ಹುಡುಗಿಯರ ವಿವಾಹ ವಯಸ್ಸು ಏರಿಕೆ-ವಿಫಲತೆ, ವಂಚನೆಗಳಿಂದ ಗಮನ ತಿರುಗಿಸುವ ತಂತ್ರ ಸರಕಾರ ಈ ನಿರ್ಧಾರವನ್ನು ರದ್ದು ಮಾಡಬೇಕು- ಎಐಡಿಡಬ್ಲ್ಯುಎ ಆಗ್ರಹ

ನವದೆಹಲಿ : ಕೇಂದ್ರ ಸಂಪುಟ ಇತ್ತೀಚೆಗೆ ಹುಡುಗಿಯರ ವಿವಾಹ ವಯಸ್ಸನ್ನು 18ರಿಂದ 21 ಕ್ಕೆ ಏರಿಸಲು ನಿರ್ಧರಿಸಿರುವುದಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯುಎ) ಬಲವಾದ ಅಸಮ್ಮತಿಯನ್ನು ವ್ಯಕ್ತಪಡಿಸಿದೆ. ‘ಮಹಿಳಾ ಸಬಲೀಕರಣ’ಕ್ಕೆ ಎಂದು ಹೇಳಲಾಗುವ ಈ ನಡೆ ಜನಗಳ ಅತ್ಯಂತ ಮೂಲಭೂತ ಶೈಕ್ಷಣಿಕ, ಉದ್ಯೋಗ ಮತ್ತು ಪೋಷಣಾಂಶಗಳ ಕುರಿತಾದ ಆವಶ್ಯಕತೆಗಳನ್ನು ಪೂರೈಸಲು ಸರಕಾರ ವಿಫಲವಾಗಿರುವಾಗ, ಯಾವುದೇ ಪರಿಣಾಮ ಬೀರಲಾರದ ಒಂದು ಕ್ರಮವಾಗಿ ಬಿಡುತ್ತದೆ ಎಂದು ಅದು ಹೇಳಿದೆ.

ಇದನ್ನು ಓದಿ: ಹೆಣ್ಣು ಮಕ್ಕಳ ಮದುವೆಗೆ ನಿಗದಿತ ವಯಸ್ಸು 18ರಿಂದ 21 ವರ್ಷಕ್ಕೆ ಏರಿಕೆ

ನಿಜ ಹೇಳಬೇಕೆಂದರೆ, ಈ ನಡೆ ತದ್ವಿರುದ್ಧ ಪರಿಣಾಮ ಬೀರಲಿದೆ. ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು ಏರಿಸುವುದರ ಪರಿಣಾಮವಾಗಿ ಆಯ್ಕೆಯ ಮದುವೆಗಳ ಮೇಲೆ ಗುರಿಮಾಡುವುದು ಇನ್ನಷ್ಟು ಹೆಚ್ಚಲಿದೆ. ಈಗಾಗಲೇ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವಲ್ಲಿ ಭಾರೀ ಅಡ್ಡಿ-ಆತಂಕಗಳನ್ನು ಎದುರಿಸಬೇಕಾಗಿರುವ ಪರಿಸ್ಥಿತಿಯಲ್ಲಿ ಇದು ಯುವತಿಯ ಲೈಂಗಿಕ ಆಸಕ್ತಿಯ ಮೇಲೆ ಹತೋಟಿ ಹಾಕುವ ಒಂದು ದಾರಿಯಾಗಿ ಬಿಡಬಹುದು. ಯುವ ವ್ಯಕ್ತಿಗಳ ನಡುವೆ ಸಹಮತದ ಲೈಂಗಿಕ ಚಟುವಟಿಕೆಯನ್ನು ಅಪರಾಧವಾಗಿಸುವ ಪ್ರಕ್ರಿಯೆ ಸಾಮಾನ್ಯವಾಗಿ ಅಪಹರಣ, ಮಾನಭಂಗ ಮತ್ತು ಬಾಲವಿವಾಹ ನಿಷೇಧ ಕಾಯ್ದೆ, 2006ರ ಅಡಿಯಲ್ಲಿ ಅಪರಾಧಗಳು ಮತ್ತು ಇತರ ಅಪರಾಧಗಳ ಆರೋಪಗಳಿಗೆ ಎಡೆಮಾಡಿಕೊಡುತ್ತದೆ ಮತ್ತು ಇದರಿಂದಾಗಿ ಈ ಕೂಡಿಕೆಗಳು ಮುರಿದು ಹೋಗುವಂತಾಗುತ್ತದೆ, ಮತ್ತು ಸಂಬಂಧಪಟ್ಟ ಯುವಕ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಉಂಟಾಗುತ್ತದೆ ಎಂಬುದು ಅಧ್ಯಯನಗಳಿಂದ ಮತ್ತು ನಮ್ಮ ಅನುಭವದಿಂದಲೇ ಗೊತ್ತಾಗಿದೆ. ಆದ್ದರಿಂದ ಇಂತಹ ಒಂದು ಕ್ರಮ ಮಹಿಳೆಯರ ಖಾಸಗಿತ್ವ ಮತ್ತು ಸ್ವಾಯತ್ತತೆಯ ಮೂಲಭೂತ ಸಂವಿಧಾನಿಕ ಹಕ್ಕುಗಳನ್ನು ಬಾಧಿಸುವಂತಾಗುತ್ತದೆ ಎಂದು ಎಐಡಿಡಬ್ಲ್ಯುಎ ಅಭಿಪ್ರಾಯ ಪಟ್ಟಿದೆ.

