ಈ ಲೇಖನಕ್ಕೆ ಇದೇ ಶಿರ್ಷಿಕೆಯ ಭಾಗ 1 ಓದಬೇಕುಮತ್ತು ಅಲ್ಲಿ ನಡೆದ ಚರ್ಚೆ ಗಮನಿಸಿಕೊಳ್ಳಬೇಕು (ಮೆಡಿಕಲ್ ಮಾಫಿಯಾ ! ಅದೆಷ್ಟು ಸತ್ಯ? ಅದೆಷ್ಟು ಮಿಥ್ಯ? – ಭಾಗ 1) ಆಗ ಒಂದಕ್ಕೊಂದು ಕೊಂಡಿ ದೊರೆಯುತ್ತದೆ. ಹಿಂದಿನ ವಾರ ಈ ವಿಷಯದ ಬಗ್ಗೆ ಅನೇಕ ಚರ್ಚೆಗಳಾಗಿವೆ. ಉತ್ತಮ ಸಲಹೆಗಳೂ ಬಂದಿವೆ. ಜೊತೆಗೆ ಎಂದಿನಂತೆ ಬೈಗುಳಗಳೂ ಸಹ. ಇರಲಿ. ಈ ವಿಷಯದ ಬಗ್ಗೆ ಒಂದಿಷ್ಟು ಮುಂದುವರೆಯೋಣ. ಎಂದಿನಂತೆ ಲೇಖನ ವಿಸ್ತಾರವಾಗಿದೆ. ತುಸು ತಾಳ್ಮೆಯಿಂದ ಓದಿ. ಪ್ರತಿಕ್ರಿಯಿಸಿ…
-ಡಾ. ಎನ್. ಬಿ.ಶ್ರೀಧರ
ಮಾಫಿಯಾ ಎಂದರೇನು?
ಮಾಫಿಯಾ ಎಂದರೆ ಆಡಳಿತದಲ್ಲಿರುವವರು ನೀತಿ ನಿಯಮ ರೂಪಿಸುವಾಗ ಅವರ ಅವಶ್ಯಕ್ಕೆ ತಕ್ಕ ಹಾಗೇ ನಡೆಯುವಂತೆ “ಒತ್ತಡ ತಂತ್ರ” ಹಾಕುವ ವ್ಯಕ್ತಿಗಳು ಅಥವಾ ಸಂಸ್ಥೆಗಳು. ಇದರಲ್ಲಿ ನಾನಾ ಜಾತಿ ಧರ್ಮಗಳ ಸಂಘಟನೆ, ವ್ಯಾಪಾರದ ಸಂಘಟನೆ, ಸಣ್ಣ ಅಥವಾ ಬೃಹತ್ ಉಧ್ಯಮಗಳು, ಮಠಾಧಿಪತಿಗಳು, ನೌಕರಶಾಹಿ, ವ್ಯವಸ್ಥೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರೆಲ್ಲಾ ಆಡಳಿತಗಾರರ ಮೇಲೆ ಅವರವರದೇ ವಿಧಾನ ಹಾಕಿ ತಮ್ಮ ಗುರಿ ಸಾಗಿಸಿಕೊಳ್ಳುತ್ತಾರೆ. ಅದು ಆಯವ್ಯಯ ಇರಲಿ, ಕರ ಸಂಗ್ರಹ ಇರಲಿ ಅಥವಾ ಪ್ರಮುಖ ರಾಜಕೀಯ ನೀತಿ ನಿರ್ಧಾರಗಳಿರಲಿ ಇವರ ಪ್ರಭಾವ ಇದ್ದೇ ಇರುತ್ತದೆ. ಮಾಫಿಯಾ
ಇವರಿಗೆಲ್ಲಾ ಮಣೆ ಹಾಕದೇ ಸ್ವತಂತ್ರವಾಗಿ ಸಾರ್ವಜನಿಕರೆಗೆಲ್ಲಾ ಅಗತ್ಯವಿರುವ ನಿರ್ಧಾರ ತೆಗೆದುಕೊಳ್ಳುವ ಕಾಲ ಬದಲಾಗಿ ಬಹಳ ದಿನಗಳೇ ಆದವು. ಈ ಎಲ್ಲಾ “ ಮಾಫಿಯಾ” ಗಳಿಗೆ ಇಂದು ಸಮಾಜದ ಅಂಗೀಕಾರದ ಮುದ್ರೆಯೂ ಸಹ ಇದೆ. ಇದೆಲ್ಲಾ ಅತ್ಯಂತ ಸಹಜವಾಗಿ ಸಮಾಜ ಸ್ವೀಕರಿಸಿ ಆಗಿದೆ. ಇಂತಿಂತ ಜಾತಿಗೆ ಇಂತಿಷ್ಟು ಜನ ಮಂತ್ರಿಗಳು ಎಂಬ ಕಾಲ ಆಗಲೇ ಬಂದು ಬಹಳ ಕಾಲವಾಯಿತು. ಮಾಫಿಯಾ
ಇದನ್ನೂ ಓದಿ: ಪಟ್ನಾ | ನಿತೀಶ್ ಕುಮಾರ್ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
ಅಲ್ಲದೇ ಎಲ್ಲಾ ರಾಜಕೀಯ ಪಕ್ಷಗಳೂ ಸಹ ಇಂತಹ ಮಾಫಿಯಾಗಳಿಂದ ದೇಣಿಗೆಯನ್ನು ಪಡೆದ ಮೇಲೆ ಅವರ ಮಾತು ಕೇಳುವುದು ಅನಿವಾರ್ಯ ಸಹಾ. ಹಾಗೆಯೇ ವೈದ್ಯಕೀಯ ಉಧ್ಯಮವೂ ಸಹ ಇದಕ್ಕೆ ಹೊರತಾಗಿಲ್ಲ. ಪ್ರಮುಖ ರಾಜಕೀಯ ವ್ಯಕ್ತಿಗಳು, ಬಂಡವಾಳ ಶಾಹಿಗಳು ಒಡೆಯರಾಗಿರುವ ವೈದ್ಯಕೀಯ ಮತ್ತು ಔಷಧಿ ಉಧ್ಯಮ ಲಾಬಿ ಮಾಡುವಲ್ಲಿ ಹಿಂದೆ ಬೀಳುವ ವಿಚಾರವೇ ಇಲ್ಲ. ಮಾಫಿಯಾ
ವಿದ್ಯಾರ್ಥಿಗಳು ಯಾಕೆ ವೈದ್ಯಕೀಯ ಪದವಿ ಪಡೆಯಲು ಇಚ್ಚಿಸುತ್ತಾರೆ?
