗಿಸಬೇಕು. ಮಕ್ಕಳು ಓದಿದ ಪುಸ್ತಕಗಳ ಸಂಖ್ಯೆಯನ್ನು ಗ್ರಂಥಾಲಯದಲ್ಲಿ ಪ್ರದರ್ಶಿಸಲಾಗುವುದು. ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಪುಸ್ತಕಗಳನ್ನು ಓದಿದ ಮಕ್ಕಳ ಹೆಸರುಗಳನ್ನು ತಿಂಗಳ ಕೊನೆಯ ದಿನದಂದು ಘೋಷಿಸಲಾಗುವುದು ಎಂದು ಹೇಳಿರುವ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣ ಮಕ್ಕಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳುವಂತಾಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ:ಏಮ್ಸ್ ಸ್ಥಾಪನೆಗೆ ಕಲ್ಯಾಣ ಕರ್ನಾಟಕ ಭಾಗದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು – ಪ್ರಿಯಾಂಕ್‌ ಖರ್ಗೆ

ಮಕ್ಕಳನ್ನು ಓದುವುದರಲ್ಲಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯದಾದ್ಯಂತ ‘ಓದುವ ಬೆಳಕು’ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳನ್ನು ವಿಶೇಷವಾಗಿ ಗ್ರಾಮೀಣ ಮಕ್ಕಳನ್ನು ವ್ಯವಸ್ಥಿತವಾಗಿ ಕಲಿಕಾ ಕ್ಷೇತ್ರಕ್ಕೆ ತರುವ ಹಾಗೂ ನಿರಂತರತೆಯನ್ನು ಕಾಪಾಡುವ ಗುರಿಯನ್ನು ಹೊಂದಲಾಗಿದೆ.

ಗ್ರಂಥಾಲಯಗಳನ್ನು ಗ್ರಾಮೀಣ ಅರಿವು ಕೇಂದ್ರಗಳನ್ನಾಗಿಸಲು ಗ್ರಂಥಾಲಯಗಳ ನವೀಕರಣ, ಡಿಜಿಟಲೀಕರಣ ಸೇರಿದಂತೆ ವಿವಿಧ ಕ್ರಮಗಳನ್ನು ಈಗಾಗಲೆ ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಸಚಿವರು ʼಓದುವ ಬೆಳಕುʼ ಕಾರ್ಯಕ್ರಮದಡಿ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಹಲವಾರು ಅಭಿಯಾನಗಳ ಮೂಲಕ ಪ್ರತಿ ತಿಂಗಳು ಉಪಯುಕ್ತ ಚಟುವಟಿಕೆಯನ್ನು ಆಯೋಜಿಸುವ ಮೂಲಕ ಗ್ರಂಥಾಲಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು.

 

Donate Janashakthi Media

Leave a Reply

Your email address will not be published. Required fields are marked *