ಹುಬ್ಬಳ್ಳಿ ಹಿಂಸಾಚಾರದಲ್ಲಿ ಕಾಂಗ್ರೆಸ್‌ನವರಿದ್ದರೆ ಬಂಧಿಸಲಿ; ಡಿಕೆ ಶಿವಕುಮಾರ್‌

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದಿರುವ ಕೋಮು ಹಿಂಸಾಚಾರ ಘಟನೆಯ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಬಿಜೆಪಿ ಮಾಡಿರುವ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿ ಎನ್ನುತ್ತಾ ಬಿಜೆಪಿಯನ್ನ ಕುಟುಕಿದ್ದಾರೆ. ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದವರು ಭಾಗಿಯಾಗಿದ್ದರೆ ಬಂಧಿಸಲಿ ಎಂದು ಸವಾಲು ಹಾಕಿದ ಅವರು, ಈವರೆಗೆ ಘಟನೆ ಸಂಬಂಧ ಕಾಂಗ್ರೆಸ್ ನಾಯಕರನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನೆಸಿದ್ದಾರೆ.

“ಹುಬ್ಬಳ್ಳಿ ಗಲಭೆ ವಿಚಾರವಾಗಿ ಮುಖ್ಯಮಂತ್ರಿ, ಕೇಂದ್ರ ಸಚಿವರು ಮತ್ತು ಸಂಸದರು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರು ಮಾತನಾಡುತ್ತಾರೆ ಎಂದು ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಈ ರಾಜ್ಯದಲ್ಲಿ ಕಾನೂನು ಇದ್ದು ಅದರಂತೆ ನಡೆದುಕೊಳ್ಳಲಿ” ಎಂದು ಹೇಳಿದರು.

ಹುಬ್ಬಳ್ಳಿ ಗಲಭೆ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಮೈಕ್ ಹಿಡಿದು ಜನರಿಗೆ ಪ್ರಚೋದನೆ ಮಾಡುತ್ತಿದ್ದರು ಎಂಬುದು ಬಿಜೆಪಿಯವರ ಆರೋಪವಾಗಿದೆ. ಪೊಲೀಸ್‌ನವರ ಮನವಿ ಮೇರೆಗೆ ನಮ್ಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ತಾಫ್ ಅವರು ಸ್ಥಳಕ್ಕೆ ಹೋಗಿದ್ದರು. ಇಲ್ಲದಿದ್ದರೆ ಪೊಲೀಸ್ ಜೀಪ್ ಮೇಲೆ ನಿಂತು ಮೈಕ್ ಹಿಡಿದು ಮಾತನಾಡಲು ಸಾಧ್ಯವೇ? ಅವರಿಗೂ ಕಲ್ಲೇಟು ಬಿದ್ದಿದ್ದು, ಕೈಗೆ ಗಾಯವಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಇದೇ ತಿಳಿಸಿದರು.

“ನಿನ್ನೆ ನಾನೇ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಲಾಗಿದೆ. ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್ ಗಿರಿ ಮಾಡುವವರ ರಕ್ಷಣೆಗೆ ನಾವು ಹೋಗುವುದಿಲ್ಲ. ಅದೇ ಸರ್ಕಾರದ ಮಂತ್ರಿಗಳು, ಮುಖ್ಯಮಂತ್ರಿಗಳು ಆರಂಭದಿಂದಲೂ ನೈತಿಕ ಪೊಲೀಸ್‌ಗಿರಿ ಮೊಟಕು ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಈ ರಾಜ್ಯದಲ್ಲಿ ಕಾನೂನು ಇದ್ದು, ಅದರಂತೆ ನಡೆದುಕೊಳ್ಳಲಿ. ಇವರು ಕಾನೂನು ಎಲ್ಲಿ ಸಮನಾಗಿ ಪಾಲನೆ ಮಾಡಿದ್ದಾರೆ? ನಮ್ಮ ಮೇಲೆ ಪ್ರಕರಣ ದಾಖಲಿಸಿ, ಈಶ್ವರಪ್ಪನವರ ಜತೆ ಮೆರವಣಿಗೆ ಹೋದವರ ಮೇಲೆ ಕೇಸ್ ದಾಖಲಿಸಿಲ್ಲ. ಶಿವಮೊಗ್ಗದಲ್ಲಿ ಸೆಕ್ಷನ್ 144 ಉಲ್ಲಂಘಿಸಿದಾಗ ಅವರ ಮೇಲೆ ಏಕೆ ಪ್ರಕರಣ ದಾಖಲಿಸಲಿಲ್ಲ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಅವರಿಂದಲೇ ಈಶ್ವರಪ್ಪಗೆ ಕ್ಲೀನ್‌ ಚೀಟ್‌

