ಜನವರಿ 30ರಂದು ರಾಜ್ಯದೆಲ್ಲೆಡೆ ಮಾನವ ಸರಪಳಿ | ‘ಸೌಹಾರ್ದ ಕರ್ನಾಟಕ’ ರಾಜ್ಯ ಸಮಾವೇಶದಲ್ಲಿ ನಿರ್ಣಯ

ಬೆಂಗಳೂರು: ಸೌಹಾರ್ದವನ್ನು ಉಳಿಸುವುದಕ್ಕಾಗಿ ‘ಹೇ ರಾಮ್’ ಎನ್ನುತ್ತಾ ಪ್ರಾಣ ತೆತ್ತ ಗಾಂಧೀಜಿ ಹತ್ಯೆಯಾದ ಜನವರಿ 30ರಂದು ರಾಜ್ಯದೆಲ್ಲೆಡೆ ನಾಡಿನ ಸೌಹಾರ್ದ ಪರಂಪರೆಯನ್ನು ಮೇಲೆತ್ತಿ ಹಿಡಿಯುವ ಸೌಹಾರ್ದ ಮಾನವ ಸರಪಳಿಯಲ್ಲಿ ಲಕ್ಷಾಂತರ ಜನರನ್ನು ಅಣಿ ನೆರೆಸಬೇಕೆಂದು ‘ಸೌಹಾರ್ದ ಕರ್ನಾಟಕ’ ರಾಜ್ಯ ಸಮಾವೇಶದಲ್ಲಿ ಗುರುವಾರ ನಿರ್ಣಯ ಮಾಡಿದೆ.

ಬೆಂಗಳೂರಿನ ಕಬ್ಬನ್ ಪಾರ್ಕ್‌ನ ಎಜ್‌ಜಿಒ ಹಾಲ್‌ನಲ್ಲಿ ನಡೆದ ‘ಸೌಹಾರ್ದ ಕರ್ನಾಟಕ’ ರಾಜ್ಯ ಸಮಾವೇಶದಲ್ಲಿ ಹೋರಾಟಗಾರ ಎಸ್. ವೈ ಗುರುಶಾಂತ್ ಅವರು ಸಮಾವೇಶದ ನಿರ್ಣಯ ಮಂಡಿಸಿದರು. ನಿರ್ಣಯ ಕೆಳಗಿನಂತಿದೆ; ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಹೋಗುವುದಿಲ್ಲ | ಶಂಕರಾಚಾರ್ಯರ ನಿರ್ಧಾರ

ಬೆಂಗಳೂರಿನ ಕರಗ ಕಾಟನ್ ಪೇಟೆಯ ತವಕ್ಕಲ್ ಮಸ್ತಾನ್ ದರ್ಗಾಕ್ಕೆ ಬಂದು ಓದಿಕೆ ಮಾಡಿಸಿದ ಮೇಲೆಯೇ ಆರಂಭ. ಮಕ್ಕಳ ವೈದ್ಯನಾದ ಮಸ್ತಾನ್ ದರ್ಗಾದಲ್ಲಿ ಮಕ್ಕಳನ್ನು ಬಗಲಲ್ಲಿ ಹೊತ್ತು ಬರುವ ತಾಯಂದಿರ ಧರ್ಮ ಯಾವುದು ? ಬಳ್ಳಾರಿ- ಕೊಪ್ಪಳದ ಜಿಲ್ಲೆಯ ನಡುವಿನ ಪ್ರಾಚೀನ ಮಾತೃ ದೇವತೆ ಹುಲಿಗೆಮ್ಮನಿಗೆ ಸೈಯದ್ ಸರ್ಮದ್ ಹುಸೈನಿ ಚಿಸ್ತಿ ಹೊನ್ನೂರಪ್ಪನೆಂದು ಹೆಸರಾಗಿ ಅಣ್ಣನೆಂದು ಪರಿಗಣಿತನಾದ ಅಚ್ಚರಿ, ಕಲಬುರಗಿಯ ಖಾಜಾ ಬಂದೇ ನವಾಜ್ ಮತ್ತು ಶರಣ ಬಸಪ್ಪಾ ಅಪ್ಪನಿಗೂ , ಇಳಕಲ್ಲಿನ ಪ್ರಸಿದ್ಧ ಮಹಾಂತಸ್ವಾಮಿ ಮಠಕ್ಕೂ ಅಲ್ಲಿಯ ಮರ್ತುಜಾ ಖಾದ್ರಿಗೂ ಇರುವ ಆಪ್ತತೆ ಅಳೆಯಬಹುದೇ! ಸೌಹಾರ್ದ ಕರ್ನಾಟಕ

ಮುಸ್ಲಿಂ ಸಂತರು ಯಮನೂರಪ್ಪ, ಹೊನ್ನೂರಪ್ಪ, ಚಂದಪ್ಪ, ಸಾಹಿಬಣ್ಣಗಳಾಗಿ ಹಿಂದೂ ಮುಸ್ಲಿಂ ಸಮುದಾಯಗಳಿಗೆ ಸೇರಿದ ಹತ್ತಾರು ಸಾವಿರ ಜನರ ಹೆಸರಾಗಿ ಇಂದಿಗೂ ಮೆರೆಯುತ್ತಿರುವುದು ಹೇಗೆ ? ಒಬ್ಬನೇ ವ್ಯಕ್ತಿಗೆ ಈ ಕಡೆ ದೇವಾಲಯ,ಆ ಕಡೆ ದರ್ಗಾ ಎರಡನ್ನೂ ಕಟ್ಟಿ ಪೂಜೆ ಮಾಡುವುದು ಯಾವ ಪರಿಯ ಭಕ್ತಿ ! ತಿಂತಿಣಿ ಮೋನಪ್ಪನ ಬಗ್ಗೆ, “ನೀನೇ ಮೌನನು, ನೀನೇ ಫಕೀರನು ಒಂದು ಚರಣಕೆ ಕೆರವು ಮತ್ತೊಂದು ಚರಣಕೆ ಪಾಪೋಸು “ ಎಂದು ಹಾಡುವುದು, ಕೋಡೇಕಲ್ ಬಸವಣ್ಣ, ಸಾವಳಗಿ ಶಿವಲಿಂಗ, ಶಿರಹಟ್ಟಿ ಫಕೀರೇಶ, ಗುರುಗೋವಿಂದ ಭಟ್ಟ, ಶಿಶುನಾಳ ಶರೀಫ, ಏಳು ನೂರು ಖಲಂದರರಿಗೆ ಗುರುವಾದ, ಮಕ್ಕಾ ಯಾತ್ರೆ ಮಾಡಿದ ಮಳೆಯ ಮಲ್ಲೇಶ, ಮಂಟೇಸ್ವಾಮಿಯ ಜೊತೆಗಾರ, ಮಾರಿಯಮ್ಮಳಾದ ಮೇರಿಯಮ್ಮ ಲೆಕ್ಕ ಇಡಲಾಗದ ಎಷ್ಟೊಂದು ಪ್ರಸಂಗಗಳು ನಮ್ಮ ನಾಡಿನಲ್ಲಿ.

ಸೌಹಾರ್ದ ಕರ್ನಾಟಕ

ಇದನ್ನೂ ಓದಿ: ಉತ್ತರ ಪ್ರದೇಶ | ಅಪರಿಚಿತ ವ್ಯಕ್ತಿಗಳಿಂದ ತಾಯಿ, ಮಗಳ ಮೇಲೆ ಆಸಿಡ್ ದಾಳಿ!

ಹೀಗೆ ಕರ್ನಾಟಕದ ಸೌಹಾರ್ದ ಪರಂಪರೆ ಮೈಸೂರು ಸಂಸ್ಥಾನ, ಕಲ್ಯಾಣ ಕರ್ನಾಟಕ, ಕರಾವಳಿ, ಮದ್ಯ ಕರ್ನಾಟಕ ಹೀಗೆ ಎಲ್ಲ ಪ್ರದೇಶಗಳ ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಆದರೆ ಈ ಸೌಹಾರ್ದ ಸಮಾವೇಶ ನಡೆಯುತ್ತಿರುವ ಇಂದು ದಿನ ದಿನವೂ ದ್ವೇಷ ಹರಡುವ ಶಕ್ತಿಗಳು ಪ್ರತಿಯೊಂದು ಸಣ್ಣ ,ದೊಡ್ಡ ಘಟನೆಗಳನ್ನೂ, ದೇಶ, ವಿದೇಶಗಳ ಸಾವಿರಾರು ವರ್ಷಗಳ ಸಂಬಂಧಗಳನ್ನೂ ಧರ್ಮ ಧರ್ಮಗಳ ನಡುವಿನ ಕಾಳಗಗಳನ್ನಾಗಿ ಮಾಡುತ್ತಿವೆ. ಜನರು ತಂತಮ್ಮ ದೇವರಲ್ಲಿ ಇಟ್ಟಿರುವ ಭಕ್ತಿಯನ್ನು ದುರುಪಯೋಗ ಮಾಡುತ್ತಿವೆ. ನಮ್ಮ ದೇಶದ ಪ್ರಜೆಗಳಲ್ಲವೆಂದು ದೇಶದಿಂದಲೇ ಹೊರಹಾಕುವ ಪ್ರಯತ್ನಗಳು ಬಿರುಸಾಗುತ್ತಿವೆ.

ಇಂತಹ ಅಪಾಯಕರ ಸಂದರ್ಭದಲ್ಲಿ ಸೌಹಾರ್ದವನ್ನು ಉಳಿಸುವುದಕ್ಕಾಗಿ ಹೇ ! ರಾಮ್ !! ಎನ್ನುತ್ತಾ ಪ್ರಾಣ ತೆತ್ತ ಗಾಂಧೀಜಿಯವರು ಹತ್ಯೆಯಾದ ಜನವರಿ 30 ರಂದು ರಾಜ್ಯದೆಲ್ಲೆಡೆಯಲ್ಲಿ ನಾಡಿನ ಸೌಹಾರ್ದ ಪರಂಪರೆಯನ್ನು ಮೇಲೆತ್ತಿ ಹಿಡಿಯುವ ಸೌಹಾರ್ದ ಮಾನವ ಸರಪಳಿಯಲ್ಲಿ ಲಕ್ಷಾಂತರ ಜನರನ್ನು ಅಣಿ ನೆರೆಸಬೇಕೆಂದು ಈ ಸಮಾವೇಶವು ಕರೆ ನೀಡುತ್ತದೆ.

ಈ ಮಾನವ ಸರಪಳಿಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬಿತ್ಯಾದಿ ಬೇಧವಿಲ್ಲದೆ ಎಲ್ಲ ಜನ ಸಮುದಾಯ ಪಾಲ್ಗೊಂಡು ಸೌಹಾರ್ದವನ್ನು ಉಳಿಸಿ ಬೆಳೆಸಬೇಕೆಂದು ಮನವಿ ಮಾಡುತ್ತದೆ. ಈ ಮಾನವ ಸರಪಳಿ ನಾಡಿನಾದ್ಯಂತ ಹಲ ಹಲವು ಸೌಹಾರ್ದ ರಕ್ಷಣೆಯ ಚಟುವಟಿಕೆ ಮತ್ತು ಕಾರ್ಯಕ್ರಮಗಳ ಸರಣಿಯನ್ನು ಸಂಘಟಿಸುವ ಕ್ರಿಯಾಶೀಲತೆಗೆ ಮುನ್ನುಡಿಯಾಗಬೇಕೆಂದು ಆಶಿಸುತ್ತದೆ.

ವಿಡಿಯೊ ನೋಡಿ“ಸೌಹಾರ್ದ ಪರಂಪರೆ ಮತ್ತು ಸಮಕಾಲೀನತೆ” ರಾಜ್ಯ ಸಮಾವೇಶ

 

Donate Janashakthi Media

Leave a Reply

Your email address will not be published. Required fields are marked *