ಪಾಪದ ಹೊರೆ ಇಳಿಸಿಕೊಳ್ಳಲು ಪ್ರಾಯಶ್ಚಿತ್ತ ಸತ್ಯಾಗ್ರಹವನ್ನು ಕೈಗೊಂಡಿದ್ದೇನೆ : ಬಿಜೆಪಿ ವಿರುದ್ದ ಹಳ್ಳಿಹಕ್ಕಿ ಬೇಸರ

ಕೆ.ಶಶಿಕುಮಾರ್ ಮೈಸೂರ್

ಮೈಸೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ ಅನ್ನು ಬೆಂಬಲಿಸುತ್ತೇನೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ಬರಲು ನಾನು ಪ್ರಮುಖ ಕಾರಣನಾದ ಬಗ್ಗೆ ನನಗೆ ಅತೀವ ನೋವಿದೆ. ಆ ತಪ್ಪು ಮಾಡಿದ ನನ್ನನ್ನು ನನ್ನ ಅಂತರಾತ್ಮ ತಿವಿಯುತ್ತಲೇ ಇದೆ. ಈ ಪಾಪಪ್ರಜ್ಞೆ ನನ್ನನ್ನು ಕೊನೆ ತನಕವೂ ಕಾಡುತ್ತಲೇ ಇರುತ್ತದೆ. ಹೀಗಾಗಿ ಆ ಪಾಪದ ಹೊರೆಯನ್ನು ಇಳಿಸಿಕೊಳ್ಳಲೇಬೇಕಾದ ಅಗತ್ಯ ಇದ್ದುದರಿಂದ ಇಂದು ಪ್ರಾಯಶ್ಚಿತ್ತ ಸತ್ಯಾಗ್ರಹ ನಡೆಸಿದ್ದೇನೆ ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್.ವಿಶ್ವನಾಥ್‌ ಬೇಸರ ವ್ಯಕ್ತಪಡಿಸಿದರು.

ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪುತ್ಥಳಿಯ ಬಳಿ ವಿವಿಧ ಸಂಘಟನೆಗಳ ನಾಯಕರು, ಕಾಂಗ್ರೆಸ್‌ ಮುಖಂಡರು, ಚಿಂತಕರು, ಅಭಿಮಾನಿಗಳ ಜೊತೆಗೂಡಿ  ಪ್ರಾಯಶ್ಚಿತ್ತ ಸತ್ಯಾಗ್ರಹ ನಡೆಸಿದ ಅವರು ಕೆಲವರು ನೀವು ಬಿಜೆಪಿಯಿಂದ ವಿಧಾನ ಪರಿಷತ್‌ ಸದಸ್ಯರಾಗಿದ್ದೀರಿ ಎಂದು ಹೇಳುತ್ತಿದ್ದಾರೆ. ಆದರೆ ನಾನು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕೋಟಾದ ಅಡಿಯಲ್ಲಿ ವಿಧಾನಸಭಾ ಸದಸ್ಯನಾಗಿದ್ದೇನೆಯೇ ಹೊರತು ಬಿಜೆಪಿ ಬಲದಿಂದ ಅಲ್ಲ. ನಾನು ರಾಜ್ಯಪಾಲರಿಂದ ನಾಮಕರಣಗೊಂಡ ಸದಸ್ಯನಾಗಿರುವುದರಿಂದ ಸ್ವತಂತ್ರನಾಗಿದ್ದೇನೆ. ನಾನು ಯಾವುದೇ ಪಕ್ಷದ ಸಿದ್ಧಾಂತಕ್ಕೂ ಸೇರಿದವನಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ರಕ್ತದ ಕಣ ಕಣದಲ್ಲೂ ಕಾಂಗ್ರೆಸ್, ಬಿಜೆಪಿ ತೊರೆಯಲು ಸಿದ್ಧ- ಹೆಚ್ ವಿಶ್ವನಾಥ್

ನಾನೀಗ ಸ್ವಚ್ಛಂದವಾಗಿ ಹಾರಾಡುವ ಅಪ್ಪಟ ಹಳ್ಳಿ ಹಕ್ಕಿ :
ನಾನೀಗ ಸಂಪೂರ್ಣ ಸ್ವತಂತ್ರನಾಗಿದ್ದೇನೆ. ನಾನೀಗ ಸ್ವಚ್ಛಂದವಾಗಿ ಹಾರಾಡುವ ಅಪ್ಪಟ ಹಳ್ಳಿಯ ಹಕ್ಕಿ. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ನನಗೆ ತಾಯಿಯಂತಿರುವ ಕಾಂಗ್ರೆಸ್‌ ಪಕ್ಷವನ್ನು ನನ್ನಂತೆಯೇ ಯೋಚಿಸುವ ಅಭಿಮಾನದ ಸ್ನೇಹಿತ ವಲಯದೊಂದಿಗೆ ಬೆಂಬಲಿಸಲು ತೀರ್ಮಾನಿಸಿದ್ದೇನೆ ಎಂದು ಅವರು ಹೇಳಿದರು.

ಮಾತೃಪಕ್ಷವಾದ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದೇನೆ :
ಐವತ್ತು ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿಯೇ ಇದ್ದ ನಾನು ಕೆಲವೊಂದು ನೋವಿನ ಸಂದರ್ಭಗಳಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಜೆಡಿಎಸ್‌ ಸೇರಿದೆ. ಆದರೆ ಅಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದೆ. ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇದ್ದುದರಿಂದ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಪೂರಕವಾಗಬಹುದು ಎಂಬ ಆಸೆಯಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣನಾದೆ. ಆದರೆ ಇದೊಂದು ಐತಿಹಾಸಿಕ ಪರಮ ಭ್ರಷ್ಟ ಸರ್ಕಾರ ಎಂಬ ಟೀಕೆಗೆ ಗುರಿಯಾಯಿತು. ಈ ಕಾರಣದಿಂದ ನಾನು ಪಶ್ಚಾತ್ತಾಪಪಟ್ಟು ಬಿಜೆಪಿ ಎಂಬ ಭ್ರಮೆಯಿಂದ ಹೊರಬಂದು ನನ್ನ ಮಾತೃಪಕ್ಷವಾದ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಪ್ರಾಯಶ್ಚಿತ್ತ ಸತ್ಯಾಗ್ರಹದಲ್ಲಿ ರಂಗಾಯಣದ ಮಾಜಿ ನಿರ್ದೇಶಕ ಬಸವಲಿಂಗಯ್ಯ, ಸಾಹಿತಿ ಕೆ.ಎಸ್.ಭಗವಾನ್‌, ಮುಖಂಡರಾದ ಕೆ.ಎಸ್.ಶಿವರಾಂ, ಕ.ರಾ.ಗೋಪಾಲಕೃಷ್ಣ ಮುಂತಾದವರು ಪಾಲ್ಗೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *