ಬಾಪು ಅಮ್ಮೆಂಬಳ
ತಮ್ಮ ಹಕ್ಕುಗಳನ್ನು ಬಡಿದಾಡುತ್ತಲೆ ದಕ್ಕಿಸಿಕೊಂಡ ಸಮುದಾಯದಿಂದ ಬಂದಿರುವ ಹುಲಿಕುಂಟೆ ಮೂರ್ತಿ ಬಲಪಂಥೀಯರ ದಾಳಿಗಳಿಗೆ ಬೆದರುವುದಿಲ್ಲ
ಸಮಾಜವನ್ನು ಸಕಾರಾತ್ಮಕವಾಗಿ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಅದರಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ದೇಶದಲ್ಲಿ ಶಿಕ್ಷಕ ಈ ಕೆಲಸವನ್ನು ಇನ್ನೂ ಅಚ್ಚುಕಟ್ಟಾಗಿ ನಿರ್ವಹಿಸಹುದು. ಇಂತಹ ಮಹತ್ವವಾದ ಕೆಲಸಗಳಲ್ಲಿ ತೊಡಗಿಕೊಳ್ಳುವ ಶಿಕ್ಷಕರಿಗೆ, ‘ನೀವು ಕೈ-ಬಾಯಿ ಕಟ್ಟಿ ಮುಚ್ಚಿಕೊಂಡಿರಿ’ ಎಂದರೆ ಅದು ಪ್ರಜಾಪ್ರಭುತ್ವವಾದಿತೆ? ಇಂತಹ ಸಮಾಜದಲ್ಲಿ ಶಿಕ್ಷಕರು ತಮ್ಮ ಮಹತ್ತರವಾದ ಕೆಲಸಗಳನ್ನು ಮಾಡಲು ಸಾಧ್ಯವೆ? ಪ್ರಶ್ನೆಗಳನ್ನೆ ಒಪ್ಪಿಕೊಳ್ಳದ ಪ್ರಭುತ್ವ ಇದ್ದರೆ ಅದು ಪ್ರಜಾಪ್ರಭುತ್ವ ಎನಿಸಿಕೊಳ್ಳುತ್ತದೆಯೆ? ಹುಲಿಕುಂಟೆ ಮೂರ್ತಿ
ನಮ್ಮ ದೇಶ ಪ್ರಜಾಪ್ರಭುತ್ವ ಎನಿಸಿಕೊಂಡಿದ್ದರೂ ಪ್ರಶ್ನೆ ಕೇಳುವವರನ್ನು ದಮನಿಸುವುದನ್ನು ಬಹಳ ಹಿಂದಿನಿಂದಲೂ ಮಾಡಿಕೊಂಡೆ ಬಂದಿದೆ. ಕಳೆದ 9 ವರ್ಷಗಳ ಅವಧಿಯಲ್ಲಿ ಈ ಪ್ರಶ್ನೆಗಳ ಬಾಯಿಯನ್ನೆ ಮುಚ್ಚುವ ರೀತಿಯಲ್ಲಿ ದೇಶದ ಪ್ರಭುತ್ವ ನಡೆದುಕೊಂಡು ಬಂದಿದೆ. ದೇಶದ ಹಲವಾರು ಶಿಕ್ಷಕರು, ವಿದ್ಯಾರ್ಥಿಗಳು, ಪತ್ರಕರ್ತರು ಜೈಲಿಗೆ ಹೋಗುತ್ತಿರುವುದು ಕಳೆದ 9 ವರ್ಷಗಳ ಹೆಚ್ಚಾಗಿದೆ. ಅದರಲ್ಲೂ ಇಂತಹ ಪ್ರಜ್ಞಾವಂತರ ಮೇಲೆ ಸುಳ್ಳು ಮತ್ತು ತಪ್ಪುತಪ್ಪಾಗಿ ಪ್ರಕರಣ ದಾಖಲಿಸಿ ಅವರ ಧ್ವನಿಗಳನ್ನು ಕಿತ್ತು ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಮಾಡುವ ಕೆಲಸ ಜೋರಾಗಿಯೆ ನಡೆಯುತ್ತಿದೆ.
