ದೆಹಲಿ : ಅಖಿಲ ಭಾರತ ಕಿಸಾನ್ ಸಭಾ(ಎ.ಐ.ಕೆ.ಎಸ್.), ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ (ಎ.ಐ.ಎ.ಡಬ್ಲು.ಯು) ಮತ್ತು ಪ್ರಮುಖ ಕೇಂದ್ರೀಯ ಕಾರ್ಮಿಕ ಸಂಘಟನೆ ಸಿಐಟಿಯು ಮಾರ್ಚ್ 18 ರಿಂದ ಮಾರ್ಚ್ 23ರ ವರೆಗೆ ಶಹೀದ್ ಯಾದ್ಗಾರ್ ಕಿಸಾನ್-ಮಜ್ದೂರ್ ಪದಯಾತ್ರಾ’ ನಡೆಸಲು ಕರೆ ನೀಡಿವೆ.
ಪಂಜಾಬ್, ಹರ್ಯಾಣ ಮತ್ತು ಉತ್ತರಪ್ರದೇಶದಿಂದ ಈ ಮೂರು ಪಾದಯಾತ್ರೆಗಳು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುರವರನ್ನು ಬ್ರಿಟಿಶ್ ಆಳರಸರು ಗಲ್ಲಿಗೇರಿಸಿದ 90ನೇ ವಾರ್ಷಿಕ ಆಚರಣೆಯ ದಿನವಾದ ಮಾರ್ಚ್ 23 ರಂದು, ರೈತರು ಸುಮಾರು ನಾಲ್ಕು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ದಿಲ್ಲಿಯ ಸಿಂಘು, ಟಿಕ್ರಿ ಮತ್ತು ಪಲ್ವಲ್ ಗಡಿಗಳನ್ನು ತಲುಪುತ್ತವೆ.
ಎಲ್ಲ ಕೃಷಿ ಕೂಲಿಕಾರರು, ಕಾರ್ಮಿಕ ಸಂಘಟನೆಗಳು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಎಲ್ಲ ವಿಭಾಗಗಳ ಜನರು ಇದರಲ್ಲಿ ಭಾಗವಹಿಸಬೇಕು ಎಂದು ಈ ಮೂರು ಸಂಘಟನೆಗಳು ಜನವರಿ 17 ರಂದು ಒಂದು ಜಂಟಿ ಹೇಳಿಕೆಯಲ್ಲಿ ಕರೆ ನೀಡಿವೆ.
ದೇಶದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳನ್ನು ತರಬೇಕೆಂಬ ಈ ಯುವ ಹುತಾತ್ಮರ ತ್ಯಾಗ-ಬಲಿದಾನಗಳನ್ನು ನೆನಪಿಸಿಕೊಳ್ಳುತ್ತ ಅವರ ಕನಸನ್ನು ನನಸು ಮಾಡುತ್ತೇವೆ ಎಂದು ಈ ದಿನದಂದು ದಿಲ್ಲಿಯ ಈ ಮೂರು ಗಡಿಗಳಲ್ಲಿ ಪ್ರತಿಜ್ಞೆ ಮಾಡಲಾಗುವುದು ಎಂದು ಈ ಜಂಟಿ ಹೇಳಿಕೆ ಹೇಳಿದೆ.
ಬ್ರಿಟಿಶ್ ಸಾಮ್ರಾಜ್ಯದ ಆಳ್ವಿಕೆಯನ್ನು ಬೆಂಬಲಿಸಿದವರು ಈಗ ಅಧಿಕಾರ ಕಬಳಿಸಿರುವುದರಿಂದಾಗಿ ಈ ಯುವ ಹುತಾತ್ಮರ ಕನಸಿನ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು ಅದು ಹೇಳಿದೆ.
ಮೊದಲ ಪಾದಯಾತ್ರೆ ಮಾರ್ಚ್ 18ರಂದು ಹರ್ಯಾಣದ ಹಾನ್ಸಿ ಜಿಲ್ಲೆಯ ಲಾಲ್ ಸಡಕ್ (ಕೆಂಪು ರಸ್ತೆ)ನಿಂದ ಆರಂಭವಾಗಿದೆ. ಇದು ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ 1857ರಲ್ಲಿ ಬಂಡಾಯ ಆರಂಭವಾದ ಒಂದು ಸ್ಥಳ. ಅಲ್ಲಿ ಭಗತ್‌ಸಿಂಗ್‌ರವರ ಸೋದರಸೊಸೆ ಗುರ್ಜಿತ್ ಕೌರ್ ಜಾಥಾವನ್ನು ಉದ್ಘಾಟಿಸಿದರು. ಎಐಕೆಎಸ್‌ನ ಅಧ್ಯಕ್ಷ ಅಶೋಕ ಧವಳೆ ಮತ್ತಿತರ ಮುಖಂಡರು ಹಾಜರಿದ್ದರು.
