ಹಾವೇರಿ: ಕಾಂಗ್ರೆಸ್ ನವರು ಲಂಬಾಣಿ ಸಮುದಾಯದ ಮೀಸಲಾತಿಯನ್ನು ಕಡಿಮೆ ಮಾಡಿದ್ದಾರೆ. ನಾನು ನಿಮ್ಮ ಸಹೋದರನಾಗಿ ಸಮುದಾಯಕ್ಕೆ ಸಿಗಬೇಕಾದ ನ್ಯಾಯಯುತ ಮೀಸಲಾತಿ ಕೊಡಿಸಲು ಬದ್ದನಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಬಂಜಾರ ಸಮುದಾಯದ ಕೃಷ್ಣಾಪುರ ಮಠದ ಆವರಣದಲ್ಲಿ ಲಂಬಾಣಿ ಸಮುದಾಯದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಅತ್ಯಂತ ಕಟ್ಟಕಡೆಯ ಸಮಾಜದ ಧ್ವನಿ ಕೇಳಬೇಕು. ಅದು ಕೇಳಲು ಸಮಾಜ ಸಂಘಟನೆ ಆಗಬೇಕು.
ಈ ಸಮಾಜ ದೇವರ ವರದಾನ ಇರುವ ಸಮಾಜ, ಸಂತ ಸೇವಾಲಾಲ್ ಅಶೀರ್ವಾದ ಇರುವ ಸಮಾಜ, ಅತ್ಯಂತ ಕಷ್ಟದಲ್ಲಿರುವ ಜನರು ನೀವು. ನೀವು ಬಹಳ ಕಷ್ಟಪಟ್ಟು ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದ್ದೀರಿ, ಅವರಿಗೆ ಅವಕಾಶ ಕೊಟ್ಟರೆ ದೊಡ್ಡ ಸ್ಥಾನಗಳನ್ನು ಪಡೆಯುತ್ತಾರೆ. ಸರ್ಕಾರ ಕೈ ಹಿಡಿದರೆ ಈ ಸಮುದಾಯದ ಯುವಕರು ಉನ್ನತ ಸ್ಥಾನ ಪಡೆಯುತ್ತಾರೆ ಎಂದರು.
ಇದನ್ನೂ ಓದಿ: ಹಾವೇರಿಯಲ್ಲಿ ವ್ಯಾಪಾರೋದ್ಯಮ ಬೆಳೆಯಲು ಬಣಜಿಗ ಸಮಾಜದ ಕೊಡುಗೆ ದೊಡ್ಡದು: ಬಸವರಾಜ ಬೊಮ್ಮಾಯಿ
ದೇಶದ ಎಲ್ಲ ಭಾಗಗಳಲ್ಲಿ ಇರುವ ಕೆಲವೇ ಕೆಲವು ಸಮುದಾಯಗಳಲ್ಲಿ ಬಂಜಾರ ಸಮುದಾಯವೂ ಒಂದು. ಈ ಸಮುದಾಯ ಮುಂದೆ ಬರಲು ವಿದ್ಯೆ ಮತ್ತು ಉದ್ಯೋಗದಲ್ಲಿ ಅವಕಾಶ ದೊರೆಯಬೇಕು. ಈ ಸಮುದಾಯ ಅಂಬೆಡ್ಕರ್ ರನ್ಮು ನೆನಪಿಡಬೇಕು. ಅಂಬೇಡ್ಕರ್ ಎಸ್ಸಿ ಎಸ್ಟಿಗೆ ವಿಶೇಷ ಮೀಸಲಾತಿ ನೀಡಿ ಅವಕಾಶ ಕೊಟ್ಟರು. ಬಂಜಾರಾ ಸಮಾಜವನ್ನು ಎಸ್ಸಿಗೆ ಸೇರಿಸಿದ್ದು ದೇವರಾಜ ಅರಸರು. ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರು ದೇವರಾಜ ಅರಸರು ಮಾತ್ರ ಎಂದರು.
ಕಾಂಗ್ರೆಸ್ ನ ಒಬ್ಬ ನಾಯಕರು ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಗೆ ಹೋಗಿದ್ದರು. ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ಅಭಿಪ್ರಾಯ ಕೇಳಿತ್ತು ನಾನು ಸಮುದಾಯದ ಬಗ್ಗೆ ಮೈಸೂರು ಮಹಾರಾಜರ ಕಾಲದಿಂದ ಸಂಪೂರ್ಣ ಅಧ್ಯಯನ ಮಾಡಿ ಈ ಸಮುದಾಯ ಎಸ್ಸಿಯಲ್ಲಿ ಇರಬೇಕು ಎಂದು ಆದೇಶ ಮಾಡಿದ್ದೇನೆ. ಅದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದರು.