ಲಿಂಗ ಸಮಾನತೆ ತರಲಿಕ್ಕಾಗಿ ಮಹಿಳೆಯರ ವಿವಾಹ ವಯಸ್ಸನ್ನು ಏರಿಸಬೇಕು ಎಂಬ ತರ್ಕವೂ ದೋಷಪೂರಿತವಾಗಿದೆ ಎಂದಿರುವ ಎಐಡಿಡಬ್ಲ್ಯುಎ ತಾನು ಈ ಮೊದಲು ಹುಡುಗರ ವಿವಾಹ ವಯಸ್ಸನ್ನೇ 18ಕ್ಕೆ ಇಳಿಸಬೇಕು ಎಂದು ಆಗ್ರಹಿಸಿರುವುದನ್ನು ನೆನಪಿಸಿದೆ. ಏಕೆಂದರೆ ಇದು ಪ್ರಾಪ್ತ ವಯಸ್ಸು ಎಂದೆನಿಸಿದೆ, ಎಲ್ಲ ವ್ಯಕ್ತಿಗಳಿಗೆ ಮತದಾನದ ಹಕ್ಕು ಮತ್ತು ಒಪ್ಪಂದಗಳಿಗೆ ಸಹಿಹಾಕುವ ಸಾಮರ್ಥ್ಯ ಪಡೆಯುವ ವಯಸ್ಸು ಎಂದು ಪರಿಗಣಿತವಾಗಿದೆ. 18ನೇ ಕಾನೂನು ಆಯೋಗ ಕೂಡ ಸಮಸ್ಕಂಧತೆ ತರಲು ಹುಡುಗರ ವಿವಾಹ ವಯಸ್ಸನ್ನು 18ಕ್ಕೆ ಇಳಿಸಬೇಕು ಎಂದು ಶಿಫಾರಸು ಮಾಡಿದೆ. ಇದು ಕೂಡ ಹುಡುಗನನ್ನು ವಿವಿಧ ಕ್ರಿಮಿನಲ್ ದಂಡಗಳಿಗೆ ಒಳಪಡಿಸುವುದಕ್ಕೆ ತಡೆ ಹಾಕುತ್ತದೆ.

ವಿವಾಹ ವಯಸ್ಸನ್ನು ಏರಿಸುವ ಈ ನಡೆ ಸ್ಪಷ್ಟವಾಗಿಯೂ ಜನಗಳ ಗಮನವನ್ನು ಬೇರೆಡೆಗೆ ತಿರುಗಿಸುವ ಸರಕಾರದ ತಂತ್ರ ಎಂದು ಎಐಡಿಡಬ್ಲ್ಯುಎ ಅಭಿಪ್ರಾಯ ಪಟ್ಟಿದೆ. ಐಸಿಡಿಎಸ್ ನಂತಹ ಪೋಷಣಾಂಶ ಕಾರ್ಯಕ್ರಮಗಳು, ಶಿಕ್ಷಣ ಮತ್ತು ಆರೋಗ್ಯಪಾಲನೆಗೆ ಸಾಕಷ್ಟು ಸಂಪನ್ಮೂಲಗಳನ್ನು ಕೊಡಲು ನಿರಾಕರಿಸುವ ಸರಕಾರ ಅದನ್ನು ಮರೆಮಾಚಲು ಈ ತಂತ್ರದ ಮೊರೆ ಹೋಗಿದೆ. ಮಹಿಳೆಯರ ಪೋಷಣಾಂಶ ಸ್ಥಿತಿಗತಿ ಹುಟ್ಟಿನಿಂದಲೇ ಕೆಳ ಮಟ್ಟದಲ್ಲಿರುತ್ತದೆ ಎಂದು ಗಮನಿಸಿರುವಾಗ, 21 ಕ್ಕೆ ವಿವಾಹವಾಗಿ ನಂತರ ಮಗುವನ್ನು ಪಡೆಯುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯವೇನೂ ಉತ್ತಮಗೊಳ್ಳದು, ಅಥವ ಮರಣದರ ಇಳಿಯದು ಎಂದಿರುವ ಎಐಡಿಡಬ್ಲ್ಯುಎ ಹುಡುಗಿಯರ ವಿವಾಹ ವಯಸ್ಸನ್ನು 21ಕ್ಕೆ ಏರಿಸುವ ಈ ನಡೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *