ಬಿಹಾರ ವಿಧಾನಸಭೆ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ನಡೆಯಲಿದ್ದು 14 ರಂದು ಫಲಿತಾಂಶ ಪ್ರಕಟವಾಗಲಿದೆ. ಕಳೆದ ಚುನಾವಣೆಯಂತೆ ಈ ಬಾರಿಯೂ ಎನ್.ಡಿ.ಎ ಮತ್ತು ಮಹಾಘಟಬಂಧನ ನಡುವೆ ಮುಖ್ಯ ಸ್ಪರ್ಧೆ ಇದೆ. ಕಳೆದ ಬಾರಿ ಒಟ್ಟು 243 ಸೀಟುಗಳಲ್ಲಿ ಎನ್.ಡಿ.ಎ 125 (ಬಿಜೆಪಿ 74, ಜೆಡಿಯು 43, ವಿಪಿಐ 4, ಎಚ್.ಎ.ಎಂ 4) ಸೀಟು ಪಡೆದು ಸರಕಾರ ರಚಿಸಿತ್ತು. ಮಹಾಘಟಬಂಧನ 110 (ಆರ್.ಜೆ.ಡಿ 75, ಕಾಂಗ್ರೆಸ್ 19, ಸಿಪಿಐ-ಎಂ.ಎಲ್ 12, ಸಿಪಿಐ 2, ಸಿಪಿಐಎಂ 2) ಸೀಟುಗಳನ್ನು ಪಡೆದು ವಿರೋಧ ಪಕ್ಷವಾಯಿತು. ಎನ್.ಡಿ.ಎ 37.26 % ಮತ ಪಡೆದರೆ, ಮಹಾಘಟಬಂಧನ 37.23 ಮತ ಪಡೆದಿತ್ತು. ಎರಡು ಕೂಟಗಳ ನಡುವೆ ಮತಗಳಿಕೆಯಲ್ಲಿ ಕೇವಲ 9150 ಮತ ವ್ಯತ್ಯಾಸವಿತ್ತು. ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಲೋಕ ಜನಶಕ್ತಿ ಪಕ್ಷ (ಎಲ್.ಜೆ.ಪಿ) 5.66% ಮತ ಗಳಿಸಿ 1 ಸೀಟು ಗಳಿಸಿದರೆ, ಎ.ಐ.ಎಂ.ಐ.ಎಂ, ಬಿ.ಎಸ್.ಪಿ, ಆರ್.ಎಲ್.ಪಿ ಗಳಿದ್ದ ಮೂರನೇ ಒಕ್ಕೂಟ 4.5 % ಮತ ಮತ್ತು 6 ಸೀಟು ಗಳಿಸಿದೆ. ಸುಮಾರು 8% ಮತ ಗಳಿಸಿದ ಪಕ್ಷೇತರ ಅಭ್ಯರ್ಥಿಗಳು ಕೇವಲ 1 ಸೀಟು ಗೆದ್ದಿದ್ದಾರೆ.
ವಸಂತರಾಜ ಎನ್ ಕೆ
ಈ ಬಾರಿ ಈ ಕೂಟಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ಕಳೆದ ಬಾರಿ ಸ್ವತಂತ್ರವಾಗಿ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎಲ್.ಜೆ.ಪಿಎನ್.ಡಿ.ಎ ಕೂಟಕ್ಕೆ ವಾಪಸು ಹೋಗಿದೆ. ವಿಕಾಸಶೀಲ ಇನ್ಸಾನ್ ಪಾರ್ಟಿ(ವಿಐಪಿ) ಎನ್.ಡಿ.ಎ ಕೂಟ ತೊರೆದು ಮಹಾಘಟಬಂಧನ ಸೇರಿದೆ. ಬಿ.ಎಸ್.ಪಿ ಮೂರನೇ ಕೂಟ ತೊರೆದು ಸ್ವತಂತ್ರವಾಗಿ ಸ್ಪರ್ಧಿಸುತ್ತಿದೆ. ಎ.ಐ.ಎಂ.ಐ.ಎಂ ಇರುವ ಮೂರನೇ ಕೂಟ ಇತರ 3 ಸಣ್ಣ ಪಕ್ಷಗಳನ್ನು ಒಳಗೊಂಡಿದೆ. ಪ್ರಶಾಂತ ಕಿಶೋರ್ ಅವರ ಜನ ಸುರಾಜ್ ಪಾರ್ಟಿ 116 ಸೀಟುಗಳಲ್ಲಿ ಮತ್ತು ಎಎಪಿ 121, ಬಿ.ಎಸ್.ಪಿ 130 ಸೀಟುಗಳಲ್ಲಿ ಒಬ್ಬಂಟಿಯಾಗಿ ಸ್ಪರ್ಧಿಸುತ್ತಿವೆ.
