ಹಾಸನ: ರೈಲಿಗೆ ಸಿಲುಕಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೊಸಳೆ ಹೊಸಹಳ್ಳಿಯಲ್ಲಿ ನಡೆದಿದೆ. ಪ್ರೀತಿ (22) ಮೃತ ದುರ್ದೈವಿ. ವಿದ್ಯಾರ್ಥಿಯು ರೈಲ್ವೆ ಹಳಿ ದಾಟುವಾಗ ಈ ದುರ್ಘಟನೆ ಸಂಭವಿಸಿದೆ.
ಪ್ರೀತಿ ಸಾವಿನ ಸುದ್ದಿ ಕೇಳಿ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಮತ್ತು ಕುಟುಂಬಸ್ಥರು, ಇತರ ವಿದ್ಯಾರ್ಥಿಗಳು ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಹಾಸನ- ಮೈಸೂರು ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ಟಯರ್ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿದರು. ಈ ಭಾಗದಲ್ಲಿ ಸಂತೆ ಹಾಗೂ ಕಾಲೇಜುಗಳಿವೆ. ಮುಂಜಾಗ್ರತೆಯಾಗಿ ತಡೆಗೋಡೆಯನ್ನೂ ನಿರ್ಮಾಣ ಮಾಡಿಲ್ಲ ಅಸಮಾಧಾನ ಹೊರಹಾಕಿದರು. ಜೀವ ಕೈಯಲ್ಲಿ ಹಿಡಿದುಕೊಂಡೇ ರೈಲ್ವೆ ಹಳಿ ದಾಟಿ ಕಾಲೇಜಿಗೆ ಹೋಗಬೇಕಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಮೇಲ್ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನು, ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದರು. ರಸ್ತೆ ತಡೆ ಹಿನ್ನಲೆಯಲ್ಲಿ ನೂರಾರು ವಾಹನಗಳು ರಸ್ತೆಯಲ್ಲೇ ನಿಂತುಕೊಂಡಿವೆ. ಈ ಘಟನೆಯಲ್ಲಿ ವಿದ್ಯಾರ್ಥಿಗಳು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾಗಿದ್ದಾರೆ.
ಫುಟ್‌ಓವರ್ ಬ್ರಿಡ್ಜ್ ಇಲ್ಲದ ಕಾರಣ ಹಳಿಯನ್ನು ದಾಳಿ ಸ್ಥಳೀಯ ನಿವಾಸಿಗಳು ಮಾರುಕಟ್ಟೆ ಹಾಗೂ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಬೇಕಾಗಿದೆ. ಸೂಚನೆಗಳ ಹೊರತಾಗಿಯೂ ಹಳಿಗಳನ್ನು ದಾಟಲಾಗುತ್ತಿದೆ. ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಆದರೆ ಕಾಲೇಜು ಮತ್ತು ಮಾರುಕಟ್ಟೆ ಸಮೀಪವಿರುವ ಕಾರಣ ಹಳಿಗಳನ್ನು ದಾಟಿ ಹೋಗುತ್ತಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.