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷರು, “ಈ ಪ್ರಕರಣದ ತನಿಖೆ ನಡೆಯುವ ಮುನ್ನವೇ ಮುಖ್ಯಮಂತ್ರಿಗಳು, ಬಿಜೆಪಿ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಅವರು ಕ್ಲೀನ್ ಚಿಟ್ ಕೊಟ್ಟ ನಂತರ ಯಾವ ಪೊಲೀಸ್ ಅಧಿಕಾರಿಗಳು ತಾನೇ ಪ್ರಾಮಾಣಿಕವಾಗಿ ತನಿಖೆ ಮಾಡುತ್ತಾರೆʼ ಎಂದರು.

“ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸುವ ಬದಲು, ಆತನ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ. ಈ 40 % ಕಮಿಷನ್ ಕೇವಲ ಈ ಒಬ್ಬ ಗುತ್ತಿಗೆದಾರನ ಆರೋಪವಲ್ಲ, ರಾಜ್ಯದ 2 ಲಕ್ಷ ಗುತ್ತಿಗೆದಾರರು ಇರುವ ಸರ್ಕಾರಿ ನೋಂದಣಿಯಾಗಿರುವ ಸಂಘದ ಆರೋಪ ಎಂದು ಡಿ ಕೆ ಶಿವಕುಮಾರ್‌ ಹೇಳಿದರು.

ದ್ವೇಷದ ಬುಲ್ಡೋಜರ್

ದೆಹಲಿ, ಉತ್ತರ ಪ್ರದೇಶ ರೀತಿಯಲ್ಲೇ ಬುಲ್ಡೋಜರ್ ಮಾದರಿ ಬೇಕು ಎಂದು ಯತ್ನಾಳ್ ಹಾಗೂ ಸಿ.ಟಿ ರವಿ ಅಭಿಪ್ರಾಯಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ. ಅನೇಕ ವರ್ಷಗಳಿಂದ ವಸತಿ ಇಲ್ಲದ ನಿರಾಶ್ರಿತರು ಸರ್ಕಾರಿ ಜಾಗದಲ್ಲಿ ವಾಸುತ್ತಿದ್ದಾರೆ. ಆದರೆ ಅವರನ್ನು ತೆರವುಗೊಳಿಸಲು ಯಾವ ರೀತಿ ಪರ್ಯಾಯ ವ್ಯವಸ್ಥೆ ಮಾಡಬೇಕು, ಹೇಗೆ ಕ್ರಮ ಕೈಗೊಳ್ಳಬೇಕು ಎಂದು ಕಾನೂನಿದೆ. ಆದರೆ ರಾಜಕೀಯ ಉದ್ದೇಶಕ್ಕೆ, ದ್ವೇಷದಿಂದ ಅವರ ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ಕೆಡವಿ ಕೆಟ್ಟ ಸಂದೇಶ ರವಾನಿಸಲಾಗುತ್ತಿದೆ. ದೇಶದಲ್ಲಿ ಜನ ಭಯದಿಂದ ಬದುಕುವಂತೆ ಮಾಡಲಾಗುತ್ತಿದೆ. ದೇಶದಲ್ಲಿ ಹಬ್ಬಲಾಗುತ್ತಿರುವ ಕೋಮುದ್ವೇಷ ಖಂಡನೀಯ. ನಾವು ಎಲ್ಲರ ಭಾವನೆಗಳನ್ನು ಗೌರವಿಸಬೇಕು ಎಂದು ನಮ್ಮ ರಾಷ್ಟ್ರೀಯ ನಾಯಕರು ತಿಳಿಸಿದ್ದಾರೆ. ಈ ವಿಚಾರದಲ್ಲಿ ನ್ಯಾಯಾಲಯದ ಸೂಚನೆಗಳನ್ನು ಪಾಲಿಸಬೇಕು. ಇನ್ನು ಬೀದಿ ವ್ಯಾಪಾರಿಗಳಿಗೂ ಅವಕಾಶ ನೀಡಬೇಕು ಎಂದು ತೀರ್ಪುಗಳಿವೆ. ಅದರಂತೆ ನಡೆದುಕೊಳ್ಳಬೇಕು” ಎಂದು ತಿಳಿಹೇಳಿದರು.

 

Donate Janashakthi Media

Leave a Reply

Your email address will not be published. Required fields are marked *