ಜೇಬು ಸುಡುತ್ತಿದೆ ಹೋಟೆಲ್ ಬಿಲ್ ; ಟಿ, ಕಾಫೀ, ತಿಂಡಿ ಊಟದ ದರ ಹೆಚ್ಚಳ

  • ಸಿಲಿಂಡರ್‌, ದಿನಸಿ, ತರಕಾರಿ ದುಬಾರಿ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಗೆ ನಿರ್ಧಾರ
  • ಗ್ಯಾಸ್‌ ಸಿಲಿಂಡರ್‌ಗೆ 2230 ರು. ಪಾವತಿಸಲಾಗುತ್ತಿದೆ
  • ಹೋಟೆಲ್‌ ತಿನಿಸು 10 ರೂ, ಚಹಾ ಕಾಫಿ 3 ರೂ ಹೆಚ್ಚಳ
  • ರಾಜ್ಯಾದ್ಯಂತ ಇಂದಿನಿಂದಲೇ ಹೊಸ ದರ ಜಾರಿ

ಬೆಂಗಳೂರು : ದಿನಸಿ ವಸ್ತು, ತರಕಾರಿ, ಸಿಲಿಂಡರ್‌ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದಿನಿಂದ ಹೋಟೆಲ್‌ಗಳ ಊಟ, ತಿಂಡಿಗಳ ಬೆಲೆ ಹೆಚ್ಚಳವಾಗಿದೆ.

ಪ್ರತಿಯೊಂದು ಆಹಾರ ಉತ್ಪನ್ನದ ಮೇಲೆ ಕನಿಷ್ಠ 20% ಹೆಚ್ಚಳ ಮಾಡಲಾಗಿದೆ. ಈ ಸಂಬಂಧ ಕೆಲದಿನಗಳ ಹಿಂದೆ ಹೋಟೆಲ್ ಮಾಲೀಕರ ಸಂಘದ ಸಭೆ ನಡೆದಿತ್ತು. ಇದೀಗ ಇಂದಿನಿಂದ ಹೊಟೇಲ್ ಗಳಲ್ಲಿ ಹಂತ ಹಂತವಾಗಿ ದರ ಏರಿಕೆ ಮಾಡಲು ಹೋಟೆಲ್ ಅಸೋಸಿಯೇಷನ್ ತೀರ್ಮಾನಿಸಿದೆ.

ಎಷ್ಟೆಷ್ಟು ರೇಟ್ ಹೆಚ್ಚಾಗಿದೆ..!?

  • ಮಸಾಲೆ ದೋಸೆ 65 ರಿಂದ 75ರೂ.ಗೆ ಏರಿಕೆ
  • ಇಡ್ಲಿ, ವಡೆ 35-40ರೂ. ಗೆ ಏರಿಕೆ
  • ಕಾಫೀ, ಟೀ ಬೆಲೆ 15 ರಿಂದ 20ರೂ. ಗೆ ಏರಿಕೆ
  • ಚೌಚೌ ಬಾತ್ 60 ರಿಂದ 70ರೂ. ಗೆ ಏರಿಕೆ
  • ಸೌಥ್ ಇಂಡಿಯನ್ ಊಟ 85 ರಿಂದ 95ರೂ. ಗೆ ಏರಿಕೆ
  • ರೈಸ್ ಬಾತ್ 40 ರಿಂದ 50ರೂ. ಗೆ ಹೆಚ್ಚಳ
  • ರವಾ ಇಡ್ಲಿ 40 ರಿಂದ 45ರೂ. ಗೆ ಏರಿಕೆ
  • ಅಕ್ಕಿ ರೊಟ್ಟಿ 45-50ರೂ. ಗೆ ಏರಿಕೆ
  • ಒಂದು ಪ್ಲೇಟ್ ಪೂರಿ 65 ರಿಂದ 70ರೂ. ಗೆ ಏರಿಕೆ

