ಹೈದರಾಬಾದ್ ವಿಮೋಚನೆ: ನಿಜವಾಗಿ ನಡೆದಿದ್ದೇನು?

-ಸಿ.ಸಿದ್ದಯ್ಯ

ಸೆಪ್ಟೆಂಬರ್ 17 ಒಂದು ಐತಿಹಾಸಿಕ ಸಂದರ್ಭವಾಗಿದೆ. ಈ ದಿನವನ್ನು ಹೈದರಾಬಾದ್ ಕರ್ನಾಟಕ ಮತ್ತು ತೆಲಂಗಾಣ ಜನರು ವಿಮೋಚನಾ ದಿನವನ್ನಾಗಿ ಸಂಭ್ರಮದಿಂದ ಆಚರಿಸುತ್ತಾರೆ. ಇದು ಮುಸ್ಲೀಂ ರಾಜನ ವಿರುದ್ದ ಹಿಂದೂಗಳ ಜಯ ಎಂಬಂತೆ ಆರೆಸ್ಸೆಸ್ ಮತ್ತು ಬಿಜೆಪಿ ಬಿಂಬಿಸುತ್ತಿದ್ದರೆ, ನೆಹರೂ ಮತ್ತು ಸರ್ಧಾರ್ ಪಟೇಲ್  ಸರ್ಕಾರ ನಿಜಾಮರ ವಿರುದ್ದ ಯುದ್ಧ ಮಾಡಿ ಹೈದರಾಬಾದ್  ಪ್ರಾಂತ್ಯವನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಿತು ಎಂದು ಕಾಂಗ್ರೆಸ್  ನವರು ಹೇಳುತ್ತಿದ್ದಾರೆ. ಅಂದಿನ ರಾಜ ನಿಜಾಮ್  ಮತ್ತು ಊಳಿಗಮಾನ್ಯ ಪದ್ದತಿ ಹಾಗೂ ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ಮತ್ತು ಭೂಮಿಗಾಗಿ, ಕೂಲಿ ಹೆಚ್ಚಳಕ್ಕಾಗಿ ಹಾಗೂ ವೆಟ್ಟಿ ಚಾಕರಿ ವಿರುದ್ದ ನಡೆದ ರೈತರ ಸಶಸ್ತ್ರ ಹೋರಾಟ, ಈ ಸಶಸ್ತ್ರ ಹೋರಾಟಕ್ಕೆ ಕಮ್ಯೂನಿಸ್ಟರು ನೀಡಿದ ನಾಯಕತ್ವ, ಇವೆಲ್ಲವೂ ವಿಮೋಚನೆಗೆ ಕಾರಣ ಎಂಬ ನಿಜವಾದ ಇತಿಹಾಸವನ್ನು ಇವರು ಮರೆಮಾಚುತ್ತಿದ್ದಾರೆ. ಸೆಪ್ಟೆಂಬರ್ 17 ರಂದು ನಿಜವಾಗಿ ಏನಾಯಿತು? 

ಇದೇ ಸೆಪ್ಟೆಂಬರ್ 17ರಂದು ಕಾಂಗ್ರೆಸ್ ನೇತೃತ್ವದಲ್ಲಿನ ಕರ್ನಾಟಕ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ “ವಿಮೋಚನಾ ದಿನ”ವನ್ನಾಗಿ ಆಚರಿಸಿತು. ರಾಜ್ಯದ ಮುಖ್ಯ ಮಂತ್ರಿಯಾದಿಯಾಗಿ ಹಲವು ಸಚಿವರು, ಶಾಸಕರು, ಸಂಸದರು ಕಲ್ಯಾಣ ಕರ್ನಾಟಕದ ಹಲವು ಪ್ರದೇಶಗಳಲ್ಲಿ ವಿಮೋಚನಾ ದಿನದಂದು ಸಭೆ ಸಮಾರಾಂಭಗಳಲ್ಲಿ ಭಾಗಿಯಾಗಿದ್ದರು.

ಬಿಜೆಪಿಯು ಎರಡು ತೆಲುಗು ರಾಜ್ಯಗಳಲ್ಲಿ ತನ್ನ ಅನುಯಾಯಿಗಳು ಬಿಡುಗಡೆ ಮಾಡಿದ “ರಜಾಕಾರ” ಎಂಬ ತೆಲುಗು ಚಲನಚಿತ್ರವನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಮೂಲಕ ಅಂದಿನ ಸಶಸ್ತ್ರ ರೈತರ ಹೋರಾಟವನ್ನು ಕೋಮು ಘರ್ಷಣೆ ಎಂದು ಬಿಂಬಿಸಲು ಪ್ರಯತ್ನಿಸಿದೆ. ನಿರಂತರವಾಗಿ ಅದನ್ನೇ ಪ್ರಚಾರ ಮಾಡುತ್ತಿದೆ. ಒಂದು ಧರ್ಮವು ಇನ್ನೊಂದು ಧರ್ಮದಿಂದ ವಿಮೋಚನೆಯನ್ನು ಸಾಧಿಸಿದೆ ಎಂದು ಹೇಳುವ ಮೂಲಕ ಇತಿಹಾಸವನ್ನು ತಿರುಚಲು ಹೊರಟಿದೆ. ಸೆಪ್ಟೆಂಬರ್ 17 ರಂದು ನಿಜವಾಗಿ ಏನಾಯಿತು?

