ಸಿಕಂದರಾಬಾದ್: ಇಲ್ಲಿನ ರೂಬಿ ಪ್ರೈಡ್ ಎಂಬ ಐಷಾರಾಮಿ ಹೋಟೆಲ್ ಕಟ್ಟಡದ ನೆಲ ಮಹಡಿಯಲ್ಲಿರುವ ಇ-ಬೈಕ್ ಶೋರೂಮ್‌ನಲ್ಲಿ ನೆನ್ನೆ(ಸೆಪ್ಟಂಬರ್ 12) ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ.
ತೆಲಂಗಾಣ ರಾಜ್ಯದ ಸಿಕಂದರಾಬಾದ್‌ನ ಪಾಸ್‌ಪೋರ್ಟ್ ಕಚೇರಿಗೆ ಸಮೀಪವಿರುವ ಈ ಹೋಟೆಲ್‌ನಲ್ಲಿ 25 ಮಂದಿ ಇದ್ದರು ಎಂದು ಹೇಳಲಾಗಿದೆ. ಅಗ್ನಿ ದುರಂತದಿಂದಾಗಿ ಸ್ಥಳದಲ್ಲೇ 6 ಮಂದಿ ಸಾವಿಗೀಡಾಗಿದ್ದರೆ, ಆಸ್ಪತ್ರೆಯಲ್ಲಿ ಇಬ್ಬರು ಮರಣ ಹೊಂದಿದ್ದಾರೆ. ಅಲ್ಲದೆ, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೂಲಗಳ ಪ್ರಕಾರ ರೂಬಿ ಮೋಟಾರ್ಸ್ ಶೋರೂಂನಲ್ಲಿ ಇರಿಸಲಾಗಿದ್ದ ಇ-ಬೈಕ್ ಬ್ಯಾಟರಿ ಅಥವಾ ಜನರೇಟರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿರುವ ಶಂಕೆ ಇದೆ. ಅಪಘಾತ ಪ್ರಮಾಣ ಭೀರಕವಾಗಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ದುರಂತ ಸಂಭವಿಸಿದ ಕೂಡಲೇ ಸ್ಥಳೀಯರು, ಮಾರ್ಕೆಟ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಂಜನೇಯುಲು ತಮ್ಮ ಸಿಬ್ಬಂದಿಯೊಂದಿಗೆ ಹಾಗೂ ಕೆಲವು ಯುವಕರು ಪಕ್ಕದ ಹೋಟೆಲ್ ನಿಂದ ಕಟ್ಟಡದ ಮೇಲಿನ ಮಹಡಿಗೆ ತೆರಳಿ ಅವಘಡ ಸಂಭವಿಸಿದ ಹೋಟೆಲ್ ಒಳಗೆ ಹೋಗಿದ್ದಾರೆ. ಕೂಡಲೇ ಕಾರ್ಯಾಚರಣೆ ಇಳಿಸಿದ್ದಾರೆ.
ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಅವರು, ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡೀ ಅಂಗಡಿಯನ್ನು ಆವರಿಸಿಕೊಂಡಿದ್ದು ಬಳಿಕ ಕಟ್ಟಡದ ಇತರೆ ಭಾಗಗಳಿಗೆ ವ್ಯಾಪಿಸಿದೆ. ಬೆಂಕಿಗಿಂತ ಹೊಗೆಯೇ ಅಲ್ಲಿದ್ದವರಿಗೆ ಉಸಿರುಗಟ್ಟಿಸಿದಂತಾಗಿದೆ. ವಿಚಾರ ತಿಳಿಯುತ್ತಲೇ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದರು.
ಕಾರ್ಯಾಚರಣೆಯ ಸಂದರ್ಭದಲ್ಲಿ ತುಂಬಾ ಹೊತ್ತಿನವರೆಗೂ ದಟ್ಟವಾದ ಹೊಗೆ ಹೊರಹೊಮ್ಮುತ್ತಲೇ ಇತ್ತು. ಅಕ್ಕಪಕ್ಕದಲ್ಲಿದ್ದ ಕೆಲವು ಸ್ಥಳೀಯರು ಕೂಡ ಕಾರ್ಯಾಚರಣೆಯಲ್ಲಿ ನೆರವಾಗಿದ್ದರು.
ಅಗ್ನಿಶಾಮಕ ಇಲಾಖೆ ಡಿಜಿ ಸಂಜಯ್ ಜೈನ್ ಮಾತನಾಡಿ, ರಾತ್ರಿ 9.20 ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಕರೆ ಬಂದ ಕೂಡಲೇ ಎರಡು ಅಗ್ನಿಶಾಮಕ ದಳವನ್ನು ಸೇವೆಗೆ ನಿಯೋಜಿಸಲಾಯಿತು. ಗಾಯಾಳುಗಳನ್ನು ಗಾಂಧಿ ಆಸ್ಪತ್ರೆ ಮತ್ತು ಯಶೋದಾ ಆಸ್ಪತ್ರೆಗೆ ರವಾನಿಸಲಾಗಿದೆ. ಹೋಟೆಲಿನಲ್ಲಿ 23 ಕೊಠಡಿಗಳಿದ್ದು, ಬೆಂಕಿ ಕಾಣಿಸಿಕೊಂಡಾಗ ಸರಿಸುಮಾರು 50 ಪ್ರತಿಶತ ಕೊಠಡಿಗಳಲ್ಲಿ ಗ್ರಾಹಕರಿದ್ದರು ಎಂದು ಮಾಹಿತಿ ಇದೆ ಎಂದರು.
ಸ್ಥಳಕ್ಕೆ ಸನತ್‌ನಗರ ಶಾಸಕ ಹಾಗೂ ರಾಜ್ಯ ಪಶುಸಂಗೋಪನೆ ಸಚಿವ ಟಿ. ಶ್ರೀನಿವಾಸ ಯಾದವ್ ಆಗಮಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ.
ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಅವರು, ಸ್ಫೋಟ ಮತ್ತು ಬೆಂಕಿಗೆ ನಿಜವಾಗಿ ಕಾರಣ ಏನೆಂಬುದು ತನಿಖೆಯ ಬಳಿಕ ತಿಳಿಯಲಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಹೊಟೆಲ್ ಗೆ ಅಳವಡಿಸಲಾಗಿದ್ದ ಫೈರ್ ಸ್ಪ್ರಿಂಕ್ಲರ್‌ಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಕಟ್ಟಡದಲ್ಲಿ ತುರ್ತು ನಿರ್ಗಮನದ ಮಾರ್ಗವಿಲ್ಲದ ಕಾರಣ ಏಳು ಮಂದಿ ವಿವಿಧ ಮಹಡಿಗಳಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಕೆಲ ನಿವಾಸಿಗಳು ಪೈಪ್‌ಲೈನ್ ಮೂಲಕ ಕೆಳಗೆ ಇಳಿಯಲು ಯತ್ನಿಸಿದರು. ಅಗ್ನಿಶಾಮಕ ದಳ ಹೈಡ್ರಾಲಿಕ್ ಎಲಿವೇಟರ್ ಬಳಸಿ ನಾಲ್ವರನ್ನು ರಕ್ಷಿಸಲಾಗಿದೆ.