ಕೊಡಗು : ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನಲ್ಲಿ ಮೂವರನ್ನು ಕೊಂದಿರುವ ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಕೇಂದ್ರ ಮಡಿಕೇರಿಯಲ್ಲಿ ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಮಾರ್ಚ್ 8 ರಂದು 9 ವರ್ಷದ ಬಾಲಕನನ್ನು ಕೊಂದಿದ್ದ ಬೆಳ್ಳೂರಿನಿಂದ ಆರಂಭವಾದ ಪ್ರತಿಭಟನಾ ವಾಹನ ಜಾಥಾ ಮಡಿಕೇರಿ ತಲುಪಿತು. ಬಳಿಕ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿ, ಮಂಗಳೂರು ಮಡಿಕೇರಿ, ಮಂಗಳೂರು ಮೈಸೂರು ರಸ್ತೆ ಸಂಚಾರವನ್ನು ಬಂದ್ ಮಾಡಿದರು. ಒಂದು ಗಂಟೆಗೂ ಅಧಿಕ ಸಮಯ ರಸ್ತೆ ತಡೆನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಗಂಟೆಗಳ ಕಾಲ ರಸ್ತೆಯನ್ನು ಬಂದ್ ಮಾಡಿದ್ದರಿಂದ ಮೈಸೂರು ಮಂಗಳೂರು ಮತ್ತು ಮಡಿಕೇರಿ ನಗರದ ಬಹುತೇಕ ರಸ್ತೆಗಳಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತು ಸವಾರರು ಪರದಾಡಬೇಕಾಯಿತು. ಬಳಿಕ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಇದನ್ನೂ ಓದಿ : ಕಾಡಾನೆಗಳ ಉಪಟಳ ತಪ್ಪಿಸಲು ಸಾಕಾನೆಗಳ ಕಾವಲು!
ಪ್ರತಿಭಟನೆಗೆ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಿಂದಲೂ ರೈತ ಮುಖಂಡರು ಆಗಮಿಸಿ ಬೆಂಬಲ ನೀಡಿದರು. ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಎಂ.ಸಿ. ನಾಣಯ್ಯ ಅರಣ್ಯ ಸಚಿವ ಅರವಿಂದ್ ಲಿಂಬಾವಳಿಗೆ ಇಲ್ಲಿನ ಜನರ ಸಮಸ್ಯೆಯನ್ನು ಬಗೆಹರಿಸಲು ಆಗಿದಿದ್ದರೆ, ಸಚಿವರಾಗಿರುವುದು ಏಕೆ ಎಂದು ಪ್ರಶ್ನಿಸಿದರು.
ಇನ್ನು ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಮನುಸೋಮಯ್ಯ ಮಾತನಾಡಿ ಕಳೆದ 25 ದಿನಗಳಿಂದ ಹುಲಿ ಸೆರೆಗಾಗಿ ಕಾರ್ಯಚರಣೆ ಮಾಡುತ್ತಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ನಾಟಕವಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇವರಿಗೆ ಹುಲಿಯನ್ನು ಹಿಡಿಯಲು ಸಾಧ್ಯವಾಗದಿದ್ದರೆ, ನಮಗೆ ಕಾನೂನು ಬದ್ಧವಾಗಿ ಹುಲಿ ಕೊಲ್ಲಲು ಅವಕಾಶ ನೀಡಲಿ. ನಾವು ಹುಲಿಯನ್ನು ಕೊಲ್ಲುತ್ತೇವೆ. ಇಲ್ಲವೆ ಸರ್ಕಾರ ಅತ್ಯಾಧುನಿಕ ವಿಧಾನಗಳನ್ನು ಬಳಸಿ ಹುಲಿಯನ್ನು ಹಿಡಿಯಲಿ ಎಂದು ಒತ್ತಾಯಿಸಿದರು.