ಜನರ ಆರೋಗ್ಯ ಸೇವೆ ಮಾಡುವ ಉದ್ದೇಶ ಇಟ್ಟುಕೊಂಡಿರುವ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಮಾಡಲು ಆಸೆ ಪಡುತ್ತಾರೆ. ಅದರಲ್ಲೂ ಡಾಕ್ಟರ್ ಎಂದು ಹೆಸರಿನ ಹಿಂದೆ ಸೇರಿಸಿಕೊಳ್ಳುವುದರಲ್ಲಿ ಏನೋ ಒಂಥರಾ ಮಜಾ ಅಲ್ವೇ? ಎಷ್ಟೇ ಸೇವೆ ಮಾಡುವ ಆಸೆ ಹೊಂದಿದರೂ ಸಹ ವೈಯಕ್ತಿಕವಾಗಿ ಹಣ ಸಂಪಾದಿಸುವುದು, ಗಂಡು ಹೆಣ್ಣು ಮದುವೆಯಾಗುವುದರ ಮೂಲಕ ವಂಶ ಬೆಳೆಸಿಕೊಂಡು ತನ್ಮೂಲಕ ಬದುಕು ಸಾಗಿಸುವುದು ಜೀವನದ ಉದ್ದೇಶವೂ ಸಹ ಎಲ್ಲ ಶಿಕ್ಷಣ ಪಡೆಯುವವರ ಉದ್ದೇಶವೂ ಸಹ ಹೌದು. ಐದಾರು ಸಾವಿರ ರೂ. ಕೊಟ್ಟು ಆರೋಗ್ಯ ವಿಮೆ ಖರೀದಿಸಲಾಗದ ಸ್ಥಿತಿ ನಮ್ಮ ದೇಶದ ಬಡವರದ್ದು.
ಇಂತಹ ಪರಿಸ್ಥಿತಿಯಲ್ಲಿ ಕೋಟಿ ಕೋಟಿ ಪಾವತಿಸಿ ಮೆಡಿಕಲ್ ಸೀಟು ಪಡೆದು ಪದವಿ ಮಾಡುವರು ನಿಜವಾಗಿಯೂ ಬಡವರ ಸೇವೆ ಮಾಡಲು ಸಾಧ್ಯವೇ? ವೈದ್ಯಕೀಯ ಪದವಿಗೆ ಎರಡು ಕೋಟಿ, ಸ್ನಾತಕೋತ್ತರ ಪದವಿಗೆ 3-4 ಕೋಟಿ ಹೂಡಿಕೆ ಮಾಡಿ ಅಷ್ಟು ಹಣ ವಾಪಾಸು ಪಡೆಯಲು ಬಡವರ ಸೇವೆ ಮಾಡಲು ಮನಸ್ಸು ಮಾಡಲು ಸಾಧ್ಯವೇ? ಕರ್ನಾಟಕ (ಭಾರತವೂ ಸೇರಿದಂತೆ)ದಲ್ಲಿ ಮೆಡಿಕಲ್ ಪದವಿಗೆ ಕೋಟಿ ಕೋಟಿ ಹಣ ನಿಗದಿ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಒಬ್ಬ ವಿದ್ಯಾರ್ಥಿ ವೈದ್ಯಕೀಯ ಪದವಿ ಮಾಡಲು ಕೋಟಿ ವೆಚ್ಚ ಏನಕ್ಕೆ ತಗಲುತ್ತದೆ ಎಂಬ ವಾಸ್ತವಿಕ ಸತ್ಯ ಇಲ್ಲಿವರೆಗೂ ಬಂದಿಲ್ಲ. ವೈದ್ಯಕೀಯ ಪದವಿ ಕಲಿಯಲು ಆಸಕ್ತಿ ಇರುವವರಿಗೆ ಸುಲಭವಾಗಿ ಸಿಕ್ಕಿದರೆ ನಮ್ಮ ದೇಶದವರು ದರ ಕಡಿಮೆ ಎಂದು ಯುಕ್ರೇನ್ ನಂತ ದೇಶಕ್ಕೆ ಹೋಗಿ ಏಕೆ ಕಷ್ಟದಲ್ಲಿ ಸಿಲುಕಿ ಅತಂತ್ರರಾಗಿ ಒದ್ದಾಡುತ್ತಿದ್ದಾರೆ ಎಂಬುದನ್ನೂ ಸಹ ಯೋಚಿಸಬೇಕು. ಮಾಫಿಯಾ
ಇಷ್ಟೆಲ್ಲಾ ಕೊಟ್ಟು ವೈದ್ಯ ನಾರಾಯಣನ ಸ್ಥಾನದಲ್ಲಿದ್ದು ರೋಗಿಗಳನ್ನು “ಉಚಿತ”ವಾಗಿ ಚಿಕಿತ್ಸೆ ಮಾಡಲು ಸಾಧ್ಯವೇ? ಹೀಗೆಲ್ಲಾ ಯೋಚಿಸುವುದು ವಾಸ್ತವ ಅರಿಯದ ಸಿನಿಕ ಜನಕ್ಕೆ ಮಾತ್ರ ಸಾಧ್ಯ. ಆದರೂ ಸಹ ಈವತ್ತಿಗೂ ಸಹ ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ ಇಟ್ಟು ವೈದ್ಯರೆಲ್ಲಾ ಕೈಲಾದ ಮಟ್ಟಿಗೆ ರೋಗಿಗಳ ಸೇವೆ ಮಾಡುತ್ತಿದ್ದಾರೆಂದರೆ ಭಾರತದಲ್ಲಿನ ಭಾವನಾಮಯ ಜಗತ್ತು ಅತ್ಯಂತ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಎಂದೇ ಅರ್ಥ. ಒಂದು ಅರ್ಥ ಮಾಡಿಕೊಳ್ಳಿ, ವೈದ್ಯರು ಯಾವಾಗಲೂ ವೃತ್ತಿಪರತೆ ಮೆರೆದೇ ಮೆರೆಯುತ್ತಾರೆ. ಆದರೆ ವೈದ್ಯಕೀಯ ವೃತ್ತಿಗೂ ವೈದ್ಯಕೀಯ ಉಧ್ಯಮಕ್ಕೂ ವ್ಯತ್ಯಾಸವೇ ಗೊತ್ತಿಲ್ಲದ ಜನ ಮಾತ್ರ “ಮೆಡಿಕಲ್ ಲಾಬಿ” ಎನ್ನುತ್ತಲೇ ಇರುತ್ತಾರೆ. ಮಾಫಿಯಾ
ಏನಿದು ವೈದ್ಯಕೀಯ ಉಧ್ಯಮ?
ಎಲ್ಲಾ ಉಧ್ಯಮದ ಹಾಗೇ ವೈದ್ಯಕೀಯ ಶಿಕ್ಷಣವೂ ಸಹ ಇಂದು ಒಂದು ಉಧ್ಯಮ. ಉಧ್ಯಮ ಎಂದ ಮೇಲೆ ಉಚಿತವಾಗಿ ಮಾಡಲಾದೀತೇ? ಸಾಧ್ಯವೇ ಇಲ್ಲ. ಅಲ್ಲಿಯೂ ಸಹ ಲಾಭ ಬೇಕೇ ಬೇಕು. ವೈದ್ಯಕೀಯ ವೃತ್ತಿ ಪವಿತ್ರವಾದ ವೃತ್ತಿ ಹೌದು. ಆದರೆ ಉಧ್ಯಮ? ಉತ್ತಮ ವೃತ್ತಿಪರತೆ ನಿರೀಕ್ಷಿಸುವವರು ಈ ಶಿಕ್ಷಣ ಪದ್ಧತಿಯ ಬಗ್ಗೆಯೂ ಸಹ ನೋಡದೇ ಎಗ್ಗಾ ಮುಗ್ಗಾ ಟೀಕಿಸುವುದು ಎಷ್ಟರ ಮಟ್ಟಿಗೆ ಸರಿ? ಪ್ರಶ್ನಿಸಿಕೊಳ್ಳಿ. ಉಧ್ಯಮವನ್ನು ಹೊಂದಿರುವವರು ಸಾಮಾನ್ಯವಾಗಿ ಹಣವಂತರು. ಬಂಡವಾಳ ಹಾಕಿ ಲಾಭ ತೆಗೆಯುವವರು ಅಲ್ಲವೇ? ಇವರು ಲಾಭ ಮಾಡಿಕೊಳ್ಳಬೇಡಿ ಎಂದು ಹೇಳಲು ನಾವ್ಯಾರು? ಅಷ್ಟಕ್ಕೂ ಒಂದು ವೈದ್ಯಕೀಯ ಮಹಾವಿದ್ಯಾಲಯ ತೆರೆಯಲು ತಗಲುವ ವೆಚ್ಚದ ಬಗ್ಗೆ ತಿಳಿದರೆ ಬೆಚ್ಚಿ ಬೀಳುವುದು ಸಹಜ. ಮಾಫಿಯಾ
ವೈದ್ಯಕೀಯ ಮಹಾವಿದ್ಯಾಲಯ ತೆರೆಯಲು ಎಷ್ಟು ಬಂಡವಾಳ ಬೇಕು?
ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಕನಿಷ್ಟ ಗುಣಮಟ್ಟ, ಮಾನದಂಡ, ಜಮೀನು, ಸಿಬ್ಬಂದಿ, ಅವಶ್ಯಕ ಕಟ್ಟಡಗಳು, ಗ್ರಂಥಾ¯ಯ, ವಸತಿಗೃಹ ಇತ್ಯಾದಿ ಅನೇಕ ಮೂಲಭೂತ ಸೌಕರ್ಯಗಳು, ಪ್ರತಿ ವಿಭಾಗಕ್ಕೂ ಅವಶ್ಯವಿರುವ ಪ್ರಯೋಗಾಲಯಗಳು, ಉಪಕರಣಗಳು ಇತ್ಯಾದಿಗಳನ್ನು ಇರಿಸಿಕೊಂಡು 50 ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಭಾರತೀಯ ವೈದ್ಯಕೀಯ ಪರಿಷತ್ತಿನಿಂದ ಅನುಮತಿ ಪಡೆಯಲು ಸುಮಾರು 150-180 ಕೋಟಿ ರೂಪಾಯಿಗಳು ಬೇಕು. ಸರ್ಕಾರಕ್ಕಾದರೆ ಜಮೀನಿಗೆ ಭರಿಸಬೇಕಾದ ಜಮೀನು ಮತ್ತು ಕಟ್ಟಡ ಇತ್ಯಾದಿಗಳ ವೆಚ್ಚ ಮತ್ತಿತರ ವೆಚ್ಚಗಳನ್ನು ಜನರ ತೆರಿಗೆ ಹಣದಿಂದ ಹೊಂದಿಸಬಹುದು. ಆದರೆ ಬೆರಳೆಣಿಕೆಯಷ್ಟು ಮಾತ್ರ ಇರುವ ಸಾರ್ವಜನಿಕ ಸ್ವಾಮ್ಯದ ವೈದ್ಯಕೀಯ ಮಹಾವಿದ್ಯಾಲಯಗಳು ವಿದ್ಯಾರ್ಥಿಗಳ ಜ್ಞಾನದಾಹ ತೀರಿಸಬಲ್ಲವೇ? ಖಂಡಿತಾ ಇಲ್ಲ. ಆದರೆ ಖಾಸಗಿಯವರಿಗೆ ಇದೊಂದು ಸೇವೆಯಂತೂ ಖಂಡಿತಾ ಅಲ್ಲ. ಇದೊಂದು ಉಧ್ಯಮ ಮತ್ತು ಉಧ್ಯಮದಲ್ಲಿ ಯಾವ ಉಧ್ಯಮಿಯೂ ನಷ್ಟ ಮಾಡಿಕೊಳ್ಳದೇ ಇರಲು ಪ್ರಯತ್ನಿಸುತ್ತಾನೆ.

ಒಬ್ಬ ವಿದ್ಯಾರ್ಥಿ ಸಂಪೂರ್ಣ ಸರ್ಕಾರಿ ಕೋಟಾದಡಿ ಮೆಡಿಕಲ್ ಸೀಟು ಪಡೆದರೆ, ಮೂಲ ಸೌಕರ್ಯ, ಸಹಾಯಕ ಪ್ರಾಧ್ಯಾಪಕರಿಂದ ಪ್ರಾಧ್ಯಾಪಕರು, ಪ್ರಯೋಗಶಾಲಾ ಸಹಾಯಕರು ಮತ್ತಿತರ ಸಿಬ್ಬಂದಿ ವೇತನ ಸೇರಿ ಒಂದು ವಿದ್ಯಾರ್ಥಿಗೆ ಗರಿಷ್ಠ 85 ಲಕ್ಷ ರೂ. ಗಳನ್ನು ಖರ್ಚು ಮಾಡುತ್ತದೆ. ಅದಕ್ಕಾಗಿಯೇ ಆತನಿಗೆ ಹಳ್ಳಿಗೆ ಹೋಗಿ ಸೇವೆ ಮಾಡು ಅನ್ನುವುದು. ಖಾಸಗಿ ವೈದ್ಯಕೀಯ ಕಾಲೇಜುಗಳ ವಿಚಾರಕ್ಕೆ ಬಂದರೆ, ಇನ್ನೂ 20-30 ಜಾಸ್ತಿ ಲಕ್ಷಗಳಾಗಬಹುದು. ವೈದ್ಯಕೀಯ ಮಹಾವಿದ್ಯಾಲಯ ತೆಗೆಯಲು ಸರ್ಕಾರಕ್ಕಾದರೆ ಜನರ ತೆರಿಗೆಯ ಹಣದಿಂದ ವ್ಯಯಿಸಬಹುದು. ಅದೇ ಖಾಸಗಿ ಸಂಸ್ಥೆಗಳಾದರೆ ಅವರದೇ ಬಂಡವಾಳ ಹೊಂದಿರಬೇಕು. ಕಟ್ಟಡ, ವೈದ್ಯಕೀಯ ಸಿಬ್ಬಂದಿ ನೇಮಕ, ವೈದ್ಯಕೀಯ ತ್ಯಾಜ್ಯ ನಿರ್ವಹಣೆ, ಅವರ ಸಂಬಳ, ಸಾರಿಗೆ, ಭತ್ತೆ, ವಿದೇಶದಿಂದಲೇ ಖರೀದಿಸಬೇಕಾದ ದುಬಾರಿ ವೈದ್ಯಕೀಯ ಉಪಕರಣಗಳ ಖರೀದಿ, ಅವುಗಳ ನಿರ್ವಹಣೆ, ವೈದ್ಯಕೀಯ ಪರಿಷತ್ತಿನ ಕಠಿಣ ನಿಯಮಗಳು, ಆಗಾಗ ನಡೆಯುವ ಗುಣಮಟ್ಟದ ಪರೀಕ್ಷೆಗಳು, ಮೇಲಿಂದ ಮೇಲೆ ಬದಲಾಗುವ ವೈದ್ಯಕೀಯ ಪರಿಷತ್ತುಗಳ ಮಾನದಂಡಗಳು, ಜನರ ಭಾರೀ ನಿರೀಕ್ಷೆ, ಆಡಳಿತದಲ್ಲಿನ ಪ್ರಕಾಂಡ ಕೆಂಪುಪಟ್ಟಿ ವ್ಯವಸ್ಥೆ ಇವೆಲ್ಲಾ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳ ಮುಖ್ಯಸ್ಥರುಗಳನ್ನು ಹೈರಾಣಗೊಳಿಸಿವೆ ಎಂದರೆ ತಪ್ಪಾಗಲಾರದು.