ಮತ್ತೊಂದಡೆ, ಕಾಂಗ್ರೆಸ್  ಪಕ್ಷವು, ಹೈದಾರಾಬಾದ್ ವಿಮೋಚನೆ ನೆಹರೂ ಮತ್ತು ಸರ್ಧಾರ್ ಪಟೇಲ್ ಅವರ ದಿಟ್ಟ ನಿರ್ಧಾರದಿಂದ ಆಗಿದೆ ಎನ್ನುತ್ತಾ, ಅಂದಿನ ನಿಜಾಮರ ದಬ್ಬಾಳಿಕೆ ವಿರುದ್ದ ಮತ್ತು ಊಳಿಗಮಾನ್ಯ ಪದ್ದತಿ, ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ನಡೆದ ತೆಲಂಗಾಣ ರೈತರ ಸಶಸ್ತ್ರ ಹೋರಾಟ, ಈ ಕಾರಣಕ್ಕಾಗಿ ಅಂದಿನ ನೆಹರೂ- ಸರ್ಧಾರ್ ಪಟೇಲ್  ಸರ್ಕಾರ ನಿಜಾಮ್  ಮೀರ್ ಒಸ್ಮಾನ್  ಅಲಿ ಖಾನ್  ಜೊತೆ ಮಾಡಿಕೊಂಡ ಒಪ್ಪಂದ, ಹೈದರಾಬಾದ್  ವಿಮೋಚನೆಯ ನಂತರ ಭಾರತ ಸರ್ಕಾರದ ಸೈನಿಕರು ರೈತರ ಸಶಸ್ತ್ರ ಹೋರಾಟವನ್ನು ಹತ್ತಿಕ್ಕಿದ್ದು, ಇದರಿಂದ ಸಾವಿರಾರು ರೈತರು ಪ್ರಾಣ ಕಳೆದುಕೊಂಡಿದ್ದು . . .  ಇವೆಲ್ಲವನ್ನೂ ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ.

ಪಾಳೆಯಗಾರರ ಮತ್ತು ಜಮೀನ್ದಾರರ ದಬ್ಬಾಳಿಕೆ

ಹೈದಾರಾಬಾದ್ ರಾಜವಂಶವು ತೆಲಂಗಾಣ ಮತ್ತು ಬಾಗಶಃ ಕನ್ನಡ, ಮರಾಠಿ ಮತ್ತು ಉರ್ದು ಮಾತನಾಡುವ ಜನರನ್ನು ಒಳಗೊಂಡ ಪ್ರದೇಶವಾಗಿತ್ತು. ಇದು ಭಾರತವು ಸ್ವಾತಂತ್ರ್ಯ ಪಡೆದಾಗ ಅತಿದೊಡ್ಡ ರಾಜಪ್ರಭುತ್ವದ ರಾಜ್ಯಗಳಲ್ಲಿ ಒಂದಾಗಿತ್ತು. ಈ ಪ್ರದೇಶದಲ್ಲಿ ದೊಡ್ಡ ಜಮೀನ್ದಾರರು ಸಾವಿರಾರು ಎಕರೆ ಭೂಮಿಯನ್ನು ಹೊಂದಿದ್ದರು. ಅವರು ರೈತರು ಮತ್ತು ಕೂಲಿಕಾರರನ್ನು ತೀವ್ರ ದಮನಕ್ಕೆ ಒಳಪಡಿಸಿದ್ದರು ಮತ್ತು ಅವರ ಶ್ರಮದ ತೀವ್ರ ಶೋಷಣೆ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ರೈತರ ಮೇಲೆ ಜಮೀನ್ದಾರರ ಗೂಂಡಾಗಳು ತೀವ್ರ ಹಲ್ಲೆ ಮಾಡಿ ಕೊಲ್ಲುತ್ತಿದ್ದರು. ಹಿಂದೂ ಜಮೀನ್ದಾರರ ಈ ಕ್ರೂರ ದಾಳಿಗಳಿಗೆ ಮುಸ್ಲೀಂ ರಾಜ ನಿಜಾಂ ಸೈನಿಕರ ಬೆಂಬಲವಿತ್ತು. ಇದರ ವಿರುದ್ದ ಸೆಟೆದು ನಿಂತ ರೈತರು ಕಮ್ಯೂನಿಸ್ಟರ ನಾಯಕತ್ವದಲ್ಲಿ ಸಶಸ್ತ್ರ ಹೋರಾಟಕ್ಕೆ ಮುಂದಾದರು.

ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ರೈತರ ಸಶಸ್ತ್ರ ಹೋರಾಟ

ಜುಲೈ 4 ಮತ್ತು ಸೆಪ್ಟೆಂಬರ್ 10 ರ ಮಹತ್ವವನ್ನು ಒಟ್ಟಿಗೆ ನೋಡಿದಾಗ ಮಾತ್ರ ಸೆಪ್ಟೆಂಬರ್ 17 ರ ವಿಶಿಷ್ಟತೆಯುಳ್ಳ ವಿಮೋಚನೆಯು ಸಂಪೂರ್ಣವಾಗಿ ಅರ್ಥವಾಗುತ್ತದೆ. ಜಮೀನ್ದಾರನಾದ ವಿಸ್ನೂರಿನ ದೇಶಮುಖ ಹಾಗೂ ರಾಮಚಂದ್ರ ರೆಡ್ಡಿಯ ಗೂಂಡಾಗಳ ದಾಳಿಗೆ ದೊಡ್ಡಿ ಕೋಮರಯ್ಯ ಬಲಿಯಾದ ದಿನ ಜುಲೈ 4. ಅದೇ ಜಮೀನ್ದಾರನ ದಾಳಿಯಿಂದ ತನ್ನನ್ನು ಮತ್ತು ತನ್ನ ಬೆಳೆಯನ್ನು ರಕ್ಷಿಸಲು ಸಾಹಸದಿಂದ  ಹೋರಾಡಿದ ಐಲಮ್ಮನ ವರ್ದಂತಿ ಸೆಪ್ಟೆಂಬರ್ 10. ಈ ಊಳಿಗಮಾನ್ಯ ಪದ್ದತಿ, ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ನಡೆದ ರೈತರ ಸಶಸ್ತ್ರ ಹೋರಾಟದ ಫಲವೇ ಹೈದರಾಬಾದ್  ಸಂಸ್ಥಾನ, ಅದರ ಭಾಗವಾಗಿದ್ದ ಇಂದಿನ ಹೈದಾರಾಬಾದ್ ಕರ್ನಾಟಕದ ಪ್ರದೇಶಗಳು ಸೆಪ್ಟೆಂಬರ್ 17 ರಂದು ಭಾರತೀಯ ಒಕ್ಕೂಟದಲ್ಲಿ ವಿಲೀನ. ಜಾತಿ, ಧರ್ಮ, ಪ್ರಾದೇಶಿಕ ಬೇಧಭಾವಗಳಿಲ್ಲದ ಬೃಹತ್  ಚಳುವಳಿ ಅದು. ಬಡ ರೈತರ ಮೇಲೆ ಹಲ್ಲೆ, ದೌರ್ಜನ್ಯ ಮಾಡುತ್ತಿದ್ದ ಭೂಮಾಲೀಕರು ಹಿಂದೂಗಳೇ ಆಗಿದ್ದರು. ಅರಸರು ಮುಸ್ಲಿಮರು. ಭೂಮಿಗಾಗಿ, ಕೂಲಿ ಹೆಚ್ಚಳಕ್ಕಾಗಿ, ವೆಟ್ಟಿಚಾಕರಿಯ ವಿಮುಕ್ತಿಗಾಗಿ ನಡೆದ ಹೋರಾಟ ಅದು.

ನಿಜಾಮರ ವಿರುದ್ದ ಹೋರಾಡಿ ಅಮರರಾದ ಮುಸ್ಲೀಂ ಯೋಧರು

ದೊಡ್ಡಿ ಕೊಮರಯ್ಯನ ಹತ್ಯೆಯ ನಂತರ ಸಶಸ್ತ್ರ ಹೋರಾಟಕ್ಕೆ ಕರೆ ನೀಡಿದ ನಾಯಕತ್ವದ ಗುಂಪಿನಲ್ಲಿ ಮಕ್ದುಮ್ ಮೊಹಿಯುದ್ದೀನ್ ಒಬ್ಬರು. ನಿಜಾಮರ ರಾಜಪ್ರಭುತ್ವದ ನಿರಂಕುಶ ಆಡಳಿತವನ್ನು ವಿರೋಧಿಸಿದ ಯೋಧರು ಶೋಯಬುಲ್ಲಾ ಖಾನ್ ಮತ್ತು ಮಕ್ದುಮ್ ಮೊಹಿಯುದ್ದೀನ್. ಊಳಿಗಮಾನ್ಯ ರಾಜಪ್ರಭುತ್ವವನ್ನು ತಿರಸ್ಕರಿಸಿ, ಸಮಸಮಾಜಕ್ಕಾಗಿ ಹೈದರಾಬಾದ್  ನ ಹೃದಯಭಾಗದಲ್ಲಿ “ಕಾಮ್ರೇಡ್ಸ್ ಅಸೋಸಿಯೇಷನ್” ಅನ್ನು ಪ್ರಾರಂಭಿಸಿದ ಪ್ರಮುಖರಲ್ಲಿ ಆಲಂ ಖುಂದ್ ಮಿರಿ ಒಬ್ಬರು. ಜಮೀನ್ದಾರನ ದೌರ್ಜನ್ಯಕ್ಕೆ, ನಿಜಾಮನ ಸೈನಿಕರ ಷಡ್ಯಂತ್ರಕ್ಕೆ ಬಲಿಯಾಗಿ ಅಮರರಾದವರು ಶೇಖ್ ಬಂದಗಿ. ಚಾಕಲಿ ಐಲಮ್ಮ ಬೆಳೆ ರಕ್ಷಣೆಗಾಗಿ ತಿರುಗಿನಿಂತು ಹೋರಾಡಿದ ದಳದ ನಾಯಕ ಭೀಮಿರೆಡ್ಡಿ ನರಸಿಂಹ ರೆಡ್ಡಿ. ಫಲಿತಾಂಶವಾಗಿ ವಿಸ್ನೂರು ರಾಮಚಂದ್ರ ರೆಡ್ಡಿಯ ಗೂಂಡಾಗಳು ಮತ್ತು ನಿಜಾಮನ ಪೊಲೀಸರು ಭೀಮಿರೆಡ್ಡಿ ನರಸಿಂಹ ರೆಡ್ಡಿ ಅವರ ಬಾಯಿಗೆ ಮೂತ್ರ ಸುರಿದರು. ಹಿಂದೂ ಜಮೀನ್ದಾರರು, ಮುಸ್ಲಿಂ ರಾಜ, ರಜಾಕಾರರು ಒಟ್ಟಾಗಿ ರೈತರ ಮೇಲೆ ದಾಳಿ ಮಾಡುವುದಕ್ಕೆ  ಧರ್ಮ ಅಡ್ಡಬರಲಿಲ್ಲ. ತಿರುಗಿಬಿದ್ದು ಹೋರಾಟಕ್ಕೆ ನಿಂತ ರೈತರಿಗೂ, ಬುದ್ಧಿಜೀವಿಗಳಿಗೂ ಧರ್ಮ ಅಡ್ಡಬರಲಿಲ್ಲ.

