ಬೆಂಗಳೂರು: ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಉದ್ಯೋಗ ಮತ್ತು ಐಕ್ಯತೆಗಾಗಿ ಎಂಬ ಘೋಷ ವಾಕ್ಯದೊಂದಿಗೆ ಡಿಸೆಂಬರ್ 13ರಿಂದ 16ರ ವರೆಗೂ ತೆಲಂಗಾಣ ರಾಜ್ಯ ರಾಜಧಾನಿ ಹೈದರಾಬಾದ್ ನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ), ಅಖಿಲ ಭಾರತ ಸಮ್ಮೇಳನ ನಡೆಯುತ್ತಿದೆ.
ಸಮ್ಮೇಳನದ ಭಾಗವಾಗಿ ಹಾಗೂ ಸೌಹಾರ್ದತೆ ರಕ್ಷಣೆಗಾಗಿ ಸದಾ ಮಿಡಿಯುತ್ತಿದ್ದ ಮೂಲಭೂತವಾದಿಗಳಿಂದ ಕೊಲೆಯಾದ ಇಂಜಿನಿಯರಿಂಗ್ ವಿದ್ಯಾರ್ಥಿ ಎಸ್.ಎಫ್.ಐ. ಮುಖಂಡ ಧೀರಜ್ ಅವರ ನೆನಪಾರ್ಥವಾಗಿ ಇಡುಕ್ಕಿ ಜಿಲ್ಲೆಯಿಂದ ಮೈಸೂರಿನ ಮೂಲಕ ಸಮ್ಮೇಳನದ ನಗರ ಹೈದರಾಬಾದಿಗೆ ಹೊರಟಿರುವ ʻಫ್ಯಾಗ್ ಮಾರ್ಚ್ʼ ಅನ್ನು ಇಂದು ಬೆಂಗಳೂರಿನಲ್ಲಿ ಎಸ್.ಎಫ್.ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್ ಸ್ವಾಗತಿಸಿದರು. ಸಮ್ಮೇಳನದ ಉದ್ದೇಶ, ಪ್ರಸ್ತುತ ರಾಜ್ಯ ಮತ್ತು ದೇಶದ ಶೈಕ್ಷಣಿಕ, ರಾಜಕೀಯ ಪರಿಸ್ಥಿತಿಗಳ ಕುರಿತು ಮಾತನಾಡಿದರು.
ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ(ಸಿಇಸಿ) ಆದರ್ಶ್ ಮಾತನಾಡಿ. ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯಿಂದ ಆಗುತ್ತಿರುವ ಶೈಕ್ಷಣಿಕ ಅಸಮಾನತೆ, ಹೊರಳುತ್ತಿರುವ ಧಾರ್ಮಿಕ ಅಸಮಾನತೆ, ಶೈಕ್ಷಣಿಕ ವಿದ್ಯಾರ್ಥಿ ವೇತನಗಳ ಕಡಿತ ಸೇರಿದಂತೆ ಹಲವು ವಿದ್ಯಾರ್ಥಿ ಸಮುದಾಯದ ಜ್ವಲಂತ ಸಮಸ್ಯೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎಫ್.ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಮ್ಯಾಗಳಮನಿ, ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ ಹಾಗೂ ರಾಜ್ಯ ಸಮಿತಿ ಮತ್ತು ಬೆಂಗಳೂರು ಜಿಲ್ಲಾ ಸಮಿತಿ ಮುಖಂಡರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.