ಜಿಂದ್‌ನಿಂದ ಬಂದ ಹರ‍್ಯಾಣದ ರೈತರ ಇನ್ನೊಂದು ಜಾಥಾ ಅದರೊಡನೆ ಸೇರಿಕೊಂಡು ಮಾರ್ಚ್ 23ರಂದು ಟಿಕ್ರಿ ಗಡಿಯನ್ನು ತಲುಪಲಿದೆ. ಈ ಉಪಜಾಥಾದ ಉದ್ಘಾಟನೆಯ ಸಾರ್ವಜನಿಕ ಸಭೆಯಲ್ಲಿ ಸಿಐಟಿಯು ಕಾರ್ಯದರ್ಶಿ ಎ ಆರ್ ಸಿಂಧು, ಎಐಕೆಎಸ್ ಹಣಕಾಸು ಕಾರ್ಯದರ್ಶಿ ಪಿ.ಕೃಷ್ಣಪ್ರಸಾದ್, ಹಾಗೂ ಹರ್ಯಾಣದ ಸಿಐಟಿಯು, ಎಐಕೆಎಸ್ ಮತ್ತು ಜನವಾದಿ ಮಹಿಳಾ ಸಮಿತಿಯ ಮುಖಂಡರುಗಳು ಮಾತಾಡಿದರು.
ಎರಡನೇ ಪಾದಯಾತ್ರೆಯನ್ನು ಪಂಜಾಬಿನ ರೈತರು ಭಗತ್ ಸಿಂಗ್ ರವರ ಹಳ್ಳಿ ಖಟ್ಕಡ್ ಕಲಾನಿಂದ ಆರಂಭಿಸಿದ್ದಾರೆ. ಸಿಐಟಿಯು ರಾಷ್ಟ್ರೀಯ ಅಧ್ಯಕ್ಷರಾದ ಹೇಮಲತಾ, ಎಐಕೆಎಸ್ ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್ ಮತ್ತು ಎಐಎಡಬ್ಲ್ಯುಯು ಜಂಟಿ ಕಾರ್ಯದರ್ಶಿ ವಿಕ್ರಮ್ ಸಿಂಹ ಬಾವುಟ ತೋರಿಸಿ ಉದ್ಘಾಟಿಸಿದರು.
ಅದು ಪಾಣಿಪತ್ ಮೂಲಕ ಸಿಂಘು ಗಡಿಯನ್ನು ತಲುಪುತ್ತದೆ. ಇದರಲ್ಲಿ ಪಂಜಾಬಿನ ರೈತರೊಂದಿಗೆ ಹರ್ಯಾಣದ ರೈತರೂ ಸೇರಿಕೊಳ್ಳುತ್ತಾರೆ.
ಮೂರನೇ ಜಾಥಾದಲ್ಲಿ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ರೈತರು ಭಾಗವಹಿಸುತ್ತಿದ್ದು ಅದು ಮಥುರಾದಿಂದ ಮಾರ್ಚ್ 19ರಂದು ಹೊರಟಿದೆ. ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಇದನ್ನು ಉದ್ಘಾಟಿಸಿದ್ದಾರೆ. ಉದ್ಘಾಟನಾ ಸಭೆಯಲ್ಲಿ ಎಐಕೆಎಸ್‌ನ ಹಣಕಾಸು ಕಾರ್ಯದರ್ಶಿಯವರಲ್ಲದೆ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಕಿಸಾನ್ ಸಭಾ ರಾಜ್ಯಕಾರ್ಯದರ್ಶಿಗಳು ಮತ್ತಿತರರು ಭಾಗವಹಿಸಿದ್ದಾರೆ.
90ಕಿ.ಮೀ.ಗಳ ಈ ಪಾದಯಾತ್ರೆಯಲ್ಲಿ ಭಾಗವಹಿಸಿರುವವರು ಮಾರ್ಚ್ 23 ರಂದು ಪಲ್ವಲ್ ಗಡಿಯನ್ನು ತಲುಪುತ್ತಾರೆ.
ಮೂರೂ ಪಾದಯಾತ್ರೆಗಳು ದಾರಿಯುದ್ದಕ್ಕೂ ಮಾರ್ಚ್ 26ರ ಭಾರತ್ ಬಂದ್‌ಗೆ ಸಿದ್ಧತೆಯಾಗಿ ಹಲವು ಸಭೆಗಳನ್ನು ನಡೆಸುತ್ತವೆ, ಮೋದಿ-ಷಾ-ಅಂಬಾನಿ- ಅದಾನಿ ಕೂಟದ ಧೋರಣೆಗಳನ್ನು ಬಯಲಿಗೆಳೆಯುತ್ತವೆ ಎಂದು ಎಐಕೆಎಸ್, ಸಿಐಟಿಯು ಹಾಗೂ ಎಐಎಡಬ್ಲ್ಯುಯು ಹೇಳಿವೆ.