‘ಕಾಮ್ರೇಡ್ಸ್  ಅಸೋಸಿಯೇಷನ್’ ಸ್ಥಾಪನೆ

1934ರಲ್ಲಿ ಕಾಕಿನಾಡದಲ್ಲಿ ಕಮ್ಯುನಿಸ್ಟ್ ಪಕ್ಷ ಆರಂಭವಾಯಿತು. 1939 ರಲ್ಲಿ ಹೈದರಾಬಾದ್ ನಗರದಲ್ಲಿ ‘ಕಾಮ್ರೇಡ್ಸ್  ಅಸೋಸಿಯೇಷನ್’ ಸ್ಥಾಪಿಸಿದರು. 1941ರಲ್ಲಿ ನಿಜಾಂ ಪ್ರದೇಶದಲ್ಲಿ ಕಮ್ಯುನಿಸ್ಟ್ ಪಕ್ಷದ ಬೀಜ ಬಿತ್ತಲಾಯಿತು. ಮುನಗಲ್ ಪ್ರದೇಶದಿಂದ ಸೂರ್ಯಪೇಟೆಗೆ ಹೆಜ್ಜೆಹಾಕಿದ ಚಂದ್ರು ರಾಜೇಶ್ವರ ರಾವ್ ಅವರು ಅಲ್ಲಿಯೂ ಕಮ್ಯುನಿಸಂ ಬೀಜಗಳನ್ನು ಬಿತ್ತಿದರು. ಅಕ್ಟೋಬರ್ 1946 ರಲ್ಲಿ ಪ್ರಾರಂಭವಾದ ಸಶಸ್ತ್ರ ಹೋರಾಟಕ್ಕೆ ನಾಯಕತ್ವವನ್ನು ಕಮ್ಯುನಿಸ್ಟ್ ಪಕ್ಷವು ಪುಚ್ಚಲಪಲ್ಲಿ ಸುಂದರಯ್ಯನವರಿಗೆ ವಹಿಸಿತು. ಕರಾವಳಿ ಪ್ರದೇಶದಲ್ಲಿ ನಡೆಯುತ್ತಿದ್ದ ಉಪ್ಪು ಸತ್ಯಾಗ್ರಹದಲ್ಲಿ ಮತ್ತು ಅಸಹಕಾರ ಚಳವಳಿಯಲ್ಲಿ ತೆಲಂಗಾಣದ ಯುವಕರು ಭಾಗವಹಿಸುತ್ತಿದ್ದರು. ಆಂಧ್ರ ಪ್ರದೇಶದಿಂದ ಅನೇಕ ಮಂದಿ ಕಮ್ಯೂನಿಸ್ಟ್ ಕಾರ್ಯಕರ್ತರು ಬಂದು ತೆಲಂಗಾಣ ಸಶಸ್ತ್ರ ರೈತ ಹೋರಾಟದಲ್ಲಿ ನೇರವಾಗಿ ಭಾಗವಹಿಸಿದರು. ತೆಲಂಗಾಣ ರೈತ ಹೋರಾಟ ಯೋಧರಿಗೆ  ಆಂಧ್ರ ಪ್ರದೇಶದ ಗಡಿ ಜಿಲ್ಲೆಗಳ ಜನರು ರಕ್ಷಣೆ ನೀಡಿದರು. ಕಮ್ಯುನಿಸ್ಟ್ ಪಕ್ಷದ ನಾಯಕರು ಸಶಸ್ತ್ರ ಹೋರಾಟಕ್ಕೆ ಹಾಗೂ ಸೈದ್ಧಾಂತಿಕ ಅಂಶಗಳ ಕುರಿತು ಮಾರ್ಗದರ್ಶನ ನೀಡಿದರು. ಸಿಂಗರೇಣಿ ಕಾರ್ಮಿಕ ಚಳುವಳಿಯ ಮುಖಂಡ ಶೇಷಗಿರಿ ಅವರು ವಿಜಯವಾಡದಲ್ಲಿ ಭೂಗತರಾಗಿಯೂ ಚಳುವಳಿ ನಡೆಸಿದರು.

ಇದನ್ನು ಓದಿ : ಮತಾಂತರಗೊಂಡ ದಲಿತರಿಗೆ ಎಸ್.ಸಿ. ಸ್ಥಾನಮಾನ ಸಿಗುವುದೇ?

