ಹುಬ್ಬಳ್ಳಿ : ಗಿಫ್ಟ್ ಆಸೆಗೆ ಹೋಗಿ ವರ್ತಕನೋರ್ವ ಲಕ್ಷಾಂತರ ರೂಪಾಯಿ ವಂಚನೆಗೆ ಒಳಗಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 15 ಲಕ್ಷ ರೂಪಾಯಿ ಗಿಫ್ಟ್ ಸಿಗುತ್ತೆ ಅನ್ನೊ ಭರದಲ್ಲಿ ವ್ಯಕ್ತಿ 14.86 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಪುಕ್ಸಟ್ಟೆಯಾಗಿ ಗಿಫ್ಟ್ ಸಿಗುತ್ತೆ ಅಂದ್ರೆ ಸಾಕು ಮುಗಿಬೀಳುವ ಸ್ವಭಾವ ಇರೋರೇ ಜಾಸ್ತಿ. ಇಂತಹ ಗಿಫ್ಟ್ ಆಸೆಗೆ ಹೋಗಿ ವ್ಯಾಪಾರಿಯೋರ್ವ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ. 15 ಲಕ್ಷ ರೂಪಾಯಿ ಮೌಲ್ಯದ ಗಿಫ್ಟ್ ಸಿಗುತ್ತೆ ಅಂತ ನಂಬಿ 14.86 ಲಕ್ಷ ಕಳೆದುಕೊಂಡಿರುವ ವಿಚಿತ್ರ ಘಟನೆಗೆ ಹುಬ್ಬಳ್ಳಿಯ ಗೊಕುಲ್ ರಸ್ತೆಯ ಕೋಟಿಲಿಂಗೇಶ್ವರ ನಗರ ಸಾಕ್ಷಿಯಾಗಿದೆ. ಕೋಟಿಲಿಂಗೇಶ್ವರ ನಗರದ ಗುರುಪಾದಯ್ಯ ವಂಚನೆಗೆ ಒಳಗಾದ ವ್ಯಾಪಾರಿಯಾಗಿದ್ದಾರೆ. ಗಿಫ್ಟ್ ಹಣ ಪಡೆದುಕೊಳ್ಳಲು ಟ್ಯಾಕ್ಸ್ ಪಾವತಿಸಬೇಕೆಂದು ಹೇಳಿ ವಂಚನೆ ಮಾಡಲಾಗಿದ್ದು, ರಾಘವೇಂದ್ರ ಎಂಬಾತನಿಂದ ವಂಚನೆ ನಡೆದ ಆರೋಪ ಕೇಳಿಬಂದಿದೆ.
ಗುರುಪಾದಯ್ಯ ಅವರ ಅಂಗಡಿಗೆ ಸ್ಪೀಡ್ ಪೋಸ್ಟ್ ಬಂದಿತ್ತು. ಅದರಲ್ಲಿ 15.51 ಲಕ್ಷ ರೂ. ಗಳ ಗಿಫ್ಟ್ ಸ್ಕ್ರ್ಯಾಚ್ ಕಾರ್ಡ್ ಇತ್ತು. ಜೊತೆಗೆ ಪ್ಲಿಪ್‌ಕಾರ್ಟ್ ಹೆಸರಿನಲ್ಲಿ ಭಾರತ ಸರ್ಕಾರದ ಪರಿಶೀಲನಾ ಪ್ರಮಾಣಪತ್ರ ಇತ್ತು. ಇದನ್ನು ನಂಬಿ ಪ್ರಮಾಣಪತ್ರದಲ್ಲಿರುವ ಮೊಬೈಲ್ ಸಂಖ್ಯೆಗೆ ಗುರುಪಾದಯ್ಯ ಫೋನ್ ಮಾಡಿದ್ದ. ಆಧಾರ್ ಕಾರ್ಡ್ ಮತ್ತಿತರ ಮಾಹಿತಿ ಪಡೆದುಕೊಂಡಿದ್ದ ರಾಘವೇಂದ್ರ ಎಂಬಾತ, ನಂತರ ಗಿಫ್ಟ್ ಹಣ ಪಡೆದುಕೊಳ್ಳಲು ಟ್ಯಾಕ್ಸ್ ತುಂಬಬೇಕೆಂದು ಹೇಳಿದ್ದ.
ತಾನು ಮೋಸ ಹೋಗಿರೋದು ಖಾತ್ರಿಯಾದ ನಂತರ ಗುರುಪಾದಯ್ಯ ಪೊಲೀಸರ ಮೊರೆ ಹೋಗಿದ್ದಾರೆ. ತಡವಾಗಿ ಪ್ರಕರಣ ದಾಖಲಿಸಿರೋದ್ರಿಂದ ತಕ್ಷಣ ಹಣ ರಿಕವರಿ ಮಾಡಲು ಆಗಿಲ್ಲ. ಆದರೂ ಎಲ್ಲ ಅಕೌಂಟ್ ಗಳನ್ನು ಫ್ರೀಜ್ ಮಾಡಲಾಗಿದೆ. ಹಣ ರಿಕವರಿಗೆ ಪ್ರಯತ್ನಿಸ್ತಿದೇವೆ ಎಂದು ಕಾನೂನು ಮತ್ತು ಸುವ್ಯಸ್ಥೆ ಡಿಸಿಪಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.