ನಮ್ಮ ಶಿಕ್ಷಣದಲ್ಲಿ ಖಾಸಗಿಯವರನ್ನು ಎಷ್ಟು ದೂಷಿಸಿದರೂ ಸಹ ಅವರದೇ ಕೊಡುಗೆ ಇದೆ ಎಂಬುದನ್ನು ಯಾರೂ ಸಹ ಅಲ್ಲಗಳೆಯುವಂತಿಲ್ಲ. ಎರಡು ಮೂರು ಕೋಟಿ ವ್ಯಯಿಸಿ ವೈದ್ಯಕೀಯ ಪದವಿಗೆ ಶುಲ್ಕ ವಿಧಿಸುತ್ತಾರೆ. ಅಷ್ಟು ಮೊತ್ತದಲ್ಲಿ ಎಷ್ಟು ಹಣ ಒಬ್ಬ ವಿದ್ಯಾರ್ಥಿಯ ಪದವಿಗೆ ಖರ್ಚು ಬರಬಹುದು? ಈ ವಾಸ್ತವ ನೆಲೆಗಟ್ಟಿನಲ್ಲಿ ಈವರೆಗೂ ಚರ್ಚೆ ಕೂಡ ಮಾಡಿಲ್ಲ. ರಾಜಕಾರಣಿಗಳ ಒಡೆತನ ಹೊಂದಿರುವ ಮೆಡಿಕಲ್ ಕಾಲೇಜುಗಳ ಸೀಟು ಮಾರಾಟದ ಕಾನೂನುಗಳು ಅವರಿಂದಲೇ ರೂಪಗೊಳ್ಳುವ ವ್ಯವಸ್ಥೆ ಇರುವಾಗ ಏನು ನಿರೀಕ್ಷೆ ಮಾಡಲು ಸಾಧ್ಯ? ಮೆಡಿಕಲ್ ಶಿಕ್ಷಣ, ಮೆಡಿಕಲ್ ಕಾಲೇಜುಗಳ ಪಾಲಿಗೆ ಸಂಪತ್ತು ದುಡಿದು ಕೊಡುವ ಬಿಸಿನೆಸ್ ಆಗಿ ರೂಪಾಂತರಗೊಂಡಿದೆ. ಮಾಫಿಯಾ
ನಗರ ಭಾರತದಲ್ಲಿ ಹೊರರೋಗಿ ಮತ್ತು ಒಳರೋಗಿಗಳ ಆರೈಕೆಗಾಗಿ, ಸುಮಾರು 74% ಹೊರರೋಗಿ ಆರೈಕೆ ಮತ್ತು 65% ಆಸ್ಪತ್ರೆ ಆರೈಕೆಯನ್ನು ಖಾಸಗಿ ವಲಯವು ಒದಗಿಸುತ್ತದೆ. ಸರ್ಕಾರಿ ಒಡೆತನದ ಸಾರ್ವಜನಿಕ ಆಸ್ಪತ್ರೆಗಳು ಶೇ 42 % (46 % ಗ್ರಾಮೀಣ, 35 % ನಗರ) ಮಾತ್ರ ಸೇವೆ ಒದಗಿಸುತ್ತವೆ. ಮುಂದುವರೆದು 70% ಗ್ರಾಮೀಣ ನಿವಾಸಿಗಳು ಮತ್ತು 80% ನಗರ ನಿವಾಸಿಗಳು ಖಾಸಗಿ ವಲಯದ ಮೂಲಕವೇ ತಮ್ಮ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತದೆ. ಹಾಗಿದ್ದ ಮೇಲೆ ಖಾಸಗಿ ಆಸ್ಪತ್ರೆಗಳು ಇಲ್ಲದ ಭಾರತವನ್ನು ಊಹಿಸಲು ಸಧ್ಯಕ್ಕೆ ಸಾಧ್ಯವೇ? ಮಾಫಿಯಾ
ಔಷಧ ಉಧ್ಯಮ ಮತ್ತು ಲಾಬಿ?
ಇದೂ ಸಹ ವಾಣಿಜ್ಯ ವ್ಯವಹಾರ. ಹಣ ಹಾಕಿ ಹಣ ತೆಗೆದು ಮತ್ತೊಂದು ಕಂಪನಿ ತೆರೆಯುವ ವಾಣಿಜ್ಯ ಮನಸ್ಸಿನವರದೇ ಉಧ್ಯಮ. ವಿಶ್ವ ಆರೋಗ್ಯ ಸಂಸ್ಥೆ, ಆಹಾರ ಮತ್ತು ಔಷಧಿ ಆಯೋಗ, ಭಾರತದ ಔಷಧ ನಿಯಂತ್ರಕರ ಕಠಿಣ ನಿಯಮದ ಪ್ರಕಾರ ಯಾವುದೇ ಹೊಸ ಔಷಧಿಯನ್ನು ಕಂಡು ಹಿಡಿಯಲು ಅಸಾಧ್ಯವೆನ್ನುವಷ್ಟು ಪರಿಸ್ಥಿತಿ ಇದೆ. ಇದೊಂದು ಬಹುಕೋಟಿ ಬಹುರಾಷ್ಟ್ರೀಯ ಉಧ್ಯಮ. ಹೊಸ ಔಷಧಿಯನ್ನು ಕಂಡು ಹಿಡಿಯಬೇಕಾದರೆ ಸಹಸ್ರಾರು ರಾಸಾಯನಿಕಗಳನ್ನು ಜಾಲಾಡಿ ಅವುಗಳಲ್ಲಿ ಒಂದೆರಡನ್ನು ಮಾತ್ರ ಆಯ್ಕೆ ಮಾಡಿಕೊಂಡು ಇಲಿ ಮತ್ತು ನಾಯಿಗಳ ಮೇಲೆ ಪರಿಣಾಮ ಮತ್ತು ಅಡ್ಡ ಪರಿಣಾಮಗಳ ಅಧ್ಯಯನ ಮಾಡಬೇಕು. ಇದಾದ ಮೇಲೆ 4 ಹಂತಗಳಲ್ಲಿ ಔಷಧಿಗಳ ಪರೀಕ್ಷೆಯಾಗಬೇಕು. ಯಾವುದೇ ಹಂತದಲ್ಲಿಯೂ ಸಹ ಹಿನ್ನೆಡೆಯಾಗಿ ಹಾಕಿದ ಬಂಡವಾಳಕ್ಕೆಲ್ಲಾ ಉಂಡೆನಾಮವಾಗಬಹುದು.