ಇಂತಹದ್ದೇ ಒಂದು ಪ್ರಕರಣ ನಮ್ಮ ರಾಜ್ಯದಲ್ಲಿ ಇಷ್ಟೊತ್ತಿಗೆ ನಡೆದುಹೋಗಿರಬೇಕಿತ್ತು. ಆದರೆ ಅದೃಷ್ಟವಶಾತ್ ಬಿಜೆಪಿ ಸೋತು, ನೂತನ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾರಣ ಅದು ನಡೆಯಲಿಲ್ಲ ಎಂದೆ ನಾನು ನಂಬಿದ್ದೇನೆ.
ಇದನ್ನೂ ಓದಿ: ಶಾಲೆಗಳಿಗೆ ಹೊಸ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆ : ಸಚಿವ ಮಧು ಬಂಗಾರಪ್ಪ
ನಡೆದಿದ್ದು ಇಷ್ಟು, ಇಸ್ರೋ ವಿಜ್ಞಾನಿಕಗಳು ಸಂಸ್ಥೆಯ ಐಡಿ ಕಾರ್ಡ್ ಅನ್ನು ಕತ್ತಿಗೆ ತೂಗು ಹಾಕಿಕೊಂಡು ಚಂದ್ರಯಾನ-3 ಪ್ರತಿಕ್ರಿತಿಯನ್ನು ಹೊತ್ತುಕೊಂಡು ತಿರುಪತಿ ದೇವಸ್ಥಾನಕ್ಕೆ ಪೂಜೆಗೆ ತೆರಳಿದ್ದನ್ನು ಹುಲಿಕುಂಟೆ ಮೂರ್ತಿ ಎಂಬ ಕನ್ನಡ ಉಪನ್ಯಾಸಕರು ಪ್ರಶ್ನಿಸಿದ್ದರು. ಅವರ ಈ ಪ್ರಶ್ನೆ ನಮ್ಮ ದೇಶದ ಕೋಮುವಾದಿ ಪಕ್ಷವಾದ ಬಿಜೆಪಿಯ ಬೆಂಬಲಿಗರು, ಕಾರ್ಯಕರ್ತರು, ಹಾಗೂ ಶಾಸಕರಿಗೆ ಇದು ತಪ್ಪಾಗಿ ಕಂಡಿದೆ. ದಲಿತ ಚಳವಳಿಯಲ್ಲಿ, ಕನ್ನಡ ಕಟ್ಟುವ ಕಾಯಕದಲ್ಲಿ ಹಾಗೂ ಶಿಕ್ಷಕರಾಗಿಯೂ ನಮ್ಮ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಚಿಂತಕರೂ ಆಗಿರುವ ಹುಲಿಕುಂಟೆ ಮೂರ್ತಿ ಅವರನ್ನು ಬಿಜೆಪಿ ಬೆಂಬಲಿತರು ಕೆಟ್ಟದಾಗಿ ಗುರಿಯಾಗಿಸಿಕೊಂಡಿದ್ದಾರೆ.
ಅಷ್ಟೆ ಅಲ್ಲದೆ, ನಮ್ಮ ರಾಜ್ಯದ ಮಾಜಿ ಶಿಕ್ಷಣ ಸಚಿವ, ಬಿಜೆಪಿಯ ಶಾಸಕ ಸುರೇಶ್ ಕುಮಾರ್ ಅವರು ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು ಹುಲಿಕುಂಟೆ ಮೂರ್ತಿ ಅವರಿಗೆ ಎಚ್ಚರಿಕೆ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ ಈ ಮಾಜಿ ಶಿಕ್ಷಣ ಸಚಿವ ಪತ್ರದಲ್ಲೂ ಸುಳ್ಳು ಬರೆದು ಬಿಜೆಪಿಯ ಟ್ರೋಲ್ ಸೈನ್ಯವನ್ನು ಅನುಕರಿಸಿದ್ದಾರೆ. ಪತ್ರದಲ್ಲಿ ಅವರು ವಿಜ್ಞಾನಿಗಳ ತಪ್ಪ ನಡೆಗಳ ಬಗ್ಗೆ ಹುಲಿಕುಂಟೆ ಮೂರ್ತಿ ಪ್ರಶ್ನಿಸಿರುವುದನ್ನು ಉಲ್ಲೇಖಿಸದೆ, “ಭಾರತೀಯರ ಹೆಮ್ಮೆಯ ಚಂದ್ರಯಾನ-3 ನ್ನು ಕೆಟ್ಟದಾಗಿ ಅಣಕಿಸಿದ್ದಾರೆ’ ಎಂದು ತಪ್ಪು ಗ್ರಹಿಸಿ ಬರುವಂತೆ ಸುಳ್ಳನ್ನು ಸೂಕ್ಷ್ಮವಾಗಿ ಸೇರಿಸಿಕೊಂಡಿದ್ದಾರೆ. ಒಟ್ಟು ಇಡೀ ಪತ್ರದಲ್ಲಿ ಚಂದ್ರಯಾನ-3ರ ಉಡಾವನೆಯನ್ನು ಹುಲಿಕುಂಟೆ ಮೂರ್ತಿ ಅವರು ಸಂಭ್ರಮಿಸದೆ, ಅದಕ್ಕೆ ವಿರೋಧವಾಗಿ ನಡೆದುಕೊಂಡಿದ್ದಾರೆ ಎಂಬಂತೆ ವ್ಯಾಖ್ಯಾನಿಸಿ ಮಾಜಿ ಸಚಿವರು ಬರೆದುಕೊಂಡಿದ್ದಾರೆ.
ಹಾಗೆ ನೋಡಿದರೆ, ರಾಜ್ಯದ ಪಠ್ಯಪುಸ್ತಕದಲ್ಲಿ ಮತೀಯ ದ್ವೇಷ ತುಂಬಿ, ನಾಡು-ನುಡಿಯನ್ನು ಕಟ್ಟಿದ ಗಣ್ಯರನ್ನು ಅವಮಾನ ಮಾಡಿ, ಇತಿಹಾಸವನ್ನು ತಿರುಚಿದ ಹಗರಣದ ಮುಖ್ಯ ರುವಾರಿಯೆ ಈ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಗಿದ್ದಾರೆ. ಶಿಕ್ಷಣ ಸಚಿವರಾಗಿದ್ದಾಗ ಶಿಕ್ಷಣಕ್ಕೆ ಬೇಕಾದ ಯಾವ ಸಕಾರಾತ್ಮಕ ಕೆಲಸವನ್ನು ಮಾಡದ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಜವಾಬ್ದಾರಿಯುತ ಶಿಕ್ಷಕನ ಗಂಭೀರ ಪ್ರಶ್ನೆಗಳನ್ನು ಮರೆಮಾಚಿ, ಅವರ ವಿರುದ್ಧ ದ್ವೇಷ ಹರಡುವ ಟ್ರೋಲ್ ಆರ್ಮಿಯ ಮುಖ್ಯಸ್ಥರಂತೆ ಕೆಲಸ ಮಾಡುತ್ತಿದ್ದಾರೆ. ಮಾಜಿ ಶಿಕ್ಷಣ ಸಚಿವರ ಈ ರೀತಿ ನಡೆ ಹೊಸದೇನೂ ಅಲ್ಲ. ವಿಚಾರವೊಂದನ್ನು ತಪ್ಪು ನಿರೂಪಣೆ ನೀಡಿ, ಸುಳ್ಳುಗಳನ್ನೂ ಸುಂದರವಾಗಿ ಕಾಣುವಂತೆ ಮಾಡಿ ಜನರನ್ನು ದಾರಿ ತಪ್ಪಿಸಿದ ಹಲವಾರು ಉದಾಹರಣೆ ಇವರ ವಿರುದ್ಧ ಇವೆ.