ಎನ್.ಡಿ.ಎ ಮತ್ತು ಮಹಾಘಟಬಂಧನ ಎರಡೂ ಕೂಟಗಳಲ್ಲಿ ಸೀಟು ಹಂಚಿಕೆ ಕಗ್ಗಂಟಾಗಿದ್ದು ಕೊನೆಯ ಗಳಿಗೆಯವರೆಗೂ ಎಳೆದುಕೊಂಡು ಹೋಗಿದ್ದು, ಕೆಲವು ಕ್ಷೇತ್ರಗಳಲ್ಲಿ ಒಂದೇ ಕೂಟದ ಎರಡು ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಒಬ್ಬರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಪ್ರಯತ್ನ ನಡೆಯುತ್ತಿದೆ.
ಎಂದಿನ ಬಿಹಾರದ ಹಿಂದುಳಿದಿರುವಿಕೆ, ನಿರುದ್ಯೋಗ, ಕಾನೂನು-ಸುವ್ಯವಸ್ಥೆ, ಸಾಮಾಜಿಕ ನ್ಯಾಯ, ಜಾತಿ ಸಮೀಕರಣಗಳಲ್ಲದೆ, ಈ ಬಾರಿಯ ಚುನಾವಣೆಯನ್ನು ಕಳೆದ ಬಾರಿಗಿಂತ ಪ್ರಮುಖ ಪ್ರಭಾವ ಬೀರುವ ಮೂರು ಹೊಸ ಮುಖ್ಯ ಸಂಗತಿಗಳೆಂದರೆ – ಸಾಮಾಜಿಕ-ಆರ್ಥಿಕ ಸಮೀಕ್ಷೆ, ಮತ-ಕಳ್ಳತನದ ಆಪಾದನೆ/ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಮತ್ತು ಹೊಸ ಪಕ್ಷ ಜನ ಸುರಾಜ್ ಪಕ್ಷ ದ ಸ್ಪರ್ಧೆ ಎನ್ನಲಾಗಿದೆ.
ಲೋಹಿಯಾ-ಕರ್ಪೂರಿ ಠಾಕುರ್ ನಾಡಾಗಿ ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ಹೆಸರಾದ ಬಿಹಾರದಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆ (ದೇಶದಲ್ಲೇ) ಮೊದಲ ಬಾರಿಗೆ ಅಧಿಕೃತವಾಗಿ ಪ್ರಕಟಿತವಾಗಿದೆ, ಈ ಸಮೀಕ್ಷೆ ವಿವಿಧ ಜಾತಿಗಳ – ಅದರಲ್ಲೂ ಅತಿ ಹಿಂದುಳಿದ ಜಾತಿ (ಇ.ಬಿ.ಸಿ), ಎಸ್.ಸಿ, ಎಸ್.ಟಿ ಮತ್ತು ಮಹಿಳೆಯರ –ಸಂಖ್ಯೆ, ಪ್ರಮಾಣ ಮತ್ತು ಸಾಮಾಜಿಕ-ಆರ್ಥಿಕ (ದು)ಸ್ಥಿತಿಯ ಕುರಿತು ನಿಖರ ಮಾಹಿತಿ ಈ ಜನವಿಭಾಗಗಳ ಈಗಾಗಲೇ ತಮ್ಮ ಸ್ಥಿತಿಯ ಬಗೆಗಿನ ಅರಿವು ಮತ್ತು ಈ ಕುರಿತು ಆಕ್ರೋಶ ಹಾಗೂ ಇದನ್ನು ಬದಲಾಯಿಸಲು ತಹತಹ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ. ಬಿಹಾರ
ಇದನ್ನೂ ಓದಿ: ಸಮುದಾಯ 50 – ಮುಂಗಾಣ್ಕೆಯ ದಿಕ್ಕಿನಲ್ಲಿ
ಬಿಹಾರದಲ್ಲಿ ಒಟ್ಟುಹಿಂದುಳಿದ ಜಾತಿಗಳ ಪ್ರಮಾಣ 63% (ಇ,ಬಿ.ಸಿ – 36% ಮತ್ತು ಒಬಿಸಿ – 27%) ಎಲ್ಲರಿಗೂ ಅಚ್ಚರಿ ತಂದ ಮಾಹಿತಿ. ಬಿಹಾರದ ಎಸ್.ಸಿ/ಎಸ್.ಟಿ ಪ್ರಮಾಣ 21%. ಬಿಹಾರದ 64% ಜನ ರೂ 10 ಸಾವಿರಕ್ಕಿಂತಲೂ (ಅದರಲ್ಲಿ 34% ರೂ 6 ಸಾವಿರಕ್ಕಿಂತಲೂ) ಕಡಿಮೆ ಆದಾಯ ಹೊಂದಿರುವವರು. ಇವರಲ್ಲಿ ಹೆಚ್ಚಿನವರು ಇ.ಬಿ.ಸಿ, ಒ.ಬಿ.ಸಿ, ಎಸ್.ಸಿ/ಎಸ್.ಟಿ. ಆದರೆ ಕೇವಲ 15% ಇರುವ ಉಚ್ಛಜಾತಿಗಳಿಗೆ ಬಿಜೆಪಿ 50% ಮತ್ತು ಎನ್.ಡಿ.ಎ 35% ಟಿಕೆಟ್ ಕೊಟ್ಟಿದೆ. ಆರ್.ಜೆ.ಡಿ ಮತ್ತು ಮಹಾಘಟಬಂಧನದ ಜಾತಿವಾರು ಟಿಕೆಟ್ ಪ್ರಮಾಣ ಹೆಚ್ಚು ಸಮತೋಲಿತವಾಗಿದ್ದರೂ ಇ.ಬಿ.ಸಿ ಜಾತಿಗಳಿಗೆ ಕೊಟ್ಟ ಟಿಕೆಟ್ ಪ್ರಮಾಣದಲ್ಲಿ ಬಹಳ ಭಿನ್ನವಾಗೇನಿಲ್ಲ. ಎರಡೂ ಕೂಟಗಳು ಉಚ್ಛ ಮತ್ತು ಒ.ಬಿ.ಸಿ ಗಳಿಗೆ ಟಿಕೆಟುಗಳ ಸಿಂಹಪಾಲು (ಸುಮಾರು 60%) ಕೊಟ್ಟಿವೆ.
ರಾಹುಲ್ ಗಾಂಧಿ ಚುನಾವಣಾ ಕಮಿಶನ್ ಬಿಜೆಪಿ ಪರವಾಗಿ ನಡೆಸಿದ ‘ಮತಕಳ್ಳತನ’ದ ಆರೋಪ ಮತ್ತು ಬಿಹಾರದಲ್ಲಿ ತರಾತುರಿಯಲ್ಲಿ ನಡೆಸಿದ ‘ಸರ್’ (ವಿಶೇಷ ತೀವ್ರ ಪರಿಷ್ಕರಣೆ) ಬಿಜೆಪಿ/ಎನ್.ಡಿ.ಎ ವಿಶ್ವಾಸಾರ್ಹತೆಗೆ ತೀವ್ರ ಕುಂದು ತಂದಿದೆ. ಇದರ ಭಾಗವಾಗಿ ಬಿಹಾರದ ಮತಪಟ್ಟಿಯಿಂದ ಸುಮಾರು 47 ಲಕ್ಷ ಮತದಾರರನ್ನು ತೆಗೆದು ಹಾಕಲಾಗಿದೆ. ಸಹಜವಾಗಿ ಹೆಚ್ಚಬೇಕಿದ್ದ ವಯಸ್ಕ ಮತದಾರರ ಸುಮಾರು 7% ಜನರ ಮತದಾನದ ಹಕ್ಕನ್ನು ಕಸಿದುಕೊಂಡಿದೆ ಎಂದು ಮೇಲುನೋಟಕ್ಕೆ ಕಾಣುತ್ತಿದೆ.