ಆಂಧ್ರ ಮಹಾಸಭಾ ಮತ್ತು ಕನ್ನಡ ಪರಿಷತ್  ಸ್ಥಾಪನೆ

1901 ರಲ್ಲಿಯೇ ಹೈದರಾಬಾದಿನ ಹೃದಯಭಾಗದಲ್ಲಿ ‘ಶ್ರೀಕೃಷ್ಣ ದೇವರಾಯ ಆಂಧ್ರ ಭಾಷಾ ನಿಲಯ’ ಪ್ರಾರಂಭವಾಯಿತು. 1920ರಲ್ಲೇ ಖಾಜಿಪೇಟ ಸಮೀಪ ಮಡಿಕೊಂಡ ಎಂಬಲ್ಲಿ ತೆಲುಗು ಗ್ರಂಥಾಲಯವಿತ್ತು. 1922ರಲ್ಲಿ ಸುರವರಂ ಪ್ರತಾಪರೆಡ್ಡಿ ‘ಗೋಲ್ಕೊಂಡ’ ಪತ್ರಿಕೆಯನ್ನು ಆರಂಭಿಸಿದರು. ಅಭಿವೃದ್ಧಿ ಹೊಂದಿದ ದೇಶಗಳ ಪ್ರಭಾವದಿಂದ ಕೆಲವು ಬುದ್ಧಿಜೀವಿಗಳು, ವ್ಯಾಪಾರಿಗಳು ಮತ್ತು ಸಣ್ಣ ಸಣ್ಣ ಬಂಡವಾಳಶಾಹಿಗಳು ಭಾಷಾ ಮತ್ತು ಸಾಂಸ್ಕೃತಿಕ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇದರ ಫಲವಾಗಿ 1930ರಲ್ಲಿ ಜೋಗಿಪೇಟೆಯಲ್ಲಿ ಆಂಧ್ರ ಮಹಾಸಭಾ ಪ್ರಾರಂಭವಾಯಿತು. ಮತ್ತೊಂದೆಡೆ, ಹೈದರಾಬಾದ್  ಸಂಸ್ಥಾನದಲ್ಲಿ ಇರುವ ಮರಾಠಿ ಪ್ರಾಂತದಲ್ಲಿ ಮಹಾರಾಷ್ಟ್ರ ಪರಿಷತ್, ಕನ್ನಡ ಪ್ರಾಂತದಲ್ಲಿ ಕನ್ನಡ ಪರಿಷತ್  ಗಳ ಹೆಸರಿನಲ್ಲಿ ಸಾಂಸ್ಕೃತಿಕ ಚಳವಳಿಯನ್ನು ಆಯೋಜಿಸಲಾಯಿತು.

ಕಮ್ಯುನಿಸ್ಟ್ ಪಕ್ಷದತ್ತ ಆಕರ್ಷಿತರಾದ ಆಂಧ್ರ ಮಹಾಸಭಾ ಕಾರ್ಯಕರ್ತರು

ಆಂಧ್ರ ಮಹಾಸಭಾ ಕಾರ್ಯಕರ್ತರು ಕಮ್ಯುನಿಸ್ಟ್ ಪಕ್ಷದತ್ತ ಆಕರ್ಷಿತರಾದರು. ಆದ್ದರಿಂದ ಆಂಧ್ರ ಮಹಾಸಭಾ ಸಾಂಸ್ಕೃತಿಕ ವಿಷಯಗಳಿಗಷ್ಟೇ ಸೀಮಿತವಾಗದೆ, ಭೂಮಾಲೀಕರ ಶೋಷಣೆ ಮತ್ತು ದೌರ್ಜನ್ಯದ ವಿರುದ್ಧ ಹೋರಾಡಿತು. ಸಾಂಸ್ಕೃತಿಕ ಪ್ರಯತ್ನವಾಗಿ ಪ್ರಾರಂಭವಾಗಿ, ಸುಧಾರಣಾ ಚಳುವಳಿಯಾಗಿ ರೂಪುತಾಳಿ, ಮುಂದೆ ಅದು ಸಶಸ್ತ್ರ ರೈತ ಹೋರಾಟವಾಗಿ ಬದಲಾಯಿತು. ಕ್ರಮೇಣ ಆಂಧ್ರ ಮಹಾಸಭಾದಲ್ಲಿ ಮೂರು ಧೋರಣೆಗಳು ಹೊರಹೊಮ್ಮಿದವು. 1934 ರಲ್ಲಿ, ಸಂಪ್ರದಾಯವಾದಿಗಳು ಮತ್ತು ಸುಧಾರಣಾವಾದಿಗಳ ನಡುವೆ ಸಂಘರ್ಷ ಪ್ರಾರಂಭವಾಯಿತು. ದಾಶರಥಿ ವೆಂಕಟಾಚಾರ್ಯ ರಂತಹ ಮೂಲಭೂತವಾದಿಗಳಿಗೆ ಸುಧಾರಣಾ ಚಳವಳಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕೂಡಾ ಸಹಿಸಲಾಗಲಿಲ್ಲ. ಸುರವರಂ ಪ್ರತಾಪರೆಡ್ಡಿಯಂತಹ ಪ್ರಜಾಪ್ರಭುತ್ವವಾದಿಗಳು ಮೂಲಭೂತವಾದವನ್ನು ತಿರಸ್ಕರಿಸಿದರು. ಸುಧಾರಣಾ ಚಳವಳಿಗಾಗಿ ಸೊಂಟ ಬಿಗಿಗೊಳಿಸಿದರು. 1943 ರ ಹೊತ್ತಿಗೆ, ಸುಧಾರಣಾವಾದಿಗಳಿಗೂ, ವರ್ಗ ಹೋರಾಟಕ್ಕೂ ಮಧ್ಯೆ ಸಂಘರ್ಷ ರೂಪುಗೊಂಡಿತು. ರಾವಿ ನಾರಾಯಣ ರೆಡ್ಡಿ, ಬದ್ದಂ ಯಲ್ಲಾರೆಡ್ಡಿ ಮುಂತಾದ ನಾಯಕರು ಜಮೀನ್ದಾರಿ ವಿರೋಧಿ ವರ್ಗದ ಹೋರಾಟವನ್ನು ಮುನ್ನಡೆಸಿದರು. 1944 ರ ಭುವನಗಿರಿ ಮಹಾಸಭಾದಲ್ಲಿ ಆಂಧ್ರ ಮಹಾಸಭಾ ವಿಭಜನೆಯಾಯಿತು. ರಾವಿ ನಾರಾಯಣ ರೆಡ್ಡಿಯವರ ನೇತೃತ್ವದಲ್ಲಿ ಆಂಧ್ರ ಮಹಾಸಭಾ ರೈತರ ನಿಜವಾದ ‘ಸಂಘ’ ಎಂದು ಗುರುತಿಸಲ್ಪಟ್ಟಿತು.