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸಿ ಹೊಸ ಶಿಕ್ಷಣ ನೀತಿ: ಬಜೆಟ್ ನಲ್ಲಿ ಸಿಎಂ ಘೋಷಣೆ
ಈ ನಡುವೆ ಕೆಲವರು ಸರ್ಕಾರಿ ನೌಕರರು ಸರ್ಕಾರದ ನೀತಿಗಳ ವಿರುದ್ಧ ಮಾತನಾಡಬಾರದು ಎಂಬ ನಿಯಮವನ್ನು ಮುನ್ನಲೆಗೆ ತಂದು ಹುಲಿಕುಂಟೆ ಮೂರ್ತಿ ಅವರನ್ನು ಹಣಿಯಲು ಮುಂದಾಗುತ್ತಿದ್ದಾರೆ. ಹಾಗೆ ನೋಡಿದರೆ ಪ್ರಜಾಪ್ರಭುತ್ವದ ಸೌಂದರ್ಯ ಇರುವುದೆ ಟೀಕೆಗಳಲ್ಲಿ. ವಾಸ್ತವದಲ್ಲಿ ಹುಲಿಕುಂಟೆ ಮೂರ್ತಿ ಅವರು ಯಾವುದೆ ಸರ್ಕಾರದ ನೀತಿಗಳನ್ನು ಪ್ರಶ್ನಿಸಿಯೆ ಇಲ್ಲ. ಅವರು ಪ್ರಶ್ನೆ ಮಾಡಿದ್ದು, ಇಸ್ರೋ ಎಂಬ ಸರ್ಕಾರಿ ಸಂಸ್ಥೆಯ ವಿಜ್ಞಾನಿಕಗಳು ಸಂಸ್ಥೆ ಐಡಿ ಕಾರ್ಡ್ ಹಾಕಿಕೊಂಡು, ಚಂದ್ರಯಾನ-3ರ ಪ್ರತಿಕೃತಿಯನ್ನು ಕೊಂಡೊಯ್ಯಿದಿದ್ದನ್ನು ಮತ್ತು ವೈಚಾರಿಕವಾಗಿ ಇರಬೇಕಾಗಿದ್ದ ವಿಜ್ಞಾನಿಗಳು ಹೀಗೆ ಬಹಿರಂಗಾಗಿ ಧಾರ್ಮಿಕತೆಯನ್ನು ಸರ್ಕಾರಿ ಪ್ರಾಯೋಜಿತವಾಗಿ ಜಾಹಿರಾತು ಮಾಡಿದ್ದನ್ನು. ಇದರಲ್ಲಿ ಸರ್ಕಾರ ವಿರುದ್ಧವಾದ ಟೀಕೆ ಎಲ್ಲಿದೆ. ಅಷ್ಟಕ್ಕೂ ಒಬ್ಬ ಸಮಾಜವನ್ನು ಕೈಹಿಡಿದು ಮುನ್ನಡೆಸಬೇಕಾದ, ತಿದ್ದಲು ಅರ್ಹತೆಯಿರುವ ಶಿಕ್ಷಕನೊಬ್ಬ ‘ಪ್ರಶ್ನೆ’ ಮಾಡಬೇಡಿ ಎಂದರೆ ಏನರ್ಥ?
