ಕೊಡಗು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಈ ನಡುವೆ ಕೊಡಗು ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳು ಇವೆ ಎಂಬ ಗಂಭೀರವಾದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಜಿಲ್ಲಾ ಆಸ್ಪತ್ರೆಗೆ ಧಿಡೀರ್ ಭೇಟಿ ನೀಡಿ ಪರಿಶೀಲಸಿದರು.
ಕೋವಿಡ್ ಆಸ್ಪತ್ರೆಯ ಪ್ರತಿ ವಾರ್ಡ್ಗೆ ತೆರಳಿದ ಜಿಲ್ಲಾಧಿಕಾರಿಗಳು ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿ ರೋಗಿಗಳ ಸಮಸ್ಯೆಗಳನ್ನು ಆಲಿಸಿದ್ದಾರೆ.
ಇದನ್ನು ಓದಿ: ರಾಜ್ಯದಲ್ಲಿ ಜೂನ್ 7ರ ವರೆಗೂ ಲಾಕ್ಡೌನ್ ವಿಸ್ತರಣೆ– ಸಿಎಂ ಬಿಎಸ್ವೈ
ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೋವಿಡ್ ರೋಗಿಗಳನ್ನು ನೋಡಲು ಅವರ ಸಂಬಂಧಿಕರು ವಾರ್ಡ್ಗಳಿಗೆ ಬಂದು ಹೋಗುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಆಸ್ಪತ್ರೆಯ ಸಿಬ್ಬಂದಿ ಮತ್ತು ಡೀನ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಜೊತೆಗೆ ಕೆಲವು ವಾರ್ಡಿನಲ್ಲಿ ಸೋಂಕಿತರು ಮಾಸ್ಕನ್ನು ಹಾಕದೇ ಇರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ನೀವೆಲ್ಲಾ ಏನು ಮಾಡುತ್ತಿದ್ದೀರಿ. ನಿಮಗೆ ಸಾಮರ್ಥ್ಯವಿಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೊರಟು ಹೋಗಿ ಎಂದು ತರಾಟೆ ತೆಗೆದುಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.
ಆಸ್ಪತ್ರೆಯಿಂದ ಹೊರ ಬಂದ ಜಿಲ್ಲಾಧಿಕಾರಿ ಮಾಧ್ಯಮಗಳೊಂದಿಗೆ ಮಾತನಾಡಿ ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗಿದೆ. ಕೋವಿಡ್ ಸೋಂಕಿತರ ಸಂಬಂಧಿಗಳು ಕೇವಲ ಬಟ್ಟೆ ಮಾಸ್ಕನ್ನು ಧರಿಸಿ ವಾರ್ಡ್ಗಳಿಗೆ ಬಂದು ಹೋಗುತ್ತಿರುವುದು ತಿಳಿದು ಬಂದಿದೆ. ಹಾಗಾಗಿ ಮುಂಜಾಗ್ರತೆಯಿಂದ ಸರಕಾರವು ಆದೇಶಿಸಿರುವ ನಿಯಮಗಳನ್ನು ಜನರು ಅನುಸರಿಸಬೇಕೆಂದು ತಿಳಿಸಿದರು.