ಮತಪಟ್ಟಿಯಿಂದ ತೆಗೆಯಲ್ಪಟ್ಟ ಹೆಚ್ಚಿನವರು ವಲಸೆ ಕಾರ್ಮಿಕರು ಮತ್ತು ಮಹಿಳೆಯರು (ಇವರಲ್ಲಿ ಹೆಚ್ಚಿನವರು ಬಡವರು, ಇ.ಬಿ.ಸಿ/ಎಸ್.ಸಿ). ಮಹಿಳೆಯರ ಮತ ಹಕ್ಕುಗಳ ಕಸಿತದ ಪ್ರಮಾಣ ಅಚ್ಚರಿ ತರುವಂಥದ್ದು. ಒಟ್ಟು ಕಡಿತದಲ್ಲಿ ಮಹಿಳೆಯರ ಪ್ರಮಾಣ 60%! ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಸಾವಿರ ಪುರುಷರಿಗೆ 914 ಇದ್ದರೆ, ‘ಸರ್ ಆಪರೇಷನ್’ ನಂತರದ ಮತಪಟ್ಟಿಯಲ್ಲಿ 894 ಇದೆ. ಬಿಹಾರದಲ್ಲಿ ಮಹಿಳೆಯರ ಮತದಾನದ ಪ್ರಮಾಣ (60%) ಪುರುಷರಿಗಿಂತ (54%) ಗಮನಾರ್ಹವಾಗಿ ಹೆಚ್ಚಿದ್ದು ಇದು ಯಾವ ರೀತಿಯಲ್ಲಿ ಮತದಾರರ ಭಾವನೆಗಳ ಮೇಲೆ ಮತ್ತು ಚುನಾವಣಾ ಫಲಿತಾಂಶ ಪ್ರಭಾವಿಸುತ್ತದೆ ಎಂದು ಊಹಿಸುವುದೂ ಕಷ್ಟ.

ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ಸಾಕಷ್ಟು ಪ್ರಚಾರ ನಡೆಸಿದ್ದು ಸಾಂಪ್ರದಾಯಿಕ ಜಾತಿ ಸಮೀಕರಣ ಬಿಟ್ಟು ಬಿಹಾರದ ಅದರಲ್ಲೂ ಯುವಜನರ ಸಮಸ್ಯೆಗಳ ಮೇಲೆ ಒತ್ತು ನೀಡುತ್ತೇವೆ ಎಂದು ಹೇಳುತ್ತಿದೆ. ನಿತೀಶ್ ಕುಮಾರ್ ಅವರ ಎನ್.ಡಿ.ಎ ವಿರುದ್ಧ ಸಹಜವಾದ ಆಡಳಿತ-ವಿರೋಧಿ ಅತೃಪ್ತಿ ಮತ್ತು ಬಿಹಾರದ ಹಿಂದುಳಿದಿರುವಿಕೆ ಮತ್ತು ಸಮಸ್ಯೆಗಳಿಗೆ ಎರಡೂ ಕೂಟದ ಪ್ರಮುಖ ಪಕ್ಷಗಳು (ಆರ್.ಜೆ.ಡಿ, ಜೆಡಿಯು, ಕಾಂಗ್ರೆಸ್, ಬಿಜೆಪಿ) ಜವಾಬ್ದಾರರಾಗಿದ್ದು ಹೊಸ ಪಕ್ಷಕ್ಕೆ ಅವಕಾಶ ಕೊಡಿ ಎಂಬ ಕೋರಿಕೆಯ ಮೂಲಕ ಸಾಕಷ್ಟು ಮತ ಗಳಿಸುವ ಸಾಧ್ಯತೆಯಿದ ಎಂದು ಹೇಳಲಾಗುತ್ತಿದೆ. ಆ ಪಕ್ಷ ಹೆಚ್ಚಿನ ಸೀಟು ಹೆಲ್ಲುವ ಸಾಧ್ಯತೆಯಿಲ್ಲ.