ಇದಕ್ಕೆ ಕನಿಷ್ಟ 6-12 ವರ್ಷ ಮತ್ತು ಸುಮಾರು 150-200 ಮಿಲಿಯ ಡಾಲರುಗಳೇ ಬೇಕು. ಲಕ್ಷಾಂತರ ಉದ್ಯೋಗಿಗಳ ಹೊಟ್ಟೆ ಹೊರೆಯಬೇಕು. ಅಷ್ಟಕ್ಕೂ ರಹದಾರಿ ಮತ್ತು ಏಕಸ್ವಾಮ್ಯ ಪೇಟಂಟ್ ದೊರೆಯುವುದು ಕೇವಲ 5 ವರ್ಷಗಳು ಮಾತ್ರ ಮತ್ತು ನಂತರ ಅದನ್ನು ಯಾರಾದರೂ ಸಹ ಉತ್ಪಾದಿಸಬಹುದು. ಕೋವಿಡ್ ತರದ ಜೀವರಕ್ಷಕ ಔಷಧಿ ವರ್ಗಕ್ಕೆ ಸೇರಿದರೆ ಸರ್ಕಾರವೇ ಬೆಲೆ ನಿಗದಿಪಡಿಸುತ್ತದೆ. ಈ ಔಷಧಿಗಳಿಗೆಲ್ಲಾ ಕೊರೊನಿಲ್, ನೋನಿ, ಅಮ್ರತಬಿಂದು, ಆರ್ಥೋಪ್ಲಸ್ ತರ ಭಾರಿ ಪರಿಣಾಮಕಾರಿ ಮತ್ತು ಎಲ್ಲವೂ ಸುರಕ್ಷಿತ ಎಂದುಕೊಂಡು ಸಿಕ್ಕ ಸಿಕ್ಕ ಟಿವಿಗಳಲ್ಲಿ, ದಿನಪತ್ರಿಕೆಗಳಲ್ಲಿ ಜಾಹಿರಾತು ನೀಡಿ ಜನರನ್ನು ನಂಬಿಸುವ ಹಾಗೆ ಇಲ್ಲವೇ ಇಲ್ಲ. ಕೇವಲ ವೈದ್ಯರೇ ಬರೆಯಬೇಕು. ಅಥವಾ ಔಷಧ ಕಂಪನಿಯವರು ಬದಲಿ ಔಷಧಿಯಾಗಿ ಉಚಿತ ಸ್ಯಾಂಪಲ್ ನೀಡಬಹುದು.

ಪ್ರಾರಂಭಿಕ ಹಂತದಲ್ಲಿ ಎಲ್ಲಾ ಔಷಧಿಗಳಿಗೂ ಸಹ ಬೆಲೆ ಜಾಸ್ತಿ ಇರುವುದು ಇದಕ್ಕೆ. ಹಾಗೆಂದ ಮಾತ್ರಕ್ಕೆ ಗಿಡಮೂಲಿಕೆ ಔಷಧಿಗಳ ಬೆಲೆ ಕಡಿಮೆಯೇ? ಖಂಡಿತಾ ಇಲ್ಲ. ಅದರಲ್ಲಿನ ಎಲ್ಲಾ ಸಸ್ಯಜನ್ಯ ಮೂಲದ ವಸ್ತುಗಳು ಇದೆಯೆಂದು ತಿಳಿಯಲು ಏನಾದರೂ ವ್ಯವಸ್ಥೆ ಇದೆಯೇ? ಖಂಡಿತಾ ಈವರೆಗಂತೂ ಇಲ್ಲ. ಇನ್ನು ೧೫-೨೦ ವರ್ಷಗಳಲ್ಲಿಯೂ ಬರುವ ನಿರೀಕ್ಷೆ ಇಲ್ಲ. ಹಣ ನೀಡಿ ಪಡೆದ ಗ್ರಾಹಕನಿಗೆ ಗುಣಮಟ್ಟ ಪರಿಶೀಲನೆಯ ಹಕ್ಕು ಇಲ್ಲವೇ? “ಗಿಡಮೂಲಿಕೆ ಮೂಲದ ಔಷಧಿಗಳು ಕೆಲಸ ಮಾಡುತ್ತವೆ” ಮತ್ತು ಅವು ಪೂರ್ವಜರು ಬರೆದ ಗ್ರಂಥಗಳಲ್ಲಿ ಬರೆದಂತೆ “ಸುರಕ್ಷಿತವೇ?” ಅವುಗಳನ್ನು ಉತ್ಪಾದಿಸುವ ವಾಣಿಜ್ಯ ಕಂಪನಿಗಳು “ಲಾಬಿ” ಮಾಡುವುದಿಲ್ಲವೇ? ಅವುಗಳ “ಮಾಫಿಯಾ” ಇಲ್ಲವೇ? ಅವುಗಳು ನೈತಿಕತೆಯನ್ನು ಅದೆಷ್ಟರ ಮಟ್ಟಿಗೆ ನಮ್ಮ ಪೂರ್ವಜರ ನಂಬಿಕೆಯನ್ನು ಉಳಿಸಿಕೊಂಡಿವೆ? ಎಂಬ ಪ್ರಶ್ನೆಗಳಿಗೆಲ್ಲಾ ಉತ್ತರ ಬೇಡವೇ?
ಅಷ್ಟಕ್ಕೂ ವೈದ್ಯಕೀಯ ವೃತ್ತಿಗೂ ವೈದ್ಯಕೀಯ ಉಧ್ಯಮಕ್ಕೂ ತುಂಬಾ ವ್ಯತ್ಯಾಸವಿದೆ ಎಂಬ ಸರಳ ಸತ್ಯ ತಿಳಿದರೆ ಸಾಕು. ಉಳಿದೆಲ್ಲಾ ಗೌಣ. ಅದೂ ಸಹ ಎಲ್ಲಾ ಉಧ್ಯಮಗಳಂತೆ. ಇದನ್ನೆಲ್ಲಾ ಜನಕ್ಕೆ ತಿಳಿಸಿ, ನೀತಿ ನಿಯಮ ರೂಪಿಸುವವವರ ಕಿವಿ ಹಿಂಡಿ, ಕಡಿಮೆ ಗುಣಮಟ್ಟದಲ್ಲಿ ಕ್ಯಾಪೀಟೇಷನ್ ಶುಲ್ಕವಿಲ್ಲದೇ ಉತ್ತಮ ಅಂಕವಿರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ದೊರೆಯುವಂತೆ ಮಾಡುವಂತ ಜವಾಬ್ಧಾರಿ ಸ್ಥಾನದಲ್ಲಿರುವ ಡಾ: ಬಿ. ಎಂ. ಹೆಗಡೆಯವರಂತಹ ಮೇಧಾವಿಗಳು ಕಿವಿ ಕಣ್ಣು ಮುಚ್ಚಿಕೊಂಡು “ವೈದ್ಯರೆಲ್ಲಾ ದಂಧೆಕೋರರು, ಆಸ್ಪತ್ರೆಗಳೆಲ್ಲಾ ಲೂಟಿಯ ತಾಣಗಳು” ಎಂದೆಲ್ಲಾ ಪುಂಖಾನುಪುಂಖವಾಗಿ ಹೇಳುತ್ತಾ ಮೊದಲೇ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುತ್ತಾರೆ. ವೈದ್ಯಕೀಯ ಜ್ಞಾನವಿರದ ಮತ್ತು ಅವರದೇ ಆದ ಮೌಢ್ಯ ಮತ್ತು ಅನೇಕ ಕಾರಣಗಳಿಂದ ಆಧುನಿಕ ವೈದ್ಯಕೀಯ ವಿಜ್ಞಾನಗಳನ್ನು ದ್ವೇಷಿಸುವ ಸಾಮಾನ್ಯ ಜನರಿಂದ ಚಪ್ಪಾಳೆ ಗಿಟ್ಟಿಸುವ ತಂತ್ರ ಮಾತ್ರ ಇವರದು ಎಂಬುದು ಗೊತ್ತಾಗಲು ಸಾಮಾನ್ಯ ಜ್ಞಾನ ಸಾಕು. ನೈಜವನ್ನು ತಿಳಿಯದ ಸಾಮಾನ್ಯ ಜನ ಅವರನ್ನು ದೈವತ್ವಕ್ಕೆ ಏರಿಸಿಬಿಡುತ್ತಾರೆ.