ಒಂದು ವೇಳೆ ಶಿಕ್ಷಕರಾದವರು ಸರ್ಕಾರದ ವಿರುದ್ಧ ಮಾತನಾಡಿದರೆ ತಪ್ಪೇನು? ಸರ್ಕಾರಿ ಶಿಕ್ಷಕರೇನು ಸರ್ಕಾರದ ಗುಲಾಮರೆ? ಸರ್ಕಾರ ಮಾಡಿದ್ದನ್ನೆಲ್ಲವನ್ನೂ ಒಪ್ಪಿಕೊಳ್ಳಬೇಕು ಎನ್ನಲು ಇದೇನು ರಾಜ ಪ್ರಭುತ್ವವೆ? ಪ್ರಶ್ನೆ ಕೇಳಲಾಗದ ಶಿಕ್ಷಕನೊಬ್ಬ ಅದು ಹೇಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಿಕೊಡಬಲ್ಲ. ಹಾಗೆ ನೋಡಿದರೆ ಸರ್ಕಾರದ ವಿರುದ್ಧ ದೇಶದಾದ್ಯಂತ ಹಲವಾರು ಶಿಕ್ಷಕರು ಈಗಾಗಲೆ ಪ್ರಶ್ನೆ ಕೇಳುತ್ತಲೆ ಬಂದಿದ್ದಾರೆ. ದೇಶದ ಸ್ವಾತಂತ್ಯ್ರ ಕಾಲದಲ್ಲಿ ಹೋರಾಟಗಳು ಗಟ್ಟಿ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದುದೆ ಕಾಲೇಜುಗಳಲ್ಲಿ. ಸ್ವಾತಂತ್ಯ್ರ ನಂತರವೂ ಹಲವಾರು ಹೋರಾಟಗಳು ರೂಪುಗೊಂಡಿದ್ದು ಕೂಡಾ ಕಾಲೇಜುಗಳಲ್ಲಿ. ಈ ಹೋರಾಟಗಳು ಹೊರಹೊಮ್ಮಲು ಶಿಕ್ಷಕರ ಪಾಲು ಇಲ್ಲವೆಂದು ಹೇಳಲು ಸಾಧ್ಯವಿದೆಯೆ? ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡುವುದನ್ನು ಹೇಳಿಕೊಡದ್ದರೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವೆ? ಅಷ್ಟಕ್ಕೂ ಪ್ರಶ್ನೆಗಳಿಲ್ಲದಿದ್ದರೆ ಅದು ಪುರಾಣಗಳಾಗುತ್ತವೆಯೆ ಹೊರತು ವಿಜ್ಞಾನವಾಗಲು ಸಾಧ್ಯವೆ?
ಈ ಬಗ್ಗೆ ಜನಶಕ್ತಿ ಜೊತೆಗೆ ಮಾತನಾಡಿದ ಶಿಕ್ಷಣತಜ್ಞ ಶ್ರೀಪಾದ್ ಭಟ್ ಅವರು, “ಆರೆಸ್ಸೆಸ್ ಆಗಲಿ, ಬಲಪಂಥೀಯರಾಗಲಿ ಭಿನ್ನಮತವನ್ನು ಒಪ್ಪುವುದೇ ಇಲ್ಲ. ದೇಶದ ಅತ್ಯುನ್ನತ ಸಂಸ್ಥೆಯ ವಿಜ್ಞಾನಿಗಳು ತಿರುಪತಿಗೆ ಹೋದರೆ ಅಥವಾ ಅವರು ಮೌಢ್ಯವನ್ನು ಆಚರಿಸಿದರೆ ಯಾರಾದರೂ ಪ್ರಶ್ನೆ ಮಾಡಿಯೆ ಮಾಡುತ್ತಾರೆ. ಅದನ್ನೆ ಹುಲಿಕುಂಟೆ ಮೂರ್ತಿ ಮಾಡಿದ್ದಾರೆ. ಆದರೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಏನೋ ಘನಂಧಾರಿ ಕೆಲಸ ಮಾಡಿದ್ದಾರೆ ಎಂಬಂತೆ ಅದನ್ನು ಫೇಸ್ಬುಕ್ಗೆ ಹಾಕಿ ಟ್ರೋಲ್ ಮಾಡುತ್ತಿದ್ದಾರೆ” ಎಂದು ಅಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಅಸಂವಿಧಾನಿಕ : ಯು.ಎಸ್ ಸುಪ್ರೀಂ ಕೋರ್ಟು
