12 ದಿನಗಳಿಂದ ನಾಪತ್ತೆಯಾಗಿದ್ದ ಹರಿಯಾಣ್ವಿ ಗಾಯಕಿ ಸಂಗೀತಾ ಶವವಾಗಿ ಪತ್ತೆ!

  • ಕಾಣೆಯಾಗಿದ್ದ ಹರಿಯಾಣ್ವಿ ಗಾಯಕಿ ಶವವಾಗಿ ಪತ್ತೆ
  • ಪ್ರಕರಣದ ಸಂಬಂಧ ಇಬ್ಬರನ್ನು ಬಂಧಿಸಿರುವ ಪೊಲೀಸರು

ನವದೆಹಲಿ: ಎರಡು ವಾರಗಳಿಂದ ನಾಪತ್ತೆಯಾಗಿದ್ದ ಗಾಯಕಿ ಹರಿಯಾಣ್ವಿ ಸಂಗೀತಾ ಶವವಾಗಿ ಪತ್ತೆಯಾಗಿದ್ದಾರೆ.   ಗಾಯಕಿಯ ಶವ ರೋಹ್ಟಕ್ ಜಿಲ್ಲೆಯ ಹೆದ್ದಾರಿಯೊಂದರ ಬಳಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಅಪರಾಧ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮ್ಯೂಸಿಕ್ ವಿಡಿಯೋ ಚಿತ್ರೀಕರಣಕ್ಕಾಗಿ ರೋಹಿತ್ ಜೊತೆ ಸಂಗೀತಾ ತೆರಳಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ರೋಹ್ಟಕ್‌ನ ಮೆಹಮ್ ಬಳಿಕ ಹೋಟೆಲ್‌ನಲ್ಲಿ ಸಂಗೀತಾ ಮತ್ತು ರೋಹಿತ್ ಊಟ ಮಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

‘’ಭೈನಿ ಭೈರೋನ್ ಗ್ರಾಮದ ಬಳಿ ಸೋಮವಾರ (ಮೇ 23) ಸಂಜೆ ಗಾಯಕಿಯ ವಿರೂಪಗೊಂಡ ಶವ ಪತ್ತೆಯಾಗಿದೆ ಎಂದು ಮೆಹಮ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿಕಾಸ್ ತಿಳಿಸಿದ್ದಾರೆ. ಮ್ಯೂಸಿಕ್ ವಿಡಿಯೋ ಮಾಡುವ ನೆಪದಲ್ಲಿ ಇಬ್ಬರು ಆರೋಪಿಗಳು ಗಾಯಕಿ ಸಂಗೀತಾಗೆ ಕರೆ ಮಾಡಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಗೀತಾ ಅವರನ್ನ ಕೊಲ್ಲಲು ಸಂಚು ರೂಪಿಸಿದ್ದಾಗಿ ಬಂಧಿತ ಇಬ್ಬರು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ರೋಹ್ಟಕ್‌ನ ಪಿಜಿಐನಲ್ಲಿ ಗಾಯಕಿ ಸಂಗೀತಾ ಅವರ ಮೃತದೇಹವನ್ನು ಸಂರಕ್ಷಿಸಲಾಗಿದೆ’’ ಎಂದು ಸಬ್ ಇನ್ಸ್‌ಪೆಕ್ಟರ್ ವಿಕಾಸ್ ತಿಳಿಸಿದ್ದಾರೆ.

ದೆಹಲಿಯ ಜಾಫರ್‌ಪುರ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್ 365ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಪ್ರಕರಣವನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಲಾಗುವುದು’’ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *