ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಭ್ರಷ್ಟಾಚಾರ: ಬಿ.ಆರ್. ಪಾಟೀಲ್ ಅಸಮಾಧಾನ

ಲಬುರಗಿ: ರಾಜ್ಯ ಸರ್ಕಾರದ ಬುಡಕ್ಕೆ ಮತ್ತೊಂದು ಭ್ರಷ್ಟಾಚಾರದ ಆರೋಪ ಬಂದಿದೆ. ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಹಣ ಪಡೆದವರಿಗೆ ಮಾತ್ರ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಆಳಂದ ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಆಡಿಯೋ ಕ್ಲಿಪ್‌ ಒಂದು ಸಾಮಾಜಿಕ ಜಲತಾಣದಲ್ಲಿ ಹರಿದಾಡುತ್ತಿದೆ.

ಈ ಆಡಿಯೋದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆಗಿನ ಸಂಭಾಷಣೆಯು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಬಿ.ಆರ್. ಪಾಟೀಲ್, ಸರ್ಫರಾಜ್ ಖಾನ್‌ಗೆ ಕರೆ ಮಾಡಿ, ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ‘ಹಣ ನೀಡಿದವರಿಗೆ ಮಾತ್ರ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ನಮ್ಮ ಸರ್ಕಾರವನ್ನೇ ದೂರಲು ಬೇಸರವಾಗುತ್ತಿದೆ,’ ಎಂದು ಪಾಟೀಲ್ ಆಡಿಯೋದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವೇತನ ಅಸಮಾನತೆ ಹೆಚ್ಚಳ ಮತ್ತು ಛಿದ್ರವಾಗುತ್ತಿರುವ ಕಾರ್ಮಿಕ ವರ್ಗ ಐಎಲ್‌ಒ ವರದಿ ಬಹಿರಂಗ

ಅವರು ಆಳಂದ ಮತಕ್ಷೇತ್ರದ ವಿವಿಧ ಗ್ರಾಮಗಳಾದ ಮುನ್ನಳ್ಳಿಯಲ್ಲಿ 200, ದರ್ಗಾ ಶಿರೂರದಲ್ಲಿ 100, ಧಂಗಾಪುರದಲ್ಲಿ 200, ಕವಲಗಾದಲ್ಲಿ 200, ಮಾಡಿಯಾಳದಲ್ಲಿ 200 ಮನೆಗಳು ಸೇರಿದಂತೆ ಒಟ್ಟು 950 ಮನೆಗಳನ್ನು ಲಂಚ ಪಡೆದು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದೇ ರೀತಿ, ಪಕ್ಕದ ಅಫಜಲಪುರ ಕ್ಷೇತ್ರದಲ್ಲಿಯೂ ಹಣಕ್ಕೆ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ದೂರಿದ್ದಾರೆ.

ಶಾಸಕರು ತಮ್ಮ ಶಿಫಾರಸು ಪತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ‘ಗ್ರಾಮ ಪಂಚಾಯಿತಿ ಅಧ್ಯಕ್ಷರ ಪಟ್ಟಿಗೆ ಮಾತ್ರ ಅನುಮೋದನೆ ನೀಡಲಾಗಿದೆ. ಶಾಸಕರ ಶಿಫಾರಸಿಗೆ ಯಾವ ಬೆಲೆಯೂ ಇಲ್ಲವೇ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸರ್ಫರಾಜ್ ಖಾನ್, ‘ಯಾವ ಕ್ಷೇತ್ರದಲ್ಲಿ ಈ ರೀತಿ ಆಗಿದೆ ಎಂದು ಮಾಹಿತಿ ನೀಡಿ, ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಶಿಫಾರಸು ಮಾಡಿದವರ ಪಟ್ಟಿಯನ್ನು ಕಳುಹಿಸಿ, ಅವರಿಗೆ ಮನೆ ಮಂಜೂರು ಮಾಡುತ್ತೇವೆ,’ ಎಂದು ಭರವಸೆ ನೀಡಿದ್ದಾರೆ.

ಈ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಪಕ್ಷಗಳಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ದಾಳಿ ಮಾಡಲು ಮತ್ತೊಂದು ಅವಕಾಶ ಸಿಕ್ಕಿದೆ. ಕಾಂಗ್ರೆಸ್ ಶಾಸಕರೇ ತಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ಗೆ ಈ ಆಡಿಯೋ ತೀವ್ರ ಒತ್ತಡವನ್ನು ಉಂಟುಮಾಡಿದೆ. ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ನಡೆಯುತ್ತಿರುವ ಆರೋಪಿತ ಅಕ್ರಮಗಳು ಸರ್ಕಾರದ ಗೌರವಕ್ಕೆ ಧಕ್ಕೆ ತರುವಂತಿವೆ. ವಿಪಕ್ಷದ ನಾಯಕ ಆರ್. ಅಶೋಕ ಈ ಆಡಿಯೋವನ್ನು ಉಲ್ಲೇಖಿಸಿ, ‘ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದೆ,’ ಎಂದು ಟೀಕಿಸಿದ್ದಾರೆ.

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಎಲ್ಲ ವಿಭಾಗದ ಸುದ್ದಿಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿಯಿದೆ.

ಇದನ್ನೂ ನೋಡಿ: ಭಾರತದ ರಾಜಕೀಯ ಮತ್ತು ಹಣಕಾಸು ಒಕ್ಕೂಟದ ಆಳ ಅಗಲ ಎತ್ತಿ ತೋರಿಸುವ ಪುಸ್ತಕ Janashakthi Media

Donate Janashakthi Media

Leave a Reply

Your email address will not be published. Required fields are marked *