“ಪಾಠ ಮಾಡುವ ಎಲ್ಲಾ ಶಿಕ್ಷಕರು ಮೌಢ್ಯವನ್ನು ವಿರೋಧಿಸಿಯೆ ವಿರೋಧಿಸುತ್ತಾರೆ. ಒಂದು ಶಿಸ್ತಿಗಾಗಿ ಸರ್ಕಾರದ ನಿಲುವುಗಳ ವಿರುದ್ಧ ಮಾತನಾಡಬಾರದು ಎನ್ನುವುದು ಸರಿಯೆ. ಆದರೆ ಅವರು ಗುಲಾಮರಂತೆ ಇರಬೇಕು ಎನ್ನುವುದು ಸರಿಯಲ್ಲ. ಲಂಕೇಶ್ ಸೇರಿದಂತೆ ಹಲವಾರು ಕನ್ನಡದ ಸಾಹಿತಿಗಳು ತಾವು ಶಿಕ್ಷಕರಾಗಿದ್ದಾಗ ಸರ್ಕಾರವನ್ನು ಪ್ರಶ್ನೆ ಮಾಡಿದವರೆ. ಹಾಗೆ ನೋಡಿದರೆ, ಚಂದ್ರಯಾನ-3ರ ಪ್ರತಿಕೃತಿಯನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿದ್ದಕ್ಕೆ ಇಸ್ರೋ ವಿಜ್ಞಾನಿಗಳನ್ನು ಪ್ರಶ್ನೆ ಮಾಡಬೇಕಿತ್ತು. ಇದನ್ನು ಮಾಡದ ಬಿಜೆಪಿ ಶಾಕಸ ಬೇರೆನೋ ಮಾಡಿದ್ದಾರೆ. ರಾಜ್ಯ ಸರ್ಕಾರ ಇದನ್ನೆಲ್ಲಾ ಪರಿಗಣಿಸಬಾರದು, ಒಂದು ವೇಳೆ ಹುಲಿಕುಂಟೆ ಮೂರ್ತಿ ವಿರುದ್ಧ ಕ್ರಮ ಕೈಗೊಂಡರೆ ನಾವು ತೀವ್ರವಾಗಿ ಪ್ರತಿಭಟಿಸಲಿದ್ದೇವೆ” ಎಂದು ಹೇಳಿದ್ದಾರೆ.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷರಾದ ಜೈಕುಮಾರ್.ಹೆಚ್.ಎಸ್ ಮಾತನಾಡಿ, “ಇಸ್ರೋ ಸಂಸ್ಥೆಯು ನಮ್ಮದೇಶದ ವೈಜ್ಞಾನಿಕ ಸ್ವಾವಲಂಬನೆಯ ಪ್ರತೀಕ ಮತ್ತು ನಮ್ಮ ಹೆಮ್ಮೆ. ಆದರೆ, ರಾಕೆಟ್ ಉಡಾವಣೆಗೆ ಮುಂಚೆ ಪೂಜೆ ನೆರವೇರಿಸುವುದಕ್ಕೆ ನಮ್ಮ ಪ್ರಗತಿಪರ ಮನಸ್ಸುಗಳು ವಿರೋಧ ವ್ಯಕ್ತಪಡಿಸುತ್ತಾ ಬಂದಿರುವುದು ಸಹಜವೇ. ಏಕೆಂದರೆ, ನಮ್ಮ ಸಂವಿಧಾನ ಒತ್ತಿಹೇಳುವ ವೈಚಾರಿಕ ಪ್ರಜ್ಞೆಗೆ ಶಾಸ್ತ್ರಾಚರಣೆಗಳು ವ್ಯತಿರಿಕ್ತವಾದವುಗಳು. ಹುಲಿಕುಂಟೆ ಮೂರ್ತಿಯವರು ಪ್ರಗತಿಪರ ವೈಚಾರಿಕ ಮನಸ್ಸುಳ್ಳವರಾಗಿದ್ದು, ಅವರ ಭಾವವನ್ನು ಅರ್ಥ ಮಾಡಿಕೊಳ್ಳಬೇಕಿತ್ತು.” ಎಂದು ಹೇಳಿದ್ದಾರೆ.