ಭಾರತದಲ್ಲಿ ಈ ವರೆಗೆ ಒಂದೂ ಹೊಸ ಔಷಧಿಯ ಆವಿಷ್ಕಾರ ಆಗಿಲ್ಲ. ಅಂತಹ ವಾತಾವರಣವೇ ಇಲ್ಲಿ ಇಲ್ಲ. ಹೋಗಲಿ, ಕಳೆದ ೧೦೦೦ ವರ್ಷಗಳಲ್ಲಿ ಪ್ರಪಂಚದಲ್ಲಿ ಅನೇಕ ಆವಿಷ್ಕಾರಗಳಾಗಿವೆ. ಇವುಗಳಲ್ಲಿ ಕೇವಲ ಒಂದನ್ನು ಭಾರತ ನೀಡಿದೆಯೇ? ಉತ್ತರ ನೀಡಲು ತಡವರಿಸುತ್ತೀರಿ ಎಂದು ನನಗೆ ಗೊತ್ತು. ನಮ್ಮಲ್ಲಿ ಅನೇಕ ಬುದ್ಧಿವಂತರಿದ್ದರೂ ಸಹ ಅವರಿಗೆ ಪೂರಕ ವಾತಾವರಣವಿಲ್ಲ.
333 (೩೩.೩ ಕೋಟಿ) ಮಿಲಿಯನ್ ಜನಸಂಖ್ಯೆ ಹೊಂದಿದ ಅಮೆರಿಕಾ ಸಂಯುಕ್ತ ಸಂಸ್ಥಾನ ವಿಜ್ಞಾನಕ್ಕೆ ಈವರೆಗೆ ಸರಿಸುಮಾರು 400 ನೊಬೆಲ್ ಪ್ರಶಸ್ತಿ ಗಳಿಸಿದರೆ ಇದರ ನಾಲ್ಕು ಪಟ್ಟು ಅಂದರೆ 1416 ಮಿಲಿಯನ್ (೧೪೧ ಕೋಟಿ) ಜನಸಂಖ್ಯೆ ಹೊಂದಿರುವ ಭಾರತ ಈವರೆಗೆ ವಿಜ್ಞಾನಕ್ಕೆ ಪಡೆದ ನೊಬೆಲ್ ಪ್ರಶಸ್ತಿಗಳು ಕೇವಲ ೪ ಮತ್ತು ಇದನ್ನು ಪಡೆದವರು ಭಾರತೀಯ ಸಂಜಾತರಾದರೂ ಸಹ ಸರ್ ಸಿ.ವಿ.ರಾಮನ್ (ಕಲ್ಕತ್ತಾ) ಅವರನ್ನು ಹೊರತು ಪಡೆಸಿ ಹರಗೋವಿಂದ್ ಖುರಾನಾ (ಅಮೇರಿಕಾ), ಎಸ್ ಚಂದ್ರಶೇಖರ್ ( ಯುಕೆ ಮತ್ತು ಅಮೇರಿಕಾ) ವೆಂಕಟರಮಣನ್ ರಾಮಕೃಷ್ಣನ್ ( ಯುಕೆ ಮತ್ತು ಅಮೇರಿಕಾ) ಅವರು ಕೈಗೊಂಡ ಸಂಶೋಧನೆಗಳು ವಿದೇಶಗಳ ಪ್ರಯೋಗಾಲಯದಲ್ಲಿಯೇ. ಕೇವಲ 9.5 ಮಿಲಿಯನ್ (95 ಲಕ್ಷ) ಜನ ಸಂಖ್ಯೆಯನ್ನು ಹೊಂದಿದ ಪುಟಾಣಿ ದೇಶ ಇಸ್ರೇಲ್ ವಿಜ್ಞಾನಕ್ಕೆ ಪಡೆದ ನೊಬೆಲ್ ಪ್ರಶಸ್ತಿಗಳ ಸಂಖ್ಯೆ 12. ಪ್ರಪಂಚದ ಅತ್ಯಂತ ದೊಡ್ಡ ಆರ್ಥಿಕತೆಯ ದೇಶ ಅಮೇರಿಕಾ ಪ್ರತಿ ವರ್ಷ ಸಂಶೋಧನೆಗೆ 940 ಬಿಲಿಯನ್ ಡಾಲರು ಖರ್ಚು ಮಾಡಿದರೆ (ಅದರ ಉತ್ಪನ್ನದ ಶೇ: 2.4), ವಿಶ್ವದ ಮೂರನೆಯ ಆರ್ಥಿಕತೆಯ ಭಾರತ ಸಂಶೋಧನೆಗೆ 71 ಬಿಲಿಯನ್ ಡಾಲರು (ಶೇ 0.7 ಮಾತ್ರ) ಮತ್ತು ಇದು ಈ ಹಿಂದಿನ ಪ್ರಮಾಣಕ್ಕೆ ಹೋಲಿಸಿದರೆ ಇಳಿಕೆ ಮುಖದಲ್ಲಿರುವುದು ಆತಂಕದ ಸಂಗತಿ.