ಸಾಮಂತ ರಾಜ್ಯಗಳಲ್ಲಿ  ಹೋರಾಡದಿರಲು ಕಾಂಗ್ರೆಸ್  ನಿರ್ಧಾರ

ಬ್ರಿಟಿಷ್ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವ ವಹಿಸುತ್ತಿದ್ದ ಕಾಂಗ್ರೆಸ್ ಪಕ್ಷವು, ಸಾಮಂತ ರಾಜ್ಯಗಳಾಗಿದ್ದ ಸಂಸ್ಥಾನಗಳಲ್ಲಿ  ಹೋರಾಡದಿರಲು ನಿರ್ಧರಿಸಿಕೊಂಡಿತು. ಕಾಂಗ್ರೆಸ್ ಪಕ್ಷದ ಧೋರಣೆಯು ತೆಲಂಗಾಣದಲ್ಲಿ ಆರ್ಯ ಸಮಾಜದ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ ಮತಾಂಧರಿಗೆ ಬಲ ಮತ್ತಷ್ಟು ಬಂದಂತಾಯಿತು. ಔರಂಗಾಬಾದ್ ಪ್ರಾಂತ್ಯಕ್ಕೆ ಸೇರಿದ ವಕೀಲ ಖಾಸಿಂ ರಜ್ವಿ ನೇತೃತ್ವದಲ್ಲಿ ರಚನೆಯಾದ “ರಜಾಕಾರ’ ಸಂಘಟನೆಯು ಶ್ರೀಮಂತರ ಪರವಾದ ಕೇಂದ್ರವಾಗಿ ರೈತರ ಮೇಲೆ ದಾಳಿ ನಡೆಸಿತು. ಆಂಧ್ರ ಮಹಾಸಭಾ ಮತ್ತು ಕಮ್ಯುನಿಸ್ಟರ ನಾಯಕತ್ವದಲ್ಲಿ ಊಳಿಗಮಾನ್ಯ ಪದ್ದತಿ ವಿರೋಧಿ ಹೋರಾಟ ಪ್ರಾರಂಭವಾದ ನಂತರವೇ, ಅಂದಿನ ಮತಾಂಧರ ಪ್ರಯತ್ನಕ್ಕೆ ತಡೆ ಬಿದ್ದಿತು. ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕನಂತರ, ಗಡಿ ಪ್ರದೇಶಗಳಲ್ಲಿ ಭೀಕರವಾದ ಕೋಮು ಘರ್ಷಣೆಗಳು ನಡೆದವು. ಆದರೆ, ಹೈದರಾಬಾದ್ ಸಂಸ್ಥಾನವನ್ನು ಭಾರತದೊಂದಿಗೆ ವಿಲೀನಗೊಳಿಸುವ ಸಮಯದಲ್ಲಿ ಕಮ್ಯುನಿಸ್ಟ್ ಚಳವಳಿ ಮತ್ತು ಊಳಿಗಮಾನ್ಯ ಪದ್ದತಿ ವಿರೋಧಿ ಹೋರಾಟ ದುರ್ಬಲವಾಗಿದ್ದ ಮರಾಠವಾಡ ಪ್ರದೇಶವನ್ನು ಹೊರತುಪಡಿಸಿ, ತೆಲಂಗಾಣದಲ್ಲಿ ಅಂತಹ ಯಾವುದೇ ಕೋಮು ಘರ್ಷಣೆಗಳು ನಡೆಯಲಿಲ್ಲ.

ನಿಜಾಂ ಜೊತೆ ‘ಯಥಾಸ್ಥಿತಿ ಒಪ್ಪಂದ’ಕ್ಕೆ ಪಟೇಲರ ಸಹಿ

ಆಗಸ್ಟ್ 15, 1947 ರಂದು ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂತು. ಒಂದು ಕಡೆ ಭಾರತ ದೇಶ ಮತ್ತೊಂದು ಕಡೆ ಪಾಕಿಸ್ತಾನ ಸ್ವತಂತ್ರ ದೇಶಗಳಾಗಿ ಹೊರಹೊಮ್ಮಿದವು. ಡಿಸೆಂಬರ್ 29 ರಂದು ಗೃಹ ಸಚಿವ ಸರ್ದಾರ್ ಪಟೇಲ್ ಅವರು ನಿಜಾಮ್  ರಾಜ ಮೀರ್ ಉಸ್ಮಾನ್ ಅಲಿ ಖಾನ್ ಜೊತೆ ‘ಯಥಾಸ್ಥಿತಿ ಒಪ್ಪಂದ’ಕ್ಕೆ ಸಹಿ ಹಾಕಿದರು. ಇದರ ಪ್ರಕಾರ, ಭಾರತ ದೇಶ ಮತ್ತು ಹೈದರಾಬಾದ್ ಸಂಸ್ಥಾನವು ಸ್ವತಂತ್ರ ಮಿತ್ರರಾಷ್ಟ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಅಕ್ಟೋಬರ್ 1946 ರಲ್ಲಿ ಪ್ರಾರಂಭವಾದ ಸಶಸ್ತ್ರ ರೈತ ಹೋರಾಟವು ಸೆಪ್ಟೆಂಬರ್ 1948 ರ ಹೊತ್ತಿಗೆ ತೀವ್ರಗೊಂಡಿತು. ಇದು ಗೋಲ್ಕೊಂಡ ಕೋಟೆಯನ್ನು ನಡುಗಿಸಿತು. ನಿಜಾಮನ ಸಿಂಹಾಸನ ಕುಸಿಯುವ ಹಂತದಲ್ಲಿತ್ತು. ಇನ್ನು ವಿಳಂಬವಾದರೆ ನಿಜಾಮನ ರಾಜಪ್ರಭುತ್ವ ನಾಶವಾಗಿ ತೆಲಂಗಾಣ ಕಮ್ಯುನಿಸ್ಟರ ವಶವಾಗುತ್ತದೆ ಎಂಬುದನ್ನು ಗಮನಿಸಿದ ನೆಹರೂ ಸರಕಾರ, ಸೆಪ್ಟೆಂಬರ್ 13ರಂದು ಭಾರತ ಸರ್ಕಾರದ ಸೈನಿಕರನ್ನು ಕಳುಹಿಸಿತು. 17 ರಂದು ಹೈದರಾಬಾದ್ ಸಂಸ್ಥಾನವನ್ನು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳಿಸುವುದಾಗಿ ನಿಜಾಮ್  ಘೋಷಿಸಿದರು.

ಪಟೇಲ್ ಮತ್ತು ನಿಜಾಮ್  ಪರಸ್ಪರ ಶುಭಾಶಯಗಳ ವಿನಿಮಯ

ಒಂದುಕಡೆ ತೆಲಂಗಾಣ ರೈತರು ನರಹಂತಕ ನಿಜಾಮ್  ರಾಜನ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಿದ್ದರೆ, ಭಾರತದ ಗೃಹ ಸಚಿವ ಸರ್ದಾರ್ ಪಟೇಲ್ ಮತ್ತು ನಿಜಾಮ್ ರಾಜ ಪರಸ್ಪರ ಶುಭಾಶಯಗಳ ವಿನಿಮಯ ಮಾಡಿಕೊಂಡರು. ನಿಜಾಮರ ರಾಜಪ್ರಭುತ್ವವನ್ನು ತಿರಸ್ಕರಿಸುತ್ತಿದ್ದ ತೆಲಂಗಾಣ ಜನತೆಯ ವಿರುದ್ಧ ಆ ನಿಜಾಮ್  ರಾಜನನ್ನು ಜೈಲಿಗಟ್ಟುವ ಬದಲು ‘ರಾಜ್ ಪ್ರಮುಖ್’ ಎಂಬ ಬಿರುದನ್ನು ನೆಹರೂ-ಪಟೇಲ್ ಸರ್ಕಾರವು ನೀಡಿತು. ಕ್ರೂರಿಯಾದ ರಜಾಕಾರ್ ನಾಯಕ ಖಾಸಿಂ ರಜ್ವಿಯನ್ನು ಗೃಹ ಸಚಿವ ಸರ್ದಾರ್ ಪಟೇಲ್ ಸಕಲ ಮರ್ಯಾದೆಯಿಂದ ವಿಶೇಷ ವಿಮಾನದಲ್ಲಿ ಪಾಕಿಸ್ತಾನಕ್ಕೆ ಕಳುಹಿಸಿದರು. ಗಲ್ಲಿಗೇರಿಸಬೇಕಾದ ರಾಜನಿಗೇ ಅಧಿಕಾರ ಕೊಟ್ಟು ಗೌರವಿಸುವುದರ ಜೊತೆಗೆ,  ಖಾಸಿಂ ರಜ್ವಿ ಪ್ರಾಣವನ್ನೂ ಕಾಪಾಡಿದರು. ಅದು ಅಲ್ಲಿಗೇ ನಿಲ್ಲಲಿಲ್ಲ. ಮೀರ್ ಉಸ್ಮಾನ್ ಅಲಿಖಾನ್  ಗೆ ನಷ್ಟಪರಿಹಾರ, ರಾಜಮನೆತನದ ಭತ್ಯೆಗಳ ಹೆಸರಿನಲ್ಲಿ ವರ್ಷಕ್ಕೆ ಒಂದು ಕೋಟಿ ರೂಪಾಯಿಗಳನ್ನು ಕೊಡುವ ಒಪ್ಪಂದವಾಯಿತು.

ಭಾರತೀಯ ಸೈನಿಕರಿಂದ 2,500 ರೈತರು ಬಲಿಯಾದರು

ಗೃಹ ಸಚಿವರು ಹೈದರಾಬಾದ್  ಸಂಸ್ಥಾನಕ್ಕೆ ಕಳುಹಿಸಿದ್ದ ಭಾರತ ಸರ್ಕಾರದ ಸೈನಿಕರು, ವಿಲೀನದ ನಂತರ ರೈತರ ಹೋರಾಟವನ್ನು ಹತ್ತಿಕ್ಕಲು ಮುಂದಾದರು. ಹೋರಾಟದ ಸಮಯದಲ್ಲಿ ರೈತರು ಗಳಿಸಿದ್ದ ಎಲ್ಲವನ್ನೂ ನಿಷ್ಕ್ರಿಯಗೊಳಿಸಲು ಸೈನಿಕರು ಮುಂದಾದರು. ಭೂಮಿಗಾಗಿ ಮತ್ತು ಕಷ್ಟಪಟ್ಟು ಗಳಿಸಿದ ಹಕ್ಕುಗಳ ರಕ್ಷಣೆಗಾಗಿ 1951ರ ವರೆಗೂ ಸಶಸ್ತ್ರ ಹೋರಾಟ ಮುಂದುವರಿಯಿತು. ನಿಜಾಮರ ಆಳ್ವಿಕೆಯಲ್ಲಿ 1,500 ರೈತರು ಸಶಸ್ತ್ರ ಹೋರಾಟದಲ್ಲಿ ಪ್ರಾಣ ಕಳೆದುಕೊಂಡರೆ, ಭಾರತೀಯ ಸೈನಿಕರ ಕೈಯಲ್ಲಿ 2,500 ರೈತರು ಬಲಿಯಾದರು.