ತಾಂಡಾ ಅಭಿವೃದ್ಧಿ ಗೆ ಬಿಜೆಪಿ ಕಾರಣ
ಲಂಬಾಣಿ ತಾಂಡಾಗಳ ಅಭಿವೃದ್ದಿಗೆ ಬಿಜೆಪಿ ಕಾರಣ. ಯಡಿಯೂರಪ್ಪ ಸಿಎಂ ಆಗಿದ್ದಾಗ ತಾಂಡಾ ಅಭಿವೃದ್ಧಿ ನಿಗಮ ಮಾಡಿದ್ದೇವೆ. ನಾವು ಲಂಬಾಣಿ ಸಮುದಾಯದ ಮೀಸಲಾತಿಯನ್ನು 4.5 ಕ್ಕೆ ಹೆಚ್ಚಿಗೆ ಮಾಡಿದ್ದೇವೆ. ಕಾಂಗ್ರೆಸ್ ಅದನ್ನು 3% ಕ್ಕೆ ಇಳಿಸಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಬೇಕು ಎಂದು ಹೇಳಿದರು.
ಎಲ್ಲಾ ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಆಗಬೇಕು. ಕೇಂದ್ರ ರಾಜ್ಯದ ಎಲ್ಲ ಯೋಜನೆಗಳು ತಾಂಡಾಗಳಿಗೆ ಬರಬೇಕು ಇದು ನನ್ನ ಬದ್ದತೆ. ನಾನು ಬಂಜಾರ ಸ್ವಾಮೀಜಿ ಶ್ರೀ ಕುಮಾರ ಮಹಾರಾಜರ ಆಶೀರ್ವಾದ ಪಡೆದಿದ್ದೇನೆ. ಅವರು ಸಮಾಜದ ಅಭಿವೃದ್ಧಿ ಆಗಬೇಕು ಅಂತ ಹೇಳಿದ್ದಾರೆ. ನಾನು ಈ ಸಮುದಾಯದ ಸೋದರನಾಗಿ ಜೊತೆಯಲ್ಲಿರುತ್ತೇನೆ. ವಿಶೇಷವಾಗಿ ತಾಯಂದಿರು ಮುಖ್ಯವಾಹಿನಿಗೆ ಬರಬೇಕು. ನಿಮ್ಮ ಕೌಶಲ್ಯವನ್ನು ವಿಶ್ವಕ್ಕೆ ಪರಿಚಯಿಸಿ, ವಿಶೇಷ ಕಾರ್ಯಕ್ರಮ ರೂಪಿಸಿ ನಿಮ್ಮ ಆದಾಯ ಹೆಚ್ಚಳ ಮಾಡುವ ಎಲ್ಲ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಹೋದರನಾಗಿ ಲೋಕಸಭೆಯಲ್ಲಿ ಧ್ವನಿ ಎತ್ತುತ್ತೇನೆ ಎಂದು ಹೇಳಿದರು.
ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸಮಾವೇಶಕ್ಕೂ ಮುನ್ನ ಬಂಜಾರ ಸಮುದಾಯದ ಸ್ವಾಮೀಜಿ ಮಹಾನ್ ತಪಸ್ವಿ ಡಾ. ಶ್ರೀ ಕುಮಾರ ಮಹಾರಾಜರ ಆಶೀರ್ವಾದ ಪಡೆದರು.
ಸಮಾವೇಶದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಬಸವರಾಜ ನಾಯಕ್ , ಹಾವೇರಿ ಬಿಜೆಪಿ ಮುಖಂಡ ಗವಿಸಿದ್ದಪ್ಪ, ಶಿವಣ್ಣ ಲಮಾಣಿ, ಹನುಮಂತಪ್ಪ ಲಮಾಣಿ, ಮಲ್ಲೇಶಪ್ಪ ಲಮಾಣಿ, ರಮೇಶ ಲಮಾಣಿ, ಪುಂಡಲಿಕ್ ಲಮಾಣಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಲಲಿತಾ ಲಮಾಣಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಇದನ್ನೂ ನೋಡಿ: ಶಿವಮೊಗ್ಗ ಲೋಕಸಭಾ ಕ್ಷೇತ್ರ : ಬಿಜೆಪಿ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ, ಯಾರ ಮತಬುಟ್ಟಿಗೆ ಕೈ ಹಾಕ್ತಾರೆ ಈಶ್ವರಪ್ಪ?