ಯಾದಗಿರಿ: ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದ್ದು, ಹುಣಸಗಿ ತಾಲೂಕಿನ ಬೊಮ್ಮಗುಡ್ಡ ಗ್ರಾಮದ ಹೋಟೆಲ್ ನಲ್ಲಿ ದಲಿತರು ಬೊಗಸೆಯಲ್ಲಿ ನೀರು ಕುಡಿಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೋಟೆಲ್‌ನವರು ದಲಿತರ ಬೊಗಸೆಗೆ ಲೋಟದಲ್ಲಿನ ನೀರನ್ನು ಮೇಲಿನಿಂದ ಸುರಿಯುತ್ತಿರುವ ವಿಡಿಯೊ ವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಜನರು ಆಕ್ರೋಶ ವ್ಯಕ್ತಪಡಿಸೊದ್ದರು. ನಾವೆಲ್ಲ ಹಿಂದೂ ಎನ್ನುವವರಿಗೆ ದಲಿತರನ್ನು ಈ ರೀತಿ ಅವಮಾನಿಸುತ್ತಿರುವುದು, ಅಸ್ಪೃಶ್ಯತೆ ಆಚರಿಸುತ್ತಿರುವುದು ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಲಾಗಿತ್ತು.
ಬೊಮ್ಮಗುಡ್ಡ ಗ್ರಾಮದ ಹೋಟೆಲ್‌ನಲ್ಲಿ ದಲಿತರಿಗೆ ನೀರು ಕುಡಿಯಲು ಲೋಟ(ಗ್ಲಾಸ್) ಕೊಡುವುದಿಲ್ಲ. ಇದರ ಬದಲಾಗಿ ಹೋಟೆಲ್ ನವರೇ ಅವರಿಗೆ ಜಗ್ಗಿನ ಮೂಲಕ ಎತ್ತರಿಸಿ ನೀರು ಹಾಕುತ್ತಾರೆ. ಇಂತಹ ಘಟನೆಗಳು ರಾಜ್ಯದ ಬಹಳಷ್ಟು ಹಳ್ಳಿಗಳಲ್ಲಿ ನಡೆಯುತ್ತಿವೆ. ದಲಿತರನ್ನು ಕೀಳಾಗಿ ಕಾಣುವ ಈ ಘಟನೆಗಳು ಮರುಇಸಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ್ದ ಎಸ್‌ಪಿ ಸಿ.ಬಿ. ವೇದಮೂರ್ತಿ ಹೋಟೆಲ್‌ನವರ ಮೇಲೆ ಪ್ರಕರಣ ದಾಖಲಿಸಲಾಗುವುದು,” ಎಂದು ತಿಳಿಸಿದ್ದಾರೆ. ಗ್ರಾಮದ ಹೊಟೇಲ್‌ನಲ್ಲಿ ತಾರತಮ್ಯ ಮಾಡುವದು ಹಾಗೂ ದೇವಸ್ಥಾನಗಳಲ್ಲಿ ಒಳಗೆ ಪ್ರವೇಶ ತಡೆಯುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಯಾರೇ ಇಂತಹ ಆಚರಣೆ ಮಾಡಿದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಗ್ರಾಮದಲ್ಲಿ ಎಲ್ಲರೂ ಸಹೋದರತ್ವ ಭಾವನೆಯಿಂದ ಬಾಳುವದನ್ನು ರೂಢಿಸಿಕೊಳ್ಳುವಂತೆ ತಿಳಿವಳಿಕೆ ಹೇಳಿದರು.
ಪರಿಶಿಷ್ಟ ಜನಾಂಗದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದಾಗಲಿ, ಅಥವಾ ಬಡವರ ಮೇಲೆ ದೌರ್ಜನ್ಯ ಮಾಡುವವರ ವಿರುದ್ಧ ಕಠಿಣ ಕಾನೂನುಗಳು ಕ್ರಮ ಕೈಗೊಳ್ಳುವದಾಗಿ ಹೇಳಿದರು.
ಈ ವೇಳೆ ಸುರಪುರ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಸತ್ಯನಾರಾಯಣ, ಕೊಡೇಕಲ್ಲ ಪಿಎಸ್‌ಐ ಭಾಷುಮೀಯಾ ಕೊಂಚೂರು ಇದ್ದರು.