ಪ್ರತಿ ತಿಂಡಿಯ ಮೇಲೆ 5-10 ರೂ ದರ ಏರಿಕೆಯಾಗಿದ್ದು, ದರ್ಶಿನಿ ಹೋಟೆಲ್ ಗಳಲ್ಲಿ ಶೇ.5 ರಿಂದ 10ರಷ್ಟು. ರೆಸ್ಟೊರೆಂಟ್ ಗಳಲ್ಲೂ ಸಹ ಶೇ.5 ರಿಂದ 10ರಷ್ಟು. ಸೆಲ್ಫ್ ಸರ್ವೀಸ್ ಹೋಟೇಲ್​ಗಳ ಆಹಾರದ ಬೆಲೆಯಲ್ಲಿ ಶೇ.5 ರಿಂದ 10 ರಷ್ಟು ಏರಿಕೆ ಮಾಡಿರುವುದಾಗಿ ಕರ್ನಾಟಕ ಹೋಟೆಲ್ ಮಾಲೀಕರ ಸಂಘದ ಸದಸ್ಯ ಕೃಷ್ಣರಾಜ್ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಕಡಿತಗೊಳಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 35% ರಿಂದ 25.9%ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 24% ರಿಂದ 14.34%ಕ್ಕೆ ಇಳಿಸಿತ್ತು. ಆದರೆ ಗ್ಯಾಸ್ ದರ ಮತ್ತು ಅಡುಗೆ ಎಣ್ಣೆ ದರಗಳನ್ನು ಕಡಿಮೆ ಮಾಡದ ಹಿನ್ನೆಲೆ ಹೋಟೆಲ್‍ಗಳಿಗೆ ದೊಡ್ಡ ಹೊಡೆತ ಬಿದ್ದಿದೆ ಹಾಗಾಗಿ ಹೋಟೆಲ್ ಆಹಾರಗಳ ದರ ಹೆಚ್ಚಾಗಿದೆ ಎಂದು ಹೋಟೆಲ್ ಮಾಲಿಕರು ದರ ಹೆಚ್ಚಳವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಹೋಟೆಲ್ ನಲ್ಲಿ ಊಟ, ತಿಂಡಿ ಬೆಲೆ ಏರಿಕೆಗೆ ನೀಡುತ್ತಿರುವ ಕಾರಣಗಳೇನು..?

  1. ನಿರಂತರವಾಗಿ ಏರಿಕೆಯಾಗ್ತಿರೊ ಕಮರ್ಷಿಯಲ್ ಗ್ಯಾಸ್ ದರ
  2. ದಿನಸಿ ಸಾಮಗ್ರಿಗಳ ಏರಿಕೆಯಿಂದ ಹೋಟೆಲ್ ಮಾಲೀಕರು ಕಂಗಾಲು
  3. ಅಡುಗೆ ಎಣ್ಣೆಯ ಬೆಲೆಯೂ ದುಬಾರಿಯಾಗಿದೆ
  4. ಕಳೆದ 2 ವರ್ಷಗಳಿಂದ ಯಾವುದೇ ಊಟ, ತಿಂಡಿ, ಟೀ, ಕಾಫೀ ಏರಿಕೆ ಮಾಡಿಲ್ಲ
  5. 1794ಕ್ಕೆ ಸಿಗಬೇಕಿದ್ದ 19 ಕೆ.ಜಿ ತೂಕದ ವಾಣಿಜ್ಯ ಸಿಲೆಂಡರ್ ದರ 2 ಸಾವಿರ ಗಡಿ‌ದಾಟಿದೆ.

ಮಿನಿ ಹೋಟೆಲ್​ಗಳಿಗೆ ಚಿಂತೆ: ಕರೊನಾದಿಂದ ಬದುಕೇ ಸರ್ವನಾಶ ಆಯಿತೆಂದು ಚಿಂತಾಕ್ರಾಂತರಾಗಿದ್ದ ಸಣ್ಣ ಪುಟ್ಟ ಹೊಟೇಲ್ ಹಾಗೂ ಗೂಡಂಗಡಿ ವರ್ತಕರು ಹಿಂದಿನ ಹಳಿಗೆ ಮರಳಿದ್ದಾರೆ. ಖಾಯಂ ಗ್ರಾಹಕರಾದ ಕೂಲಿ ಕಾರ್ವಿುಕರು, ಖಾಸಗಿ ಉದ್ದಿಮೆ ಹಾಗೂ ಹಣಕಾಸು ಸಂಸ್ಥೆಯ ಉದ್ಯೋಗಿಗಳಿಗೆ ಮಧ್ಯಾಹ್ನದ ಊಟ, ಚಹ ಮತ್ತಿತರೆ ತಿಂಡಿ ನೀಡುತ್ತಾ ಒಂದಿಷ್ಟು ಕಾಸು ಸಂಪಾದನೆ ಮಾಡುತ್ತಿದ್ದಾರೆ. ಇದರಿಂದ ಗೂಡಂಗಡಿ ನಡೆಸುವವರ ಬದುಕಿನಲ್ಲಿ ಭರವಸೆಯ ಬೆಳಕು ಕಾಣಿಸತೊಡಗಿದೆ. ಆದರೆ, ಏಕಾಏಕಿ ಎಲ್ಪಿಜಿ ದರ ಹೆಚ್ಚಳದಿಂದ ಮಿನಿ ಹೋಟೆಲ್​ಗಳ ಮಾಲೀಕರು ಕಂಗಾಲಾಗಿದ್ದು, ದರ ಏರಿಸಬೇಕೇ? ಬೇಡವೇ ಎಂಬ ಚಿಂತನೆಯಲ್ಲಿದ್ದಾರೆ. ದರ ಏರಿಸಿದರೆ ಗ್ರಾಹಕರ ಸಂಖ್ಯೆ ಇಳಿಯಲಿದೆ. ಏರಿಸದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಚಿಂತೆಯಲ್ಲಿದ್ದಾರೆ.

ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ದುರಾಡಳಿತ ನೀತಿಗಳಿಗೆ ಹೋಟೆಲ್ ದರ ಹೆಚ್ಚಳಕ್ಕೆ ಕಾರಣವಾಗಿದೆ. ದರ ಹೆಚ್ಚಳ ಮಾಡುವ ಹೋಟೆಲ್ ಗಳು ದಿನಸಿ ಬೆಲೆ, ಗ್ಯಾಸ್ ಬೆಲೆ ಕಡಿಮೆಯಾದಾಗ ತಿನಿಸುಗಳ ಬೆಲೆ ಕಡಿಮೆ ಮಾಡುವುದಿಲ್ಲ. ಒಟ್ಟಿನಲ್ಲಿ ಸರಕಾರಗಳ ನೀತಿ ಹಾಗೂ ಹೊಟೆಲ್ ಮಾಲೀಕರು ನಿರ್ಧಾರ ಗ್ರಾಹಕರ ಜೇಬನ್ನು ಸುಡುತ್ತಿದೆ. ಜನ ಸಾಮಾನ್ಯರ ಹಸಿವಿನ ಹಿಟ್ಟೆಗೆ ತಣ್ಣೀರು ಬಟ್ಟೆ ಖಾಯಂ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಜನ ಸಾಮಾನ್ಯರ ಹಸಿವೆಗೆ ಪರ್ಯಾಯ ದಾರಿ ಹುಡುಕಬೇಕಿದೆ.

ಕರೊನಾದಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಹೋಟೆಲ್ ಉದ್ಯಮ ನಿಧಾನವಾಗಿ ಚೇತರಿಕೆಯತ್ತ ಸಾಗುತ್ತಿದ್ದರೂ ಎಲ್ಪಿಜಿ ದರ ಏರಿಕೆಯಿಂದಾಗಿ ಮತ್ತಷ್ಟು ನಷ್ಟ ಅನುಭವಿಸುತ್ತಿದ್ದೇವೆ. ಬೆಲೆ ಏರಿಕೆ ಮಾಡದಿದ್ದರೆ ಆರ್ಥಿಕ ನಷ್ಟ ಅನುಭವಿಸಿ ಹೋಟೆಲ್​ಗಳಿಗೆ ಬೀಗ ಹಾಕಬೇಕಾಗುತ್ತದೆ. ಹಾಗಾಗಿ, ಎಲ್ಲರ ಜತೆ ರ್ಚಚಿಸಿ ಊಟ ತಿಂಡಿಗಳ ಮೇಲೆ 5 ರೂ. ಹೆಚ್ಚಿಸಲು ನಿರ್ಧರಿಸಲಾಗಿದೆ. ಹೆಚ್ಚು ದರ ಏರಿಸಿದರೆ ಗ್ರಾಹಕರ ಬರುವ ಸಂಖ್ಯೆ ಕಡಿಮೆ ಆಗಬಹುದು. ಹಾಗಾಗಿ, ಸ್ವಲ್ಪ ಮಾತ್ರ ದರ ಹೆಚ್ಚಿಸಲಾಗಿದೆ.

– ಚಂದ್ರಶೇಖರ್ ಹೆಬ್ಬಾರ್, ಅಧ್ಯಕ್ಷ ಕರ್ನಾಟಕ ರಾಜ್ಯ ಹೋಟೆಲ್​ಗಳ ಸಂಘ.

Donate Janashakthi Media

Leave a Reply

Your email address will not be published. Required fields are marked *