ನವದೆಹಲಿ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜುಲೈ 4, ಸೋಮವಾರದಂದು ಬಹುಮತ ಸಾಬೀತುಪಡಿಸಲು ಸೂಚಿಸಲಾಗಿದೆ. ಇದರೊಂದಿಗೆ ಏಕನಾಥ್ ಶಿಂಧೆಗೆ ಬಹುಮತ ಸಾಬೀತು ಮಾಡಲು ಮೂರು ದಿನ ಮಾತ್ರ ಕಾಲಾವಕಾಶ ಇದೆ.
ಇದೇ ವೇಳೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದವರು ಶುಕ್ರವಾರ ಏಕನಾಥ್ ಶಿಂಧೆ ಸೇರಿದಂತೆ 16 ಭಿನ್ನಮತೀಯ ಶಾಸಕರನ್ನು ವಜಾಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಶಾಸಕರನ್ನು ಅನರ್ಹತೆಗೊಳಿಸುವ ನಿರ್ಧಾರವನ್ನು ಪ್ರಶ್ನಿಸಿ ಏಕನಾಥ್ ಶಿಂಧೆ ಬಣದವರೂ ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಸೋಮವಾರವೇ ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ.
ಶಿವಸೇನಾ ಪಕ್ಷದೊಳಗೆ ಬಂಡಾಯ ಎದ್ದು ಇದೀಗ ಬಿಜೆಪಿ ಜೊತೆ ಸರಕಾರ ರಚಿಸಿರುವ ಏಕನಾಥ್ ಶಿಂದೆ ಬಣದಲ್ಲಿ ೫೦ ಶಾಸಕರಿದ್ದಾರೆ. ಬಿಜೆಪಿ 106 ಶಾಸಕರನ್ನು ಹೊಂದಿದೆ. ಬಹುಮತಕ್ಕೆ ಬೇಕಾದ 145 ಸ್ಥಾನಗಳು ಶಿಂಧೆ ಸರಕಾರದ ಬಳಿ ಇದೆ. ಆದರೆ, ಸೋಮವಾರ ಸುಪ್ರೀಂ ಕೋರ್ಟ್ ಶಿವಸೇನಾ ಭಿನ್ನಮತೀಯರನ್ನು ಅನರ್ಹಗೊಳಿಸಿದರೆ ಆಗ ಹೊಸ ಸಾಧ್ಯತೆ ತೆರೆದುಕೊಳ್ಳಬಹುದು.
ಆದರೆ, ಶಿವಸೇನೆಯ 55 ಶಾಸಕರಲ್ಲಿ 39 ಮಂದಿ ತಮ್ಮ ಜೊತೆ ಇದ್ದಾರೆ. ಆದ್ದರಿಂದ ತಮ್ಮದೇ ಶಿವಸೇನೆಯ ಅಧಿಕೃತ ಬಣ ಎಂಬುದು ಏಕನಾಥ್ ಶಿಂಧೆ ವಾದ. ಒಂದು ವೇಳೆ ಶಿಂಧೆ ಬಣಕ್ಕೆ ಮಾನ್ಯತೆ ಸಿಕ್ಕರೆ ಉದ್ಧವ್ ಠಾಕ್ರೆ ಮತ್ತವರ ಬೆಂಬಲಿಗರು ಬೇರೆ ಪಕ್ಷ ನಿರ್ಮಾಣ ಮಾಡಿಕೊಳ್ಳಬೇಕಾಗಬಹುದು.