ಆದರೆ ಅದರ ಮತಗಳಿಕೆಯ ಪ್ರಮಾಣ ಮತ್ತು ಅವರು ಯಾವ ಕೂಟದ ಮತ ಕಸಿಯುತ್ತಾರೆ ಎಂಬುದರ ಮೇಲೆ ಯಾವ ಕೂಟಕ್ಕೆ ಅವರು ಹಾನಿ ಮಾಡಬಹುದು ಎಂದು ಅಂದಾಜು ಮಾಡಲಾಗುತ್ತಿದೆ. ಅದು ಸ್ಪರ್ಧಿಸುತ್ತಿರುವ 116 ಸೀಟುಗಳಲ್ಲಿ 36 ಸೀಟುಗಳಲ್ಲಿ 5% ಕ್ಕಿಂತ ಮತ್ತು 25 ಸೀಟುಗಳಲ್ಲಿ 5-10% ಕ್ಕಿಂತ ಕಡಿಮೆ ಅಂತರ ಗೆದ್ದ ಮತ್ತು ಸೋತ ಅಭ್ಯರ್ಥಿಗಳ ನಡುವೆಯಿದ್ದು ಈ 61 ಸೀಟುಗಳಲ್ಲಿ ಒಂದು ಕೂಟಕ್ಕೆ ಹಾನಿ ಮಾಡಬಹುದು. ಗ್ರಾಮೀಣ ಪ್ರದೇಶಗಳ ಸೀಟುಗಳಲ್ಲಿ ಮಹಾಘಟಬಂಧನ ಕೂಟಕ್ಕೆ ಮತ್ತು ನಗರ ಪ್ರದೇಶಗಳಲ್ಲಿ ಎನ್.ಡಿ.ಎ ಗೆ ಹಾನಿ ಮಾಡಬಹುದು. ಒಟ್ಟು ಫಲಿತಾಂಶವನ್ನು ಏರುಪೇರು ಮಾಡಬಹುದು ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.
ಮಹಾಘಟಬಂಧನದ ತೇಜಸ್ವಿ ಯಾದವ್ ಮತ್ತು ರಾಹುಲ್ ಗಾಂಧಿ ವೈಯಕ್ತಿಕ ಮತ್ತು ಜಂಟಿ ಪ್ರಚಾರಾಂದೋಲನ ಕೆಲವು ತಿಂಗಳುಗಳಿಂದ ನಡೆಸಿದ್ದಾರೆ. ಈಗಾಗಲೇ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ತೇಜಸ್ವಿ ಯಾದವ್ ಅವರನ್ನು ಕೂಟದ ಮುಖ್ಯಮಂತ್ರಿ ಮತ್ತು ವಿಐಪಿ ಪಕ್ಷದ (ಪ್ರಮುಖ ಇ.ಬಿ.ಸಿ ನಾಯಕ)ಮುಕೇಶ್ ಸಹಾನಿ ಅವರನ್ನು ಉಪ ಮುಖ್ಯಮಖ್ಯಮಂತ್ರಿಯಾಗಿ ನಾಮನಿರ್ದೇಶನ ಮಾಡಿದೆ.