ವಿಜ್ಞಾನಕ್ಕೆ ಮತ್ತು ವಿಜ್ಞಾನದ ಆವಿಷ್ಕಾರಗಳಿಗೆ ಅತ್ಯಂತ ಕಡಿಮೆ ಹಣ ಉತ್ತೇಜನ ನೀಡುವ ದೇಶಗಳಲ್ಲಿ ಭಾರತ ಸಹಾ ಒಂದು ಎಂಬುದು ಸಾಬೀತಾದ ವಿಷಯ. ನಾವು ವಿಜ್ಞಾನದ ಆವಿಷ್ಕಾರಗಳನ್ನು ಆಮದು ಮಾಡಿಕೊಳ್ಳುವ ಮಾರುಕಟ್ಟೆ ದೇಶವಾಗಿ ಹೊರಹೊಮ್ಮಿದ್ದೆವೆಯೇ ವಿನ: ಸ್ವಯಂ ಆವಿಷ್ಕಾರಗಳಿಗೆ ಇಳಿದೇ ಇಲ್ಲ. ಇದಕ್ಕೆ “ಎಲ್ಲವನ್ನೂ ನಮ್ಮ ಪೂರ್ವಜರು ಕಂಡು ಹಿಡಿದು ಬಿಟ್ಟಿದ್ದಾರೆ.ನಾವೇನೂ ಮಾಡುವುದು ಬೇಡ” ಎಂದು ಚಿಕ್ಕಂದಿನಲ್ಲಿಂದಲೂ ನಮಗೆ ಹಿರಿಯರು ಹೇಳಿದ್ದು ಕಾರಣವೇ? ತಿಳಿದಿಲ್ಲ.
ಇತ್ತೀಚೆಗೆ ಬಾಹ್ಯಾಕಾಶ ರಂಗಕ್ಕೆ ಒಂದಿಷ್ಟು ಹೆಚ್ಚಿನ ಅನುದಾನ ನೀಡಿದರೂ ಸಹ ಉಳಿದ ಎಲ್ಲಾ ರಂಗಗಳಿಗೆ ಇದರ ಪ್ರಮಾಣ ಇಳಿಯುತ್ತಲೇ ಇದೆ ಎನ್ನುವುದು ಅತ್ಯಂತ ಆಘಾತಕಾರಿ ವಿಷಯ. ಇದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಮುಂದಾದರೂ ಸಹ ಸರಿಪಡಿಸಿಕೊಳ್ಳುವ ಪ್ರಯತ್ನ ಬೇಕು. ಭಾರತದಲ್ಲಿ ವೈಜ್ಞಾನಿಕ ಆವಿಷ್ಕಾರಗಳು ನಡೆಸಲು ಉತ್ತಮ ವಾತಾವರಣಕ್ಕಾಗಿ ನಾವೆಲ್ಲಾ “ಲಾಬಿ” ಅಥವಾ “ಮಾಫಿಯಾ” ನಡೆಸಬೇಕು.
ಯಾವುದೇ ವಾಣಿಜ್ಯ ಕಂಪನಿಗಳು ಹಣ ಬಂಡವಾಳ ಹೂಡಿ ಹಣ ಮಾಡಲು. ಇವುಗಳನ್ನು ನಿಯಂತ್ರಿಸಬೇಕು.ಅವುಗಳಿಂದ ಒಳ್ಳೆಯದೂ ಆಗಿದೆ ಎನ್ನುವುದನ್ನು ಮರೆಯಬಾರದು. ಎಲ್ಲವೂ ಹೀಗಿದ್ದಾಗ ವೈದ್ಯಕೀಯ ಉಧ್ಯಮ ಹೇಗೆ ಸಾಚಾ ಇರಲು ಸಾಧ್ಯ? ವೈದ್ಯರೂ ಸಹ ವ್ಯವಸ್ಥೆಯ ಒಂದು ಭಾಗವೇ ಅಲ್ಲವೇ? ಹಾಗಿದ್ದರೆ ಪಾಶ್ಚಾತ್ಯ ಕಂಪನಿಗಳೂ ಸೇರಿದಂತೆ ಅನೇಕ ಔಷಧಿ ಕಂಪನಿಗಳು ಲಾಭಿ ಮಾಡುವುದು ಯಾರ ಮೇಲೆ? ಯಾವ ಯಾವ ಕಂಪನಿ ಯಾರ ಯಾರ ಮೇಲೆ ಲಾಬಿ ಮಾಡಿ ನಿರ್ಧಾರ ಬದಲಿಸಿದೆ? ವೈದ್ಯರ ಮೇಲೆಯೇ? ಸರ್ಕಾರದ ಮೇಲೆಯೇ? ಗ್ರಾಹಕರ ಮೇಲೆಯೇ? ಲಾಬಿಗೆ ಒಳಗಾದವರು ಯಾರು? ಇದಕ್ಕೆಲ್ಲಾ ನೈಜತೆಯ ಉತ್ತರ ಹುಡುಕಬೇಕು. ಎಲ್ಲವನ್ನೂ ಸಮಚಿತ್ತದಿಂದ, ಸಹನೆಯಿಂದ ಆಲಿಸಿ ನಿರ್ಧಾರ ತೆಗೆದುಕೊಳ್ಳುವ ತಾಳ್ಮೆ ಮತ್ತು ಜಾಣ್ಮೆ ನಮಗಿರಬೇಕು ಅಷ್ಟೇ !! ಸುಮ್ಮನೆ ವಾದಕ್ಕಿಳಿದರೆ ಅದೊಂದು ವ್ಯರ್ಥ ಕಸರತ್ತು ಅಷ್ಟೇ !
ಇದನ್ನೂ ನೋಡಿ: ಹಾಸನ ಜನರ ಧ್ವನಿಯಾದ ಕಾರ್ಮಿಕ ಚಳವಳಿ Janashakthi Media