ಈ ನಡುವೆ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಪತ್ರದ ಹಿನ್ನೆಲೆ ಶಿಕ್ಷಣ ಇಲಾಖೆ ಹುಲಿಕುಂಟೆ ಮೂರ್ತಿ ಅವರಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಜನಶಕ್ತಿ ಮೀಡಿಯಾಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ನ ಶಿಕ್ಷಕನ ಸೆಲ್ನ ರಾಜ್ಯ ಸಂಚಾಲಕರಾದ ತಿಮ್ಮಯ್ಯ ಪುರ್ಲೆ, “ವಿಜ್ಞಾನಿಗಳು ಮತ್ತು ವಿಜ್ಞಾನ ಮೂಡನಂಬಿಕೆಗಳನ್ನು ಹೋಗಲಾಡಿಸುವ ಕೆಲಸ ಮಾಡಬೇಕಿದೆ. ಅದನ್ನು ಪ್ರತಿಪಾದಿಸಿದ ಹುಲಿಕುಂಟೆ ಮೂರ್ತಿ ವಿರುದ್ಧ ನೋಟಿಸ್ ನೀಡಿದ್ದನ್ನು ನಾನು ಖಂಡಿಸುತ್ತೇನೆ. ಅದರ ವಿರುದ್ಧದ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ” ಎಂದು ಹೇಳಿದ್ದಾರೆ. ತಿಮ್ಮಯ್ಯ ಪುರ್ಲೆ ಅವರು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಹುಲಿಕುಂಟೆ ಮೂರ್ತಿ ವಿಜ್ಞಾನಿಗಳ ನಡೆಯನ್ನು ಪ್ರಶ್ನಿಸಿದ ನಂತರ ಅವರ ಮೇಲೆ ಬಲಪಂಥೀಯರು ಆನ್ಲೈನ್ ದಾಳಿಯನ್ನು ಮಾಡುತ್ತಿದ್ದಾರೆ. ಅವರ ಕುಟುಂಬವನ್ನೂ ದುಷ್ಕರ್ಮಿಗಳು ನಿಂದಿಸುತ್ತಿರುವ ಸುಮಾರು 30 ಜನರ ವಿರುದ್ಧ ಹುಲಿಕುಂಟೆ ಮೂರ್ತಿ ಅವರು ದೂರು ದಾಖಲಿಸಿದ್ದಾರೆ. ಆನ್ಲೈನ್ ಮೂಲಕ ದಾಳಿ ಮಾಡುವ ಟ್ರೋಲ್ ಸೈನ್ಯಗಳ ಹುಟ್ಟುವ ಎಷ್ಟೊ ವರ್ಷಗಳ ಮುಂಚೆ, ಈ ದೇಶದ ದಲಿತ ಸಮುದಾಯ ‘ಅಸಮಾನತೆ’ಯ ಯುದ್ಧ ಭೂಮಿಯಲ್ಲಿ ನಿಂತು ತಮ್ಮ ವಿರುದ್ಧದ ದೌರ್ಜನ್ಯವನ್ನು ಪ್ರಶ್ನಿಸಿ ಅಭೂತಪೂರ್ವ ಜಯಗಳಿಸಿದೆ. ತಮ್ಮ ಹಕ್ಕುಗಳನ್ನು ಬಡಿದಾಡುತ್ತಲೆ ದಕ್ಕಿಸಿಕೊಂಡಿದೆ. ಅಂತಹದೆ ಸಮುದಾಯದಿಂದ ಬಂದಿರುವ ಹುಲಿಕುಂಟೆ ಮೂರ್ತಿ ಕೂಡಾ ಇವರ ದಾಳಿಗಳಿಗೆ ಬೆದರುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರನ್ನು ಬಿಜೆಪಿಯ ಟ್ರೋಲ್ಗಳು ಅವರನ್ನು ಕುಗ್ಗಿಸಲು ಸಾಧ್ಯವೆವಿಲ್ಲ. ಯಾಕೆಂದರೆ, ಅವರು ಬೆಂಕಿಯಲ್ಲಿ ಅರಳಿದ ಹೂವು, ಬಿಸಿಲಿಗೆ ಬಾಡುವುದಿಲ್ಲ.
ವಿಡಿಯೊ ನೋಡಿ: ಮಕ್ಕಳ ಶಿಕ್ಷಣದ ಭವಿಷ್ಯದ ಮೇಲೆ ‘ಹೊಸ ಶಿಕ್ಷಣ ನೀತಿ’ ಬೀರಬಹುದಾದ ಪರಿಣಾಮಗಳೇನು? – ಪ್ರೊ. ಬರಗೂರು ರಾಮಚಂದ್ರಪ್ಪ