ಪ್ರಣಾಳಿಕೆಯಲ್ಲಿ 20 ತಿಂಗಳೊಳಗೆ ಪ್ರತಿ ಕುಟುಂಬಕ್ಕೆ ಒಂದು ಸರಕಾರಿ ಉದ್ಯೋಗ, ‘ಜೀವಿಕಾ ದೀದಿ’ ಗಳಿಗೆ ರೂ 30 ಸಾವಿರ ವೇತನದ ಖಾಯಂ ಸರಕಾರಿ ನೌಕರಿ, ಎಲ್ಲ ಸರಕಾರಿ ಕಾಂಟ್ರಾಕ್ಟ್ ಕಾರ್ಮಿಕರ ಖಾಯಮಾತಿ ಇತ್ಯಾದಿ ಪ್ರಮುಖ ಭರವಸೆಗಳಾಗಿವೆ. ವ್ಯಾಪಕ ನಿರುದ್ಯೋಗ ಮತ್ತು ಸ್ಪರ್ಧಾ ಪರೀಕ್ಷೆಗಳಲ್ಲಿ ಪೇಪರ್ ಲೀಕ್ ಹಾಗು ಅಕ್ರಮಗಳ ತಡೆಗಟ್ಟುವಿಕೆ, ಅಕ್ರಮ ನಡೆಸಿದವರ ಮೇಲೆ ಕಟು ಕ್ರಮದ ಭರವಸೆ ಸಹ ಕೊಡಲಾಗಿದೆ. ‘ಜಿಸ್ನೆ ಚಲಾಯಿ ಲಾಠಿ ಯುತ್ ಪರ್, ಉಸ್ಕಾ ಹಿಸಾಬ್ ಹೋಗಾ ಬೂತ್ ಪರ್’ (ಯುವಜನರ ಮೇಲೆ ಲಾಠಿ ಹೊಡೆದವರ ಲೆಕ್ಕ ಬೂತ್ ನಲ್ಲಿ ಚುಕ್ತಾ ಮಾಡಿ) ಎಂಬುದು ಪೇಪರ್ ಲೀಕ್ ವಿರುದ್ಧ ಪ್ರತಿಭಟನಾ ನಿರತ ಯುವಜನರ ಮೇಲೆ ಬಿಹಾರ ಸರಕಾರದ ದೌರ್ಜನ್ಯದ ವಿರುದ್ಧ ತೇಜಸ್ವಿ ಘೋಷಣೆಯಾಗಿದೆ.
ಎನ್.ಡಿ.ಎ ಇತ್ತೀಚಿನವರೆಗೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ನಾಮನಿರ್ದೇಶನ ಮಾಡಿರಲಿಲ್ಲ. ಅಮಿತ್ ಶಾ ಅಂತೂ ‘ಮುಖ್ಯಮಂತ್ರಿಯನ್ನು ಚುನಾವಣೆಯ ನಂತರ ಶಾಸಕರು ಆರಿಸುತ್ತಾರೆ’ ಎಂದು ಹೇಳಿಕೆ ನೀಡಿದ್ದರು. ಮಹಾಘಟಬಂಧನದ ಘೋಷಣೆಯ ನಂತರ ನಿತೀಶ್ ಕುಮಾರ್ ಅವರೇ ನಮ್ಮ ಮುಖ್ಯಮಂತ್ರಿ ಎಂದು ಹೇಳಲಾರಂಭಿಸಿದ್ದಾರೆ. ಆದರೆ ಜೆಡಿಯು-ಬಿಜೆಪಿ ಅಥವಾ ಎನ್.ಡಿ.ಎ ಸಭೆಯಲ್ಲಿ ವಿಧ್ಯುಕ್ತವಾಗಿ ಈ ಘೋಷಣೆಯನ್ನು ಇನ್ನೂ ಮಾಡಿಲ್ಲ.
