ತುಮಕೂರು: ಮಾಂಸ ತಿನ್ನದವರು ತರಕಾರಿ ಯಾಕೆ ತಿನ್ನುತ್ತಾರೆ, ಹಾಗೆ ಇದ್ದುಬಿಡಬಹುದಲ್ಲವೆ? ಸಸ್ಯಕ್ಕೆ ಕೂಡಾ ಜೀವ ಇರುತ್ತದೆ. ಗೋ ಪೂಜೆಯನ್ನು ನಾನು ಕೂಡಾ ಮಾಡಿದ್ದೆ. ಆದರೆ ಆರ್ಥಿಕತೆಯೆ ಬೇರೆ, ನಂಬಿಕೆಯೆ ಬೇರೆ. ಅವೆರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲು ಆಗುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಗುರುವಾರ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸಂವಿಧಾನದ 25ನೇ ವಿಧಿ ತಮಗೆ ಬೇಕಾದ ಧರ್ಮವನ್ನು ಆಚರಣೆ ಮಾಡಬಹುದು ಎಂದು ಹೇಳುತ್ತದೆ. ಆದರೆ ಬಿಜೆಪಿಯವರು ಮತಾಂತರ ವಿರೋಧಿ ಕಾನೂನು ತಂದರು. ಈ ಕಾನೂನು ಸಂವಿಧಾನಕ್ಕೆ ವಿರುದ್ಧವಾಗಿದೆ. ಅದನ್ನು ನಾವು ವಿರೋಧ ಪಕ್ಷವಾಗಿದ್ದಂದಿನಿಂದಲೂ ಹೇಳುತ್ತಲೆ ಬಂದಿದ್ದೇವೆ. ಅದನ್ನು ಈಗ ನಾವು ವಾಪಾಸು ಪಡೆಯುತ್ತೇವೆ ಎಂದು ಹೇಳಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂಚಾರಿ ಸಮಸ್ಯೆ ಮುಕ್ತ ನಗರ ಗುರಿ, ಡ್ರೋಣ್ ಬಳಕೆಗೆ ಸರ್ಕಾರ ಮುಂದು:ಡಾ.ಜಿ.ಪರಮೇಶ್ವರ್
“ಮಾಂಸ ತಿನ್ನದವರು ತರಕಾರಿ ಯಾಕೆ ತಿನ್ನುತ್ತಾರೆ, ಹಾಗೆ ಇದ್ದುಬಿಡಬಹುದಲ್ಲವೆ? ಸಸ್ಯಕ್ಕೆ ಕೂಡಾ ಜೀವ ಇರುತ್ತದೆ. ನಾನು ಕೂಡಾ ಹಿಂದೂ ಧರ್ಮದವನೇ. ಗೋ ಪೂಜೆಯನ್ನು ನಾನು ಕೂಡಾ ಮಾಡಿದ್ದೆ. ಆದರೆ ಆರ್ಥಿಕತೆಯೆ ಬೇರೆ, ನಂಬಿಕೆಯೆ ಬೇರೆ. ಅವೆರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲು ಆಗುವುದಿಲ್ಲ” ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.
ಈ ಮೂಲಕ ರೈತ ವಿರೋಧಿ ಗೋಹತ್ಯೆ ನಿಷೆಧ ಕಾಯ್ದೆ ಹಾಗೂ ಸಂವಿಧಾನ ವಿರೋಧಿ ಮತಾಂತರ ನಿಷೇಧ ಕಾಯಿದೆಯನ್ನು ವಾಪಸ್ ಪಡೆಯುವ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಸೂಚನೆ ನೀಡಿದ್ದಾರೆ.