ಇತಿಹಾಸವನ್ನು ತಿರುಚುವ ಬಿಜೆಪಿ-ಆರ್‌ಎಸ್‌ಎಸ್

ಈ ಇತಿಹಾಸವನ್ನು ಬಿಜೆಪಿ-ಆರ್‌ಎಸ್‌ಎಸ್ ನಾಯಕರು ತಿರುಚುತ್ತಿದ್ದಾರೆ. ಕಾಂಗ್ರೆಸ್ ನಾಯಕರಾಗಿದ್ದ ಸರ್ದಾರ್ ಪಟೇಲ್ ಅವರನ್ನು ಹಿಂದೂಗಳ ಪ್ರತಿನಿಧಿ ಎಂದು ಬಿಂಬಿಸುತ್ತಿದ್ದಾರೆ. ನಿಜಾಮ್ ರಾಜನ ವಿರುದ್ಧ ಯುದ್ಧ ಮಾಡಿ ರಾಜ್ಯವನ್ನು ವಶಪಡಿಸಿಕೊಂಡರು ಎಂದು ನಂಬಿಸತೊಡಗಿದ್ದಾರೆ. ಮತ್ತೊಂದೆಡೆ, ಅಂದಿನ ನೆಹರೂ ಸರ್ಕಾರವೇ ನಿಜಾಮ್  ರಾಜನ ಮೇಲೆ ಯುದ್ಧ ಮಾಡಿ ಹೈದಾರಾಬಾದ್  ರಾಜ್ಯವನ್ನು ಭಾರತ ದೇಶದಲ್ಲಿ ವಿಲೀನ ಮಾಡಿದಂತೆ ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಾರೆ. ಜಮ್ಮು ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸಿದ ನೆಹರೂ-ಪಟೇಲ್ ಸರ್ಕಾರವೇ ನಿಜಾಮ್  ರಾಜನೊಂದಿಗೆ ಯಥಾಸ್ಥಿತಿ ಒಪ್ಪಂದ ಮಾಡಿಕೊಂಡ ವಿಷಯವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಮರೆಮಾಚುತ್ತಿವೆ.

ತೆಲಂಗಾಣದ ಸಶಸ್ತ್ರ ರೈತ ಹೋರಾಟವಿಲ್ಲದಿದ್ದರೆ, ವಿಲೀನವಾಗಲೀ ಅಥವಾ ಸೆಪ್ಟೆಂಬರ್ 17ರ ವಿಶೇಷತೆಯಾಗಲೀ ಇರುತ್ತಿರಲಿಲ್ಲ. ಇದು ಕಮ್ಯುನಿಸ್ಟರ ನಾಯಕತ್ವದಲ್ಲಿ ನಡೆದ ರೈತರ ಹೋರಾಟದ ಫಲ. ಈ ಇಡೀ ಹೋರಾಟದಲ್ಲಿ ಯಾವುದೇ ಸಂಬಂಧವಿಲ್ಲದ ಆರ್‌ಎಸ್‌ಎಸ್,  ಆಗಿನ ಜಮ್ಮು ಕಾಶ್ಮೀರ ರಾಜ್ಯವನ್ನು ಭಾರತದೊಂದಿಗೆ ವಿಲೀನಗೊಳಿಸುವುದನ್ನು ವಿರೋಧಿಸಿತ್ತು ಎಂಬುದನ್ನು ಮರೆಯಲಾಗದು. ಕಾಶ್ಮೀರ ಓಂದು ಸ್ವತಂತ್ರ ರಾಜ್ಯವಾಗಿಯೇ ಉಳಿಯಬೇಕು ಎಂದು ಹೇಳಿತ್ತು. ಅಂತಹ ಆರೆಸ್ಸೆಸ್ ಮತ್ತು ಅದರ ರಾಜಕೀಯ ವಿಭಾಗವಾದ ಬಿಜೆಪಿ ಈಗ ತೆಲಂಗಾಣದ ಇತಿಹಾಸವನ್ನು ಮತ್ತು ಜಮ್ಮು ಕಾಶ್ಮೀರದ ಇತಿಹಾಸವನ್ನು ತಿರುಚುತ್ತಿದೆ. ಈ ಮೂಲಕ ಹೊಸ ಪೀಳಿಗೆಯನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿಯೊಂದಕ್ಕೂ ಧರ್ಮದ ಬಣ್ಣ ಹಚ್ಚುತ್ತಿದ್ದಾರೆ. ಅಧಿಕಾರದ ದಾಹ ಮತ್ತು ಸ್ವಾರ್ಥ ರಾಜಕೀಯ ಹಿತಾಸಕ್ತಿಗಾಗಿಯೇ ಹೊರತು ಇತಿಹಾಸವನ್ನು ಇತಿಹಾಸವನ್ನಾಗಿ ನೋಡಲು ಅವರು ಎಂದಿಗೂ ಸಿದ್ಧರಿಲ್ಲ.

ಇದನ್ನು ನೋಡಿ : ದಲಿತ ವ್ಯಕ್ತಿಗೆ ಕ್ಷೌರ ನಿರಾಕರಿಸಿ ಕೊಲ ಪ್ರಕರಣ – ಜನಪರ ಸಂಘಟನೆಗಳಿಂದ ಸಂಗನಹಾಳ ಚಲೋ Janashakthi Media

 

 

Donate Janashakthi Media

Leave a Reply

Your email address will not be published. Required fields are marked *