ಯುವ ಮತ್ತು ದಲಿತ ಮುಖ್ಯಮಂತ್ರಿ ಎಂದು ಎಲ್.ಜೆ.ಪಿ ಯ ಚಿರಾಗ್ ಪಾಸ್ವಾನ್ ರನ್ನು ಯುವ ತೇಜಸ್ವಿ ವಿರುದ್ಧ ಬಿಂಬಿಸುವ ಅನೌಪಚಾರಿಕ ಪ್ರಯತ್ನ ನಡೆದಿತ್ತು. ಕಳೆದ (2000) ಚುನಾವಣೆಯಲ್ಲೂ ಎಲ್.ಜೆ.ಪಿ ಯ ಸ್ವತಂತ್ರ ಸ್ಪರ್ಧೆ ಜೆಡಿಯು ಸೀಟು ಕಡಿತ ಮಾಡುವ ‘ಚಾಣಕ್ಯ ಯೋಜನೆ’ಯ ಭಾಗವಾಗಿತ್ತು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಚುನಾವಣೆಯಲ್ಲಿ ಬಳಸಿ ಗೆದ್ದರೆ, ನಂತರ ನಿತೀಶ್ ಕುಮಾರ್ ಅವರನ್ನು ಎಸೆದು, ಚಿರಾಗ್ ಅಥವಾ ಇನ್ಯಾರೋ ಅಚ್ಚರಿ ಆಯ್ಕೆ ಮುಖ್ಯಮಂತ್ರಿ ಪದವಿಗೆ ನಡೆಯುತ್ತದೆ ಎಂಬ ವದಂತಿ ಹಬ್ಬಿದೆ. ಇದು ಎನ್.ಡಿ.ಎ ವಿರುದ್ಧ ಕೆಲಸ ಮಾಡಬಹುದು.
ಎನ್.ಡಿ.ಎ ಸರಕಾರ ಮತ್ತು ನಿತೀಶ್ ಕುಮಾರ್ ವಿರುದ್ಧ ಸಹಜವಾದ ಆಡಳಿತ-ವಿರೋಧಿ ಅಲೆಯಿದ್ದರೂ, ಇ.ಬಿಸಿ ಮತ್ತು ಮಹಿಳೆಯರ ನಡುವೆ ಅವರ ನೆಲೆ ಸಾಕಷ್ಟು ಗಟ್ಟಿಯಾದ್ದು. ಜೀವಿಕಾ ಯೋಜನೆಯಡಿ ಗ್ರಾಮೀಣ ಮಹಿಳಾ ಸಬಲೀಕರಣ ಮತ್ತು ಜೀವನೋಪಾಯಕ್ಕೆ ರೂ 10 ಸಾವಿರ ಸಾಲ ಕೊಡುವ ಯೋಜನೆಯನ್ನು ಚುನಾವಣೆಯ ಘೋಷಣೆಯ ಕೆಲವೇ ವಾರಗಳ ಮೊದಲು ಘೋಷಿಸಲಾದ ಈ ಯೋಜನೆ ಈಗಾಗಲೇ ಜಾರಿಯಾಗಲಾರಂಭಿಸಿದ್ದು ಇದು ಮಧ್ಯಪ್ರದೇಶ, ಮಹಾರಾಷ್ಟ್ರದಂತೆ ಕೆಲಸ ಮಾಡಬಹುದು ಎಂದು ಎನ್.ಡಿ.ಎ ಲೆಕ್ಕಾಚಾರ. ಬಾಲಿಕಾ ಸೈಕಲ್ ಯೋಜನಾ, ಗ್ರಾಮ ಪಂಚಾಯತ್ ಗಳಲ್ಲಿ 50% ಮಹಿಳಾ ಮೀಸಲಾತಿ, ಸರಕಾರಿ ಉದ್ಯೋಗಗಳಲ್ಲಿ 30% ಮಹಿಳಾ ಮೀಸಲಾತಿ, ಪಾನನಿಷೇಧ ಕಾರ್ಯಕ್ರಮಗಳಿಂದ ಮಹಿಳೆಯರ ನಡುವೆ ನಿತೀಶ್ ಕುಮಾರ್ ವಿಶ್ವಾಸಾರ್ಹತೆ ಸಂಪಾದಿಸಿದ್ದು. ಇಬಿಸಿ ಗಳಿಗೆ ಹಿಂದಿಗಿಂತ ಗಮನಾರ್ಹವಾಗಿ ಹೆಚ್ಚಿನ ಸೀಟು ಕೊಟ್ಟು, ಇಬಿಸಿ ಗಳಲ್ಲಿ ನೆಲೆಯಿರುವ ವಿ.ಐ.ಪಿ ಪಕ್ಷವನ್ನು ಮಹಾಘಟಬಂಧನಕ್ಕೆ ತಂದು ಉಪ ಮುಖ್ಯಮಂತ್ರಿ ಪದವಿ ಘೋಷಿಸಿ ಮಹಾಘಟಬಂಧನ ಅವರನ್ನು ಗೆದ್ದುಕೊಳ್ಳಲು ಪ್ರಯತ್ನಿಸುತ್ತಿದೆ. ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂಬ ವಿರೋಧಿ ಪ್ರಚಾರವನ್ನು ಇಬಿಸಿ ಮತ್ತು ಮಹಿಳೆಯರು ನಂಬಿದರೆ ಎನ್.ಡಿ.ಎ ಗೆ ಅದು ಮುಳುವಾಗುವ ಸಂಭವವಿದೆ.
‘ಸರ್’ ಆರಂಭಿಸುವಾಗಲೂ ನಂತರವೂ ‘ಬಾಂಗ್ಲಾ ನುಸುಳುಕೋರ’ರ ಸಮಸ್ಯೆಯನ್ನು ಚುನಾವಣಾ ವಿಷಯ ಮಾಡುವ ಮತ್ತು ‘ನಮಕ್ ಹರಾಮ್’ ಗಳ ಮತ ನಮಗೆ ಬೇಡ’ ಎಂಬ ನಾಯಕರ ಹೇಳಿಕೆಯ ಮೂಲಕ ಮುಸ್ಲಿಂ ದ್ವೇಷ ಹಬ್ಬುವ ಬಿಜೆಪಿತಂತ್ರ ಕೆಲಸ ಮಾಡುವ ಹಾಗೆ ಕಾಣುತ್ತಿಲ್ಲ. ಬಿಹಾರದ ಅಭಿವೃದ್ಧಿ, ನಿರುದ್ಯೋಗ, ಹೊರರಾಜ್ಯಗಳಿಗೆ ವಲಸೆ ತಡೆಯಲು ಉದ್ಯೋಗ ಸೃಷ್ಟಿ, ಸಾಮಾಜಿಕ ನ್ಯಾಯ, ಕಲ್ಯಾಣ ಕ್ರಮಗಳು – ಇವುಗಳ ಸುತ್ತ ಚುನಾವಣಾ ಪ್ರಚಾರ ಸುತ್ತುತ್ತಿರುವುದು ಸಮಾಧಾನಕರ ಸಂಗತಿ. ಉತ್ತರ ಪ್ರದೇಶದಂತೆ ಬಿಜೆಪಿಯ ಬಲ ಬಿಹಾರದಲ್ಲಿ ವಿಸ್ತರಿಸಲು ಕೋಮುವಾಧೀಕರಣ ಮತ್ತು ದ್ವೇಷ ಪ್ರಚಾರದ ಮೇಲೆ ಅವಲಂಬಿಸಿಲ್ಲ. ಬದಲಿಗೆ ಉಚ್ಛ ಜಾತಿಗಳಲ್ಲಿ ಅದರ ನೆಲೆಯೇ ಅದರ ಬಲ. ಹೀಗಿದೆ ಬಿಹಾರದಲ್ಲಿ ಚುನಾವಣಾ ಪೂರ್ವ ಪರಿಸ್ಥಿತಿ.
ಇದನ್ನೂ ನೋಡಿ: ದ್ವೇಷ ಭಾಷಣ | ನಿಯಂತ್ರಣಕ್ಕೆ ಮೂಗುದಾರವಿದ್ದರೂ ಕಲ್ಲಡ್ಕ ಪ್ರಭಾಕರ್ ಭಟ್ ವಿಷ ಕಾರುತ್ತಿರುವುದು ಯಾಕೆ?
